ನನಗೆ ಮತ್ತೊಂದು ಅವಕಾಶ ಸಿಗಲಾರದು, ನಿಮ್ಮಿಂದ ನನ್ನ ಕನಸು ನನಸಾಗಬಹುದೇ? ನಿಮ್ಮ ಸಣ್ಣ ಕೊಡುಗೆ ಬದುಕನ್ನೇ ಬದಲಾಯಿಸಬಹುದು ಎಂದು ಕರೆ ನೀಡುವ ಡಾ.ಅಚ್ಯುತಾಸಮಂತಾ ಅವರ ಕನಸಿನ ಕೂಸು ಕಳಿಂಗ ಇನ್ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸ್. ಬಡತನ, ಹಸಿವು, ಅನಕ್ಷರತೆ ಮುಕ್ತ ಸಮಾಜದ ನಿರ್ಮಾಣ ಮಾಡಲು ಅವರು ಕೈಗೊಂಡ ನಿರ್ಧಾರ ಇಂದು 25 ಸಾವಿರಕ್ಕೂ ಹೆಚ್ಚು ಬುಡಕಟ್ಟು ಮಕ್ಕಳಿಗೆ ವಿದ್ಯೆ ಕಲಿಯಲು ದಾರಿ ಒದಗಿಸಿದೆ.
ಅವಕಾಶಗಳನ್ನು ನೀಡಿದರೆ ದುರ್ಬಲರು ಕೂಡ ಸಬಲತೆಯನ್ನು ಸಾಧಿಸಬಹುದು. ಬಡತನ, ಹಸಿವಿನ ನಿವಾರಣೆಗೆ ಶಿಕ್ಷಣವೊಂದೇ ಅಸ್ತ್ರ ಎಂಬುದರಲ್ಲಿ ಅಚಲ ನಂಬಿಕೆ ಇಟ್ಟು ಒರಿಸ್ಸಾದ ಭುವನೇಶ್ವರದಲ್ಲಿ 1993ರಲ್ಲಿ ಕೇವಲ 125 ಬುಡಕಟ್ಟು ವಿದ್ಯಾರ್ಥಿಗಳೊಂದಿಗೆ ಬಾಡಿಗೆ ಕಟ್ಟಡದಲ್ಲಿ ಕಳಿಂಗ ಇನ್ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸ್ನ್ನು ಇವರು ಆರಂಭಿಸಿದರು. ಆದರೆ ಇದೀಗ ಅದು ಬುಡಕಟ್ಟು ಮಕ್ಕಳಿಗೆ ಉಚಿತ ಶಿಕ್ಷಣ ನೀಡುವ ಅತೀದೊಡ್ಡ ವಸತಿ ಶಿಕ್ಷಣ ಸಂಸ್ಥೆಯಾಗಿ ತುಂಬಾ ಎತ್ತರಕ್ಕೆ ಬೆಳೆದು ನಿಂತಿದೆ.
25,308 ಬುಡಕಟ್ಟು ವಿದ್ಯಾರ್ಥಿಗಳಿಗೆ ಕಿಂಡರ್ಗಾರ್ಟನ್ನಿಂದ ಪೋಸ್ಟ್ ಗ್ರಾಜ್ಯುಯೇಶನ್ ತನಕ ಉಚಿತ ಶಿಕ್ಷಣವನ್ನು ನೀಡುತ್ತಿದೆ.
ಶಿಕ್ಷಣ ಮಾತ್ರವಲ್ಲದೇ ಕಳಿಂಗ ಸಂಸ್ಥೆ ಜೀವನಕ್ಕೆ ಅತ್ಯಗತ್ಯವೆನಿಸಿದ ಆಹಾರ, ವಸತಿ, ಆರೋಗ್ಯ ಚಿಕಿತ್ಸೆಯನ್ನು ಸಂಪೂರ್ಣ ಉಚಿತವಾಗಿ ನೀಡುತ್ತಿದೆ. ಇಲ್ಲಿ ಶೇ.60ರಷ್ಟು ಹೆಣ್ಣು ಮಕ್ಕಳೇ ವ್ಯಾಸಂಗ ಮಾಡುತ್ತಿದ್ದಾರೆ. ಒರಿಸ್ಸಾದ 62 ಬುಡಕಟ್ಟು ಸಮುದಾಯಗಳ ವಿದ್ಯಾರ್ಥಿಗಳು ಇಲ್ಲಿದ್ದಾರೆ. ಇತರ ರಾಜ್ಯಗಳ, ಆಫ್ರಿಕಾದ ವಿದ್ಯಾರ್ಥಿಗಳೂ ಇಲ್ಲಿ ಕಲಿಯುತ್ತಿದ್ದಾರೆ.
ಬುಡಕಟ್ಟು ಮಕ್ಕಳನ್ನು ಸಬಲೀಕರಣ ಮಾಡುವುದರೊಂದಿಗೆ ಅವರನ್ನು ಅವರ ಸಂಸ್ಕೃತಿ ಮತ್ತು ಕುಟುಂಬದೊಂದಿಗೂ ಸಂಪರ್ಕ ಸಾಧಿಸುವಂತೆ ಕಳಿಂಗ ಸಂಸ್ಥೆ ನೋಡಿಕೊಳ್ಳುತ್ತಿದೆ. ಇಲ್ಲಿನ ಮಕ್ಕಳು ಶಿಕ್ಷಣ, ಕ್ರೀಡೆಯಲ್ಲಿ ತಮ್ಮ ಸಾಮರ್ಥ್ಯ ಪ್ರದರ್ಶಿಸಿದ್ದಾರೆ. ಯುನೆಸ್ಕೋ, ಯುನಿಸೆಫ್ನಂತನ ವಿಶ್ವ ಸಂಸ್ಥೆಗಳೂ ಈ ಸಂಸ್ಥೆಯೊಂದಿಗೆ ಕೈಜೋಡಿಸಿ ಹಲವಾರು ಕಾರ್ಯಕ್ರಮಗಳನ್ನು ಆಯೋಜನೆ ಮಾಡಿವೆ.
ಭವಿಷ್ಯದಲ್ಲಿ 2 ಲಕ್ಷ ಬುಡಕಟ್ಟು ಮಕ್ಕಳಿಗೆ ಶಿಕ್ಷಣ ಒದಗಿಸುವ ಮಹತ್ವದ ಗುರಿಯನ್ನು ಹೊಂದಿರುವ ಈ ಸಂಸ್ಥೆ ಅದಕ್ಕಾಗಿ ಒರಿಸ್ಸಾದ 30 ಜಿಲ್ಲೆಗಳಲ್ಲಿ ಬ್ರಾಂಚ್ಗಳನ್ನು ತೆರೆಯುವ ಪ್ರಕ್ರಿಯೆಯನ್ನು ಆರಂಭಿಸಿದೆ.
ಬಡವರಿಗೆ ಅವಕಾಶಗಳನ್ನು ಕೊಡಿ ಅವರು ಖಂಡಿತವಾಗಿಯೂ ಪುಟಿದೇಳುತ್ತಾರೆ. ಸಾಧನೆ ಮತ್ತು ವೈಫಲ್ಯದ ನಡುವೆ ಭಿನ್ನತೆಯಿರಲು ಅವಕಾಶಗಳ ಕೊರತೆಯೇ ಕಾರಣ ಎನ್ನುವ ಅಚ್ಯುತಾಸಮಂತಾ ಅವರು ಮಾಡುತ್ತಿರುವ ಕಾರ್ಯ ಪ್ರತಿಯೊಬ್ಬ ಭಾರತೀಯನಿಗೂ ಮಾದರಿ.
ಈ ವಿದ್ಯಾಸಂಸ್ಥೆಯ ಸಂಪೂರ್ಣ ಮಾಹಿತಿಗಾಗಿ ಈ ವಿಡಿಯೋ ನೋಡಿ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.