ರಾಮಾನುಜಾಚಾರ್ಯರು ಅವತಾರ ತಾಳಿ ಸಾವಿರ ವರ್ಷಗಳು ಕಳೆದಿವೆ. ಅವರು ತಮ್ಮ ಜೀವನದುದ್ದಕ್ಕೂ ಇತರರಿಗಾಗಿ ಬದುಕಿದವರು. ಹಾಗಾಗಿಯೇ ಅವರು ಸಾವಿರದ ರಾಮಾನುಜರು.
ರಾಮಾನುಜರು 1017 ನೇ ಇಸವಿಯಲ್ಲಿ ಮದ್ರಾಸಿನ ಸಮೀಪದ ಶ್ರೀಪೆರಂಬದೂರು ಎಂಬಲ್ಲಿ ಜನಿಸಿದರು. ಕೇಶವ ಸೋಮಯಾಜಿ (ಕೇಶವದೀಕ್ಷಿತರು) ಮತ್ತು ಕಾಂತಿಮತಿ ಅವರ ತಂದೆ – ತಾಯಿ. ಚಿಕ್ಕ ವಯಸ್ಸಿನಲ್ಲಿಯೇ ವೇದಗಳ ಮತ್ತು ಉಪನಿಷತ್ಗಳ ಬಗ್ಗೆ ಅಧ್ಯಯನ ನಡೆಸಲು ಕಾಂಚಿಗೆ ತೆರಳಿದರು. ಅಲ್ಲಿ ಪ್ರಸಿದ್ಧ ಅದ್ವೈತ ಗುರುಗಳಾದ ಯಾದವ ಪ್ರಕಾಶರ ಶಿಷ್ಯರಾದರು. ರಾಮಾನುಜರು ಅತ್ಯಂತ ಬುದ್ಧಿವಂತ ವಿದ್ಯಾರ್ಥಿಯಾಗಿದ್ದರು. ಅವರು ಹಲವಾರು ಸಂದರ್ಭದಲ್ಲಿ ಧರ್ಮ ಮತ್ತು ತತ್ವಗಳ ವಿಚಾರಗಳಲ್ಲಿ ಗುರುಗಳ ಅಭಿಪ್ರಾಯವನ್ನು ಒಪ್ಪುತ್ತಿರಲಿಲ್ಲ. ಪರಿಣಾಮವಾಗಿ ಗುರು ಶಿಷ್ಯರ ಮಧ್ಯೆ ಭಿನ್ನಾಭಿಪ್ರಾಯ ಬೆಳೆಯಿತು. ರಾಮಾನುಜರು ಗುರುವನ್ನು ತ್ಯಜಿಸಿ ಮನೆಗೆ ಹಿಂತಿರುಗಿದರು. ತಮ್ಮ 16ನೇ ವಯಸ್ಸಿನಲ್ಲಿ ತಂಗಮ್ಮನನ್ನು ವಿವಾಹವಾದರು.
ಗುರುವನ್ನು ತ್ಯಜಿಸಿದ ಅನಂತರ ರಾಮಾನುಜರು ಸ್ವ ಅಧ್ಯಯನವನ್ನು ಮುಂದುವರಿಸಿದರು. ಬಹುಬೇಗನೆ ಅವರ ಕೀರ್ತಿ ರಾಷ್ಟ್ರದ ಉದ್ದಗಲಕ್ಕೂ ಪಸರಿಸಿತು. ಅವರು ಒಬ್ಬ ಮಹಾನ್ ವಿದ್ವಾಂಸರಾಗಿ ರೂಪುಗೊಂಡರು. ತಮಿಳುನಾಡಿನ ಶ್ರೀರಂಗ ಮಠದ ಯುಮುನಾಚಾರ್ಯರು ತನ್ನ ಉತ್ತರಾಧಿಕಾರಿಯಾಗಲು ಆಹ್ವಾನಿಸಿದರು. ಈ ಸಂದರ್ಭದಲ್ಲಿ ರಾಮಾನುಜರಿಗೆ ಸಾಂಸಾರಿಕ ಜೀವನದಲ್ಲಿ ಜಿಗುಪ್ಸೆ ಉಂಟಾಗತ್ತು. ಆಧ್ಯಾತ್ಮಿಕ ವಿಚಾರದ ಕಡೆಗೆ ಆಕರ್ಷಿತರಾಗಿದ್ದರು. ತನ್ನ ಕುಟುಂಬವನ್ನು ತ್ಯಜಿಸಿ ಸಂನ್ಯಾಸಿಯಾದರು. ಅವರು ಶ್ರೀರಂಗ ತಲುಪುವ ಮೊದಲೇ ಯಮನಾಚಾರ್ಯರು ಸ್ವರ್ಗಸಸ್ಥರಾಗಿದ್ದರು. ರಾಮಾನುಜರು ಶ್ರೀರಂಗ ಮಠದ ಆಚಾರ್ಯ ಪೀಠವನ್ನೇರಿ ಅಲ್ಲಿ ವೈಷ್ಣವ ಪಂಥವನ್ನು ಪ್ರಚಾರಗೊಳಿಸಿದರು. ಸುಧೀರ್ಘವಾದ 120 ವರ್ಷಗಳ ಕಾಲ ಜೀವನದ ಅನಂತರ ಇಹಲೋಕವನ್ನು ತ್ಯಜಿಸಿದರು.
ರಾಮಾನುಜಾಚಾರ್ಯರು ತಮ್ಮ ಬದುಕಿನುದ್ದಕ್ಕೂ ಜಾತಿಯನ್ನು ಮೀರಿ ನಿಂತವರು
ಜಾತಿ, ಮತ, ಪಂಥ, ಭಾಷೆಯ ಮೀರಿ ಭಗವಂತ ಎಲ್ಲರಲ್ಲಿಯೂ ಇರುವನು ಆತನು ಸರ್ವತಂತ್ರ ಸ್ವತಂತ್ರನು ಎಂದು ತಿಳಿಸಿಕೊಟ್ಟವರು.
ಎಲ್ಲರೂ ಭಗವಂತ ಪೂಜೆ ಮಾಡುವಂತಾಗಬೇಕು ಎಂದು ತಿಳಿಸಿ ಆ ಬಗೆಗೆ ಹೋರಾಡಿದರು
ಸಮಾಜದಲ್ಲಿನ ಜಾತಿಭೇದ ಮತ್ತು ಲಿಂಗತಾರತಮ್ಯವನ್ನು ಹೋಗಲಾಡಿಸಲು ರಾಮಾನುಜರು ದುಡಿದಿದ್ದಾರೆ. ಅದಕ್ಕೊಂದು ನಿದರ್ಶನ ಇಲ್ಲಿದೆ. ಅವರು ತಮ್ಮ ಕಾಲದಲ್ಲಿ 74 ಅಧಿಪತಿಗಳನ್ನು ನೇಮಿಸಿದರು. ಅದರಲ್ಲಿ ಸಾಕಷ್ಟು ಜನ ಬ್ರಾಹ್ಮಣೇತರರು ಮತ್ತು 5 ಜನಮಹಿಳೆಯರು ಎಂಬುದು ಗಮನಿಸಬೇಕಾದ ಅಂಶ. ದೇವರ ಭಕ್ತ ಯಾರೇ ಆಗಿರಲಿ, ಅವರುಂಡ ತಟ್ಟೆಯಲ್ಲಿ ಊಟಮಾಡುವುದಕ್ಕೆ, ಅವರ ಪಾದ ತೊಳೆಯಲೂ ರಾಮಾನುಜರು ಹಿಂದೆಮುಂದೆ ನೋಡುತ್ತಿರಲಿಲ್ಲ. ಭಗವಂತ ಎಲ್ಲರಲೂ ಇರುವ ಎಂದಾಗ ಆತನ ಭಕ್ತರಲ್ಲಿ ತಾರತಮ್ಯವೇಕೆ ಎಂದು ಪ್ರತಿಪಾದಿಸಿದರು.
ಎಲ್ಲವನ್ನೂ ಮೀರಿ ಭಗವಂತನನ್ನು ಸಾಕ್ಷಾತ್ಕರಿಸಲು ಬಹಳಷ್ಟು ಪ್ರಯತ್ನ ಮಾಡಿದರು
ತಿರುಪತಿಯಲ್ಲಿದ್ದ ಗೊಂದಲ ಬಗೆಹರಿಸಿ ತಿರುಪತಿಯ ದೇವರು ಶ್ರೀವೇಂಕಟೇಶ- ಶ್ರೀನಿವಾಸ ಎಂದು ಪ್ರತಿಪಾದಿಸಿದರು. ಆಂಧ್ರದಲ್ಲಿ ಹಲವಾರು ದೇವಾಲಯಗಳನ್ನು ಸ್ಥಾಪಿಸಿ, ಶ್ರೀಕೂರ್ಮವನ್ನು ಪುನರುಜ್ಜೀವನಗೊಳಿಸಿ, ಪುರಿಯ ಜಗನ್ನಾಥನಿಗೆ ಹೊಸ ದೇವಾಲಯ ನಿರ್ಮಿಸಿ, ನೈಮಿಷಾರಣ್ಯ, ಉತ್ತರದ ಬದರೀ ಕ್ಷೇತ್ರಗಳನ್ನು, ನೇಪಾಳದಲ್ಲಿ ಸಾಲಗ್ರಾಮ-ಮುಕ್ತಿನಾಥ ಕ್ಷೇತ್ರಗಳನ್ನು ಜೀರ್ಣೋದ್ಧಾರಗೊಳಿಸಿದರು. ಕಾಶ್ಮೀರಕ್ಕೆ ತೆರಳಿ ಶಾರದಾಪೀಠದಲ್ಲಿ ತಮ್ಮ ಬ್ರಹ್ಮಸೂತ್ರಭಾಷ್ಯವನ್ನು ಮಂಡಿಸಿ ಶಾರದಾ ದೇವಿಯಿಂದ ಶ್ರೀಭಾಷ್ಯಕಾರ ಎಂಬ ಬಿರುದು ಪಡೆದರು. ತಾವು ಸಂದರ್ಶಿಸಿದ ಎಲ್ಲ ಜಾಗಗಳಲ್ಲೂ ಎಲ್ಲರನ್ನೂ ಪ್ರೀತಿಯಿಂದ ಸೆಳೆಯುತ್ತಾ ವಿಶಿಷ್ಟಾದ್ವೈತಸಿದ್ಧಾಂತವನ್ನು ಪ್ರತಿಪಾದಿಸಿದರು.
ಭಾರತದಾದ್ಯಂತ ಪ್ರಯಾಣಮಾಡಿ ಭಕ್ತಿಸಿದ್ಧಾಂತ ಮತ್ತು ಸಮಾನತೆಯನ್ನು ಪ್ರಚಾರ ಮಾಡುತ್ತಾ ತಮ್ಮ 120ನೇ ವರ್ಷದಲ್ಲಿ ಅಂದರೆ ಕ್ರಿ.ಶ. 1117 ರಲ್ಲಿ ಶ್ರೀಮನ್ನಾರಾಯಣನಲ್ಲಿ ಒಂದಾದರು. ಇವರ ಶರೀರವನ್ನು ಇಂದಿಗೂ ತಮಿಳುನಾಡಿನಲ್ಲಿ ರಕ್ಷಿಸಿಡಲಾಗಿದೆ.
120 ವರ್ಷಗಳ ತಮ್ಮ ದೀರ್ಘ ಜೀವಿತಾವಧಿಯಲ್ಲಿ ತಮ್ಮ ಸಿದ್ಧಾಂತದ ಪ್ರತಿಪಾದನೆಗಾಗಿ ಶ್ರೀಭಾಷ್ಯ – ಬ್ರಹ್ಮಸೂತ್ರ ಭಾಷ್ಯ, ಗೀತಾಭಾಷ್ಯ – ಭಗವದ್ಗೀತೆಯ ಭಾಷ್ಯ, ವೇದಾರ್ಥಸಂಗ್ರಹ ಉಪನಿಷದ್ಭಾಷ್ಯ, ವೇದಾಂತಸಾರ, ವೇದಾಂತದೀಪ, ಶರಣಾಗತಿ ಗದ್ಯ, ಶ್ರೀರಂಗಗದ್ಯ, ವೈಕುಂಠಗದ್ಯ, ನಿತ್ಯಗ್ರಂಥ ಎಂಬ ಕೃತಿಗಳನ್ನು ರಚಿಸಿದರು.
ವಿಶಿಷ್ಟಪ್ರಸಂಗ
ಶ್ರೀರಾಮಾನುಜರು ಮನಸ್ಸಿನ ಶುದ್ಧತೆಯನ್ನು (ಅಂತರಂಗ ಶುದ್ಧಿ) ಪ್ರತಿಪಾದಿಸಿದರು. ಧರ್ನುದಾಸ ಎಂಬುವವನು ದಲಿತಶಿಷ್ಯನಾಗಿದ್ದನು. ಕಾವೇರಿ ನದಿಯಲ್ಲಿ ಸ್ನಾನಮಾಡಿದ ನಂತರವೂ ಧನುರ್ದಾಸನ ಹೆಗಲಮೇಲೆ ತೋಳನ್ನು ಇಟ್ಟು ರಾಮಾನುಜರು ದೇವಾಲಯಕ್ಕೆ ಮರಳುತ್ತಿದ್ದರು. ಇದು ಅವರು ಸಮಾನತೆಗೆ ಸಾಕ್ಷಿ.
ಮನುಷ್ಯ ಜಾತಿಯ ಸಂಕೋಲೆಯನ್ನು ಕಳಚಿದಾಗಲೇ ಆತನು ಭಗವಂತನೆಡಗೆ ಸಾಗುವನು ಎಂದು ತೋರಿಸಿಕೊಟ್ಟು. ಇಡೀ ಮಾನವಕುಲಕ್ಕೆ ಶ್ರೇಷ್ಠ ಉದಾಹರಣೆಯಾಗಿ ಮೆರೆದವರು ರಾಮಾನುಜರು.
ಇಂತಹ ಗುರುಶ್ರೇಷ್ಠರ ದಾರಿಯಲ್ಲಿ ಸಾಗೋಣ ತಾಯಿ ಭಾರತಾಂಬೆಯನ್ನು ಮತ್ತೆ ವಿಶ್ವಗುರು ಜಗನ್ಮಾತೆಯನ್ನಾಗಿಸಲು ಜಾತಿಯ ಸಂಕೋಲೆ ಕಳಚಿ ಒಂದಾಗೋಣ.
ವಂದೇ ಭಾರತ ಮಾತರಂ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.