ಬೆಳ್ತಂಗಡಿ : ಯಕ್ಷಗಾನ ಎಂದರೆ ಅದು ಪರಿಪೂರ್ಣ ಕಲೆ. ಅದರ ಅಧ್ಯಯನದಿಂದ ಜ್ಞಾನವೃದ್ಧಿಯಾಗುತ್ತದೆ ಎಂದು ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರ ಯು. ವಿಜಯರಾಘವ ಪಡ್ವೆಟ್ನಾಯ ಹೇಳಿದರು.
ಅವರು ರವಿವಾರ ಉಜಿರೆ ಸಿದ್ಧವನ ಗುರುಕುಲದಲ್ಲಿ ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ, ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ವತಿಯಿಂದ ಪ್ರೌಢಶಾಲೆ ಹಾಗೂ ಕಾಲೇಜು ವಿದ್ಯಾರ್ಥಿಗಳಿಗಾಗಿ ನಡೆದ ಯಕ್ಷಗಾನ ರಸಗ್ರಹಣ ಶಿಬಿರ ಉದ್ಘಾಟಿಸಿ ಮಾತನಾಡಿದರು.ಕಲಾವಿದ ಕೂಡಾ ಅಧ್ಯಯನ ಶೀಲನಾಗಬೇಕು. ಪಾತ್ರಕ್ಕೆ ತಕ್ಕ ಭಾವನೆ ಸ್ಪುರಿಸಬೇಕು. ಪಾತ್ರಕ್ಕೆ ಸರಿಯಾದ ಭಾವನೆ ಬರಬೇಕೇ ವಿನಾ ಹಾಸ್ಯಾಸ್ಪ್ಪದವಾಗಬಾರದು ಎಂದರು.
ಅಧ್ಯಕ್ಷತೆ ವಹಿಸಿದ್ದ ಎಸ್ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ| ಬಿ. ಯಶೋವರ್ಮ, ಕಲೆಯ ಅಭಿರುಚಿ ಬೆಳೆಯಬೇಕು. ಕಲೆಯನ್ನು ಆಸ್ವಾದಿಸುವ ಮನಸ್ಸು ಬರಬೇಕು. ರಸಗ್ರಹಣಕ್ಕೆ ಕಲೆಯ ಕುರಿತು ಮಾಹಿತಿ ಇರಬೇಕು. ಮನುಷ್ಯ ವಿಕಾಸವಾದಂತೆ ಕಲೆ ವಿಕಸನಗೊಳ್ಳುತ್ತಾ ಹೋಯಿತು. ಪ್ರತೀ ಊರಿಗೂ ಒಂದು ವಿಶಿಷ್ಟ ಕಲೆಯಪ್ರಕಾರ ಇರುತ್ತದೆ. ಮಕ್ಕಳಲ್ಲಿ ಆಸಕ್ತಿ ಮೂಡಿಸಬೇಕು. ಕಲೆಯಲ್ಲಿ ಕಲಾವಿದ ಸಂಪೂರ್ಣವಾಗಿ ತೊಡಗಿಸಿಕೊಂಡು ಪ್ರಸ್ತುತಪಡಿಸುವಾಗ ಕಲಾರಾಧಕ ಅಂತೆಯೇ ಆಸ್ವಾದಿಸುತ್ತಾನೆ. ಮಕ್ಕಳಿಗೆ ಹೊಸತನ್ನು ಕಲಿಯುವ ಆಸಕ್ತಿ ಇರುತ್ತದೆ. ನಾವು ಅವರಲ್ಲಿ ಅದಕ್ಕೆ ಅವಕಾಶವನ್ನು ಕಲ್ಪಿಸಿಕೊಡಬೇಕು ಎಂದರು.
ಮುಖ್ಯ ಅತಿಥಿಯಾಗಿ ಅಕಾಡೆಮಿ ಸದಸ್ಯ ಕೆ. ಎಂ. ಶೇಖರ್ ಮಾತನಾಡಿದರು. ಅಕಾಡೆಮಿ ಸದಸ್ಯ, ಯಕ್ಷಗಾನ ಕಲಾವಿದ ತಾರಾನಾಥ ವರ್ಕಾಡಿ ಸ್ವಾಗತಿಸಿದರು. ದಿವ್ಯಶ್ರೀ ವಂದಿಸಿದರು. ಕಲಾವಿದ ಕೋಳ್ಯೂರು ರಾಮಚಂದ್ರ ರಾವ್, ಕಾಲೇಜಿನ ಯಕ್ಷಗಾನ ಕೇಂದ್ರದ ಅರುಣ್ ಕುಮಾರ್ ಧರ್ಮಸ್ಥಳ, ಮಾಲಿನಿ ಅಂಚನ್ ಉಪಸ್ಥಿತರಿದ್ದರು.
ಅಸಾಂಪ್ರದಾಯಿಕವನ್ನು ನಿರ್ಲಕ್ಷಿಸಿ:ಅಸಾಂಪ್ರದಾಯಿಕವಾದುದನ್ನು ಮಾಡಿದರೆ ಆತ ವಿದ್ವಾಂಸನೇ ಆಗಿದ್ದರೂ ಆತನನ್ನು ಉಪೇಕ್ಷಿಸಿ ಎಂದು ಶಂಕರಾಚಾರ್ಯರು ಹೇಳಿದ್ದಾರೆ. ಆದ್ದರಿಂದ ಕಲೆಯಲ್ಲಿ ಯಾವತ್ತೂ ಅಪಭ್ರಂಶ ಸಲ್ಲದು ಎಂದು ವಿಮರ್ಶಕ ಡಾ| ಪ್ರಭಾಕರ ಜೋಷಿ ಹೇಳಿದರು. ಅವರು ರಸಗ್ರಹಣ ಶಿಬಿರದಲ್ಲಿ ಆಹಾರ್ಯ ಕುರಿತು ಉಪನ್ಯಾಸ ನೀಡಿದರು.
ಕಲೆ ನಮಗೆ ನೆಪಿರುವುದು ಅದರ ಸೌಂದರ್ಯದಿಂದ. ಕಲೆಯ ಪೂರ್ವಜ್ಞಾನ ಇಲ್ಲದೇ ರಸಗ್ರಹಣ ಅಸಾಧ್ಯ. ರುಚಿಶುದ್ಧಿ ಇಲ್ಲದೇ ರುಚಿಯನ್ನು ಅಭಿವೃದ್ಧಿ ಮಾಡಲಾಗದು ಎಂದರು. ಆಹಾರ್ಯ ಎಂದರೆ ಧರಿಸುವುದು ಎಂದರ್ಥ. ಯಕ್ಷಗಾನದಲ್ಲಿ ಮುಖವರ್ಣಿಕೆ, ಉಡುಗೆ ತೊಡುಗೆ, ಕಿರೀಟ ಇತ್ಯಾದಿ ಎಂದು ಮೂರು ವಿಧದಲ್ಲಿ ಇದನ್ನು ವಿಂಗಡಿಸಬಹುದು. ಸರ್ವಾಂಗ ಸುಂದರ ವೇಷ ಸಿದ್ಧವಾಗಲು ಇವು ಮೂರೂ ಮಿಳಿತವಾಗಬೇಕು, ತಾಳೆಯಾಗಬೇಕು ಎಂದರು. ನಾವು ಕಲೆಯ ಬಲೆಯಲ್ಲಿ ಸಿಕ್ಕಿ ಬೀಳಬೇಕು. ಆದರೆ ಕಲಾವಿದ ಹೇಳಿದ್ದನ್ನೆಲ್ಲಾ ಒಪ್ಪಬಾರದು. ಅದಕ್ಕೆ ವಿವೇಚನೆ ಇರಬೇಕು. ವೇಗವಾಗಿ ಜಗತ್ತು ಬದಲಾಗುತ್ತಿರುವಾಗ ಪ್ರಾಚೀನತೆ ಉಳಿಸಿಕೊಳ್ಳುವುದು ದೊಡ್ಡ ಸಾಧನೆ.
ದೇವಸ್ಥಾನ, ಬುಡಕಟ್ಟು ಜನಾಂಗ, ವೈಷ್ಣವ ಶೈವ ಪ್ರಭಾವದಿಂದ ಬಂದ ಮುಖವರ್ಣಿಕೆ ಇನ್ನೂ ಅದರ ಪರಂಪರೆಯ ಹೂರಣ ಉಳಿಸಿಕೊಂಡಿದೆ. ಆಧುನಿಕತೆಗೆ ತೆರೆದುಕೊಂಡಂತೆಯೇ ಅದರ ಸೌಂದರ್ಯ ಮಾಯವಾಗುತ್ತಿದೆ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.