ಮಂಗಳೂರು: ಬೆದ್ರ 9 ಕ್ರಿಯೇಷನ್ಸ್ ಲಾಂಛನದಲ್ಲಿ ತಯಾರಾದ ಪತ್ರಕರ್ತ ರಘು ಶೆಟ್ಟಿ ನಿರ್ದೇಶನದ ‘ಅರ್ಜುನ್ ವೆಡ್ಸ್ ಅಮೃತ’ ಸಿನಿಮಾದ ಬಿಡುಗಡೆ ಸಮಾರಂಭವು ಪಾಂಡೇಶ್ವರದ ಫಿಜ್ಜಾ ಮಾಲ್ನಲ್ಲಿರುವ ಪಿವಿಆರ್ ಥಿಯೇಟರ್ನಲ್ಲಿ ಜರಗಿತು. ಸಮಾರಂಭವನ್ನು ಮಂಗಳೂರು ಮಹಾನಗರಪಾಲಿಕೆಯ ಮೇಯರ್ ಕವಿತಾ ಸನಿಲ್ ದೀಪ ಬೆಳಗಿಸಿ ಉದ್ಘಾಟಿಸಿದರು.
ಸೀಮಿತ ಮಾರುಕಟ್ಟೆಯ ತುಳುಚಿತ್ರರಂಗದಲ್ಲಿ ಈಗ ಹಿಂದೆಂದಿಗಿಂತಲೂ ಹೆಚ್ಚು ಚಿತ್ರಗಳು ತಯಾರಾಗುತ್ತಿವೆ. ತುಳು ಭಾಷಾಭಿಮಾನದಿಂದ ತಯಾರಾಗುತ್ತಿರುವ ಚಿತ್ರಗಳನ್ನು ಪ್ರೇಕ್ಷಕರು ಸಿನಿಮಾ ನೋಡುವ ಮೂಲಕ ಪ್ರೋತ್ಸಾಹಿಸಬೇಕು. ಸಮಾಜಕ್ಕೆ ಒಳ್ಳೆಯ ಸಂದೇಶ ಭರಿತ ಚಿತ್ರಗಳನ್ನು ನೀಡಿದಾಗ ಸಮಾಜದಲ್ಲಿ ಪರಿವರ್ತನೆ ಸಾಧ್ಯ. ಈಗ ಸಾಲು ಸಾಲು ಚಿತ್ರಗಳು ಬಿಡುಗಡೆಗೆ ಸಿದ್ಧಗೊಂಡಿದೆ. ಹೀಗಾಗಿ ಕನಿಷ್ಠ ಮೂರು ಅಥವಾ ನಾಲ್ಕು ವಾರಗಳ ಅಂತರವಿದ್ದರೆ ನಿರ್ಮಾಪಕರಿಗೆ ಅನುಕೂಲವಾಗುತ್ತದೆ. ಇದರಿಂದ ತುಳು ಚಿತ್ರೋದ್ಯಮಕ್ಕೂ ಲಾಭ ಎಂದು ಮೇಯರ್ ಕವಿತಾ ಸನಿಲ್ ನುಡಿದರು.
ಚಿತ್ರದ ನಿರ್ದೇಶಕ ರಘು ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ಅರ್ಜುನ್ ವೆಡ್ಸ್ ಅಮೃತ ರೋಮ್ಯಾಂಟಿಕ್ ಲವ್ ಸ್ಟೋರಿಯಾಗಿದ್ದು, ಆಕ್ಷನ್ ಇಲ್ಲದ ಲವ್, ಸೆಂಟಿಮೆಂಟ್ ಹಾಗೂ ಹಾಸ್ಯ ಮಿಶ್ರಿತದಿಂದ ಕೂಡಿದೆ ಎಂದರು.
ಸಮಾರಂಭದಲ್ಲಿ ತುಳು ಸಿನಿಮಾರಂಗದ ಹಿರಿಯ ಸಾಧಕರಾದ ಡಾ. ರಿಚರ್ಡ್ ಕ್ಯಾಸ್ಟಲಿನೋ, ಡಾ. ಸಂಜೀವ ದಂಡಕೇರಿ ಹಾಗೂ ರಂಗನಟ, ಸಂಘಟಕ ವಿ.ಜಿ. ಪಾಲ್ರನ್ನು ಗೌರವಿಸಲಾಯಿತು. ಸಮಾರಂಭದಲ್ಲಿ ತುಳುಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಟಿ.ಎ. ಶ್ರೀನಿವಾಸ್,ನವೀನ್ಡಿ ಪಡೀಲ್, ಅರವಿಂದ ಬೋಳಾರ್, ಭೋಜರಾಜ ವಾಮಂಜೂರು, ವಿಜಯಕುಮಾರ್ ಕೊಡಿಯಾಲ್ಬೈಲ್, ಮೇಗಿನ ಮಾಲಾಡಿ ಬಾಲಕೃಷ್ಣ ಶೆಟ್ಟಿ ,ವೀರೇಂದ್ರ ಶೆಟ್ಟಿ ಕಾವೂರು, ಪ್ರಕಾಶ್ ಪಾಂಡೇಶ್ವರ್, ನಿರ್ಮಾಪಕರಾದ ಕಿರಣ್ ಬಿ.ಎನ್., ದಿನೇಶ್ ಮಲ್ಯ, ವೆಂಕಟೇಶ್ ಕಾಮತ್, ಅಕ್ಷತಾ ಕಾಮತ್, ನಟ ಅನೂಪ್ ಸಾಗರ್, ನಟಿ ಆರಾಧ್ಯ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಆರ್.ಜೆ. ಅನುರಾಗ್ ಕಾರ್ಯಕ್ರಮ ನಿರ್ವಹಿಸಿದರು.
ಅರ್ಜುನ್ ವೆಡ್ಸ್ ಅಮೃತ ಸಿನಿಮಾವು ಮಂಗಳೂರಿನಲ್ಲಿ ಜ್ಯೋತಿ, ಪಿವಿಆರ್, ಬಿಗ್ ಸಿನೆಮಾಸ್, ಸಿನಿಪೊಲಿಸ್, ಉಡುಪಿಯಲ್ಲಿ ಆಶೀರ್ವಾದ್, ಮೂಡಬಿದ್ರೆಯಲ್ಲಿ ಅಮರಶ್ರೀ, ಕಾರ್ಕಳದಲ್ಲಿ ರಾಧಿಕಾ, ಪ್ಲಾನೆಟ್, ಮಣಿಪಾಲದಲ್ಲಿ ಐನಾಕ್ಸ್, ಬೆಳ್ತಂಗಡಿಯಲ್ಲಿ ಭಾರತ್, ಸುಳ್ಯದಲ್ಲಿ ಸಂತೋಷ್, ಸುರತ್ಕಲ್ನಲ್ಲಿ ನಟರಾಜ್ ಸಿನಿಮಾ ಮಂದಿರಗಳಲ್ಲಿ ಬಿಡುಗಡೆಗೊಂಡಿದ್ದು, ಎಲ್ಲಾ ಟಾಕೀಸ್ಗಳಲ್ಲೂ ಹೌಸ್ಫುಲ್ ಪ್ರದರ್ಶನದಿಂದ ಜನ ಮೆಚ್ಚುಗೆ ಪಡೆದಿದೆ.
ನಾಯಕ ನಟನಾಗಿ ಅನೂಪ್ ಸಾಗರ್ ಮತ್ತು ನಾಯಕಿಯಾಗಿ ಆರಾಧ್ಯಶೆಟ್ಟಿ ಮುಖ್ಯ ಪಾತ್ರದಲ್ಲಿದ್ದರೂ ನವೀನ್ಡಿ ಪಡೀಲ್ರ ಸುತ್ತ ಕಥೆ ಸಾಗುತ್ತಿರುವುದರಿಂದ ಸಿನಿಮಾವು ಪ್ರೇಕ್ಷಕರಲ್ಲಿ ಕುತೂಹಲ ಕೆರಳಿಸುವಂತೆ ಮಾಡಿದೆ. ಇನ್ನುಳಿದಂತೆ ಅರವಿಂದ ಬೋಳಾರ್, ಭೋಜರಾಜ ವಾಮಂಜೂರು, ಸುಧೀರ್ರಾಜ್ ಉರ್ವಾ, ಸಂದೀಪ್ ಶೆಟ್ಟಿ, ಪ್ರಸನ್ನಶಟ್ಟಿ, ರವಿ ಸುರತ್ಕಲ್, ಉಮೇಶ್ ಮಿಜಾರ್, ಸುನೀಲ್ ನೆಲ್ಲಿಗುಡ್ಡೆ, ಸತೀಶ್ ಬಂದಲೆ, ರಮೇಶ್ ರೈಕುಕ್ಕುವಳ್ಳಿ, ಆರ್.ಜೆ. ಅನುರಾಗ್, ಪ್ರಜ್ವಲ್ ಪಾಂಡೇಶ್ವರ್, ಪವಿತ್ರ ಶೆಟ್ಟಿ, ಹರಿಣಿ ಕಾರ್ಕಳ ಮೊದಲಾದವರ ತಾರಾಗಣವಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.