
ಬೆಳಗಾವಿ: ಉತ್ತರ ಕರ್ನಾಟಕದ ಸಮಸ್ಯೆ ಬಗೆಹರಿಸಲು ಸರಿಯಾದ ನಾಯಕತ್ವ ಬೇಕಿದೆ. ಆದರೆ ರೈತರಿಗೆ ಕಾಂಗ್ರೆಸ್ ಸರ್ಕಾರ ಪರಿಹಾರ ನೀಡಿಲ್ಲ, ಮನೆ ಕಳೆದುಕೊಂಡವರಿಗೆ ಪರಿಹಾರ ನೀಡಿಲ್ಲ. ಉತ್ತರ ಕರ್ನಾಟಕದ ಯಾವ ಭರವಸೆಗಳು ಈಡೇರಿದೆ ಎಂದು ತಿಳಿಸಲು ಶ್ವೇತಪತ್ರ ಬಿಡುಗಡೆ ಮಾಡಬೇಕು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಆಗ್ರಹಿಸಿದರು.
ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಸದನದಲ್ಲಿ ಮಾತನಾಡಿದ ಅವರು, ಪ್ರವಾಹದ ಸಂದರ್ಭದಲ್ಲಿ ಜನರು ಗಂಜಿ ಕೇಂದ್ರದಲ್ಲಿರುತ್ತಾರೆ. ಆಗ ಸರ್ಕಾರ ಕೂಡಲೇ ಪರಿಹಾರ ನೀಡಬೇಕು. ಕಾಂಗ್ರೆಸ್ ಸರ್ಕಾರದಲ್ಲಿ, 2013-2014 ರ ಜುಲೈನಲ್ಲಿ 9 ತಿಂಗಳಾದ ನಂತರ, 2014-15 ರಲ್ಲಿ 8 ತಿಂಗಳ ನಂತರ, 2015-16 ರಲ್ಲಿ 7 ತಿಂಗಳ ನಂತರ ಪರಿಹಾರ ನೀಡಲಾಗಿದೆ. ನಮ್ಮ ಬಿಜೆಪಿ ಸರ್ಕಾರದಲ್ಲಿ 2019-20 ರ ಆಗಸ್ಟ್ ಪ್ರವಾಹದ ನಂತರ ಎರಡೇ ತಿಂಗಳಲ್ಲಿ ಪ್ರವಾಹ ನೀಡಲಾಗಿದೆ. 2022 ರ ಪ್ರವಾಹದಲ್ಲಿ ಎರಡು ತಿಂಗಳಲ್ಲಿ, 2021-22 ರ ಪ್ರವಾಹದಲ್ಲಿ ಎರಡು ತಿಂಗಳಲ್ಲಿ, 2023 ರ ಪ್ರವಾಹದಲ್ಲಿ ಒಂದೇ ತಿಂಗಳಲ್ಲಿ ಪ್ರವಾಹ ನೀಡಲಾಗಿತ್ತು. ಇಷ್ಟು ವಿಳಂಬ ಮಾಡಿ ಪರಿಹಾರ ನೀಡಬಾರದು ಎಂದರು.
ಎನ್ಡಿಆರ್ಎಫ್ ನಿಯಮ ಪ್ರಕಾರ ಮನೆ ಹಾನಿಗೆ 95,000 ರೂ. ನೀಡಲಾಗುತ್ತದೆ. ಬಿಜೆಪಿ ರಾಜ್ಯ ಸರ್ಕಾರದಿಂದ ನಾಲ್ಕು ಲಕ್ಷ ಸೇರಿಸಿ ಒಟ್ಟು 5 ಲಕ್ಷ ರೂ. ಪರಿಹಾರ ನೀಡಲಾಗಿತ್ತು. ಕಾಂಗ್ರೆಸ್ ಸರ್ಕಾರ ಉತ್ತರ ಕರ್ನಾಟಕದಲ್ಲಿ ಮನೆ ಹಾನಿಗೆ ಈ ರೀತಿ ಪರಿಹಾರ ನೀಡದೆ, ಕೇಂದ್ರದ ಪಾಲನ್ನು ಮಾತ್ರ ನೀಡುತ್ತಿದೆ. ಕೇವಲ 95,000 ರೂ. ನಲ್ಲಿ ಮನೆ ಕಟ್ಟಲು ಸಾಧ್ಯವಿಲ್ಲ. ಬಿಜೆಪಿ ಸರ್ಕಾರದಿಂದ 6,651.15 ಕೋಟಿ ರೂ. ಬೆಳೆ ಹಾನಿ ಪರಿಹಾರವನ್ನು 51.95 ಲಕ್ಷ ರೈತರ ಬ್ಯಾಂಕ್ ಖಾತೆಗೆ ಹಾಕಲಾಗಿತ್ತು. ಕಾಂಗ್ರೆಸ್ ಸರ್ಕಾರ ಡಿಬಿಟಿ ಬದಲು ಫ್ರೂಟ್ ತಂತ್ರಾಂಶ ತಂದು ನಾಲ್ಕು ತಿಂಗಳು ವಿಳಂಬ ಮಾಡಿದೆ. ಈಗ ಪರಿಹಾರ ನೀಡಲು ತಡವಾಗುತ್ತಿದೆ ಎಂದರು.
2014-2022 ರವರೆಗೆ ನರೇಂದ್ರ ಮೋದಿ ಸರ್ಕಾರ 11,603 ಕೋಟಿ ರೂ. ಪರಿಹಾರ ನೀಡಿದ್ದರೆ, ಮನಮೋಹನ್ ಸಿಂಗ್ ಸರ್ಕಾರ 3,233 ಕೋಟಿ ರೂ. ನೀಡಿತ್ತು. ಅಂದ್ರೆ ನಾಲ್ಕು ಪಟ್ಟು ಅಧಿಕಾರ ಪರಿಹಾರ ದೊರೆತಿದೆ. ಹಿಂದಿನ ಬಿಜೆಪಿ ರಾಜ್ಯ ಸರ್ಕಾರ ಕೇಂದ್ರ ಸರ್ಕಾರ ಕೂಡಲೇ ಪರಿಹಾರ ನೀಡಲಿ ಎಂದು ಕೇಳಿರಲಿಲ್ಲ. ರಾಜ್ಯದ ಖಜಾನೆಯಿಂದಲೇ ಮೊದಲು ಹಣ ನೀಡಲಾಗಿತ್ತು. ಕೇಂದ್ರ ಸರ್ಕಾರಕ್ಕಾಗಿ ಕಾಯಬಾರದು ಎಂಬುದು ನನ್ನ ಅಭಿಪ್ರಾಯ. ಅದೇ ರೀತಿ ಈಗಲೂ ಕಾಂಗ್ರೆಸ್ ಸರ್ಕಾರ ಖಜಾನೆಯಿಂದ ಹಣ ತೆಗೆದು ನೀಡಲಿ ಎಂದು ಆಗ್ರಹಿಸಿದರು.
ಕಲಬುರ್ಗಿ, ಬೀದರ್, ವಿಜಯಪುರ, ಯಾದಗಿರಿ ಮೊದಲಾದ ಜಿಲ್ಲೆಗಳಲ್ಲಿ 117 ಕ್ಕೂ ಅಧಿಕ ಹಳ್ಳಿಗಳು ಜಲಾವೃತವಾಗಿದೆ. 20,000 ಕ್ಕೂ ಹೆಚ್ಚು ಮನೆಗಳಿಗೆ ಹಾನಿ, 14.58 ಲಕ್ಷ ಹೆಕ್ಟೇರ್ನಲ್ಲಿ ಬೆಳೆ ಹಾನಿಯಾಗಿದೆ. 2,890 ಶಾಲೆಗಳಿಗೆ ಹಾನಿಯಾಗಿದೆ. ಮೈಸೂರಿನಲ್ಲಿ ದಸರಾ ಆಚರಿಸುತ್ತಿದ್ದರೆ, ಉತ್ತರ ಕರ್ನಾಟಕದ ಜನರು ನೀರಿನಲ್ಲಿದ್ದರು. ನಾವೆಲ್ಲರೂ ಕಾರಿನಲ್ಲಿ ಹೋಗಿ ಭೇಟಿ ಮಾಡಿದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ವೈಮಾನಿಕ ಸಮೀಕ್ಷೆ ಮಾಡಿದರು. ಅದರ ಬದಲು ಕಾರಿನಲ್ಲೇ ಬಂದು ಜನರನ್ನು ಭೇಟಿ ಮಾಡಬಹುದಿತ್ತು. ಎಲ್ಲವೂ ಸರಿ ಇದೆ ಎಂದೇ ಐಎಎಸ್ ಅಧಿಕಾರಿಗಳು ಹೇಳುತ್ತಾರೆ. ಮುಖ್ಯಮಂತ್ರಿ ಪ್ರತಿ ಹಳ್ಳಿಗೆ ಹೋಗಬೇಕಿತ್ತು. ಅಧಿಕಾರಿಗಳು ಕೂಡ ಸಮೀಕ್ಷೆಗಾಗಿ ಗ್ರಾಮಗಳಿಗೆ ಬಂದಿಲ್ಲ. ಅನೇಕ ಕಡೆ ಪ್ರವಾಹ ಬಂದಿಲ್ಲ ಎಂದು ತಪ್ಪು ವರದಿ ನೀಡಿದ್ದಾರೆ ಎಂದರು.
ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ಈ ಕುರಿತು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಯಾವೆಲ್ಲ ಹಳ್ಳಿಗಳಲ್ಲಿ ಪ್ರವಾಹ ಆಗಿದೆ ಎಂದು ತಿಳಿಸಿದ್ದರೂ ಅವರಿಗೆ ಕಂದಾಯ ಇಲಾಖೆಯಿಂದ ಉತ್ತರ ನೀಡಿಲ್ಲ. ರೈತರನ್ನು ಕೈ ಬಿಟ್ಟು ಸರ್ಕಾರ ಅನ್ಯಾಯ ಮಾಡುತ್ತಿದೆ. ಆದ್ದರಿಂದ ಸರ್ಕಾರ ಮತ್ತೊಮ್ಮೆ ಸಮೀಕ್ಷೆ ಮಾಡಲಿ ಎಂದು ಒತ್ತಾಯಿಸಿದರು.
ʼಮಂಡಿ ಉದ್ದ ಕಬ್ಬು ಎದೆಮಟ್ಟ ಸಾಲʼ ಎಂಬ ಮಾತಿನಂತೆ ಕಬ್ಬು ಬೆಳೆಗಾರರ ಪರಿಸ್ಥಿತಿ ಇದೆ. ರಾಜ್ಯದಲ್ಲಿ 41 ಲಕ್ಷ ಟನ್ ಕಬ್ಬು ಉತ್ಪಾದನೆಯಾಗುತ್ತಿದ್ದು, 9.81 ಲಕ್ಷ ಹೆಕ್ಟೇರ್ನಲ್ಲಿ ಬೆಳೆಯಲಾಗುತ್ತಿದೆ. 81 ಸಕ್ಕರೆ ಕಾರ್ಖಾನೆಗಳಿದ್ದು ಎಲ್ಲವೂ ನಷ್ಟದಲ್ಲಿವೆ ಎನ್ನುತ್ತಿದ್ದಾರೆ. ಹೊಸದಾಗಿ 31 ಕಾರ್ಖಾನೆ ಆರಂಭಕ್ಕೆ ಅರ್ಜಿ ಬಂದಿದೆ. ತೂಕ ಯಂತ್ರದಲ್ಲಿ ಮೋಸವಾಗುತ್ತಿದ್ದು, ಶೇ.50 ರಷ್ಟು ಮಾತ್ರ ತೂಕ ಯಂತ್ರಗಳನ್ನು ಅಳವಡಿಸಲಾಗಿದೆ. ಯಂತ್ರ ಕಟಾವಿನಲ್ಲಿ ಶೇ.6 ರಷ್ಟು ಕಡಿತವಾಗುತ್ತಿದೆ. ಹಳೆ ಮಾದರಿ ಆರ್ಎಸ್ಪಿ, ಎಸ್ಎಪಿ ಕಡೆ ಸರ್ಕಾರ ಗಮನ ಕೊಡಬೇಕಿದೆ. ಮುಧೋಳದಲ್ಲಿ 240 ಟ್ರಾಕ್ಟರ್ಗಳಿಗೆ ಬೆಂಕಿ ಬಿದ್ದು 1,033 ಟನ್ ಕಬ್ಬು ಭಸ್ಮ ಆಗಿತ್ತು. ಪೊಲೀಸ್ ಇಲಾಖೆಯ ಭಯವಿದ್ದಿದ್ದರೆ ಇಷ್ಟೆಲ್ಲ ಆಗಲು ಸಾಧ್ಯವಿತ್ತೇ? 32 ಕಬ್ಬು ಬೆಳೆಗಾರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾಯಭಾಗದ ರೈತ ಲಕ್ಕಪ್ಪ ಗುಣಕಾರ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಆಗ ಯಾವುದೇ ಸಚಿವರು ಭೇಟಿ ಮಾಡಲಿಲ್ಲ ಎಂದರು.
ತುಂಗಭದ್ರಾ ಜಲಾಶಯದ ಗೇಟ್ನಿಂದ ನೀರು ಹರಿದು ಆಂಧ್ರಪ್ರದೇಶಕ್ಕೆ ಹೋಗಿದೆ. 33 ಗೇಟ್ ಅಳವಡಿಸದೇ ಇದ್ದಿದ್ದರಿಂದ ಈ ಸಮಸ್ಯೆಯಾಗಿದೆ. ನಾನು ಭೇಟಿ ನೀಡಿದ್ದಾಗ 12 ಕೋಟಿ ರೂ. ಬಿಲ್ ಪಾವತಿಯಾಗಿಲ್ಲ ಎಂದು ಗುತ್ತಿಗೆದಾರರು ಹೇಳಿದ್ದರು. ಪಾದಯಾತ್ರೆ, ಬಂದ್ ಆಗುತ್ತಲೇ ಇದ್ದರೂ ಸರ್ಕಾರ ಕ್ರಮ ವಹಿಸಲಿಲ್ಲ. ಇದರಿಂದಾಗಿ ಎರಡು ಬೆಳೆ ನಷ್ಟವಾಗಿದೆ. ಆದ್ದರಿಂದ ಪ್ರತಿ ಎಕರೆಗೆ 25,000 ರೂ. ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಉತ್ತರ ಕರ್ನಾಕದ ಸಮಸ್ಯೆಗಳ ಬಗ್ಗೆ ಡಾ.ನಂಜುಂಡಪ್ಪ ವರದಿಯಲ್ಲಿ ಉಲ್ಲೇಖಿಸಲಾಗಿದೆ. 6 ತಿಂಗಳಲ್ಲಿ ವರದಿ ನೀಡುತ್ತೇನೆಂದು ಕಳೆದ ಬಾರಿ ಸದನದಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿದ್ದರು. ಪ್ರೊ.ಗೋವಿಂದರಾವ್ ಅಧ್ಯಕ್ಷತೆಯಲ್ಲಿ ಸಮಿತಿ ರಚನೆಯಾಗಿ 12 ತಿಂಗಳಾದರೂ ವರದಿ ಬಂದಿಲ್ಲ. ಕೆಕೆಆರ್ಡಿಬಿ ಅನುದಾನದಡಿ ಜಿಲ್ಲಾ ತಾಲೂಕು ಆಸ್ಪತ್ರೆ, ಪಿಎಚ್ಸಿ, ಸಿಎಚ್ಸಿ ನಿರ್ಮಿಸಲು 900 ಕೋಟಿ ರೂ. ನೀಡಲಾಗುವುದು ಎಂದು ಹೇಳಿದ್ದರು. ಇದರ ಪ್ರಗತಿ ಎಲ್ಲಿಗೆ ಬಂದಿದೆ? ಕೈಗಾರಿಕಾ ಉತ್ತೇಜನದ ಬಗ್ಗೆ ಸಿಎಂ ಸಿದ್ದರಾಮಯ್ಯ ಹೇಳಿದ್ದರು. ಆದರೆ 216 ಕಾರ್ಖಾನೆಗಳು ಇನ್ನೂ ಸ್ಥಾಪನೆಯ ಹಂತದಲ್ಲೇ ಇವೆ. ವಾಣಿಜ್ಯ ಕೈಗಾರಿಕಾ ಇಲಾಖೆಯಡಿ 221 ಕಾರ್ಖಾನೆಗಳು ಕೂಡ ಇದೇ ಸ್ಥಿತಿಯಲ್ಲಿವೆ. ಹತ್ತಿ ಕಾರ್ಖಾನೆ ಅಭಿವೃದ್ಧಿ, ಪ್ರವಾಸೋದ್ಯಮ ಅಭಿವೃದ್ಧಿ, ಆಲಮಟ್ಟಿ ಜಲಾಶಯವನ್ನು 224 ಮೀಟರ್ಗೆ ಎತ್ತರಿಸಲು 73,603 ಎಕರೆ ಭೂ ಸ್ವಾಧೀನ ಮೊದಲಾದ ಕ್ರಮಗಳ ಬಗ್ಗೆ ಹೇಳಲಾಗಿದೆ. ಆದರೆ ಇವ್ಯಾವುದೂ ಅನುಷ್ಠಾನವಾಗಿಲ್ಲ ಎಂದರು.
ಆಲಮಟ್ಟಿ ಜಲಾಶಯ ಎತ್ತರಿಸುವ ಯೋಜನೆ ಜಾರಿ ಮಾಡಲು ಗ್ಯಾರಂಟಿ ಯೋಜನೆಗಳನ್ನು ಸ್ಥಗಿತಗೊಳಿಸಬೇಕಿದೆ ಅಥವಾ ಎಲ್ಲ ಇಲಾಖೆಗಳಲ್ಲಿ ಶೇ.20 ರಷ್ಟು ಅನುದಾನ ಕಡಿತಗೊಳಿಸಬೇಕಿದೆ ಎಂದು ಆರ್ಥಿಕ ಇಲಾಖೆ ಸಲಹೆ ನೀಡಿದೆ. ಈ ಸಲಹೆಯ ಪ್ರಸ್ತಾವ ಸಚಿವ ಸಂಪುಟಕ್ಕೂ ಹೋಗಿದೆ. ನಗರಾಭಿವೃದ್ಧಿ ಇಲಾಖೆಯಲ್ಲಿ 2,176 ಕೋಟಿ ರೂ., ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ 874 ಕೋಟಿ ರೂ., ಪರಿಶಿಷ್ಟ ಜಾತಿ ಕಲ್ಯಾಣದಲ್ಲಿ 833 ಕೋಟಿ ರೂ. ಕಡಿತ ಮಾಡಬೇಕೆಂದು ಪ್ರಸ್ತಾವದಲ್ಲಿದೆ. ಈಗ ಸಿಎಂ ಸಿದ್ದರಾಮಯ್ಯ ಕೊಟ್ಟ ಮಾತಿನಂತೆಯೇ ನಡೆದುಕೊಳ್ಳಬೇಕಿದೆ. ಒಬ್ಬ ಸಚಿವರೂ ಉತ್ತರ ಕರ್ನಾಟಕಕ್ಕೆ ಹೋಗಿಲ್ಲ. ಅಂತಹ ಸಚಿವರನ್ನು ಬದಲಾಯಿಸಿ ಎಂದರು.
ಗ್ರಾಮೀಣಾಭಿವೃದ್ಧಿ ಇಲಾಖೆಗೆ 26,578 ಕೋಟಿ ರೂ. ನೀಡಿದ್ದು, 7,049 ಕೋಟಿ ರೂ. ಬಿಡುಗಡೆಯಾಗಿದೆ. ಶೇ.19.63 ಮಾತ್ರ ಖರ್ಚು ಮಾಡಲಾಗಿದೆ. ಅರಣ್ಯ ಇಲಾಖೆಗೆ 2,440 ಕೋಟಿ ರೂ. ನೀಡಿದ್ದು, 1,215 ಕೋಟಿ ರೂ. ಬಿಡುಗಡೆಯಾಗಿದ್ದು, 791 ಕೋಟಿ ರೂ. ಖರ್ಚು ಮಾಡಲಾಗಿದೆ. ಯುವ ಸಬಲೀಕರಣ ಇಲಾಖೆಗೆ 270 ಕೋಟಿ ರೂ. ನೀಡಿದ್ದು, 145 ಕೋಟಿ ರೂ. ಬಿಡುಗಡೆಯಾಗಿದ್ದು, 40 ಕೋಟಿ (14%) ರೂ. ಖರ್ಚಾಗಿದೆ. ಯೋಜನೆ ಇಲಾಖೆಗೆ 3,157 ಕೋಟಿ ರೂ. ನೀಡಿದ್ದು, 1,081 ಕೋಟಿ ರೂ. (19%) ಖರ್ಚು ಮಾಡಲಾಗಿದೆ. ನಗರಾಭಿವೃದ್ಧಿ ಇಲಾಖೆಗೆ 26,678 ಕೋಟಿ ರೂ. ನೀಡಿದ್ದು, 5366 ಕೋಟಿ ರೂ. (19%) ಖರ್ಚಾಗಿದೆ. ಎಲ್ಲ ಇಲಾಖೆಗಳಲ್ಲೂ ಹಣ ಉಳಿಸಿಕೊಳ್ಳಲಾಗಿದೆ ಎಂದರು.
ಕಲ್ಯಾಣ ಕರ್ನಾಟಕದಲ್ಲಿ 2024-25 ರಲ್ಲಿ 53 ಪದವಿ ಕಾಲೇಜುಗಳಲ್ಲಿ ಶೂನ್ಯ ಫಲಿತಾಂಶ ಬಂದಿದೆ. ಐದು ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲೂ ಶೂನ್ಯ ಫಲಿತಾಂಶ ಬಂದಿದೆ. 21,000 ಶಿಕ್ಷಕ ಹುದ್ದೆ ಭರ್ತಿ ಮಾಡುತ್ತೇನೆಂದು ಮುಖ್ಯಮಂತ್ರಿ ಹೇಳಿದ್ದರೂ, ಅದು ಆಗಿಲ್ಲ. ಈ ಭಾಗದಲ್ಲಿ 50,244 ಮಕ್ಕಳು ಅಪೌಷ್ಟಿಕತೆಗೆ ಒಳಗಾಗಿದ್ದಾರೆ. ಬೆಂಗಳೂರಿನಲ್ಲಿ ತಲಾ ಆದಾಯ 7 ಲಕ್ಷ ರೂ. ಇದ್ದರೆ, ಕಲಬುರ್ಗಿಯಲ್ಲಿ 1.43 ಲಕ್ಷ ರೂ. ಇದೆ ಎಂದರು.
ಒಬ್ಬ ರಾಜ ಒಂದು ಹೆಜ್ಜೆ ಮುಂದೆ ಇಟ್ಟರೆ ಸೈನಿಕರು ಎರಡು ಹೆಜ್ಜೆ ಮುಂದಿಡುತ್ತಾರೆ. ಆದರೆ ಇಲ್ಲಿ ನಾಯಕತ್ವವೇ ಇಲ್ಲ. ಒಬ್ಬ ಶಾಸಕ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಎಂದು ಹೇಳುತ್ತಾರೆ. ಇಲ್ಲಿ ನಾಯಕತ್ವದ ಬಗ್ಗೆ ಗೊಂದಲವಿದೆ. ಕೆಲವು ಶಾಸಕರು ಡಿ.ಕೆ.ಶಿವಕುಮಾರ್ ಪರವಾಗಿ ಹೇಳಿದರೆ, ಮತ್ತೊಬ್ಬ ಶಾಸಕರು ಡಿಕೆಶಿಗೆ ಕೂಲಿ ಕೊಡಿ ಎಂದು ಕೇಳುತ್ತಾರೆ. ಇಡ್ಲಿ ವಡೆ ತಿಂದರೆ ಸಮಸ್ಯೆ ಬಗೆಹರಿಯಲ್ಲ. ಹಾದಿ ಬೀದಿಯಲ್ಲಿ ನಾನೇ ಸಿಎಂ ಎಂದು ಹೇಳುವುದು ಮುಖ್ಯಮಂತ್ರಿ ಹುದ್ದೆಗೆ ಶೋಭೆ ತರುವುದಿಲ್ಲ. ಸರಿಯಾಗಿ ಕುಳಿತು ಯಾರು ಸಿಎಂ ಎಂದು ತೀರ್ಮಾನಿಸಿ ಎಂದರು.
ಮಂಗಳಮುಖಿಯರು ರಸ್ತೆ ಸಿಗ್ನಲ್ಗಳಲ್ಲಿ ನಿಲ್ಲುತ್ತಾರೆ. ಸಮಾಜ ಅವರನ್ನು ಬಹಳ ಕೀಳಾಗಿ ನೋಡುತ್ತಿದೆ. ಆದ್ದರಿಂದ ಮಂಗಳಮುಖಿಯರಿಗೆ ಶೇ.0.5 ರಷ್ಟಾದರೂ ಮೀಸಲಾತಿ ನೀಡುವ ಬಗ್ಗೆ ಸರ್ಕಾರ ಚಿಂತಿಸಲಿ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.



