‘ನಮಗೆ ನೀರಿಲ್ಲ, ಪಂಚಾಯ್ತಿಯಿಂದ ಬರುತ್ತಿರುವ ನೀರು ಸರಿಯಾಗಿ ಬರುತ್ತಿಲ್ಲ’ ಎಂದು ಪ್ರತಿನಿತ್ಯ ಸರ್ಕಾರ, ಪ್ರಕೃತಿಯನ್ನು ಜನ ದೂರುವುದು ಸಾಮಾನ್ಯ. ‘ಬರ’ ಪ್ರತಿ ವರ್ಷವೂ ದೇಶದಲ್ಲಿ ತನ್ನ ಪ್ರಾಬಲ್ಯ ತೋರಿಸುತ್ತಿದೆ. ನೀರಿಲ್ಲ, ನೀರಿಲ್ಲದೆ ಬೆಳೆಯಿಲ್ಲ ಎಂಬ ಕೂಗು ಸಾಮಾನ್ಯ.
ಆದರೆ ಹಲವಾರು ವರ್ಷಗಳ ಹಿಂದೆಯೆ ಬರದ ಬಿಸಿ ತಟ್ಟುವ ಮೊದಲೇ, ಬರುವ ಮಳೆ ನೀರನ್ನು ಸಂಗ್ರಹಿಸಿ ನಿತ್ಯದ ಬಳಕೆಗೆ ಉಪಯೋಗಿಸುವ ಮತ್ತು ನೀರನ್ನು ಇಂಗಿಸಿ ಅಂತರ್ಜಲ ಮಟ್ಟ ಹೆಚ್ಚಿಸುವ ವಿಧಾನ ಅನುಸರಿಸುತ್ತಿರುವ ಜನ ನಮ್ಮ ಮಧ್ಯೆ ಇದ್ದಾರೆ. ಅಂಥವರಲ್ಲಿ ಎಸ್.ಡಿ.ಎಮ್. ಕಾಲೇಜು ಉಜಿರೆಯ ಪ್ರಾಂಶುಪಾಲ ಡಾ.ಕೆ.ಎಸ್.ಮೋಹನ ನಾರಾಯಣ ಒಬ್ಬರು.
‘ಇದ್ದ ನೀರನ್ನು ಸರಿಯಾಗಿ ಬಳಕೆ ಮಾಡಿಕೊಳ್ಳದೇ, ಈಗ ನೀರಿಲ್ಲ ಎನ್ನುವುದರಲ್ಲಿ ಅರ್ಥವಿಲ್ಲ. ಮಳೆಗಾಲದಲ್ಲಿ ಬರುವ ನೀರನ್ನು ಸರಿಯಾದ ವಿಧಾನದಲ್ಲಿ ಸಂಗ್ರಹಿಸಿದರೆ, ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಂಡರೆ, ವರ್ಷಪೂರ್ತಿ ಅಲ್ಲದೇ ಬರುವ ವರ್ಷದಲ್ಲೂ ನೀರಿನ ಅಭಾವವಿರುವುದಿಲ್ಲ’ ಎನ್ನುತ್ತಾರೆ ಅವರು.
ಸುಮಾರು 12 ವರ್ಷಗಳಿಂದ ಮಳೆಗಾಲದಲ್ಲಿ ತಮ್ಮ ಮನೆಯ ಮೇಲ್ಛಾವಣಿಯ ಮೇಲೆ ಬೀಳುವ ನೀರನ್ನೇ ಸಂಗ್ರಹಿಸಿ ಉಪಯೋಗಿಸುತ್ತಿದ್ದಾರೆ. ತಮ್ಮ ಮನೆಯ ಮೇಲೆ ಬೀಳುವ ನೀರನ್ನು ಪೈಪ್ಗಳ ಮೂಲಕ ಬಾವಿಗೆ ಹರಿಸುವ ವ್ಯವಸ್ಥೆ ಮಾಡಿದ್ದಾರೆ. ಮೇಲ್ಛಾವಣಿಗೆ 4 ಇಂಚು ದಪ್ಪದ ಪೈಪ್ಗಳನ್ನು ಅಳವಡಿಸಿ ಅದನ್ನು ಬೇರೆ ಬೇರೆ ಪೈಪ್ಗಳ ಮೂಲಕ ಮನೆಯ ಬಾವಿಗೆ ಜೋಡಿಸಿದ್ದಾರೆ. ಪೈಪ್ಗಳಿಗೆ ಜೋಡಿಸಿರುವ ಜಾಲಿಗಳಲ್ಲಿ ಸೋಸಿ ಒಳ್ಳೆಯ ನೀರು ಬಾವಿಗೆ ಸೇರುತ್ತದೆ.
ಕುಡಿಯಲು, ಮನೆಯ ಇನ್ನಿತರ ಕೆಲಸಗಳಿಗೆ ಉಪಯೋಗವಾಗುವುದೊಂದೇ ಅಲ್ಲದೆ ಮನೆಯ ಸುತ್ತಮುತ್ತಲಿನ ಪ್ರದೇಶದ ಅಂತರ್ಜಲ ಮಟ್ಟವನ್ನು ಹೆಚ್ಚಿಸಿದೆ. ಮನೆಯ ಹತ್ತಿರದ ಜಾಗಗಳಲ್ಲಿ ಬೋರ್ವೆಲ್ಗಳಿದ್ದರೂ ಪ್ರತಿ ಮಳೆಗಾಲದಲ್ಲಿ ಮನೆಯ ಬಾವಿ ನೀರು 2-3 ಫೂಟ್ ಜಾಸ್ತಿಯಾಗುತ್ತಿದೆ. ಹೀಗಾಗಿ ಅವರ ಮನೆಯ ಮೇಲೆ ಬೀಳುವ ಮಳೆನೀರು ಸ್ವಲ್ಪವೂ ವ್ಯರ್ಥವಾಗದೇ, ಸದುಪಯೋಗಗೊಳ್ಳುತ್ತಿರುವುದು ವಿಶೇಷ.
ನೀರಿನ ಅಭಾವ ಕಾಡಿಲ್ಲ
‘3-4 ಜನ ವಾಸಿಸುವ ಸಣ್ಣ ಮನೆಗಳಿಗೆ ಪ್ರತಿನಿತ್ಯ ಸುಮಾರು 250-300 ಲೀಟರ್ಗಳಷ್ಟು ನೀರು ಸಾಕು. ಮನೆಯಲ್ಲಿ ನೀರಿನ ಬಳಕೆಯ ಬಗ್ಗೆ ಗೃಹಿಣಿಯರಿಗೆ ತುಸು ಜಾಗೃತಿ ಇರಬೇಕು. ಪ್ರತಿ ಮಳೆಗಾಲದ ಮೊದಲ ಮಳೆಯ ನೀರನ್ನು ಬಿಟ್ಟು, ಬಾಕಿ ನೀರನ್ನು ಬಾವಿಯಲ್ಲಿ ಸಂಗ್ರಹಿಸಿ ಉಪಯೋಗಿಸುತ್ತೇವೆ. ಇದು ನಮಗೆ ನಿತ್ಯದ ಉಪಯೋಗಗಳಿಗೆ ಸಾಕು. 12 ವರ್ಷದ ಹಿಂದೆಯೆ ಮಳೆ ನೀರನ್ನು ಸದ್ಬಳಕೆ ಮಾಡುವ ನಿಟ್ಟಿನಲ್ಲಿ ಅನುಸರಿಸಿದ ಈ ಯೋಜನೆಯಿಂದ ನಮಗೆ ಎಂದಿಗೂ ನೀರಿನ ಅಭಾವ ಬಂದಿಲ್ಲ’ ಎನ್ನುತ್ತಾರೆ ಮೋಹನ್ ನಾರಾಯಣ ಅವರ ಪತ್ನಿ ಪೂರ್ಣಿಮಾ.
ತೋಟದಲ್ಲಿ ಇಂಗುಗುಂಡಿ
ತಮ್ಮ 3.50 ಎಕರೆಯ ‘ಚೈತನ್ಯ ಪ್ಲಾಂಟೇಶನ್ ‘ರಬ್ಬರ್ ತೋಟದಲ್ಲಿ 20 ವರ್ಷಗಳ ಹಿಂದೆಯೇ ‘ಇಂಗು ಗುಂಡಿ’ಯನ್ನು ಮಾಡಲಾಗಿದೆ. ಬೆಟ್ಟದಿಂದ ಹರಿದು ಬರುವ ನೀರನ್ನು ಇಂಗಿಸುವ ವಿಧಾನದಿಂದ, ಪೂರ್ತಿ ತೋಟ ಈ ಬಿರು ಬಿಸಿಲಿನಲ್ಲೂ ತಂಪಾಗಿದೆ. ತೋಟದ ಇಳಿಜಾರುಗಳಲ್ಲಿ ಸಾಲಾಗಿ ಇಂಗುಗುಂಡಿ ತೆಗೆದು ಮಳೆಗಾಲದಲ್ಲಿ ಇಳಿಜಾರಿಗೆ ಹರಿದು ಬರುವ ನೀರು ಗುಂಡಿಗಳಲ್ಲಿ ಇಂಗುವ ಹಾಗೆ ಮಾಡಿದ್ದಾರೆ. ಈ ವಿಧಾನವನ್ನು ತೋಟದ ಸಮತಟ್ಟು ಜಾಗಗಳಲ್ಲೂ ಅಳವಡಿಸಿದ್ದು, ಕೊಚ್ಚಿಕೊಂಡು ಹೋಗುವ ನೀರು ಹರಿದು ಗುಂಡಿಗಳಲ್ಲಿ ಇಂಗುತ್ತದೆ. ಪರಿಣಾಮ ಆ ಜಾಗದಲ್ಲಿ ಅಂತರ್ಜಲ ಮಟ್ಟ ಹೆಚ್ಚುತ್ತದೆ.
ಭೂಮಿಯಲ್ಲಿ ಅಂತರ್ಜಲ ಸರಿಯಾದ ಪ್ರಮಾಣದಲ್ಲಿ ಇದ್ದರೆ, ಬೆಳೆ ಚೆನ್ನಾಗಿ ಬರುತ್ತದೆ. ತೋಟ ತಂಪಾಗಿರುವ ಕಾರಣ, ಕಾಳು ಮೆಣಸು, ರಬ್ಬರ್ ಹೆಚ್ಚು ಬೆಳೆಯುತ್ತಾರೆ. ರಬ್ಬರ್ ಮರಗಳ ಬುಡಗಳಲ್ಲಿ ಸಣ್ಣ ಗುಂಡಿಗಳನ್ನು ಮಾಡಿ ಹರಿದು ಬರುವ ನೀರು ಮಣ್ಣನ್ನು ಕೊಚ್ಚಿಕೊಂಡು ಹೋಗದ ಹಾಗೆ ಮತ್ತು ನೀರು ಅಲ್ಲೆ ಇಂಗುವ ಹಾಗೆ ವ್ಯವಸ್ಥೆ ಮಾಡಿದ್ದಾರೆ. 3.50 ಎಕರೆ ಜಾಗದಲ್ಲಿ 100-120 ಇಂಗು ಗುಂಡಿಗಳಿರುವುದು ಗಮನಾರ್ಹ.
ಮನಸ್ಸಿದ್ದರೆ ಮಾರ್ಗ
ಇದು ಯಾವುದೇ ಸರ್ಕಾರದ ಯೋಜನೆಯಿಂದ ಅಥವಾ ಇನ್ನೊಬ್ಬರ ಹೇಳಿಕೆ ಮೇರೆಗೆ ಮಾಡಿದ ಕೆಲಸವಲ್ಲ. ತಮ್ಮ ಜಾಗದಲ್ಲಿ ಬೀಳುವ ಮಳೆ ನೀರು ಸದ್ಬಳಕೆ ಆಗಬೇಕು. ಭೂಮಿಯಿಂದ ನೀರು ತೆಗೆದ ಹಾಗೆ, ಭೂಮಿಗೆ ನೀರು ಇಂಗಿಸುವ ಕೆಲಸವೂ ಆಗಬೇಕು ಎಂಬುದು ಮೋಹನ ನಾರಾಯಣರ ಆಶಯ.
ಪ್ರತಿಯೊಬ್ಬರು ಮನೆ ನಿರ್ಮಿಸುವ ಸಮಯದಲ್ಲಿ ಸೋಲಾರ್ ಅಳವಡಿಸುವ ಹಾಗೆ, ಮೇಲ್ಛಾವಣಿ ಮೇಲೆ ಬೀಳುವ ನೀರನ್ನು ಸಂಗ್ರಹಿಸುವ ವಿಧಾನವನ್ನು ಅಳವಡಿಸಿಕೊಂಡರೆ, ಎಂತಹ ಸಂದರ್ಭದಲ್ಲೂ ನೀರಿನ ಕೊರತೆಯಾಗದು. ತೋಟ ಮುಂತಾದ ಜಾಗಗಳಲ್ಲಿ ಇಂಗು ಗುಂಡಿ ನಿರ್ಮಿಸುವ ಮೂಲಕ ನೀರಿನ ಸದ್ಬಳಕೆ ಮಾಡಿಕೊಳ್ಳಬೇಕು ಎನ್ನುತ್ತಾರೆ ಡಾ.ಕೆ.ಎಸ್.ಮೋಹನ ನಾರಾಯಣ ಅವರು.
ಚಿತ್ರ ಲೇಖನ: ಭಾಗ್ಯಶ್ರೀ ಹೆಗಡೆ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.