ಗಣ್ಯರು ತಮ್ಮ ಕಾರುಗಳಿಗೆ ಕೆಂಪು ದೀಪ ಬಳಸಕೂಡದು. ಏಕೆಂದರೆ ಇಲ್ಲಿ ಪ್ರತಿಯೊಬ್ಬ ಸಾಮಾನ್ಯ ಪ್ರಜೆಯೂ ಕೂಡಾ ವಿಐಪಿ ಎಂದ ಪ್ರಧಾನಿ ಮೋದಿ ಅವರ ಚಿಂತನೆಯೇ ನೈಜ ಪ್ರಜಾಪ್ರಭುತ್ವ ಎನಿಸುತ್ತಿದೆ.
ಪ್ರಜೆಗಳಿಂದ, ಪ್ರಜೆಗಳಿಗಾಗಿ, ಪ್ರಜೆಗಳಿಗೋಸ್ಕರ ಎಂಬ ಪ್ರಜಾಪ್ರಭುತ್ವದ ವ್ಯಾಖ್ಯೆ ಬಹುಶಃ ಜ.26 ರ ಭಾಷಣಕ್ಕೇ ಸೀಮಿತವಾಗಿತ್ತು ಎಂದರೂ ತಪ್ಪಿಲ್ಲ. ವಿಐಪಿ ಎಂದರೆ ಎಂಎಲ್ಎ, ಎಂಪಿ, ಸಿ.ಎಂ, ಪಿ.ಎಂ, ಆಫೀಸರ್ಸ್ ಇವರಷ್ಟೇ ಎಂಬ ಕಲ್ಪನೆಯ ಮಂಕಿನಲ್ಲೇ ಪ್ರಜಾಪ್ರಭುತ್ವ ಸಾಗಿತ್ತು. ಆದರೆ ಇದೀಗ ವಿಐಪಿ ಸಂಸ್ಕೃತಿಯ ಪ್ರತೀಕವಾಗಿದ್ದ ಕೆಂಪು ದೀಪದ ಬಳಕೆಗೆ ಬ್ರೇಕ್ ನೀಡಿರುವ ಕೇಂದ್ರ ಸರ್ಕಾರದ ಕ್ರಮಕ್ಕೆ ಮೆಚ್ಚುಗೆ ವ್ಯಕ್ತವಾಗಿದ್ದು, ವಿಐಪಿ ವ್ಯಾಖ್ಯೆ ಬದಲಾಗಲಿದೆ.
ಪ್ರಜಾಪ್ರಭುತ್ವದಲ್ಲಿ ಪ್ರಜೆಯೇ ರಾಜನಿದ್ದಂತೆ. ಅಂತೆಯೇ ಮೋದಿಯವರು ಯಾವಾಗಲೂ ನಾನು ನಿಮ್ಮ ಸೇವಕ ಎಂದೇ ಹೇಳುತ್ತ ಬಂದಿದ್ದರು. ಈ ನಿರ್ಣಯದಿಂದ ಮತ್ತಷ್ಟು ಅವರು ತಮ್ಮ ಮಾತಿಗೆ ಪೂರಕವಾಗಿ ನಡೆದುಕೊಂಡಿದ್ದಾರೆ ಎಂದೇ ಹೇಳಬಹುದು.
ದಾರಿಯಲ್ಲಿ ಸಚಿವರ ಕಾರನ್ನು ಸಹಜವಾಗಿ ಹಿಂದಿಕ್ಕಿ ಹೋಗಿ ಸಮಸ್ಯೆ ಅನುಭವಿಸಿದ ಜನಸಾಮಾನ್ಯರಿಗೂ ಇಲ್ಲಿ ಕೊರತೆ ಇಲ್ಲ. ಕೆಂಪು ದೀಪ ಹಾಕಿಕೊಂಡ ವಾಹನಗಳು ಸರ ಸರ ಬರಲು ಆರಂಭಿಸಿದರೆ, ಮತದಾರ ಪ್ರಭು ಮೂಕಪ್ರೇಕ್ಷಕನಂತೆ ಇವರಿಗೆ ದಾರಿ ಬಿಟ್ಟು ನಿಲ್ಲಬೇಕು, ಟ್ರಾಫಿಕ್ ಸಮಸ್ಯೆ ಬೇರೆ, ಹೀಗೆ ನೂರೆಂಟು ತೊಂದರೆ.
ಇವೆಲ್ಲವುಗಳಿಗಿಂತಲೂ ತನ್ನ ಅಮೂಲ್ಯ ಮತ ನೀಡಿದ ಮತದಾರ ಪ್ರಭುವಿನ ಮನಸ್ಸಿನಲ್ಲಿ ಈ ಪ್ರತಿನಿಧಿಗಳು ತಮ್ಮವರು ಎಂಬ ಭಾವವೂ ಬರುವುದು ಕಡಿಮೆ. ಅಲ್ಲದೇ ಚುನಾವಣೆ ಸಮೀಪಿಸಿದಾಗ ಜನರ ಬಳಿಗೆ ಬರುತ್ತಾರೆ, ನಂತರ ಕೆಂಪು ಗೂಟದ ಕಾರಿನಲ್ಲಿ ಹೋಗಿ ಬಿಡುತ್ತಾರೆ ಎಂಬ ಮಾತುಗಳೂ ಸಹಜವಾಗಿದ್ದವು. ಇದುವರೆಗೂ ಜನತೆಗೆ ತಾವೂ ವಿಐಪಿಗಳು ಎಂಬ ಚಿಂತನೆಯೇ ಬರದಂಥ ಪರಿಸ್ಥಿತಿ ಇತ್ತು ಎಂಬುದು ನಿಜಕ್ಕೂ ಪ್ರಜಾಪ್ರಭುತ್ವದ ಅಣಕ.
ಇದೀಗ ಕೇಂದ್ರ ಸರ್ಕಾರದ ನಿರ್ಣಯದಿಂದ ಜನ ಸಾಮಾನ್ಯನಿಗೆ ತಾನೂ ಒಬ್ಬ ವಿಐಪಿ ಎಂಬ ಅರಿವು ಮೂಡಿದೆ. ಪ್ರಜಾಪ್ರಭುತ್ವದಲ್ಲಿ ಪ್ರಭು ಎಂದು ಜನರನ್ನು ಕರೆಯುತ್ತಿದ್ದರೂ ಅದು ಮತ ನೀಡಲು ಎಂಬಷ್ಟಕ್ಕೇ ಸೀಮಿತವಾಗಿತ್ತು.
ಜಾಗತಿಕ ಮಟ್ಟದಲ್ಲಿ ದೇಶವನ್ನು ಔನ್ನತ್ಯಕ್ಕೆ ಕೊಂಡೊಯ್ಯುತ್ತಿರುವ ಪ್ರಧಾನಿ ಅವರು, ಆಂತರಿಕವಾಗಿ ದೇಶದ ಜನತೆಯ ಘನತೆಯನ್ನು ಹೆಚ್ಚಿಸುತ್ತಿದ್ದಾರೆ. ಕೆಂಪು ದೀಪದ ಬಳಕೆ ನಿಷೇಧದಿಂದ ಏನು ದೊಡ್ಡ ಸಾಧನೆಯಾದೀತು ಎಂದೂ ಕೆಲವರು (ಪ್ರಸ್ತುತ ವಿಐಪಿಗಳು) ಪ್ರಶ್ನಿಸುತ್ತಿದ್ದಾರೆ. ಅದರೆ, ಜನರ ಮನೋಬಲ, ಸರ್ಕಾರ, ವ್ಯವಸ್ಥೆಗಳ ಮೇಲಿನ ವಿಶ್ವಾಸಗಳ ವೃದ್ಧಿಗೆ ಇಂಥ ಚಿಂತನೆ ನಿಜಕ್ಕೂ ಪ್ರೇರಕ. ಇದು ಅಕ್ಷರಶಃ ಪ್ರಜಾಪ್ರಭುತ್ವದ ಮೂಲ ಲಕ್ಷಣ ಎಂದೇ ಅರ್ಥೈಸಿದರೂ ತಪ್ಪಿಲ್ಲ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.