ಧಾರವಾಡ : ಬಿಸಿಲಿನ ಝಳಕ್ಕೆ ಅವಳಿ ನಗರದ ಭೂಮಿ ಕೆಂಡವಾಗಿದೆ. ಇತ್ತೀಚಿನ ತುಂತುರು ಮಳೆ ಹನಿ ತುಸು ತಂಪೆರೆದು ನಮ್ಮ ಬದುಕು ಸಹ್ಯವಾಗಿಸಿದೆ. ಆದರೆ, ಇತ್ತ ಪ್ರಖರ ಬಿಸಿಲೂ ಅಲ್ಲ, ತೀರ ಭೂಮಿ ತೋಯುವಷ್ಟು ಮಳೆಯೂ ಇಲ್ಲ ಹಾಗಾಗಿ, ’ಉಮರು’ ಅಸಹನೀಯವಾಗಿದೆ.
ಉಮರು ನಮ್ಮ ಕೊಡುಗೆ! ಕಾರ್ಬನ್ ಹೆಜ್ಜೆಯ ಪರಿಣಾಮ. ಬಿಸಿ ಮಾತ್ರ ಈ ನೆಲದ ಮೇಲಿನ ನಮ್ಮಂಥ ಜೀವಿಗಳಿಗೆ ಮಾತ್ರವಲ್ಲ; ಇಲ್ಲಿನ ಬಿಲವಾಸಿಗಳ ಜೀವಕ್ಕೂ ಬಿಸಿಲ ಬೇಗುದಿ ಅಸಹನೀಯ. ಕೆಲವೊಮ್ಮೆ ಕುತ್ತು ತರುವಷ್ಟು ತಾಪ ಪ್ರಖರವಾಗಿದೆ.
ಉರಗ ಮಿತ್ರ ಯಲ್ಲಪ್ಪ ಜೋಡಳ್ಳಿ ಕಳೆದ 2 ತಿಂಗಳ ಅವಧಿಯಲ್ಲಿ 110 ಕ್ಕೂ ಹೆಚ್ಚು ಹಾವುಗಳನ್ನು ಜೀವಂತವಾಗಿ ಬಂಧಿಸಿ, ಸುರಕ್ಷಿತವಾಗಿ ಊರಾಚೆ ತಲುಪಿಸಿ ಬಂದಿದ್ದಾರೆ. ಆ ಪೈಕಿ 60 ಕ್ಕೂ ಹೆಚ್ಚು ವಿಷಕಾರಿ ಹಾಗೂ 50 ರಷ್ಟು ವಿಷಕಾರಿಯಲ್ಲದ ಹಾವುಗಳು ಸೇರಿವೆ. ಜನರ ಸಹಕಾರವೂ ಸಿಕ್ಕಿದೆ. ಈ ಮೊದಲಿನಂತೆ ಅಮಾನವೀಯವಾಗಿ ಯಾರೂ ಕೊಲ್ಲಲು ಹೋಗುವುದಿಲ್ಲ. ತಿಳಿವಳಿಕೆ ಮೂಡಿದೆ.
ನೇಚರ್ ರಿಸರ್ಚ್ ಸೆಂಟರ್ ಕಲೆ ಹಾಕಿದ ಮಾಹಿತಿ ಪ್ರಕಾರ ಕಳೆದ ಈ ಎರಡು ತಿಂಗಳಲ್ಲಿ ಅಂದಾಜು 36 ಹಾವುಗಳನ್ನು ಹುಬ್ಬಳ್ಳಿ-ಧಾರವಾಡದಲ್ಲಿ ಮಾನವ ಹಸ್ತಕ್ಷೇಪದಿಂದ ಕೊಲ್ಲಲಾಗಿದೆ. ಕೆಲವನ್ನು ಜನರೇ ಕೈಯಾರ ಕೊಂದಿದ್ದರೂ, ಮತ್ತಷ್ಟು ವಾಹನಗಳ ಗಾಲಿಗೆ ಸಿಲುಕಿ, ರಸ್ತೆಗೆ ಅಪ್ಪಚ್ಚಿಯಾಗಿ ಪ್ರಾಣತೆತ್ತಿವೆ.
ಸಾಮಾನ್ಯ ನಿಶಾಚರಿಗಳಾದ ಹಾವುಗಳು ಶೀತರಕ್ತ ಪ್ರಾಣಿಗಳು. ಆದರೆ, ಏರಿದ ತಾಪಮಾನದಿಂದಾಗಿ ಧಗೆ-ಸೆಕೆ ತಡೆದುಕೊಳ್ಳಲಾಗದೇ, ಜೀವದ ಹಂಗು ತೊರೆದು ಬೆಳಗಿನ ಹೊತ್ತು ಬಿಲದಿಂದ ಹೊರಬಂದು ಸಂಚರಿಸಹೋದ ಪರಿಣಾಮ ಜೀವತೆತ್ತಿವೆ. ವಿಷಾದದ ಸಂಗತಿ ಎಂದರೆ, ಜೀವಬಿಟ್ಟ 36 ಹಾವುಗಳ ಪೈಕಿ ಕೇವಲ 6 ಮಾತ್ರ ವಿಷಕಾರಿ. 34 ಹಾವುಗಳು ನಿರುಪದ್ರವಿ. ಹಾಗಾದರೆ ಕೊಲ್ಲಲು ಕಾರಣ, ಹಾವುಗಳ ಬಗ್ಗೆ ನಮಗಿರುವ ಅಜ್ಞಾನ ಮತ್ತು ಜೀವ ಭಯ. ಲೆಕ್ಕಕ್ಕೆ ಸಿಗದೇ ಸತ್ತು ಹೋದ ಹಾವುಗಳು ಬಹುಶಃ ಎರಡು ಪಟ್ಟು ಇರಬೇಕು!
ಅರ್ಥಾತ್, ಜೀವ ಉಳಿಸಿಕೊಂಡ ಸಂಖ್ಯೆಯಷ್ಟೇ ಹಾವುಗಳು ಬೇರೆ ಬೇರೆ ಕಾರಣಗಳಿಗಾಗಿ ಪ್ರಾಣ ತೆತ್ತಿವೆ.
ಯಾವತ್ತೂ ಮನುಷ್ಯನ ಸಾಮಿಪ್ಯ ಬಯಸದ ಮತ್ತು ಕಣ್ಣು ತಪ್ಪಿಸಿ ಬದುಕುವ ಹಾವುಗಳು, ಪರಿಸರ ಸ್ನೇಹಿ ಜೀವಿಗಳು. ಜೀವಿ ಸಂಕುಲದ ಆಹಾರ ಸರಪಳಿಯ ಒಂದು ವಿಶಿಷ್ಟ ಮತ್ತು ಗಟ್ಟಿಮುಟ್ಟಾದ ಸೂಕ್ಷ್ಮ ಕೊಂಡಿ ಹಾವುಗಳು. ನಮ್ಮ ಅವಳಿ ನಗರದ ಒಳ ಚರಂಡಿ ವ್ಯವಸ್ಥೆ ಹದಗೆಟ್ಟ ಕಾರಣ – ರಸ್ತೆ ನಿರ್ಮಾಣ, ಕೇಬಲ್ ಅಳವಡಿಸಲು ಅಗೆತ, ಮೇಲಾಗಿ ವಸತಿ ವಿನ್ಯಾಸಗಳ ವಿಸ್ತರಣೆ, ನಿವೇಶನಗಳ ನಿರ್ಮಾಣದಿಂದ ಅವುಗಳ ವಾಸಸ್ಥಳ ಮತ್ತು ಆಹಾರ, ವಿಶೇಷವಾಗಿ ಹಾವು, ಹೆಗ್ಗಣ ಲಭ್ಯತೆ ದುರ್ಲಭವಾಗಿ ಜನಸಂದಣಿಯ ಮಧ್ಯೆ ಪ್ರತ್ಯಕ್ಷವಾಗುವ ಅನಿವಾರ್ಯತೆ ಈಗ ಸೃಷ್ಟಿಯಾಗಿದೆ.
ಎಲ್ಲ ಜೀವಿಗಳ ವಾಸಸ್ಥಳಗಳನ್ನು ಮನುಷ್ಯ ಅತಿಕ್ರಮಿಸಿಕೊಂಡಿರುವಂತೆ, ಅವಳಿ ನಗರದಲ್ಲೂ ಇಂಚಿಚಿಂಗೂ ಬಡಾವಣೆಗಳು ರೂಪುಗೊಳ್ಳುತ್ತಿರುವ ಹಿನ್ನೆಲೆಯಲ್ಲಿ, ಅಳಿದುಳಿದ ಗುಡ್ಡ, ಕಾಡು ಸಹ ಲೇಔಟ್ ಆಗಿ ಪರಿವರ್ತನೆಗೊಂಡಂತೆ, ಇನ್ನು ಮುಂದೆ ನಿತ್ಯವೂ ನಮ್ಮ ಮನೆಗಳ ಅಂಗಳದಲ್ಲಿ ಹಾವುಗಳ ದರ್ಶನ ಸಾಮಾನ್ಯ. ಅವುಗಳ ಜೊತೆ ಮತ್ತು ಪರಸ್ಪರರ ಸ್ವಾತಂತ್ರ್ಯ ಗೌರವಿಸಿಕೊಂಡು ಬದುಕುವ ಮನೋಸ್ಥಿತಿ ನಾವು ರೂಢಿಸಿಕೊಳ್ಳಬೇಕಿದೆ. ಕಾರಣ, ಕೊಲ್ಲುವುದು ಪರಿಹಾರವಲ್ಲ.
ಯಾವುದೇ ಹಾವಿನ ಮಾಂಸ, ತಲೆ ಅಥವಾ ಎಲುಬಿನ ಸೂಪು ಮನುಷ್ಯರಲ್ಲಿ ಲೈಂಗಿಕಾಸಕ್ತಿ ಅರಳಿಸಿದ, ನೋವು ಶಮನ ಮಾಡಿದ ಅಥವಾ ಖಾಯಿಲೆ ಉಪಶಮನಗೊಳಿಸಿದ ಬಗ್ಗೆ ವೈಜ್ಞಾನಿಕ ಪುರಾವೆ ಅಥವಾ ಸಂಶೋಧನೆ ನಡೆಸಿದ ಮಾಹಿತಿ ಇಲ್ಲ. ನಾವು ತೊಡುವ ಬೆಲ್ಟ್, ಕೈ ಗಡಿಯಾರದ ಬೆಲ್ಟ್, ಕನ್ನಡಕದ ಪೌಚ್, ಪೆನ್ ಹೊದಿಕೆ, ಚಂಚಿ, ಟೋಪಿ, ಸ್ಕಾರ್ಫ ತಯಾರಿಸಿ ಮಾರುವ ಪ್ರಯತ್ನಗಳು ಇಲ್ಲದಿಲ್ಲ. ಹುಲಿ ಉಗುರು, ರುದ್ರಾಕ್ಷಿ ಮಾರಿದಂತೆ..!
ಹಾವುಗಳು ಸರ್ಕಾರದ ಆಸ್ತಿ. ಅನಗತ್ಯವಾಗಿ ಬಂಧಿಸಿದಲ್ಲಿ, ಹಿಂಸಿಸಿದಲ್ಲಿ ಮತ್ತು ಕೊಂದಲ್ಲಿ ಅದು ವಿಚಾರಣೆಗೆ ಯೋಗ್ಯವಾದ (ಕ್ರಿಮಿನಲ್) ಅಪರಾಧ. ಶಿಕ್ಷಿಸಲೂ ಸಹ ಅವಕಾಶವಿದೆ. ವಿಷಕಾರಿ ಹಾವಿನಿಂದ ಕಚ್ಚಿಸಿಕೊಂಡರೂ ಪೊಲೀಸರು (ಎಫ್ಐಆರ್) ಮತ್ತು ಅರಣ್ಯ ಇಲಾಖೆ (ಎಫ್ಓಸಿ) ದಾಖಲಿಸಿಕೊಳ್ಳುತ್ತದೆ. ಸೂಕ್ತ ವಿಚಾರಣೆ ಎದುರಿಸಬೇಕಾಗುತ್ತದೆ ಎಂಬ ಅರಿವು ನಮಗಿಲ್ಲ.
ಈ ನಿಟ್ಟಿನಲ್ಲಿ ನೇಚರ್ ರಿಸರ್ಚ್ ಸೆಂಟರ್ ಅವಳಿ ನಗರದ ನಿವಾಸಿಗಳಲ್ಲಿ ಈ ಕೆಳಗಿನ ಕೆಲ ಹೆಜ್ಜೆಗಳನ್ನು ರೂಢಿಸಿಕೊಳ್ಳುವಂತೆ ಮನವಿ ಮಾಡುತ್ತಿದೆ.
- ಹಾವುಗಳಲ್ಲಿ ಎರಡು ವಿಧ. ವಿಷಕಾರಿ ಮತ್ತು ವಿಷಕಾರಿ ಅಲ್ಲದವು. ಎರಡೂ ನಿರುಪದ್ರವಿಗಳೇ. ಪರಿಸರ ಸ್ನೇಹಿ ಬದುಕು ರೂಢಿಸಿಕೊಂಡವು. ಅನಿರೀಕ್ಷಿತವಾಗಿ ಹಾವು ಕಂಡಾಗ ಗಾಬರಿ ಬೀಳಬೇಡಿ. ಜನರನ್ನು ಕರೆತಂದು ಜಾತ್ರೆ ಹೂಡಬೇಡಿ. ನೀವು ನೋಡಿಯೇ ಇಲ್ಲ ಎಂಬಂತೆ, ಇತರರಿಗೆ ಜಿಜ್ಞಾಸೆ ಮೂಡಿಸದೇ ಸುರಕ್ಷಿತ ಅಂತರದಲ್ಲಿ ನಿಂತು, ಅದು ಸಾಗಿ ಹೋಗಲು ದಾರಿ ಮಾಡಿ ಕೊಡಿ. ಅವು ನಾಚಿಕೆ ಸ್ವಭಾವದವು. ಜನರ ಕಣ್ಣಿಗೆ ಬೀಳಲು ಸುತಾರಾಂ ಇಷ್ಟವಿಲ್ಲದ ಜೀವಿಗಳು. ಆಹಾರ ಬೆನ್ನಟ್ಟಿ ಅರಿಯದೇ ಪ್ರತ್ಯಕ್ಷವಾಗಿರಬಹುದು. ಸಾಧ್ಯವಾದರೆ ದೂರದಿಂದ ಒಂದು ಚಿತ್ರ ಕ್ಲಿಕ್ಕಿಸಿಕೊಳ್ಳಿ. ಹಾವು ಸೇರಿಕೊಳ್ಳುವ ಜಾಗೆ ಗುರುತಿಟ್ಟುಕೊಳ್ಳಿ.
- ಇತ್ತೀಚಿಗೆ, ಕೆಲವರು ಪೌರುಷ ಮೆರೆಯಲು, ಸಾಮಾಜಿಕ ಜಾಲತಾಣದಲ್ಲಿ ತಮ್ಮ ಸ್ಟೇಟಸ್ ಅಪ್ಡೇಟ್ಗಾಗಿ ಸೆಲ್ಫಿ ಕ್ಲಿಕ್ಕಿಸುವ ಭರದಲ್ಲಿ ಹಾವನ್ನು ಬಂಧಿಸುವ, ಹಿಡಿದೆತ್ತುವ, ಹಿಂಸಿಸುವ ಮತ್ತು ಕೊನೆಗೆ ಜೀವ ತೆಗೆಯುವ, ವಾರಗಟ್ಟಲೇ ಪ್ಲಾಸ್ಟಿಕ್ ಬಾಟಲಿಗಳಲ್ಲಿ ಸಂಗ್ರಹಿಸಿ, ಪ್ರದರ್ಶನಕ್ಕೆ ಇಡುವ ಕೆಲಸ ಮಾಡುತ್ತಿರುವುದು ಎನ್ಆರ್ಸಿ ಗಮನಕ್ಕೆ ಬಂದಿದೆ. ಸೂಕ್ತ ತರಬೇತಿ ಪಡೆಯದೇ ಈ ಅಪಾಯಕಾರಿ ಕಸರತ್ತು ಪ್ರದರ್ಶಿಸುವುದು ನಮ್ಮ ಜೀವಕ್ಕೆ ಕುತ್ತು ತರಬಹುದು. ಈ ಬೇಜವಾಬ್ದಾರಿ ನಡೆಯ ಹೊಣೆಗಾರರು ಸಂಪೂರ್ಣ ನಾವೇ.
- ಹಾವು ಕಂಡಾಗ ಅದು ಜನನಿಬಿಡ ಪ್ರದೇಶವಾಗಿದ್ದರೆ, ಮನೆ ಅಥವಾ ಅಂಗಳವಾಗಿದ್ದರೆ – ನುರಿತವರಾದ ಯಲ್ಲಪ್ಪ ಜೋಡಳ್ಳಿ – 8310826835, ಸುರೇಶ ಹೆಗ್ಗೇರಿ – 9448565136, ವನ್ಯಜೀವಿಗಳ ಗೌರವ ವಾರ್ಡನ್ ಪ್ರೊ. ಗಂಗಾಧರ ಕಲ್ಲೂರ – 0836 -2741197, ಪ್ರಕಾಶ ಗೌಡರ – 7026666520, ಡಾ. ಧೀರಜ್ ವೀರನಗೌಡರ – 9986052748 ಅಥವಾ ಹರ್ಷವರ್ಧನ ಶೀಲವಂತ -9886521664 ಅವರನ್ನು ಸಂಪರ್ಕಿಸಿ.
- ಕಾಡಿನ ಪ್ರಾಣಿ ನಾಡಿಗೆ ಬರಲಿ, ನಾಡಿನ ಪ್ರಾಣಿ ಕಾಡಿಗೇ ಹೋಗಲಿ ಸಾಯುವುದು ಮಾತ್ರ ಕಾಡಿನ ಪ್ರಾಣಿಯೇ. ಹಾಗಾಗಿ, ಜೀವಂತವಾಗಿ, ಸುರಕ್ಷಿತವಾಗಿ ಕಾಡಿನ ಪ್ರಾಣಿ ಹಾವನ್ನು ಸೆರೆ ಹಿಡಿದು ಸುರಕ್ಷಿತ ಸ್ಥಳದಲ್ಲಿ ಬಿಡಲು ಬಲ್ಲವರಿಗೆ ಮಾಹಿತಿ ನೀಡಿದರೆ ಮಹದುಪಕಾರ. ಸ್ವತಃ ಪ್ರಯೋಗಕ್ಕಿಳಿದು, ರಸಲ್ಸ್ ವೈಪರ್ (ಬಳೆವೆಡಕ) ಕಚ್ಚಿಸಿಕೊಂಡು, 6 ತಿಂಗಳು ಕಾಲ, ಲಕ್ಷಾಂತರ ರೂಪಾಯಿ ಚಿಕಿತ್ಸೆಗೆ ವ್ಯಯಿಸಿದವರು, ಕೋಬ್ರಾ (ನಾಗರಹಾವು) ಕಚ್ಚಿಸಿಕೊಂಡು 8 ತಿಂಗಳು, ಲಕ್ಷಾಂತರ ರೂಪಾಯಿ ಚಿಕಿತ್ಸೆಗೆ ಖರ್ಚಿಸಿದವರ ದೊಡ್ಡ ಪಟ್ಟಿಯೇ ಇದೆ. ಜಾಣರು ಮೂರ್ಖರಂತೆ ವರ್ತಿಸಬಾರದು. ಇಲ್ಲಿ ಮುಗ್ಧತೆಯ ಪ್ರಶ್ನೆಯೇ ಇಲ್ಲ.
- ಆಕಸ್ಮಿಕವಾಗಿ ಕಚ್ಚಿದರೆ ಕೂಡಲೇ ಸ್ಥಳೀಯ ಆರೋಗ್ಯ ಕೇಂದ್ರದಲ್ಲಿ/ ವೈದ್ಯರಲ್ಲಿ ಪ್ರಥಮ ಚಿಕಿತ್ಸೆ ಪಡೆದುಕೊಂಡು ಸತ್ತೂರಿನ ಎಸ್ಡಿಎಂ ಆಸ್ಪತ್ರೆ, ಹುಬ್ಬಳ್ಳಿಯ ವಿದ್ಯಾನಗರದ ಕಿಮ್ಸ್ ಮತ್ತು ಹೊಸ ಬಸ್ ನಿಲ್ದಾಣದ ಬಳಿಯ ಲೈಫ್ಲೈನ್ ಆಸ್ಪತ್ರೆಗೆ 2 ಗಂಟೆಯ ಅವಧಿಯೊಳಗೆ ತಲುಪಿದಲ್ಲಿ ಸಮರ್ಪಕ ಚಿಕಿತ್ಸೆ ಒದಗಿಸಲು ಸಾಧ್ಯವಿದೆ. ಕಚ್ಚಿದ್ದು ವಿಷಕಾರಿ ಹಾವು ಎಂಬುದು ಸಾಬೀತಾದಲ್ಲಿ ಧಾರವಾಡದ ಲಕ್ಷ್ಮಿ ಥಿಯೇಟರ್ ಸಮೀಪದ ಗಾಂವಕರ ಪೆಟ್ರೋಲ್ ಬಂಕ್ ಬಳಿಯ ಅನುರಾಧಾ ಎಂಟರ್ಪ್ರೈಸಸ್ನಲ್ಲಿ ‘ಯಾಂಟಿ ವೆನಮ್ ಇಂಜಕ್ಷನ್’ ಲಭಿಸುತ್ತದೆ. (ಮನೋಹರ ಭಟ್ – 9448143698)
- ಆಕಸ್ಮಿಕವಾಗಿ ಪೆಟ್ಟು ತಿಂದ, ಗಾಯಗೊಂಡ ಹಾವು ಕಂಡರೆ ಕೂಡಲೇ ಮೇಲಿನ ಸಂಖ್ಯೆಗಳಿಗೆ ಕರೆ ಮಾಡಿ, ಅಥವಾ ನುರಿತವರಾದರೆ ಜಾಗರೂಕತೆಯಿಂದ ಪೆಟ್ಟಿಗೆಯೊಂದರಲ್ಲಿ ಹಾಕಿ ಕೃಷಿ ವಿಶ್ವವಿದ್ಯಾಲಯದ ಪಶು ಚಿಕಿತ್ಸಾಲಯದ ಹಿರಿಯ ವೈದ್ಯ ಡಾ. ಅನೀಲ ಪಾಟೀಲ (9731088592) ಅವರನ್ನು ಸಂಪರ್ಕಿಸಿ, ಸಕಾಲಿಕವಾಗಿ ಚಿಕಿತ್ಸೆ ನೀಡಿ ಜೀವ ಉಳಿಸಬಹುದು.
- ಮೇಲಾಗಿ, ಹಾವುಗಳಿಗೂ ಸಹ ನಿಗದಿತ ವ್ಯಾಪ್ತಿ ಪ್ರದೇಶಗಳಿವೆ. ವಿಷಕಾರಿ ಹಾವಾಗಿದ್ದರೆ ಬಂಧಿಸಿ ದೂರಬಿಡುವುದು ಅಥವಾ ಪುನರ್ವಸತಿ ಕಲ್ಪಿಸುವುದು ಅನಿವಾರ್ಯ. ಹಾಗೆ ಮಾಡಿದಾಗ, ಹಾವುಗಳೂ ಕೂಡ ಭಿನ್ನ ವಾಸಸ್ಥಳಕ್ಕೆ ಹೊಂದಿಕೊಳ್ಳಲಾಗದೇ ತಮ್ಮ ಸ್ಮರಣ ನಕ್ಷೆಯಲ್ಲಿರುವ ಜಾಗೆಗಳನ್ನು ಮರೆತು, ಹೊಸ ಜಾಗೆ ಗುರುತಿಸಲಾಗದೇ ನೇವಿಗೇಷನ್ ಸಾಮರ್ಥ್ಯ ಕಳೆದುಕೊಂಡು ಸಾವನ್ನಪ್ಪುವ ಸಾಧ್ಯತೆ ಹೆಚ್ಚು. ಹಾಗಾಗಿ, ವಿಷಕಾರಿಯಲ್ಲದ, ನಿರುಪದ್ರವಿ ಹಾವುಗಳು ಕಂಡಾಗ ಬಂಧಿಸುವಂತೆ, ಅಲ್ಲಿಂದ ಕೊಂಡೊಯ್ಯುವಂತೆ ಪರಿಣಿತರಿಗೆ ದುಂಬಾಲು ಬೀಳಬೇಡಿ. ನಿಮ್ಮ ಭಾಗದ ಇಲಿಗಳನ್ನು ನಿಯಂತ್ರಿಸಿ ನಿಮಗೆ ಉಪಕಾರ ಮಾಡಲು ಸನ್ನದ್ಧವಾಗಿರುವ ಸೇವಕ – ಹಾವು. ಅವುಗಳನ್ನು ತಿಂದು ಬದುಕುವ ಮುಂಗುಸಿಗಳು ನೈಸರ್ಗಿಕವಾಗಿಯೇ ಅವುಗಳ ಸಂಖ್ಯೆಯನ್ನು ನಿಯಂತ್ರಿಸಲು ಅಣಿಯಾಗಿವೆ.
ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ವಿವಿಯ ಪ್ರಸಾರಾಂಗ ಪ್ರಕಟಿಸಿರುವ ‘ಹಾವುಗಳು ರೈತನ ಮಿತ್ರ -ಶತ್ರು,’ ಕನ್ನಡ ಪುಸ್ತಕ ಓದಿಕೊಳ್ಳಿ. ಕೊಂಡು (ಮುಖ ಬೆಲೆ ರೂ. 7) ಇತರರಿಗೆ ಉಡುಗೊರೆಯಾಗಿ ನೀಡಿ. ಹಾವುಗಳನ್ನು ನಮಗಾಗಿ ಉಳಿಸಿಕೊಳ್ಳುವ ಪ್ರಯತ್ನಕ್ಕೆ ನೀವೂ ಕೈಜೋಡಿಸಿ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.