“ಹಿಮಾಲಯ” ಎಂಬ ಶಬ್ದದಲ್ಲೇ ಅದೇನೋ ಆಕರ್ಷಣೆ. ಹಿಮಾಲಯದ ಶಿಖರಗಳ ಶೃಂಗಗಳ ಸ್ಪರ್ಶಿಸಬೇಕೆಂಬುದು ಪ್ರತಿಯೊಬ್ಬ ಚಾರಣಿಗನ ಕನಸು. ಚಾರಣ ಪ್ರಿಯರಿಗೆ ಹಿಮಾಲಯವೇ ಸ್ವರ್ಗ, ಹಿಮ ಪರ್ವತಗಳ ಉತ್ತುಂಗ ತಲುಪುವುದೇ ಸಾಕ್ಷಾತ್ಕಾರ. ಪ್ರತಿವರ್ಷ ಹಿಮಾಲಯದ ಭಾಗದಲ್ಲಿ ಚಾರಣಗೈಯುವ ನಾವು ಈ ಬಾರಿ ಆಯ್ಕೆ ಮಾಡಿದ್ದು ಯೂತ್ ಹಾಸ್ಟೆಲ್ ಅಸೋಸಿಯೇಶನ್ ಆಫ್ ಇಂಡಿಯಾ ನಡೆಸುವ ರುದ್ರರಮಣೀಯ “ಸರ್ ಪಾಸ್ ” ಚಾರಣ. ಹಿಮಚಲ ಪ್ರದೇಶದಲ್ಲಿ ಅತೀ ಬೇಡಿಕೆ ಇರುವ ಚಾರಣಗಳಲ್ಲಿ ಸರ್ ಪಾಸ್ಗೆ ಮೊದಲ ಸ್ಥಾನ ಕಾರಣ ಸಾರ್ ಪಾಸ್ ಟ್ರೆಕ್ ಅನ್ನು ಹಿಮಾಚಲದಲ್ಲಿರುವ ಅತಿ ಸುಂದರ ಚಾರಣ ಮಾರ್ಗಗಳಲ್ಲಿ ಒಂದಾಗಿ ಪರಿಗಣಿಸಲಾಗುತ್ತದೆ.
ಎಲ್ಲಿದೆ ಈ “ಸರ್ ಪಾಸ್ ” ?
ಸರ್ ಪಾಸ್ ಇರುವುದು ಹಿಮಾಚಲ ಪ್ರದೇಶದ ಕುಲು ಜಿಲ್ಲೆಯ ಪಾರ್ವತಿ ಕಣಿವೆಯ ತುದಿಯಲ್ಲಿ. ಸಮುದ್ರ ಮಟ್ಟದಿಂದ 6000 ಅಡಿ ಎತ್ತರದಲ್ಲಿರುವ ಕಸೋಲ್ “ಸರ್ ಪಾಸ್ ” ಚಾರಣಕ್ಕೆ ಬೇಸ್ ಕ್ಯಾಂಪ್, ಕಸೋಲ್ ನಿಂದ 5 ಕಿ.ಮೀ ದೂರದಲ್ಲಿ ಪ್ರಾಕೃತಿಕ ಬಿಸಿ ನೀರಿನ ಬುಗ್ಗೆಗೆ ಹೆಸರುವಾಸಿಯಾಗಿರುವ ಮಣಿಕರಣ್ ಮಂದಿರವಿದೆ.
“ಸರ್ ಪಾಸ್ ” ಚಾರಣಕ್ಕೆ ಆಗಮಿಸುವ ಚಾರಣಾರ್ಥಿಗಳನ್ನು ಒಂದೆರಡು ದಿನಗಳ ಕಾಲ Acclamantization ಗಾಗಿ ಬೇಸ್ ಕ್ಯಾಂಪಿನಲ್ಲಿ ಉಳಿಸುತ್ತಾರೆ. ಆ ಅವಧಿಯಲ್ಲಿ ನಡಿಗೆ, ವ್ಯಾಯಾಮ, ಬಂಡೆ ಹತ್ತಿ ಇಳಿಸುವ ಮೂಲಕ ವಾತಾವರಣಕ್ಕೆ ಒಗ್ಗಿಕೊಂಡು ಮಾನಸಿಕವಾಗಿ ಮತ್ತು ದೈಹಿಕವಾಗಿ ಮುಂದಿನ ಚಾರಣಕ್ಕೆ ಸಿದ್ಧರಾಗುವಂತೆ ತಯಾರಿನ ನಡೆಸುವ ಚಟುವಟಿಕೆಗಳಿರುತ್ತವೆ.
ಗೃಹಣ್ ಎಂಬ ಸುಂದರ ಹಳ್ಳಿ
ಪರ್ವತಿ ನದಿಯ ತುತ್ತ ತುದಿಯಲ್ಲಿರುವ, ಕಸೋಲ್ ನಿಂದ “ಸರ್ ಪಾಸ್ “ಗೆ ಸಾಗುವ ಹಾದಿಯಲ್ಲಿ ಸಿಗುವ ಮೊದಲ ಮತ್ತು ಕೊನೆಯ ಸುಂದರ ಹಳ್ಳಿಯೇ ಗೃಹಣ್. ಹಸಿರ ಇಳಿಜಾರ ತಪ್ಪಲು, ಉದ್ದುದ್ದನೆಯ ದೇವದಾರು ಮರಗಳ ಕಾಡುಗಳಿಂದ ಕೂಡಿದ ಹಿಮಾಯಲದ ಮಡಿಲಿನಲ್ಲಿ ಬೆಚ್ಚಗೆ ಅವಿತುಕೊಂಡಿರುವ ಈ ಹಳ್ಳಿಯನ್ನು ತಲುಪಲು 12ಕಿ.ಮೀಗಳ ಕಾಲ್ನಡಿಯೊಂದೇ ರಹದಾರಿ. 80-100 ಮನೆಗಳಿರುವ, 400-500 ಜನರಿರುವ ಹಳ್ಳಿಗೆ ಒಂದೇ ಪ್ರಾಥಮಿಕ ಶಾಲೆ, ಹೈಸ್ಕೂಲ್ ವಿದ್ಯಾಭ್ಯಾಸಕ್ಕೆ 12ಕಿ.ಮೀ ದೂರದಲ್ಲಿರುವ ಮಣಿಕರಣಿಗೆ ಹೋಗಬೇಕು. ವರ್ಷದ 3-4ತಿಂಗಳು ವಿಪರೀತ ಮಂಜು ಸುರಿಯುವ ಕಾರಣಕ್ಕೆ ಇಲ್ಲಿನ ಹೆಚ್ಚಿನ ಮನೆಗಳಿಗೆ ಎರಡು ಅಂತಸ್ತು ಇದ್ದು ಕೆಳಗೆ ಜಾನುವಾರುಗಳ ಕೊಟ್ಟಿಗೆ ಇದ್ದರೆ ಮೇಲಿನ ಅಂತಸ್ತು ವಾಸಕ್ಕೆ, ಹಿಮ ಸುಲಭವಾಗಿ ಇಳಿದು ಹೋಗಲಿ ಎಂಬ ಕಾರಣಕ್ಕೆ ಮನೆಯ ಮೇಲ್ಛಾವಣಿಯನ್ನು ಬಳಪದ ಕಲ್ಲಿನಿಂದ ನಿರ್ಮಿಸುತ್ತಾರೆ. ಚಾರಣಿಗರ, ಪ್ರವಾಸಿಗರ ಸಂಖ್ಯೆ ಜಾಸ್ತಿಯಾಗಿರುವುದರಿಂದಲೋ ಏನೋ ಇತ್ತೀಚೆಗೆ ವಿದ್ಯುತ್ ಸಂಪರ್ಕ ಈ ಹಳ್ಳಿಯನ್ನು ತಲುಪಿದ್ದು, ಯುವಕರು ಚಾರಣಿಗರಿಗೆ ಗೈಡ್ ಗಳಾಗಿ, ಆಹಾರ ಸಮಾಗ್ರಿ ಬ್ಯಾಗ್ ಹೊರುವ ಪೋರ್ಟರ್ ಗಳಾಗಿ ಕೆಲಸ ಮಾಡುತ್ತಿದ್ದರೆ, ಸಣ್ಣ ಮಟ್ಟದ ಕೃಷಿ ಹೈಗುಗಾರಿಕೆ, ಉಣ್ಣೆ ಬಟ್ಟೆಗಳ ತಯಾರಿಕೆ ಇಲ್ಲಿನವರ ಆದಾಯದ ಮೂಲ. ಈ ಹಳ್ಳಿಯಲ್ಲಿ ಮದ್ಯಪಾನ ನಿಷಿದ್ಧವಾಗಿದ್ದು, ಹಳ್ಳಿಯ ಹೊರಗಿನಿಂದ ಮದ್ಯಪಾನ ಮಾಡಿ ಬಂದವರಿಗೆ ದಂಡ ಹಾಕುವ ಪದ್ಧತಿಯೂ ಇದೆ ಎನ್ನುವುದು ವಿಶೇಷ!!
ಹಿಮಾಲಯದ ಕಾಡುಗಳ ನಡುವಿನ ಹುಲ್ಲುಗಾವಲು ಪದ್ರಿ- ಮಿಂಗ್ ತಾಚ್
ನಮ್ಮ ಮುಂದಿನ ಪಯಣ ಪದ್ರಿಯ ಕಡೆಗೆ ಸಾಗುತ್ತದೆ. ಗೃಹಾಣ್ ನಿಂದ ಪದ್ರಿಗೆ ಸುಮಾರು 9 ಕಿ.ಮೀಗಳ ಪಯಣ. ಅದುವೆರೆಗೆ ಪಾರ್ವತಿ ನದಿ ಕಣಿವೆಯಲ್ಲೇ ಸಾಗುತ್ತಿದೆ ಹಾದಿ ಪೈನ್ ಮತ್ತು ದೇವದಾರು ಮರಗಳ ಘನವಾದ ಕಾಡನ್ನು ಪ್ರವೇಶಿಸುತ್ತದೆ. ಸಮಾರು 4-5 ಗಂಟೆಗಳ ನಡೆಗೆಯ ನಂತರ ಪದ್ರಿ ಕ್ಯಾಂಪ್ ತಲುಪುತ್ತೇವೆ. ಪದ್ರಿ ಕಾಡಿನ ನಡುವೆ ಇರುವ ಸಣ್ಣ ಹುಲ್ಲುಗಾವಲು ಒಂದು ಭಾಗದಲ್ಲಿ ದಟ್ಟವಾದ ಕಾಡು, ಮತ್ತೊಂದೆಡೆ ಮಂಜಿನ ಟೋಪಿ ಹಾಕಿಸಿಕೊಂಡ ಪರ್ವತಗಳು, ಸಂಜೆಯಾಗುತ್ತಲೇ ಸುರಿದ ಆಲಿಕಲ್ಲು ಮಳೆ, ನಂತರ ಮೂಡಿದ ಸೂರ್ಯನ ಹೊಂಗಿರಣ ಸುತ್ತಲಿನ ಪರಿಸರವನ್ನು ದೃಶ್ಯಕಾವ್ಯವಾಗಿ ಮೂಡಿಸುತ್ತದೆ.
ಪದ್ರಿಯಿಂದ ಮುಂದಕ್ಕೆ ಇರುವ ಕ್ಯಾಂಪ್ ಮಿಂಗ್ ತಾಚ್. ತಾಚ್ ಎಂದರೆ ಹಿಮಾಚಲದ ಭಾಷೆಯಲ್ಲಿ ಜಾನುವಾರುಗಳನ್ನು ಮೇಯಿಸುವ ಹುಲ್ಲುಗಾವಲು ಎಂದಾರ್ಥ ಮಿಂಗ್ ತಾಚ್ ಗೆ ಇರುವ ದೂರ ಇರುವ ದೂರ 14ಕಿ.ಮೀ ಆದರೆ ಇಲ್ಲಿ 14 ಎಂಬುದು ಇಲ್ಲಿ ಬರೀ ಸಂಖ್ಯೆಯಷ್ಟೇ ತೀವ್ರ ಏರುಗತಿಯಲ್ಲಿ ಸಾಗುವ ಅಂತ್ಯಂತ ಕಡಿದಾದ ಹಾದಿಯನ್ನು ಕ್ರಮಿಸಲು ನುರಿತ ಚಾರಣಿಗರಿಗೆ ಕೂಡಾ 8-10ಗಂಟೆ ಬೇಕು ಇದರ ಕಠಿಣತೆಯನ್ನು ಉಹಿಸಿಕೊಳ್ಳಬಹುದು. ಸಂಜೆಯಾಗುತ್ತಲೇ ಕ್ಯಾಂಪಿಗೆ ತಲುಪಿದ ಚಾರಣಾರ್ಥಿಗಳಿಗೆ ಮತ್ತೆ ಆಲಿಕಲ್ಲು ಮಳೆಯ ಸ್ವಾಗತ ಮೊದಲೇ ನಡೆದು ನಡೆದು ಸೋತು ಹೋಗಿದ್ದವರನ್ನು ಇದು ಮತ್ತಷ್ಟು ಹೈರಾಣಾಗಿಸಿತ್ತು. ಆದರೂ ಮೈಕೊರೆವ ಚಳಿಯ ನಡುವೆಯೂ ಸುಸ್ತು ಮರೆತು ಆಲಿಕಲ್ಲು ಮಳೆಯೊಂದಿಗೆ ಆಟವಾಡುತ್ತಾ ಎಂಜಾಯ್ ಮಾಡುವ ಭಂಡರಿಗೇನೂ ನಮ್ಮಲ್ಲಿ ಕಡಿಮೆ ಇರಲಿಲ್ಲ.
ನಡುಗಿಸುವ ನಗಾರು
ಸರ್ ಪಾಸ್ ಚಾರಣಾರ್ಥಿಗಳ ಮರೆಯಲಾಗದ ಕ್ಯಾಂಪ್ ನಗಾರು. ಸಮುದ್ರ ಮಟ್ಟದಿಂದ ಬರೋಬ್ಬರಿ 12500 ಅಡಿ ಎತ್ತರದಲ್ಲಿರುವ ಈ ಪ್ರದೇಶದಲ್ಲಿ ಪಾದರಸದ ಮಟ್ಟ ಯಾವತ್ತೂ ಸೊನ್ನೆಯಿಂದ ಕೆಳಕ್ಕೆ ಇರುತ್ತದೆ. ಸರ್ ಪಾಸ್ ಚಾರಣದ ಹಾದಿಯಲ್ಲಿರುವ ಕ್ಯಾಂಪುಗಳಲೇ ಅತೀ ಎತ್ತರದಲ್ಲಿರುವ ಈ ಕ್ಯಾಂಪಿನ ಮೂರು ಕಡೆ ಕಣಿವೆ. ಸುತ್ತಲೂ ಹಿಮದಿಂದ ಮುಚ್ಚಿದ ಶಿಖರಗಳು, ರಕ್ತ ಹೆಪ್ಪುಗಟ್ಟಿಸುವ ಚಳಿ, ಒಂದೇ ಸಮನೆ ಸುರಿಯುತ್ತಿದ್ದ ಮಂಜು, ಎರ್ರಾ ಬಿರ್ರಿ ಬೀಸುವ ಗಾಳಿಗೆ ಎಲ್ಲಿ ಟೆಂಟ್ ಹಾರಿ ಹೋಗುವುದೋ ಎಂಬ ಭಯ, ಜೊತೆಗೆ ಆಲಿಕಲ್ಲು ಮಳೆ,ಒಟ್ಟಿನಲ್ಲಿ 2-3 ಗಂಟೆಗಳ ವಿಪರೀತ ಹವಮಾನ ವೈಪರಿತ್ಯ ಚಾರಣಾರ್ಥಿಗಳನ್ನು ಪ್ರಾಣವನ್ನು ಕೈಯಲ್ಲಿ ಹಿಡಿದು ಕೂರುವಂತೆ ಮಾಡಿದ್ದು ಸುಳ್ಳಲ್ಲ. ಒಮ್ಮೆ ಮಳೆ ನಿಂತು ನಭದಲ್ಲಿ ಮೂಡಿದ ನೇಸರನು ಚಾರಣಿಗರಲ್ಲಿ ಹೊಸ ಚೈತನ್ಯ ಮೂಡಿಸಿತ್ತು. ಡೇರೆಯ ಪಕ್ಕದಲ್ಲೇ ಬಿದ್ದಿದ್ದ ಹಿಮದ ರಾಶಿ ಕಂಡು ಚಾರಣಾರ್ಥಿಗಳ ಉತ್ಸಾಹ ಎಲ್ಲೆ ಮೀರಿದ್ದು ಸೂರ್ಯನು ದಿಂಗತದತ್ತ ಜಾರುತ್ತಾ ಮಂಜಿನ ಬೆಟ್ಟದಲಿ ಒಂದಾಗುವ ದೃಶ್ಯ ಪ್ರತಿಯೊಬ್ಬರನ್ನು ಮಂತ್ರಮುಗ್ಧರಾಗಿಸಿತು. ನಗಾರುವಿನಲ್ಲಿ ಕಳೆದ ಪ್ರತಿಯೊಂದು ಕ್ಷಣವೂ ರೋಚಕ, ಭಯಂಕರ. ಇಲ್ಲಿ ನೀರು ಎಂಬ ಪದವೇ ಇಲ್ಲ ಅಕ್ಷರಶಃ ಮಂಜುಗೆಡ್ಡೆಯನೇ ಬಿಸಿ ಮಾಡಿ ಅಡುಗೆ ಮಾಡಬೇಕಾಗಿತ್ತು. ಇಂತಹ ವಿಷಮಶೀತ ಪರಿಸ್ಥಿತಿಯಲ್ಲೂ ಸಮಯಕ್ಕೆ ಸರಿಯಾಗಿ ಚಾ, ಸೂಪ್, ಊಟ ಎಲ್ಲಾ ಮುಗಿದ ಮೇಲೆ ಬೋರ್ವಿಟ ಇಷ್ಟು ವ್ಯವಸ್ಥೆಗಳನ್ನು ಅಚ್ಚುಕಟ್ಟಾಗಿ ಮಾಡುವ ಯೂತ್ ಹಾಸ್ಟೆಲ್ ಅಸೋಸಿಯೇಷನ್ ಮತ್ತು ಸ್ಥಳೀಯ ಸಿಬ್ಬಂದಿಗಳಿಗೆ ಹಾಟ್ಸ್ ಹಾಫ್ ಹೇಳಲೇ ಬೇಕು. ನಗಾರುವಿನಲ್ಲಿ ಊಟದ ನಂತರ ಕೊಟ್ಟ ಬಿಸಿ ಬಿಸಿ ಜಾಮೂನಿನ ರುಚಿ ಅವಿಸ್ಮರಣೀಯ.
“ಸರ್ ಪಾಸ್ ” ಪಾಸಾದ ಕ್ಷಣ
ಆ ದಿನದ ಚಾರಣ ಜೀವನದ ಕೊನೆಯವರೆಗು ನೆನಪಿನಲ್ಲಿರುವಂತದು. ಮುಂಜಾನೆ 2.30ಕ್ಕೆ ಎದ್ದು ರಕ್ತ ಹೆಪ್ಪು ಗಟ್ಟಿಸುವ ಚಳಿಯನ್ನು ತಡೆದುಕೊಂಡು ಇದ್ದಬದ್ದ ಬಿಸಿ ಉಡುಪುಗಳನ್ನು ಧರಿಸಿ ಚಾ ಕುಡಿದು ಒಂದು ಕೈಯಲ್ಲಿ ಕೋಲು ಹಿಡಿದು ಇನ್ನೊಂದು ಕೈಯಲ್ಲಿ ಟಾರ್ಚ್ ಹಿಡಿದುಕೊಂಡು ಒಬ್ಬರ ಹಿಂದೆ ಇನ್ನೊಬ್ಬರು ಸಾಲಾಗಿ ಮಂಜಿನ ಮೇಲೆ ಸಾಗುತ್ತಿರಲು ವಿಶಾಲವಾದ ಮಂಜಿನ ನಡುವೆ ಇರುವೆಗಳು ಸಾಗುವಂತೆ ಕಾಣುಸುತ್ತಿತ್ತು. ನಗಾರುವಿನಿಂದ ಸರ್ ಪಾಸ್ ನಡುವಿನ ಹಾದಿ ಪೂರ್ತಿ ಮಂಜಿನಿಂದ ಕೂಡಿದ್ದು ಸ್ವಲ್ಪ ತಪ್ಪಿದರೂ ಹಾದಿಯಿಂದ ಅರ್ಧ- ಮುಕ್ಕಾಲು ಕಿ.ಮೀ. ಕೆಳಕ್ಕೆ ಜಾರುವ ಅಪಾಯ. ಈ ಅವಧಿಯಲ್ಲಿ ಚಾರಣಾರ್ಥಿಗಳ ಜೊತೆಗೆ 4 ಗೈಡುಗಳಿದ್ದು ಹುರಿದುಂಬಿಸುತ್ತ ಸೂಚನೆಗಳನ್ನು ನೀಡುತ್ತಾ ಸಹಕರಿಸುತ್ತಾರೆ. ಸುಮಾರು ೨-೩ ಕಿ.ಮೀ. ಮಂಜಿನ ಕಠಿಣ ಹಾದಿಯನ್ನು ಸಾಗಿದ ನಂತರ ಸರ್ ಪಾಸ್ ಎಂಬ ಸ್ವರ್ಗ ಸದೃಶ ಜಾಗವನ್ನು ತಲುಪುತ್ತೇವೆ.
ಹಿಮಾಲಯದ ಭಾಗದಲ್ಲಿ ಪಹಾಡಿ ಜನರು ತಮ್ಮ ಅನುಕೂಲಕ್ಕೆ ಪರ್ವತಗಳ ಮೂಲಕ ದಾಟಿ ಮತ್ತೊಂದು ಜಾಗವನ್ನು ತಲುಪಲು ಕಂಡುಕೊಂಡ ದಾರಿಗಳನ್ನು ‘ಪಾಸ್’ ಅದುನುಡಿಯಲ್ಲಿ ಸರ್ ಎಂದರೆ ಕೆರೆ ಎಂದರ್ಥ. ಇಲ್ಲಿ ಮಂಜಿನ ನಡುವೆ ಇರುವ ಒಂದು ಸಣ್ಣ ಕೆರೆಯಿಂದಾಗಿ ಸರ್ ಪಾಸ್ ಎಂಬ ಹೆಸರು ಬಂತು. ಈ ಸರ್ ಪಾಸಿನ ಸೌಂದರ್ಯವನ್ನು ಪದಗಳಲ್ಲಿ ವರ್ಣಿಸುವುದು ಅಸಾಧ್ಯ. ಮೇಲೆ ನೀಲಾಕಾಶ, ಸುತ್ತಲೂ ದೃಷ್ಟಿನಿಟ್ಟಷ್ಟು ದೂರಕ್ಕೆ ಕಾಣುವ ಹಾಲಿನ ನೊರೆಯಂತೆ ಕಾಣುವ ಆಗಷ್ಟೇ ಬಿದ್ದಿದ್ದ ಮಂಜು ಒಂದು ರೀತಿ ಸ್ವರ್ಗದಲ್ಲಿ ಇದ್ದೇವೆ ಎಂಬಂತ ರೋಚಕ ಅನುಭವ. ಚಾರಣಾರ್ಥಿಗಳ ಸಂತೋಷಕ್ಕೆ ಪಾರವೇ ಇಲ್ಲ. ಏನೋ ಸಾಧಿಸಿದ ಸಂತೃಪ್ತಿ. ಮಂಜು ಎರಚಿ ಆಟವಾಡಿದ್ದು, ಪೋಟೋ ಕ್ಲಕ್ಕಿಸಿ ಕೊಂಡಿದ್ದು ಒಂದೇ ಎರಡೇ ಪ್ರತಿಯೊಬ್ಬರು ಬಾಹ್ಯಲೋಕವನ್ನು ಮರೆತು ಕುಣಿದು ಕುಪ್ಪಳಿಸಿದ್ದು. ಎತ್ತ ನೋಡಿದರು ಅತ್ತಾ ಕಣ್ಣಿಗೆ ಹಬ್ಬ. ಅದೊಂತರ ಖುಷಿಯೋ ಖುಷಿ ನಾವೆಲ್ಲರೂ ವಯಸ್ಸಿನ ಪರಿವೇ ಇಲ್ಲದೆ ಮಕ್ಕಳಂತೆ ಮಂಜಿನಲ್ಲಿ ಏಳುತ್ತಾ ಬಿಳುತ್ತಾ ಕೇಕೆ ಹಾಕುತ್ತಿದ್ದೆವು. ಅಲ್ಲಿಂದ ಮಂದೆ ಮತ್ತೆ ಸ್ವಲ್ಪ ಮೇಲಕ್ಕೆ ಏರಿದ ಒಡನೆಯೇ ಸರ್ ಪಾಸ್ ನ ಶೃಂಗವನ್ನು ತಲುಪುತ್ತೇವೆ. ಅದುವರೆಗೆ ಏರುಗತಿಯಲ್ಲಿದ್ದ ಚಾರಣ ಒಂದೇ ಸಮನೆ ಇಳಿಜಾರಿನತ್ತ ಸಾಗುತ್ತದೆ. ಅಷ್ಟರವರೆಗೆ ಚಾರಣಿಗರು ನಿರೀಕ್ಷೆ ಮಾಡುತ್ತಿದ್ದ ಮತ್ತೊಂದು ಕ್ಷಣ ಕಣ್ಣೆದುರಲ್ಲಿ. ಅದೇ ಸ್ನೋ ಸ್ಲೈಡ್. ಅಂದರೆ ಜಾರು ಬಂಡಿಯಂತೆ ಹಿಮದಲ್ಲಿ ಕುಳಿತು ಜಾರುವುದು.
ಪರ್ವತದ ತುದಿಯಿಂದ ಹಿಮದ ಮೇಲೆ ಕುಳಿತು ಜಾರುಬಂಡಿಯಂತೆ ಕೆಳಕ್ಕೆ ಸಾಗಬೇಕು ಇದರ ಮಜ ಅನುಭವಿಸಿದರೆ ಮಾತ್ರ ತಿಳಿಯಲು ಸಾಧ್ಯ. ಅಲ್ಲಿಗೆ ಪ್ರತಿಯೊಬ್ಬರಲ್ಲೂ ಸರ್ ಪಾಸ್ ಚಾರಣ ಯಶಸ್ವಿಯಾಗಿ ಮುಗಿಸಿದ ಸಂತೃಪ್ತಿ ಸಂತೋಷ. ಮಾತ್ರವಲ್ಲದೆ ನಮ್ಮ ಮತ್ತು ಮಂಜಿನ ನಡುವಿನ ನೇರ ಒಡನಾಟ ಮುಗಿಯುತ್ತದೆ. ಮುಂದೆ ಒಂದೇ ಸಮನೆ ಇಳಿಜಾರಿನ ಹಾದಿ. ಪ್ರತಿಯೊಬ್ಬರಲ್ಲೂ ಬೇಗನೆ ಮನೆ ಸೇರುವ ತವಕ. ಬೇಗ ಬೇಗನೆ ಹೆಜ್ಜೆಹಾಕುತ್ತಾ ನಾವು ಬಂದು ಸೇರಿದ್ದು ಬಿಸ್ಕಿರಿ ಎಂಬ ಪ್ರದೇಶದಲ್ಲಿರುವ ಕ್ಯಾಂಪ್. ಆ ರಾತ್ರಿ ಪೂರ್ತಿ ಸೈನಿಕನ ಕತೆಯನ್ನು ಹರಟ್ಟುತ್ತಾ ಸರಪಾಸ್ ನ ಗುಂಗಿನಲ್ಲೇ ಕಳೆದೆವು.
ಹಿಮಾಚಲದ ಮಿನಿ ಸ್ವಿಜರ್ಲ್ಯಾಂಡ್ ಬಂಡಕ್ ತಾಚ್
ಬಿಸ್ಕೆರಿ ಯಿಂದ ಮುಂದಿನ ಕ್ಯಾಂಪ್ ಬಂಡಕ್ ತಾಚ್. ಇಡಿಯ ‘ಸರಪಾಸ್’ ನ ಹಾದಿಯಲ್ಲೇ ಅತೀ ಸುಂದರ ಕ್ಯಾಂಪ್ ಬಂಡಕ್ ತಾಜ್. ಇಲ್ಲಿನ ಪ್ರತಿಯೊಂದು ದೃಶ್ಯವೂ ಪೋಟೊ ತೆಗೆದು screen saver ಮಾಡಿಕೊಳ್ಳುವಷ್ಟು ಸುಂದರ. ವಿಶಾಲವಾದ ಹುಲ್ಲುಗಾವಲು, ಹುಲ್ಲುಗಾವಲಿನಲ್ಲಿ ಮೇಯುತ್ತಿರುವ ದನಕರು, ಕುದುರೆ, ಹೆಸರಗತ್ತೆಗಳು. ನಡುನಡುವೆ ಒಂದೆರಡು ಬಂಡೆಗಳು. ಮುಗಿಲೆತ್ತರದ ದೇವದಾರು ಮರಗಳು. ಒಂದು ದಿಕ್ಕಿನಲ್ಲಿ ಹಿಮ ಪರ್ವತಗಳು ಮತ್ತೊಂದು ದಿಕ್ಕಿನಲ್ಲಿ ದೂರದಿ ಕಾಣುವ ಪುಲ್ಗ ಹಳ್ಳಿ, ಹಕ್ಕಿಗಳ ಇಂಚರ, ಹರಿವ ನೀರಿನ ಜುಳುಜುಳು ನಾದ. ಮೌನದಲ್ಲೇ ಪಿಸುಗುಡುವ ಅನುಭವ ಇವೆಲ್ಲವೂ ಸೇರಿ ಹಿಮಾಚಲದಲ್ಲೊಂದು ಮಿನಿ ಸ್ವಿಜರ್ಲ್ಯಾಂಡ್ ಅನ್ನು ಹುಟ್ಟುಹಾಕಿದೆ.
ಮರುದಿನ ಒಂದೆರಡು ಗಂಟೆಗಳಲ್ಲಿ ನಡೆದು ಪುಲ್ಗಾ ಎಂಬ ಹಳ್ಳಿಯನ್ನು ತಲುಪಿದೆವು. ಪುಲ್ಗಾ ಕೂಡ ಗೃಹಣ್ ನಂತೆ ಪ್ರಕೃತಿಯ ನಡುವೆ ಇರುವ ಹಳ್ಳಿ. ಆದರೆ ಇಲ್ಲಿ ರಸ್ತೆ ಹತ್ತಿರವಿರುವ ಕಾರಣ ಮೂಲಭೂತ ಅವಶ್ಯಕತೆಗಳು ತಲುಪಿದೆ. ನಾವು ನಮ್ಮ ಚಾರಣದ ಅಂತಿಮ ಭಾಗದಲ್ಲಿದ್ದೆವು. ಅಲ್ಲಿಂದ 1-2 ಕಿ.ಮೀ ದೂರದಲ್ಲೇ ಬರ್ಶಿಣಿ ಬಸ್ ನಿಲ್ದಾಣ. ಅಲ್ಲಿಂದ ಬಸ್ ಹಿಡಿದು ಮಣಿಕರಣ್ ತಲುಪಿದ್ದೆ ತಡ ಸರ್ರನೆ ಬಿಸಿ ನೀರಿನ ಕೊಳದತ್ತ ಧಾವಿಸಿ ಸ್ನಾನಕ್ಕೆ ಇಳಿದೆವು. ಕೊರೆವ ಚಳಿಯಲ್ಲಿ ಏಳು ದಿನಗಳಿಂದ ಸ್ನಾನವೂ ಮಾಡಿರಲ್ಲಿಲ್ಲ. ಬಿಸಿ ನೀರು ಸಿಕ್ಕಿದೆ ತಡ ಗಂಟೆಗಟ್ಟಲೆ ಜಳಕ ಮಾಡಿದೆವು. ಅಷ್ಟು ದಿನದ ನಿರಂತರ ನಡಿಗೆಯ ಆಯಾಸವೆಲ್ಲವೂ ಕಡಿಮೆಯಾಗಿ ದೇಹ ಮನಸ್ಸು ಪ್ರಫ್ಫಲಿತಗೊಂಡತಾಗಿತ್ತು. ಅಲ್ಲೆ ಪಕ್ಕದಲ್ಲಿ ಇದ್ದ ಗುರುದ್ವಾರದ ಲಂಗರಿನಲ್ಲಿ ಸಿಕ್ಕ ಮೃಷ್ಟಾನ್ನ ಭೋಜನ ಚುರುಗುಟ್ಟುತ್ತಿದ್ದ ಹೊಟ್ಟೆಯನ್ನು ತಂಪಾಗಿಸಿತ್ತು. ಕಳೆದ 4-8 ದಿನಗಳು ಮೊಬೈಲ್ ಇಂಟರ್ ನೆಟ್ ಮುಂತಾದ ಬಾಹ್ಯಪ್ರಪಂಚದ ಯಾವುದೇ ಸಂಪರ್ಕದಲ್ಲಿ ಇಲ್ಲದ ನಮ್ಮನ್ನು ಮಣಿಕರಣ್ನ ಗಿಜಿಗುಡುವ ರಸ್ತೆ, ಮಳಿಗೆಗಳು ಮತ್ತೆ ವಾಸ್ತವದ ಜಗತ್ತಿಗೆ ಎಳೆದುತರುವ ಪ್ರಯತ್ನ ಮಾಡುತ್ತಿದ್ದವು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.