ಕರ್ನಾಟಕ ರತ್ನ, ಪದ್ಮಭೂಷಣ, ತ್ರಿವಿಧ ದಾಸೋಹಿ(ಅನ್ನ, ಅಕ್ಷರ, ಜ್ಞಾನ), ಕಾಯಕ ಯೋಗಿ, ನಡೆದಾಡುವ ದೇವರು ಎಂಬನೇಕ ಬಿರುದುಗಳಿಗೆ ಮಾನ್ಯರಾದ ಶತಾಯುಷಿ ತುಮುಕೂರಿನ ಶ್ರೀ ಸಿದ್ಧಗಂಗಾ ಶ್ರೀಗಳ 110 ನೇ ಜನ್ಮದಿನೋತ್ಸವ ನಾಳೆ. ಈ ನಿಮಿತ್ತ ಗುರುವಂದನೆಯನ್ನು ಹಮ್ಮಿಕೊಳ್ಳಲಾಗಿದೆ.
ಜಾತಿ, ಮತ, ಪಂಥಗಳಾಚೆ ಮಠವನ್ನು ಔನ್ನತ್ಯಕ್ಕೇರಿಸಿದ ಹಿರಿಮೆ ಶ್ರೀ ಸಿದ್ಧಗಂಗಾ ಶ್ರೀಗಳದು. ಮಾಗಡಿ ತಾಲೂಕಿನ ವೀರಾಪುರದ ಹೊನ್ನೇಗೌಡ ಹಾಗೂ ಗಂಗಮ್ಮನವರ 13ನೇ ಸುಪತ್ರರಿವರು. 1908 ರಲ್ಲಿ ಜನನ. ಶಿವಣ್ಣ ಪೂರ್ವಾಶ್ರಮದ ಹೆಸರು. ತುಮಕೂರಿನಲ್ಲಿ ಪ್ರೌಢಶಾಲೆಗೆ ಸೇರಿದ್ದ ಇವರಿಗೆ, ಸಿದ್ದಗಂಗಾ ಮಠದ ಪೀಠಾಧಿಪತಿ ಉದ್ದಾನ ಶಿವಯೋಗಿಗಳ ಜೊತೆ ಒಡನಾಟ ವೃದ್ಧಿಸಿತು. ಹೆಚ್ಚಿನ ವಿದ್ಯಾಭ್ಯಾಸಕ್ಕೆ ಶಿವಣ್ಣನ ಪಯಣ ಬೆಂಗಳೂರಿಗೆ ಸಾಗಿದರೂ, ಮಠದೊಂದಿಗಿನ ಸಂಬಂಧ ಕುಂದಿರಲಿಲ್ಲ.
1930ರಲ್ಲಿ ಉದ್ಧಾನ ಶ್ರೀಗಳ ಕಿರಿಯ ಶ್ರೀ ಮರುಳಾಧ್ಯರು ಆಕಸ್ಮಿಕವಾಗಿ ಶಿವೈಕ್ಯರಾಗುತ್ತಾರೆ. ಅವರ ಕ್ರಿಯಾ ಸಮಾಧಿ ಕಾರ್ಯಕ್ರಮಕ್ಕೆ ಶಿವಣ್ಣನವರೂ ಆಗಮಿಸಿರುತ್ತಾರೆ. ಆಗ ಉದ್ಧಾನ ಶ್ರೀಗಳು ಶಿವಣ್ಣನನ್ನೇ ತಮ್ಮ ಉತ್ತರಾಧಿಕಾರಿ ಎಂದು ಘೋಷಿಸಿಬಿಡುತ್ತಾರೆ. ಶಿವಣ್ಣ ಶಿವಕುಮಾರ ಸ್ವಾಮೀಜಿಯಾಗಿ, ಕಾವಿ- ರುದ್ರಾಕ್ಷಿ ಧರಿಸಿ ಸನ್ಯಾಸ ಜೀವನಕ್ಕೆ ಕಾಲಿಟ್ಟಿರುವುದು ಅವರ ಜೀವನದ ಮಹತ್ವದ ತಿರುವು.
ತಮ್ಮ ಗುರುಗಳು ಕಾಲವಾದ ನಂತರ ಮಠದ ಆಡಳಿತವನ್ನು ತಮ್ಮ ಸುಪರ್ದಿಗೆ ತೆಗೆದುಕೊಳ್ಳುವ ಇವರು, ಅಪರೂಪದ ಸೇವಾ ಕಾರ್ಯಗಳಿಂದ ಮಠದ ಕೀರ್ತಿ ಎಲ್ಲೆಡೆ ಬೆಳಗುವಂತೆ ಮಾಡುತ್ತಾರೆ.
ಬೆಳಗಿನ ಜಾವ 4 ಗಂಟೆಗೆ ಏಳುವ ಅವರು, ಧ್ಯಾನ, ಯೋಗಗಳಿಗೆ ಸಮಯ ಮೀಸಲಿಡುತ್ತಾರೆ. ನಂತರ ಸ್ನಾನ, ಜಪ, ತಪಾದಿಗಳು, ಇಷ್ಟಲಿಂಗ ಪೂಜೆ. ಭಕ್ತಾದಿಗಳು, ಗಣ್ಯರ ದರ್ಶನಕ್ಕೆ ಅವಕಾಶ. ಪುಸ್ತಕ ಓದುವುದೂ ಅವರ ಇಷ್ಟದ ಹವ್ಯಾಸ.
ಸದ್ದುಗದ್ದಲವಿಲ್ಲದ ಸಾಧನೆಯಿಲ್ಲಿ ಗದ್ದುಗೆ ಏರಿದೆ
ಕಾಯಕವೇ ಕೈಲಾಸ ಎನ್ನುವ ಮಾತು ಕೃತಿಯೊಳು ಮೂಡಿದೆ
ಕಾವಿಯುಡುಗೆಯನುಟ್ಟು ನಭವೇ ಕಿರಣ ಹಸ್ತ ಚಾಚಿದೆ
ಎಲ್ಲ ನನ್ನವರೆನ್ನುವ ಭಾವದ ಕರುಣೆಯೇ ಕಣ್ತೆರೆದಿದೆ !!
ಎಂದು ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪನವರು ಶ್ರೀ ಸಿದ್ಧಗಂಗಾ ಶ್ರೀಗಳ ಕುರಿತು ಕಾವ್ಯಾತ್ಮಕವಾಗಿ ಹೇಳಿದ್ದು ಗಮನಾರ್ಹ.
ರಾಜ್ಯ ಹಾಗೂ ರಾಷ್ಟ್ರ ಮಟ್ಟದ ರಾಜಕೀಯ ನಾಯಕರು, ಸಮಾಜ ಸೇವಕರು, ಸಿನಿಮಾ, ಕೃಷಿ, ಉದ್ಯಮ ಹೀಗೇ ಸಮಾಜದ ಎಲ್ಲ ಕ್ಷೇತ್ರಗಳ ಅಸಂಖ್ಯ ಗಣ್ಯರು ಇಂದಿಗೂ ಮಠಕ್ಕೆ ಭೇಟಿ ನೀಡಿ, ಶ್ರೀಗಳ ಆಶಿರ್ವಾದ ಪಡೆಯುತ್ತಾರೆ. ಉತ್ತಮ ಸಂಸ್ಕಾರ, ಬದುಕಿನ ರೀತಿ, ನೀತಿ, ಲೌಕಿಕದ ಜೊತೆ ಪಾರಮಾರ್ಥಿಕ ತತ್ವವನ್ನೂ ಬೋಧಿಸುವ ಸಿದ್ಧಗಂಗಾ ಮಠದಲ್ಲಿ ತಯಾರಾದ ವಿದ್ಯಾರ್ಥಿಗಳು ಅಕ್ಷರಶಃ ಈ ನೆಲದ ಮಹೋನ್ನತ ಆಸ್ತಿಗಳೇ ಆಗಿವೆ.
ಗುರುವಂದನಾ ಕಾರ್ಯಕ್ರಮ
ನಾಳೆ ಏ.1 ರಂದು ಸಿದ್ಧಗಂಗಾ ಶ್ರೀಗಳು 110 ನೇ ವಸಂತ ಪೂರೈಸಲಿದ್ದಾರೆ. ಈ ನಿಟ್ಟಿನಲ್ಲಿ ಅನೇಕ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳಲಾಗಿದೆ ಎಂದು ಡಾ. ಮಠದ ಆಡಳಿತಾಧಿಕಾರಿ ಎಂ.ಎನ್.ಚನ್ನಬಸಪ್ಪ ಹೇಳಿದ್ದಾರೆ.
ಕುಂಭ ಕಳಸದೊಂದಿಗೆ ಶ್ರೀಗಳ ಮೆರವಣಿಗೆ ಇದೆ. ರಾಜ್ಯಪಾಲ ವಜೂಭಾಯಿ ವಾಲಾ, ಮೈಸೂರಿನ ಸುತ್ತೂರು ವೀರಸಿಂಹಾಸನ ಮಹಾಸಂಸ್ಥಾನ ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ವಿಜಯಪುರದ ಶ್ರೀ ಸಿದ್ಧೇಶ್ವರ ಸ್ವಾಮೀಜಿ, ಶ್ರೀ ಕ್ಷೇತ್ರದ ಸಿದ್ಧಲಿಂಗ ಸ್ವಾಮೀಜಿ ಇರುವರು.
ಏ.2 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಶ್ರೀಗಳನ್ನು ಭೇಟಿ ಮಾಡಿ ಆಶಿರ್ವಾದ ಪಡೆಯಲಿದ್ದಾರೆ. ಅಭೂತಪೂರ್ವವಾಗಿ ನಡೆಯುವ ಸಂಭ್ರಮಕ್ಕೆ ಅಗತ್ಯವಾದ ಬಿಗಿ ಬಂದೋಬಸ್ತ್ ಕೂಡಾ ಮಾಡಲಾಗಿದೆ ಎಂದು ಚನ್ನಬಸಪ್ಪ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.