ಯಾ ದೇವಿ ಸರ್ವ ಭೂತೇಷು ಮಾತೃ ರೂಪೇಣ ಸಂಸ್ಥಿತಾ
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ
ಇವತ್ತು ತಾಯಂದಿರ ದಿನ.
ಮೂಲತಃ ಇದು ವಿದೇಶೀಯ ಆಚರಣೆ. ವರ್ಷಕ್ಕೊಮ್ಮೆ ತಮ್ಮಿಂದ ದೂರವಿರುವ ತಾಯಿಯನ್ನು ಹೋಗಿ ಮಾತನಾಡಿಸಿ ತಮ್ಮ ಪ್ರೀತಿ ಮಮತೆಯನ್ನು ತೋರುವ ದಿನ.
ಹಾಗೆಯೇ ತಾಯಿಯು ನಮಗಾಗಿ ಪ್ರತಿನಿತ್ಯ ಮಾಡುವ ನಿಸ್ವಾರ್ಥ ಸೇವೆಗೆ ಕೃತಜ್ಞತೆಯನ್ನು ಸಲ್ಲಿಸುವ ದಿನ.
ಭಾರತದಲ್ಲಿ ಹಾಗೇನು ಇಲ್ಲ. ನಾವು ಪ್ರತಿದಿನವೂ ಆಕೆಗೆ ಚಿರಋಣಿಗಳು. ಪ್ರತಿದಿನವೂ ಆಕೆಯನ್ನು ಪ್ರೀತಿಸುತ್ತೇವೆ, ಗೌರವಿಸುತ್ತೇವೆ. ನಮ್ಮ ವೇದ ಉಪನಿಷತ್ತುಗಳಲ್ಲಿಯೇ ಇದರ ಉಲ್ಲೇಖ ಉಂಟು. ‘ಮಾತೃ ದೇವೋ ಭವ’ ಎನ್ನುವ ಪರಿಕಲ್ಪನೆ ನಮ್ಮದು. ತ್ರೇತಾಯುಗದಲ್ಲಿ ಮರ್ಯಾದಾ ಪುರುಷೋತ್ತಮ ಶ್ರೀರಾಮಚಂದ್ರನು ಹೇಳುತ್ತಾನೆ “ಅಪೀ ಸ್ವರ್ಣಮಯೀ ಲಂಕಾ, ನ ಮೇ ಲಕ್ಷ್ಮಣ ರೋಚತೆ, ಜನನೀ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸಿ” ಎಂದು. ಇದರ ಅರ್ಥ ಲಂಕೆಯು ಸ್ವರ್ಣ ನಗರಿಯೇ ಆಗಿರಬಹುದು ಆದರೆ ನನಗೆ ಮತ್ತು ಲಕ್ಷ್ಮಣನಿಗೆ ತಾಯಿ ಹಾಗು ತಾಯಿನೆಲ ಸ್ವರ್ಗಕ್ಕಿಂತಲೂ ಮಿಗಿಲು ಎಂದು. ಇಲ್ಲಿ ನಾವು ತಾಯಿ ಹಾಗು ತಾಯಿ ನೆಲ ಅಂದರೆ ನಮ್ಮ ರಾಷ್ಟ್ರವನ್ನು ಎಷ್ಟು ಗೌರವಿಸುತ್ತೇವೆ ಎಂದು.
ವಿಶ್ವದ ಯಾವ ದೇಶದ ಜನರು ತಮ್ಮ ದೇಶವನ್ನು ತಾಯಿ ಎಂದು ಕರೆದಿಲ್ಲ. ಭಾರತ ಮಾತ್ರ ತಾಯಿ ಎಂದು ಅಕೆಯನ್ನು ಕರೆದು ಗೌರವಿಸುತ್ತದೆ. ಇದು ನಮ್ಮ ವೈಶಿಷ್ಟ್ಯತೆ. ನಾವು ಹುಟ್ಟಿದ ನಂತರ ಯಾರಿದ್ದೆಲ್ಲ ಉಪಕಾರ ಪಡೆದು ನಮ್ಮ ಜೀವನ ನಡೆಸಿದೆವೋ ಅವರನ್ನು ಮಾತೃತ್ವದ ಭಾವದಿಂದ ಕಾಣುತ್ತೇವೆ. ಜೀವನದುದ್ದಕ್ಕೂ ನಮಗೆ ಹಾಲು ಕೊಡುವ ಹಸು ನಮಗೆ ಗೋ ಮಾತೆಯಾಗುವಳು, ನಮ್ಮ ಸುತ್ತಮುತ್ತಲಿನ ಪರಿಸರ ನಮಗೆ ಪ್ರಕೃತಿಮಾತೆ, ಎಲ್ಲರಿಗೂ ಮೂಲ ಅಂಶವಾಗಿರುವ ನೀರು ನಮಗೆ ಮಾತೆ ಗಂಗಾ ಯಮುನಾ ಸರಸ್ವತಿ ಸಿಂಧು ಕಾವೇರಿ ನೇತ್ರಾವತಿ ನಮಗೆ ಮಾತೆಯರೇ. ಹೀಗೆ ಎಲ್ಲರನ್ನೂ ತಾಯಿಯಾಗಿ ಕಂಡು ಪೂಜಿಸುತ್ತೇವೆ. ಹೀಗಾಗಿ ನಮಗೆ ಪ್ರತಿದಿನವೂ ತಾಯಂದಿರ ದಿನ.
ಆದರೆ ಈಗ ಪಾಶ್ಚಾತ್ಯೀಕರಣಕ್ಕೆ ಮಾರಿಹೋಗಿರುವ ನಮಗೆ ನಮ್ಮ ತನವನ್ನು ಪರಿಚಯಿಸಲು ಮತ್ತೆ ನಾವು ನಮ್ಮ ತಾಯಿ, ತಾಯಿನೆಲ, ಪ್ರಕೃತಿಯನ್ನು, ಗೋವನ್ನು, ನದಿಯನ್ನು ತಾಯಿಯಾಗಿ ಕಂಡು ಆಕೆಯ ಗೌರವ ಮತ್ತು ರಕ್ಷಣೆ ಮಾಡಲೂ ಈ ದಿನ ನಮಗೆ ಸ್ಪೂರ್ತಿಯಾಗಲಿ. ಎಲ್ಲರೂ ಸೇರಿ ಒಂದು ಸಂಕಲ್ಪ ಕೈಗೊಳ್ಳೋಣ. ಜಡ ವಸ್ತುವಾಗಿ ಕಂಡಿರುವ ಎಲ್ಲವನ್ನು ಮತ್ತೆ ತಾಯಿಯಾಗಿ ಪೂಜಿಸೋಣ. ಆಕೆಯ ಮಕ್ಕಳಾಗಿ ಆಕೆಯ ರಕ್ಷಣೆಯ ಜವಾಬ್ದಾರಿಯೂ ನಮ್ಮದೇ. ಆ ಹೊಣೆಯನ್ನು ಹೊತ್ತು ನಮ್ಮ ತಾಯಿಯನ್ನು, ದೇಶವನ್ನು, ಗೋಮಾತೆಯನ್ನು, ಪ್ರಕೃತಿಮಾತೆಯನ್ನು, ನದಿಗಳನ್ನು, ಭೂಮಿಯನ್ನೂ ಕಾಪಾಡುವ ಸಂರಕ್ಷಿಸುವ ಹೊಣೆ ಹೊತ್ತು ನಮ್ಮ ಕೃತಜ್ಞತೆಯನ್ನು ಸಲ್ಲಿಸೋಣ, ನಮ್ಮ ವೈಭವದ ಸಂಸ್ಕೃತಿ ಸಂಸ್ಕಾರಗಳನ್ನು ಕಾಪಾಡಿಕೊಂಡು ಭಾರತವನ್ನು ಮತ್ತೆ ವಿಶ್ವಮಾತೆ ಜಗದ್ಗುರುವನ್ನಾಗಿಸೋಣ.
ವಂದೇ ಮಾತರಂ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.