ಬೆಂಗಳೂರಿನ ಒಂದು ಧಾರ್ಮಿಕ ಕೇಂದ್ರದ ಮುಂದೆ ಹೋಗುತ್ತಿದೆ. Boycott ಇಸ್ರೇಲಿ ಐಟೆಮ್ಸ್ ಅನ್ನೋ ಬೋರ್ಡ್ ಕಣ್ಣಿಗೆ ಬಿತ್ತು. ಆದರೆ ಯಾವ ಇಸ್ರೇಲಿ ವಸ್ತುಗಳು ಎಂದು ಗೊತ್ತಾಗಲಿಲ್ಲ. ಪಾಕಿಸ್ಥಾನದ ವಿರುದ್ಧ ದಿನಂಪ್ರತಿ ಹೋರಾಡಲು ನಮ್ಮ ಸೈನಿಕರು ಬಳಸೋ ಇಸ್ರೇಲಿ ಯುದ್ಧೋಪಕರಣಗಳನ್ನೋ ಅಲ್ಲಾ ಇಸ್ರೇಲ್ ನೀಡಿದ ಆಧುನಿಕ ತಂತ್ರಜ್ಞಾನವನ್ನು ಬಳಸಿ ನಮ್ಮ ಕೃಷಿಕರು ಬೆಳೆದ ಬೆಳೆಯನ್ನೋ ? ಇದನ್ನೆಲ್ಲ boycott ಮಾಡಲು ನಮ್ಮಿಂದ ಸಾಧ್ಯವೇ ? ಹೀಗೆ ಅಲ್ಲಲ್ಲಿ ಇಸ್ರೇಲ್ ದ್ವೇಷಿಸುವ ಮತೀಯವಾದಿಗಳಿದ್ದರೂ, ಹೆಚ್ಚಿನ ಭಾರತೀಯರು ಇಸ್ರೇಲ್ ಅನ್ನು ಇಷ್ಟಪಡುತ್ತಾರೆ. ಇದಕ್ಕೆ ಕಾರಣಗಳನೇಕ…
ಭಾರತವನ್ನು ಬೆಸೆಯುವ ಹಿಂದೂ ಧರ್ಮ, ಇಸ್ರೇಲ್ನ ಜಿವ್ಸ್ (Jews) ಧರ್ಮಗಳೆರಡು ಜೀವನ ಪದ್ಧತಿಯಿಂದ ಹುಟ್ಟಿಕೊಂಡದ್ದು, ಇವುಗಳಿಗೆ ಯಾವುದೇ ಧರ್ಮ ಗುರು ಬರೆದ ರೂಲ್ ಬುಕ್ ಇಲ್ಲ! ಎಲ್ಲಕ್ಕಿಂತ ಹೆಚ್ಚು ಬೇರೊಂದು ಧರ್ಮದಿಂದ ಒಬ್ಬನನ್ನು ಒಲಿಸಿಕೊಂಡು (ಕನ್ವರ್ಟ್ ಮಾಡಿ) ತನ್ನ ಧರ್ಮವನ್ನು ಬೆಳೆಸಬೇಕೆಂಬ ಲಾಲಸೆ ಇಲ್ಲ. ಹೀಗಾಗಿ ಭಾರತ-ಇಸ್ರೇಲ್ ಬಂಧಕ್ಕೆ ಧಾರ್ಮಿಕ ವಿಚಾರಗಳು ಅಡ್ಡ ಬರಲಾರವು. ಇನ್ನು ಕೆಲವು ವಿಶ್ಲೇಷಕರ ಪ್ರಕಾರ ಬುದ್ಧಿಮತ್ತೆಯಲ್ಲಿ ಹಿಂದೂಗಳಿಗೆ ಯಹೂದಿ ಧರ್ಮದವರೇ ಸಾಟಿ! ಅಮೇರಿಕಾದ ಉದಾಹರಣೆ ನೋಡೋಣ, ವಲಸಿಗರೇ ಬೆಳೆಸಿದ ಆ ದೇಶದಲ್ಲಿ ಅಂದಿನ ಐನ್ಸ್ಟಿನ್ರಿಂದ ಹಿಡಿದು ಇಂದಿನ ಫೇಸ್ಬುಕ್ ಸಂಸ್ಥಾಪಕ ಮಾರ್ಕ್ ಜುಕರ್ಬರ್ಗ್ವರೆಗೆ ಎಲ್ಲರೂ ಯಹೂದಿ ಧರ್ಮಕ್ಕೆ ಸೇರಿದವರು, ಗೂಗಲ್ನ ಸುಂದರ್ ಪಿಚೈಯಿಂದ ಮೈಕ್ರೋಸಾಫ್ಟ್ನ ಸತ್ಯ ನಡೆಲ್ಲಾ ಹೀಗೆ ದೊಡ್ಡ ದೊಡ್ಡ ಹೆಸರುಗಳೆಲ್ಲವೂ ಭಾರತದ ಹಿಂದೂ ವಲಸಿಗರದ್ದು! ಇಸ್ರೇಲ್ ಸುತ್ತಲೂ ರಣಹದ್ದುಗಳಂತೆ ಕಾದು ಕುಳಿತಿರೋ ಶತ್ರು ದೇಶಗಳಂತೆ ಭಾರತಕ್ಕೂ ನೆರೆ ದೇಶಗಳಿಂದ ಗಂಡಾಂತರ ಇದೆ. ಹೀಗೆ ಹೆಜ್ಜೆ ಹೆಜ್ಜೆಗೂ ಸಮಾನತೆ ಇರುವ ಭಾರತೀಯರೂ ಇಸ್ರೇಲಿಗರು ತುಂಬಿ ಹರಿಯುವ ನದಿಯ ಎರಡು ತಟದಲ್ಲಿ ನಿಂತು ತಬ್ಬಿಕೊಳ್ಳಲು ಕಾಯುತ್ತಿರುವ ಸಹೋದರರಂತೆ, ಸೇತುವೆ ಕಟ್ಟಬೇಕಷ್ಟೇ !
80ರ ದಶಕದಲ್ಲಿ ಪಾಕಿಸ್ಥಾನದ ಅಣುಬಾಂಬ್ ಇನ್ನು ತಯಾರಿಕಾ ಹಂತದಲ್ಲೇ ಇರುವಾಗ ಅದರ ಸ್ಥಾವರಗಳ ಮೇಲೆ ದಾಳಿ ಮಾಡಲು ಇಸ್ರೇಲ್ ಭಾರತಕ್ಕೆ ಸಹಾಯ ಮಾಡಲು ಮುಂದೆ ಬಂದಿತ್ತೆಂದು ಕೆಲವು ವರದಿಗಳಿವೆ. ಆದರೆ ಭಾರತದ ಅಂದಿನ ನಾಯಕತ್ವ ಧೈರ್ಯ ಮಾಡಲಿಲ್ಲ ! ಇಂದು ಭಾರತದ ಸೊಳ್ಳೆ ಪಾಕ್ ಸೈನಿಕನಿಗೆ ಕಚ್ಚಿದರೆ ಪಾಕಿಸ್ಥಾನ ಭಾರತಕ್ಕೆ ಅಣು ಬಾಂಬ್ ಎಚ್ಚರಿಕೆ ಕೊಡುವಾಗ ನಮ್ಮ ಅಂದಿನ ನಿರ್ಧಾರ ಎಷ್ಟು ತಪ್ಪು ಅನ್ನಿಸುತ್ತದೆ.
1999 ರ ಕಾರ್ಗಿಲ್ ಯುದ್ಧವಾದಾಗ, ಭಾರತವು ಯುದ್ಧ ಸಾಮಗ್ರಿಗಳ ತೀವ್ರ ಕೊರತೆ ಎದುರಿಸುತ್ತಿತ್ತು. ಚೀನಾ ಹಾಗೂ ಸ್ವಲ್ಪ ಮಟ್ಟಿಗೆ ಅಮೇರಿಕಾದ ಬೆಂಬಲ ಹೊಂದಿದ್ದ ಪಾಕಿಸ್ಥಾನದ ಸ್ಥಿತಿ ನಮಗಿಂತ ಉತ್ತಮವೆನಿಸುತ್ತಿರುವಾಗ ನಾವು ನಮ್ಮ ಆತ್ಮೀಯ ಮಿತ್ರ ಎನಿಸಿಕೊಂಡಿದ್ದ ರಷ್ಯಾದತ್ತ ನೋಡುತ್ತಿದ್ದೆವು. ಆದರೆ ಯುದ್ಧ ಸಾಮಗ್ರಿಗಳು ಬಂದಿದ್ದು ಮಾತ್ರ ಇಸ್ರೇಲ್ನಿಂದ! ಇಂದು ಸಹ ಭಾರತದ ಹಣದ ಚೀಲ ನೋಡಿ ನಮಗೆ ಯುದ್ಧ ವಿಮಾನವನ್ನು ಮಾರಲು ವಿಶ್ವದ ಹೆಚ್ಚಿನ ಎಲ್ಲ ರಾಷ್ಟ್ರಗಳು ಮುಂದೆ ಬರುತ್ತವೆ. ಆದರೆ ಅದೇ ತಂತ್ರಜ್ಞಾನವನ್ನು ಭಾರತದ ಬೆಂಗಳೂರಲ್ಲೋ, ಹೈದರಾಬಾದ್ಗೋ ತಂದು ವಿಮಾನ ತಯಾರಿಸಿ ಇಲ್ಲಿನ ಯುವಕರಿಗೆ ಉದ್ಯೋಗ ಕೊಡಲು ಮೊದಲು ಮುಂದೆ ಬರೋದು ಇಸ್ರೇಲ್.
ದೇಶದ ಜನಸಂಖ್ಯೆಯಲ್ಲಿ ಅರ್ಧದಷ್ಟು ಜನರು ಕೃಷಿ ಕಾರ್ಯದಲ್ಲಿ ತೊಡಗಿದ್ದರು. ಒಟ್ಟು ಭೂಮಿಯಲ್ಲಿ ಶೇಕಡಾ 60 ಕೃಷಿ ಭೂಮಿಯಾಗಿದ್ದರೂ ನಾವು ಅನುಸರಿಸೋ ಅತ್ಯಂತ ಹಳೆಯ ಮಾದರಿ ಕೃಷಿ ಪದ್ಧತಿಯಿಂದ ದೇಶ ಇನ್ನೂ ಸಹ ಕೆಲವು ಅಗತ್ಯ ಕೃಷಿ ಉತ್ಪನ್ನಗಳನ್ನು ವಿದೇಶದಿಂದ ಆಮದು ಮಾಡಿಕೊಳ್ಳುವಂತಾಗಿದೆ. ಹೀಗಿರುವಾಗ ತನ್ನ ತಂತ್ರಜ್ಞಾನಯುಕ್ತ ಕೃಷಿ ಮಾದರಿಯನ್ನು ಭಾರತದೊಂದಿಗೆ ಹಂಚಿಕೊಂಡು ರೈತರ ಆದಾಯ ಹೆಚ್ಚಿಸಿ, ಭಾರತವನ್ನ ಹಸಿವು ಮುಕ್ತ ರಾಷ್ಟ್ರವನ್ನಾಗಿ ಮಾಡಲು ಸಹಾಯ ಮಾಡುತ್ತಿರುವುದು ಸಹ ಇಸ್ರೇಲ್ !
ನಮಗೆ ಇಷ್ಟೆಲ್ಲ ಸಹಾಯ ಮಾಡುವ ಇಸ್ರೇಲ್ನ ಪರ ಅಂತಾರಾಷ್ಟ್ರೀಯ ಸ್ಥರದಲ್ಲಿ ಭಾರತ ನಿಂತಿದ್ದು ಕಡಿಮೆ. ಮುಖ್ಯವಾಗಿ ಎರಡು ಕಾರಣಗಳಿಗೆ, ಎಲ್ಲಿ ಅರಬ್ ರಾಷ್ಟ್ರಗಳಿಗೆ ಬೇಸರವಾಗಿ ಪೆಟ್ರೋಲ್ ಕೊಡದೆ ಹೋದರೆ ಅನ್ನೋ ಆತಂಕ ಹಾಗೂ ಇನ್ನೂ ಮುಖ್ಯವಾಗಿ ವೋಟ್ ಬ್ಯಾಂಕ್ ಎನ್ನಿಸಿಕೊಂಡಿರೋ ಒಂದು ಧರ್ಮಕ್ಕೆ ಬೇಸರವಾಗಿ ಚುನಾವಣೆಯಲ್ಲಿ ಹಿನ್ನಡೆಯಾದೀತು ಅನ್ನೋ ಭಯ! ಅದೇ ಇಸ್ರೇಲ್ ಕಾಶ್ಮೀರದ ವಿಷಯಕ್ಕೆ ಬಂದಾಗ ಪ್ರತಿ ಭಾರಿ ಭಾರತದ ಪರ ನಿಂತಿದೆ. ಒಮ್ಮೊಮ್ಮೆ ಕಟ್ಟಪ್ಪನಿಂದ ಚುಚ್ಚಿಸಿಕೊಂಡರೂ ಆತನ ಮೇಲೆ ಮಮತೆ ತೋರೊ ಬಾಹುಬಲಿಯಂತೆ ಇಸ್ರೇಲ್ ಕಾಣಿಸುತ್ತದೆ!
ಇಂತಹ ಇಸ್ರೇಲ್ – ಭಾರತದ ಸಹೋದರತ್ವಕ್ಕೆ ಸೇತುವೆ ಕಟ್ಟುವ ಕಾರ್ಯ ಪ್ರಾರಂಭ ಮಾಡಿದ್ದು 1992 ರಲ್ಲಿ ಅಂದಿನ ಪ್ರಧಾನಿ ನರಸಿಂಹ ರಾವ್. ಆ ಸೇತುವೆ ಇಂದು ಪೂರ್ಣಗೊಂಡು ಪ್ರಧಾನಿ ನರೇಂದ್ರ ಮೋದಿಯವರನ್ನು ಸ್ವಾಗತಿಸುತ್ತಿದೆ. ಈ ಸಹೋದರರ ಸಮಾಗಮಕ್ಕೆ ದೃಷ್ಟಿ ಬೀಳದಿರಲಿ!
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.