ನಮ್ಮ ಭಾರತೀಯರಿಗೆ ‘ವಂದೇ ಮಾತರಂ’ ಅಂತಹ ದೇಶಭಕ್ತಿಗೀತೆಗಳನ್ನು ನೀಡಿ, ಹತ್ತೊಂಬತ್ತನೇ ಶತಮಾನದಲ್ಲಿ ಬ್ರಿಟಿಷರ ವಿರುದ್ಧ ಹೋರಾಡಲು ಭಾರತೀಯರಲ್ಲಿ ತಮ್ಮ ಮೊನಚು ಬರಹ, ಹಾಡುಗಳ ಮುಖಾಂತರ ಕಿಚ್ಚು ತುಂಬಿದವರು ಬಂಗಾಳಿ ಕವಿ, ಕಾದಂಬರಿಕಾರ, ಪತ್ರಕರ್ತ ಬಂಕಿಮಚಂದ್ರ ಚಟ್ಟೋಪಾಧ್ಯಾಯ (1838-1894) ಬ್ರಿಟಿಷರು ಅವರನ್ನು ಚಟರ್ಜಿ ಅಂದು ಕರೆಯುತ್ತಿದ್ದರು.
ಬಂಕಿಮಚಂದ್ರ ಚಟ್ಟೋಪಾಧ್ಯಾಯರು ಜನಿಸಿದ್ದು ಜೂನ್ 27, 1838. ಜನಿಸಿದ ಸ್ಥಳ ನೈಹತಿಯಲ್ಲಿರುವ ಕಂಥಾಲಪಾರ ಎಂಬ ಹಳ್ಳಿ. 1857ರಲ್ಲಿ ಕಲ್ಕತ್ತಾ ವಿಶ್ವವಿದ್ಯಾಲಯದ ಮೊದಲ ಇಬ್ಬರು ಪದವೀಧರರ ಪೈಕಿ ಅವರು ಒಬ್ಬರಾಗಿದ್ದರು. 1869 ರಲ್ಲಿ ಒಂದು ಕಾನೂನು ಪದವಿಯನ್ನೂ ಗಳಿಸಿದರು. ಮುಂದೆ ತಮ್ಮ ತಂದೆಯ ರೀತಿಯಲ್ಲಿಯೇ ಜೆಸ್ಸೋರ್ನ ಉಪ-ಜಿಲ್ಲಾಧಿಕಾರಿಯಾಗಿ ನೇಮಿಸಲ್ಪಟ್ಟರು; ಓರ್ವ ಉಪ-ನ್ಯಾಯಾಧಿಪತಿಯ ಹುದ್ದೆಗೇರಿದ ಚಟರ್ಜಿಯವರು 1891ರಲ್ಲಿ ಸರ್ಕಾರಿ ಸೇವೆಯಿಂದ ನಿವೃತ್ತಿ ಹೊಂದಿದರು. ಆಡಳಿತ ನಡೆಸುತ್ತಿದ್ದ ಬ್ರಿಟಿಷರೊಂದಿಗೆ ಘರ್ಷಣೆಗೆ ಇಳಿಯಲು ಕಾರಣವಾಗುವಂಥ ಘಟನೆಗಳು ಅವರು ತಮ್ಮ ಕಾರ್ಯಕ್ಷೇತ್ರದಲ್ಲಿದ್ದಾಗಿನ ವರ್ಷಗಳಲ್ಲಿ ದಟ್ಟವಾಗಿ ತುಂಬಿಕೊಂಡಿದ್ದವು.
ಭಾರತದ ಸಾಹಿತ್ಯಿಕ ಪುನರುದಯದಲ್ಲಿನ ಓರ್ವ ಪ್ರಮುಖ ವ್ಯಕ್ತಿಯಾಗಿ ಚಟರ್ಜಿಯವರನ್ನು ವ್ಯಾಪಕವಾಗಿ ಪರಿಗಣಿಸಲಾಗುತ್ತದೆ. ಕಾದಂಬರಿಗಳು, ಪ್ರಬಂಧಗಳು ಮತ್ತು ವ್ಯಾಖ್ಯಾನಗಳನ್ನು ಒಳಗೊಂಡಂತಿರುವ ಅವರ ಕೆಲವೊಂದು ಬರಹಗಳು ಸಾಂಪ್ರದಾಯಿಕವಾದ ಛಂದೋಬದ್ಧ ಪದ್ಯ-ಉದ್ದೇಶಿತ ಭಾರತೀಯ ಬರಹಗಳಿಗಿಂತ ವಿಭಿನ್ನವಾದ ಒಂದು ಹೊರಳುದಾರಿಯನ್ನು ತುಳಿದವು, ಮತ್ತು ಭಾರತದ ಉದ್ದಗಲಕ್ಕೂ ಇರುವ ಲೇಖಕರಿಗೆ ಸಂಬಂಧಿಸಿದಂತೆ ಒಂದು ಪ್ರೇರಣೆಯನ್ನು ಒದಗಿಸಿದವು.
ದುರ್ಗೇಶ್ನಂದಿನಿ, ಕಪಾಲಕುಂಡಲ, ಮೃಣಾಲಿನಿ, ವಿಷಬೃಕ್ಷ, ಇಂದಿರಾ, ಜುಗಲನ್ಗುರಿಯಾ, ರಾಧಾರಾಣಿ, ಚಂದ್ರಶೇಖರ್, ಕಮಲಾಕಾಂತೆರ್ ದಪ್ತರ್, ರಜನಿ, ಕೃಷ್ಣಾಕಾಂತೆರ್ ಉಯಿಲ್, ರಾಜಸಿಂಹ, ಆನಂದಮಠ, ದೇವಿ ಚೌಧುರಾನ, ಕಮಲಾಕಾಂ, ಸೀತಾರಾಮ್, ಮೂಚಿರಾಮ್ ಗುರೆರ್ ಜೀವನ್ಚರಿತಾ ಮುಂತಾದವು ಬಂಕಿಮ ಚಂದ್ರರ ಕಾದಂಬರಿಗಳು.
ಬಂಕಿಮ ಚಂದ್ರ ಧಾರ್ಮಿಕ ವ್ಯಾಖ್ಯಾನಗಳಲ್ಲಿ ಕೃಷ್ಣ ಚರಿತ್ರ, ಧರ್ಮತತ್ವ, ದೇವತತ್ತ್ವ, ಶ್ರೀಮದ್ವಗವತ್ ಗೀತಾ , ಭಗವದ್ ಗೀತಾದ ಮೇಲಿನ ಒಂದು ವ್ಯಾಖ್ಯಾನ ಪ್ರಸಿದ್ಧವೆನಿಸಿವೆ. ಲಲಿತಾ ಓ ಮಾನಸ್ ಅವರ ಕವನಸಂಗ್ರಹ. ಲೋಕ್ ರಹಸ್ಯ, ಬಿಜ್ಞಾನ್ ರಹಸ್ಯ, ಬಿಚಿತ್ರ ಪ್ರಬಂಧ, ಸಮ್ಯಾ ಮುಂತಾದವು ಪ್ರಬಂಧಸಂಗ್ರಹಗಳು. ಬಂಕಿಮ ಚಂದ್ರ ಈ ಎಲ್ಲ ಕೃತಿಗಳೂ ಇಂಗ್ಲಿಷ್ ಭಾಷೆ ಸೇರಿದಂತೆ ಇತರ ಭಾಷೆಗಳಲ್ಲಿ ಮೂಡಿಬಂದಿವೆ.
‘ಆನಂದಮಠ’ ಕಾದಂಬರಿಯಲ್ಲಿ ಬರೆದ ‘ಓ ತಾಯಿ, ಭಾರತಿಯೇ, ನಿನಗೆ ನಮನ’ ಎಂದು ಸಾರುವ ‘ವಂದೇ ಮಾತರಂ’ ಭಾರತೀಯರಿಗೆ ಪವಿತ್ರಗೀತೆಯಂತಿದೆ.
ಬಂಕಿಮಚಂದ್ರರ ‘ವಂದೇ ಮಾತರಂ’ ಗೀತೆ ಸ್ವಾತಂತ್ರ್ಯ ಸಂಗ್ರಾಮದ ಕಾಲದಲ್ಲಿ ಅದ್ಭುತ ಸಾಹಸಗಳಿಗೆ, ಸಹಸ್ರಾರು ಜನರ ತ್ಯಾಗ – ಬಲಿದಾನಗಳಿಗೆ ಪ್ರೇರಣೆ ನೀಡಿತು. ಸ್ವಾತಂತ್ರ್ಯದ ರಣಮಂತ್ರವೇ ಅದಾಯಿತು. ಇಡೀ ಭಾರತದ ಅಂತಃಕರಣವೇ ದೇಶಭಕ್ತಿಯ ಭಾವನೆಗಳಿಗೆ ಸ್ಪಂದಿಸುವಂತೆ ಮಾಡಿತು. ಇಂದಿಗೂ ದೇಶಭಕ್ತರ ಮೈ – ಮನ ಪುಳಕಿತಗೊಳಿಸುವ ಗೀತೆ ಇದು. ನಮ್ಮ ಸಂಸ್ಕೃತಿಯ ಸೌರಭ ಹೊರಸೂಸುವ ನುಡಿಸುಮ. ಈ ನೆಲದ ಸಂತಾನದ ವಿದ್ಯೆ- ಬುದ್ಧಿಗಳೇ ಸಂಪತ್ತು – ಸಮೃದ್ಧಿಗಳ, ಸಾಧನೆ – ಸಿದ್ಧಿಗಳ ವಿಕಾಸಕ್ಕೆ ಆವಾಹನೆ ನೀಡುವ ಚಿರಂತನ ಸ್ಫೂರ್ತಿಮಂತ್ರ ಇದು. ತಾಯಿ ಭಾರತಿಗೆ ವಿಪತ್ತು ಒದಗಿತೆಂದರೆ ಈ ಗೀತೆ ಆಕೆಯ ಮಕ್ಕಳಿಗೆ ನವಶಕ್ತಿ ನೀಡುತ್ತದೆ. ಇದೇ ‘ವಂದೇ ಮಾತರಂ’ ಗೀತೆಯ ಅಂತರಾರ್ಥ.
ಈ ರಣ ಮಂತ್ರ ಅನೇಕ ಭಾರತೀಯರಲ್ಲಿ ಇಂದಿಗೂ ಭಾರತೀಯತೆಯ ಶಕ್ತಿ ಪ್ರೇರಣೆ ನೀಡುತ್ತಿದೆ. ಭಾರತವನ್ನು ಮತ್ತೊಮ್ಮೆ ವಿಶ್ವ ಮಾತೆ ಜಗದ್ಗುರುವಿನ ಸ್ಥಾನಕ್ಕೇರಿಸಲು ಪ್ರೇರಣೆ ಶಕ್ತಿ ಸ್ಪೂರ್ತಿ ತುಂಬುತ್ತಿದೆ. ಬನ್ನಿ ಈ ಗೀತೆಯನ್ನು ನೀಡಿದ ಮಹಾನ್ ಚೇತನ ಬಂಕಿಮಚಂದ್ರರನ್ನು ಸ್ಮರಿಸೋಣ. ಅವರ ಜನ್ಮದಿನದಂದು ಮತ್ತೆ ವಂದೇಮಾತರಂ ಎಂಬ ರಣಮಂತ್ರವನ್ನು ಘೋಷಿಸುವ ಮೂಲಕ ಭಾರತಾಂಬೆಯನ್ನು ಮತ್ತೆ ವಿಶ್ವಮಾತೆ ಜಗದ್ಗುರುವನ್ನಾಗಿಸುವ ಸಂಕಲ್ಪವನ್ನು ಮಾಡೋಣ.
ವಂದೇ ಮಾತರಂ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.