ಬೆಂಗಳೂರು: ಒಳ ಮೀಸಲಾತಿ ವಿಚಾರದಲ್ಲಿ ರಾಜಕೀಯ ಪಂಚಾಯಿತಿ ಮಾಡಿ, 6-6-5 ಹಂಚಿಕೆ ಮಾಡಿ ಕೈಬಿಟ್ಟಿದ್ದಾರೆ ಎಂದು ರಾಜ್ಯದ ಮಾಜಿ ಮುಖ್ಯಮಂತ್ರಿ ಮತ್ತು ಸಂಸದ ಬಸವರಾಜ ಬೊಮ್ಮಾಯಿ ಅವರು ಟೀಕಿಸಿದ್ದಾರೆ.
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸಿ, ಅತ್ಯಂತ ಕನಿಷ್ಠ ಸಮುದಾಯಗಳಿಗೆ ನ್ಯಾಯ ಕೊಡಬೇಕು. ಗೊಂದಲವನ್ನು ನಿವಾರಿಸಬೇಕು. ಇಲ್ಲವಾದರೆ ನೀವು ಒಳಜಗಳದ ಅಪಖ್ಯಾತಿಗೆ ನೀವು ಈಡಾಗುತ್ತೀರಿ ಎಂದು ಎಚ್ಚರಿಸಿದರು. ನಾವು ಮಾಡಿದ್ದನ್ನೇ ಇವತ್ತು ಒಪ್ಪಿಕೊಂಡಿದ್ದೀರಿ; ಅವತ್ತಿನ ಮಾತನ್ನು ಹಿಂಪಡೆದು ನೀವು ಇವತ್ತು ಈ ಸಮುದಾಯಗಳ ಕ್ಷಮೆ ಕೇಳುವಿರಾ ಎಂದು ಪ್ರಶ್ನೆಯನ್ನೂ ಮುಂದಿಟ್ಟರು. ಶೇ 17ರ ಬದಲು ಇನ್ನೊಂದು ಶೇಕಡಾ ಹೆಚ್ಚಿಸಿ ಎಲ್ಲರಿಗೂ ನ್ಯಾಯ ಕೊಡುವ ಪ್ರಯತ್ನ ಮಾಡುವಿರಾ ಎಂದು ಕೇಳಿದರು.
ರಾಜಕೀಯ ನಿರ್ಣಯ ಮಾಡುವುದಾದರೆ ಇವೆಲ್ಲ ಆಯೋಗಗಳನ್ನು ಯಾಕೆ ಮಾಡಬೇಕಿತ್ತು ಎಂದು ಪ್ರಶ್ನಿಸಿದರು. ನ್ಯಾ.ನಾಗಮೋಹನದಾಸ್ ಸಮಿತಿ ವರದಿಯನ್ನು 2-3 ವಾರ ಇಟ್ಟುಕೊಂಡು ಸಂಪುಟದಲ್ಲಿ ತೀರ್ಮಾನ ಮಾಡಿದ್ದಾರೆ. ಅವರ ಶಿಫಾರಸು ಗಾಳಿಗೆ ತೂರಿದ್ದಾರೆ. ಸದಾಶಿವ ಆಯೋಗವು ಒಳ ಮೀಸಲಾತಿ ಬಗ್ಗೆ ವರದಿ ಗಾಳಿಗೆ ತೂರಿದರು. ಮಾಧುಸ್ವಾಮಿಯವರ ವರದಿಯನ್ನೂ ಕಡೆಗಣಿಸಿದರು ಎಂದು ದೂರಿದರು.
ಇದು ಸಂವಿಧಾನ ವಿರೋಧಿ, 3 ಆಯೋಗಗಳ ವರದಿಯನ್ನೂ ಪರಿಗಣಿಸಿಲ್ಲ; ಸುಪ್ರೀಂ ಕೋರ್ಟಿನ ನಿರ್ಧಾರವನ್ನೂ ತಿರಸ್ಕಾರ ಮಾಡಿದ್ದೀರಿ. ಕೇವಲ ರಾಜಕೀಯ ಲಾಭಕ್ಕಾಗಿ, ಮತಬ್ಯಾಂಕಿನ ಸುರಕ್ಷತೆಗಾಗಿ ಈ ಕೆಲಸ ಮಾಡಿದ್ದೀರಿ ಎಂದು ಟೀಕಿಸಿದರು. ಸಾಮಾಜಿಕ ನ್ಯಾಯ ಕೊಡುವ ಸುಪ್ರೀಂ ಕೋರ್ಟಿನ ತೀರ್ಪು ಅನುಷ್ಠಾನದಲ್ಲಿ ಸಿದ್ದರಾಮಯ್ಯನವರು ಎಲ್ಲ ಸಮುದಾಯಕ್ಕೆ ಅನ್ಯಾಯ ಮಾಡಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಜನಸಂಖ್ಯೆಗೆ ಅನುಗುಣವಾಗಿ ಮಾಡಿಲ್ಲ. ಆದಿ ದ್ರಾವಿಡ, ಆದಿ ಕರ್ನಾಟಕ ಮೊದಲಾದ ಸಮುದಾಯಗಳು ಪ್ರತ್ಯೇಕ ಇರಬೇಕಿದ್ದು, ಎಕೆ, ಎಡಿ, ಎಎ ಇವರು ಯಾವ ಪಂಗಡಕ್ಕೂ ಸೇರಿಲ್ಲ. ಸರಕಾರಿ ಆಜ್ಞೆಯಲ್ಲಿ ಸ್ಪಷ್ಟತೆ ಇಲ್ಲ ಎಂದು ತಿಳಿಸಿದರು. ಸಾಮಾಜಿಕ ನ್ಯಾಯದ ಜೊತೆ ಸಾಮಾನ್ಯ ಜ್ಞಾನವನ್ನೂ ಇಟ್ಟುಕೊಂಡು ಆದೇಶ ಮಾಡಬೇಕಿತ್ತು ಎಂದು ಹೇಳಿದರು. ಅವರನ್ನು ಗೊಂದಲದಲ್ಲಿ ಹಾಕಿದ್ದಾರೆ ಎಂದರು.
ಈ ಶ್ರೇಣಿಯಲ್ಲಿ ಅತ್ಯಂತ ಕೆಳಗಡೆ ಇರುವ ಬದುಕನ್ನೇ ಕಟ್ಟಿಕೊಳ್ಳದ ಅಲೆಮಾರಿಗಳಿಗೆ ಯಾವುದೇ ಮೀಸಲಾತಿ ಕೊಟ್ಟಿಲ್ಲ ಎಂದು ದೂರಿದರು. ಯಾರೂ ಸಂತುಷ್ಟವಾಗಿಲ್ಲ; ಬಲಗೈಯವರೂ ಅಸಮಾಧಾನ ಸೂಚಿಸಿದ್ದಾರೆ. ಲಂಚಾಣಿ, ಬೋವಿ ಸಮುದಾಯಕ್ಕೆ ಶೇ 0.5 ಹೆಚ್ಚಿಸಿ 59 ಜಾತಿ ಸೇರಿಸಿದ್ದಾರೆ ಎಂದು ತಿಳಿಸಿದರು. ಸರಕಾರದ ವಲಯದಲ್ಲಿ ಕೋರ್ಟಿಗೆ ಹೋಗಿ ಎಂಬ ಉತ್ತರ ಸಿಗುತ್ತಿದೆ ಎಂದು ಹೇಳಿದರು.
ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಎಲ್ಲ ವರ್ಗದವರು ಹೋರಾಟದಲ್ಲಿ ಧುಮುಕಬೇಕೆಂಬುದು ಮಹಾತ್ಮ ಗಾಂಧಿಯವರ ಆಶಯವಾಗಿತ್ತು. ಆಗ ಡಾ. ಬಾಬಾಸಾಹೇಬ ಅಂಬೇಡ್ಕರರು ಅತ್ಯಂತ ತುಳಿತಕ್ಕೆ ಒಳಗಾದ ಸಮುದಾಯಗಳ ಭವಿಷ್ಯ ಏನೆಂದು ಚಿಂತನೆ ಮಾಡುತ್ತಿದ್ದರು. ದೇಶವ್ಯಾಪಿ ಚರ್ಚೆ ನಡೆದು, ಪುಣೆಯಲ್ಲಿ ಮಹಾತ್ಮ ಗಾಂಧಿ ಅವರಿದ್ದ ಜೈಲಿನಲ್ಲಿ ಡಾ. ಬಾಬಾಸಾಹೇಬ ಅಂಬೇಡ್ಕರರು ಮತ್ತು ಗಾಂಧಿಯವರು ಒಂದು ವಾರಕ್ಕೂ ಹೆಚ್ಚು ಚರ್ಚೆ ಮಾಡಿದರು. ಗಾಂಧಿಯವರ ಭರವಸೆ ಮೇರೆಗೆ ಎಲ್ಲ ತುಳಿತಕ್ಕೆ ಒಳಗಾದ ದಲಿತ ಸಮುದಾಯಗಳು ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕಿದ್ದವು ಎಂದು ನೆನಪಿಸಿದರು. ಬಳಿಕ ಸ್ವಾತಂತ್ರ್ಯ ಹೋರಾಟಕ್ಕೆ ಪರಿಪೂರ್ಣತೆ ಬಂದಿತ್ತು ಎಂದರು.
ಸಂವಿಧಾನ ರಚಿಸುವಾಗ ಇದೇ ಅಂಶಗಳು ಮುಂದೆ ಬಂದವು. ಕರ್ನಾಟಕದ 6 ಸಮುದಾಯಗಳು ಮೊದಲನೇ ಪಟ್ಟಿಯಲ್ಲಿ ಸೇರಿದವು. ಈಗ 101 ಆಗಿದೆ. ಕಾಂಗ್ರೆಸ್ ಪಕ್ಷದವರು ಸ್ವಾತಂತ್ರ್ಯ ಹೋರಾಟದ ಫಲಾನುಭವಿಗಳು. ಅವರು ತಮ್ಮ ರಾಜಕೀಯ ಸ್ಥಾನಮಾನಕ್ಕೆ ಹೆಚ್ಚು ಒತ್ತು ಕೊಟ್ಟರೇ ಹೊರತಾಗಿ ಡಾ. ಬಾಬಾಸಾಹೇಬ ಅಂಬೇಡ್ಕರರು ಸಂವಿಧಾನದಲ್ಲಿ ಇಟ್ಟುಕೊಂಡಿದ್ದ ಆಶಯಗಳನ್ನು ಅನುಷ್ಠಾನಕ್ಕೆ ತರುವಲ್ಲಿ ಹಿಂಜರಿದರು ಎಂದು ಆಕ್ಷೇಪಿಸಿದರು.
ಎಸ್ಸಿ, ಎಸ್ಟಿ ಸಮುದಾಯಗಳಿಗೆ ಮೀಸಲಾತಿ ಕೊಡಬೇಕೆಂದು ಸಂವಿಧಾನದಲ್ಲಿ ಉಲ್ಲೇಖವಿದೆ. ಕರ್ನಾಟಕದಲ್ಲಿ ಸುಮಾರು 55- 60 ವರ್ಷ ಕಾಂಗ್ರೆಸ್ ಆಡಳಿತವಿತ್ತು. ಕಾಂಗ್ರೆಸ್ಸಿಗರು ಎಸ್ಸಿ ಪಟ್ಟಿಗೆ ಸಮುದಾಯಗಳನ್ನು ಸೇರಿಸುತ್ತ ಹೋಗಿದ್ದಾರೆ. ಆದರೆ, ಜನಸಂಖ್ಯೆ ಹೆಚ್ಚಾದಾಗ ಮೀಸಲಾತಿ ಹೆಚ್ಚಿಸಲು ಮನಸ್ಸೇ ಮಾಡಲಿಲ್ಲ ಎಂದು ದೂರಿದರು.
6 ಜಾತಿ ಇದ್ದ ಎಸ್ಸಿ ಸಮುದಾಯ 101 ಜಾತಿಗೇರಿದೆ. ಮೀಸಲಾತಿ ಪ್ರಮಾಣ ಹೆಚ್ಚಿಸಲೇ ಇಲ್ಲ. ಇದರಿಂದ ಆ ಸಮುದಾಯಗಳಲ್ಲಿ ಅಸಮಾಧಾನ ಹೆಚ್ಚಾಗಿ, ಹಲವಾರು ಸಂದರ್ಭಗಳಲ್ಲಿ ಅದು ವ್ಯಕ್ತವಾಯಿತು. ಒಳ ಮೀಸಲಾತಿಗೆ ದೊಡ್ಡ ಧ್ವನಿ ಪಕ್ಕದ ಆಂಧ್ರದಿಂದ ಆರಂಭವಾಗಿ ಕರ್ನಾಟಕದಲ್ಲೂ ಕೇಳಿಸಿತು. ಸಮ್ಮಿಶ್ರ ಸರಕಾರ ಇದ್ದಾಗ ನಾಗಮೋಹನದಾಸ್ ಸಮಿತಿ ರಚಿಸಲಾಯಿತು ಎಂದು ವಿವರಿಸಿದರು. ಬಿಜೆಪಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಒತ್ತಾಸೆಯಿಂದ ನಾವು ವರದಿ ಪಡೆದೆವು. ಈ ಸಮಿತಿಯು ಶೇ 15 ಇದ್ದ ಮೀಸಲಾತಿಯನ್ನು 17ಕ್ಕೆ ಹೆಚ್ಚಿಸಲು ಶಿಫಾರಸು ಮಾಡಿತ್ತು ಎಂದರು. ಎಸ್ಟಿ 3 ಇದ್ದುದನ್ನು 7ಕ್ಕೆ ಏರಿಸಲು ಶಿಫಾರಸು ಮಾಡಿದ್ದರು ಎಂದು ವಿವರಿಸಿದರು.
ನಾನು ಮುಖ್ಯಮಂತ್ರಿ ಆದಾಗ 2022ರಲ್ಲಿ ಹಲವಾರು ಜನರ ವಿರೋಧದ ನಡುವೆ ನಾನು ಅದನ್ನು ಅನುಷ್ಠಾನಕ್ಕೆ ತಂದಿದ್ದೆ. ಇದು ಜೇನುಗೂಡು ಎಂದು ಬಹಳ ಜನ ಎಚ್ಚರಿಸಿದ್ದರು. ಜೇನು ಕಚ್ಚಿದರೆ ನನಗೆ ಕಚ್ಚಲಿ; ಸಮುದಾಯಕ್ಕೆ ಜೇನಿನ ಹನಿ ಕೊಡೋಣ ಎಂದಿದ್ದೆ ಎಂದರು. ಈಗಿನ ಸಿಎಂ ಸಿದ್ದರಾಮಯ್ಯನವರು ಆಗ ಅದು ಕಾನೂನುಪ್ರಕಾರ ಇಲ್ಲ ಎಂದು ರಾಜ್ಯಾದ್ಯಂತ ಹೇಳಿಕೊಂಡು ಓಡಾಡಿದ್ದರು ಎಂದು ಟೀಕಿಸಿದರು.
ನಮ್ಮ ನಿರ್ಣಯವನ್ನು ಕೇಂದ್ರಕ್ಕೆ ಕಳಿಸಿದ್ದು, ಸಾಮಾಜಿಕ ನ್ಯಾಯಕ್ಕೆ ಬದ್ಧತೆ ಇದ್ದ ಪ್ರಧಾನಮಂತ್ರಿ ನರೇಂದ್ರ ಮೋದಿಜೀ ಅವರು ಇವರಂತೆ ಬೊಗಳೆ ಬಿಟ್ಟು ಓಡಾಡುವವರಲ್ಲ; ಖಾಯಂ ಹಿಂದುಳಿದ ಆಯೋಗ ರಚಿಸಿದರು. ಯುಪಿಎ ಸರಕಾರ ಇವೆಲ್ಲ ಮಾಡಲಿಲ್ಲ; ಸಿಎಂ ಸಿದ್ದರಾಮಯ್ಯ ಶಿಫಾರಸು ಮಾಡಿಲ್ಲ ಎಂದು ದೂರಿದರು. ಮೋದಿಯವರು ಏನೇ ಮಾಡಿದರೂ ಇವರಿಗೆ ಅಪಥ್ಯ ಎಂದು ಆಕ್ಷೇಪಿಸಿದರು.
ಬಳಿಕ ಸುಪ್ರೀಂ ಕೋರ್ಟಿನಲ್ಲಿ ತೀರ್ಪು ಬಂತು. ಕುಲಶಾಸ್ತ್ರೀಯ ಅಧ್ಯಯನ ನಡೆಸಿ ಮಾಡಬೇಕು, ಅಂತರ್ ಹಿಂದುಳಿದಿರುವಿಕೆ ಇರಬೇಕು, ಸಮಾನರು- ಅಸಮಾನರನ್ನು ಒಂದೇ ಪ್ರವರ್ಗದಲ್ಲಿ ಸೇರಿಸದಂತೆ ಸೂಚಿಸಲಾಗಿತ್ತು ಎಂದು ಹೇಳಿದರು. ಮತ್ತೆ ನಾಗಮೋಹನದಾಸ್ ಸಮಿತಿ ರಚಿಸಿದ್ದು ವರದಿ ನೀಡಿದೆ ಎಂದರು.
ಸಂಸದ ಗೋವಿಂದ ಕಾರಜೋಳ, ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಕೇಂದ್ರದ ಮಾಜಿ ಸಚಿವ ಎ.ನಾರಾಯಣಸ್ವಾಮಿ ಮತ್ತು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್ ಅವರು ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.