ಚಾಯ್ವಾಲಾ ಎಂದು ಯಾರನ್ನೂ ಹಗುರವಾಗಿ ಪರಿಗಣಿಸುವಂತಿಲ್ಲ. ಚಾಯ್ವಾಲಾ ನರೇಂದ್ರ ಮೋದಿ ಪ್ರಧಾನಿ ಆಗಿದ್ದೂ ಅಲ್ಲದೇ, ವಿಶ್ವವೇ ಭಾರತದತ್ತ ನೋಡುವಂತೆ ಮಾಡಿದ್ದಾರೆ. ಅಂತೆಯೇ ಇಲ್ಲೊಬ್ಬರು ಹೊಟ್ಟೆಪಾಡಿಗಾಗಿ ಟೀ ಮಾರುತ್ತಾರೆ, ಆದರೆ ಅವರು ಬರೋಬ್ಬರಿ 24 ಪುಸ್ತಕ ಬರೆಯುವ ಮೂಲಕ ವಿಭಿನ್ನವಾಗಿ ಗುರುತಿಸಿಕೊಂಡಿದ್ದಾರೆ.
ಹೆಸರು ಲಕ್ಷ್ಮಣ ರಾವ್. ದೆಹಲಿಯ ಐಟಿಒನಲ್ಲಿ ಚಹಾ ಮಾರುವ ಕೆಲಸ ಇವರದು. ಆದರೆ ಇವರಿಗೆ ಪುಸ್ತಕ ಬರೆಯುವ ಹವ್ಯಾಸವೂ ಇದೆ. ಬರೆದ 24 ರಲ್ಲಿ 12 ಪ್ರಕಟಗೊಂಡಿದ್ದು, ಉಳಿದವು ಪ್ರಕಟಣೆಯ ಹಂತದಲ್ಲಿವೆಯಂತೆ.
8ನೇ ತರಗತಿ ಇದ್ದಾಗಲೇ ಉದ್ಯೋಗ ಅರಸಿ ಬಂದ ಇವರು, ಟೀ ಮಾರಾಟಕ್ಕೆ ಮುಂದಾಗುತ್ತಾರೆ. ಕ್ರಮೇಣ ಬಿ.ಎ ಓದಿದ್ದೂ ಅಲ್ಲದೇ, ತಮ್ಮ 63ರ ಹರೆಯದಲ್ಲಿ ಎಂ.ಎ ಪದವಿ ಪಡೆಯಲೂ ಮುಂದಾಗಿದ್ದು ಅವರ ಓದಿನ ಹಸಿವಿಗೆ ಸಾಕ್ಷಿ.
1979 ರಲ್ಲಿ ಇವರ ಮೊದಲ ಪುಸ್ತಕ ‘New stories for a new world’ ಪ್ರಕಟವಾಗಿದೆ. ಇವರ ರಾಮದಾಸ್ ಎಂಬ ಪುಸ್ತಕ ಈಗಾಗಲೇ ಮೂರು ಸಾವಿರ ಪ್ರತಿ ಮಾರಾಟವಾಗಿದ್ದು, ಅದು ನಾಟಕ ರೂಪದಲ್ಲಿಯೂ ಲಭ್ಯವಿದೆಯಂತೆ. ಈ ಕೃತಿಗೆ ಇಂದ್ರಪ್ರಸ್ಥ ಸಾಹಿತ್ಯ ಭಾರತಿ ಪ್ರಶಸ್ತಿಯೂ ಸಂದಿರುವುದು ಗುಣಾತ್ಮಕತೆಗೆ ನಿದರ್ಶನ.
ತಮ್ಮ ಕೃತಿಗಳನ್ನು ಜನತೆಗೆ ತಲುಪಿಸಲು ಸೈಕಲ್ ಮೇಲೆ ಸ್ವತಃ ಲಕ್ಷ್ಮಣ್ ಅವರೇ ತಿರುಗಾಡುತ್ತಾರೆ. ಸಂಘ ಸಂಸ್ಥೆಗಳು, ಶಾಲಾ ಕಾಲೇಜು ಲೈಬ್ರರಿ ಹೀಗೇ ಎಲ್ಲೆಡೆಯೂ ಅವರು ಭೇಟಿ ನೀಡುತ್ತಾರೆ. ತಮ್ಮ ಬರಹಗಳ ಪ್ರಕಟಣೆಗಾಗಿ ಅನೇಕ ಪ್ರಕಾಶಕರನ್ನು ಭೇಟಿ ಮಾಡಿದರೂ, ಯಾರೊಬ್ಬರೂ ಇವರನ್ನು ಗಂಭೀರವಾಗಿ ಪರಿಗಣಿಸಲಿಲ್ಲವಂತೆ. ತಮ್ಮನ್ನು ಗಣನೆಗೆ ತೆಗೆದುಕೊಳ್ಳದವರ ವಿರುದ್ಧ ಗುದ್ದಾಡಲು ಅವರು ಹೋಗಲಿಲ್ಲ. ಸ್ವತಃ ತಾವೇ ಒಂದು ಪ್ರಕಾಶನ ಸಂಸ್ಥೆಗೆ ಮುನ್ನುಡಿ ಬರೆದಿದ್ದು, ಅದರ ನೊಂದಣಿ ಕಾರ್ಯವೂ ಮುಗಿದಿದೆಯಂತೆ. ಭಾರತೀಯ ಸಾಹಿತ್ಯ ಕಲಾ ಪಬ್ಲಿಕೇಶನ್ ಅವರ ಪ್ರಕಾಶನದ ಹೆಸರು.
ಈ ಮೊದಲು ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿಯವರು ಲಕ್ಷ್ಮಣ್ ರಾವ್ ಅವರನ್ನು ಭೇಟಿ ಮಾಡಲು ಆಹ್ವಾನಿಸಿದ್ದರಂತೆ. ಅಲ್ಲದೇ ಇತ್ತೀಚೆಗೆ ಮಾಜಿ ರಾಷ್ಟ್ರಪತಿ ಪ್ರತಿಭಾ ಪಾಟಿಲ್ ಕೂಡಾ ರಾಷ್ಟ್ರಪತಿ ಭವನಕ್ಕೆ ಆಹ್ವಾನ ನೀಡಿದ್ದು ಗಮನಾರ್ಹ.
ಏನೇ ಆದರೂ ಅವರ ಜೀವನೋಪಾಯಕ್ಕೆ ಚಹಾ ಮಾರುವುದೇ ಪ್ರಧಾನವಾಗಿದೆ. ಚಹಾ ಮಾರುತ್ತಲೇ ಅಕ್ಷರ ಲೋಕಕ್ಕೂ ಸೇವೆ ಸಲ್ಲಿಸುತ್ತಿರುವ ಲಕ್ಷ್ಮಣ ಅವರ ಬದುಕು ನಿಜಕ್ಕೂ ಸಮಾಜಕ್ಕೆ ಮಾದರಿ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.