ಇಂದಿಗೆ ಸರಿಯಾಗಿ 86 ವರ್ಷಗಳ ಹಿಂದೆ ಆ ಮೂರು ಯುವಕರು ಇನ್ಕಿಲಾಬ್ ಜಿಂದಾಬಾದ್ ,ಭಾರತಮಾತಾ ಕಿ ಜೈ ,ವಂದೇ ಮಾತರಂ ಎಂದು ಉಚ್ಛ ಕಂಠದಿಂದ ಉಚ್ಚರಿಸುತ್ತ ತಮ್ಮ ಕೊರಳನ್ನು ಉರುಳಿಗೆ ಚುಂಬಿಸಿದ ದಿನವೇ ಮಾರ್ಚ್ 23, 1931.
ಲಾಹೋರ್ ಸೆಂಟ್ರಲ್ ಜೈಲಿನ ಎದುರು ಸುಮಾರು 25 ಸಾವಿರಕ್ಕೂ ಹೆಚ್ಚು ಜನ. ನೆರದಿದ್ದರು. ಕ್ರಾಂತಿಕಾರಿಗಳಾದ ಭಗತ್ಸಿಂಗ್ ,ರಾಜಗುರು, ಸುಖದೇವ್ರಿಗೆ ಬ್ರಿಟಿಷ್ ಸರಕಾರದ ವಿರುದ್ಧ ಸಮರ ಸಾರಿದ್ದಾರೆಂದು ನ್ಯಾಯಾಲಯವು ಅವರಿಗೆ ಫಾಸಿಶಿಕ್ಷೆಯನ್ನು ವಿಧಿಸಿದ್ದನ್ನು ರದ್ದುಗೊಳಿಸಬೇಕೆಂದು ಕೋರಿ ದೇಶಾದ್ಯಂತ ಹರತಾಳ, ಸತ್ಯಾಗ್ರಹ, ಉಪವಾಸ,ರೈಲು ತಡೆ, ಧರಣಿಗಳು ನಡೆಯುತ್ತಿದ್ದವು. ಆದರೆ ಬ್ರಿಟಿಷ ಸರಕಾರವು ಈ ಕ್ರಾಂತಿಕಾರಿಗಳು ಬದುಕಿದಷ್ಟು ದಿನ ನಾವು ನೆಮ್ಮದಿಯಿಂದ ಇರಲು ಸಾಧ್ಯವಿಲ್ಲವೆಂದು ಆದಷ್ಟು ಶೀಘ್ರ ಶಿಕ್ಷೆಯಾಗುವಂತೆ ತೀರ್ಮಾನಿಸಿತು.
ಬ್ರಿಟಿಷ್ ನ್ಯಾಯಾಲಯದಂತೆ ಮಾರ್ಚ್ 24ಕ್ಕೆ ಶಿಕ್ಷೆ ದಿನಾಂಕ ಪ್ರಕಟವಾಗಿತ್ತು. ಆದರೆ ಈ ಸಿಂಹಸ್ವಪ್ನರಾಗಿದ್ದ ವಜ್ರಕಾಯರನ್ನು ಕಂಡು ಒಂದು ದಿನ ಮೊದಲೇ ಶಿಕ್ಷೆ ನೀಡಿ ದೇಶಭಕ್ತರ ಕಣ್ಣಿಗೆ ಮಣ್ಣೆರೆಚಲು ಜೈಲು ಅಧಿಕಾರಿಗಳು ತೀವ್ರ ಸಿದ್ಧತೆ ನಡೆಸಿಯೇ ಬಿಟ್ಟರು. ಸೈಮನ್ ಕಮೀಷನ್ ಹಿಂತಿರುಗಲು ನಡೆಸಿದ ಪ್ರತಿಭಟನೆಯಲ್ಲಿ ಲಾಲಾಲಜಪತರಾಯ್ ಎಂಬ ಪಂಜಾಬ್ ಕೇಸರಿಯ ಮೇಲೆ ಹಲ್ಲೆ ನಡೆಸಿದ್ದು ಬೆಂಗಾವಲಿಗರಾದ ಭಗತ್ ಸಂಗಡಿಗರು ಸ್ಯಾಂಡರ್ಸ್ನನ್ನು ಗುಂಡಿಕ್ಕಿ ಮುಯ್ಯಿ ತೀರಿಸಿಕೊಂಡ ವೀರರ ಬಗ್ಗೆ ಅತೀವ ಹೆದರಿಕೆ ಬ್ರಿಟಿಷರಿಗೆ ಇತ್ತು.
ಸ್ವಾತಂತ್ರ್ಯದ ಕಿಚ್ಚನ್ನು ಇಡೀ ದೇಶಾದ್ಯಂತ ಜನರಿಗೆ ತಲುಪುವ ಮಾರ್ಗ ನ್ಯಾಯಾಲಯವೆಂದೇ ಮನಗಂಡು ಪೂರ್ವನಿಯೋಜಿತದಂತೆ ಅಸೆಂಬ್ಲಿಯಲ್ಲಿ ಯಾರೂ ಇಲ್ಲದ ಜಾಗದಲ್ಲಿ ಬಾಂಬ್ ಸ್ಫೋಟಿಸಿ ಭಗತ್, ಸುಖದೇವ್, ರಾಜಗುರು ಅಲ್ಲಿಯೇ ಕುಳಿತರು ಮತ್ತು ಸ್ವಯಂ ಪ್ರೇರಿತರಾಗಿ ಚಂದ್ರಶೇಖರ್ ಅಜಾದ್ ಅವರನ್ನು ಬಿಟ್ಟು ಬಂಧನಕ್ಕೊಳಗಾದರು. ಈ ಸ್ಫೋಟಕ ಘಟನೆ ದೇಶಾದ್ಯಂತ ಪತ್ರಿಕೆಗಳಲ್ಲಿ, ಮತ್ತು ಜನರ ಬಾಯಿಂದ ಬಾಯಿಗೆ ಹೋಗಿ ಯುವಚೇತನಗಳ ಕಿವಿಗೆ ಬಿದ್ದು ನಿಮಿರಿದವು. ಭಗತ್ಸಿಂಗ್ ಸಂಗಡಿಗರು ಆದರ್ಶ ನಾಯಕನೆಂದು ದೇಶಾದ್ಯಂತ ಯುವಕರು ಸ್ವಾತಂತ್ರ್ಯ ಹೋರಾಟಕ್ಕೆ ಧುಮಿಕಿದರು. ಭಗತ್ಸಿಂಗ್ ಸಂಗಡಿಗರ ಉದ್ದೇಶವಾಗಿತ್ತು, ನಮ್ಮ ಜೀವ ಹೋದರೂ ನಮ್ಮಂತಹ ಸಾವಿರಾರು ತರುಣರು ಹುಟ್ಟಲು ಪ್ರೇರಣೆಯಾಯಿತೆಂದು ಹರ್ಷಗೊಂಡರು. ಮತ್ತು ಇವರ ಬಿಡುಗಡೆಗಾಗಿ ತೀವ್ರ ತೆರನಾದ ಪ್ರತಿಭಟನೆ ಹಮ್ಮಿಕೊಂಡರು. ಎಲ್ಲ ಪ್ರಯತ್ನ ವಿಫಲವಾಗಿದ್ದು ಕಂಡು ಚಂದ್ರಶೇಖರ್ ಅಜಾದ್ ಖಿನ್ನತೆಯಿಂದ ಇದ್ದಾಗ ಅವರನ್ನು ಸುತ್ತುವರೆದು ಅಲ್ಪೃಡ್ ಪಾರ್ಕನಲ್ಲಿ ದಾಳಿ ಮಾಡಿದ ಬ್ರಿಟಿಷ್ ತುಕಡಿಯ ವಿರುದ್ಧ ಹೋರಾಡಿ ಮೂರು ಬ್ರಿಟಿಷರನ್ನು ಆಹುತಿ ತೆಗೆದುಕೊಂಡು ಉಳಿದ ಏಕೈಕ ಗುಂಡಿನಿಂದ ತನ್ನ ತಲೆಗೆ ಗುರಿಯಾಗಿಸಿ ಅಮರನಾದ, ಬ್ರಿಟಿಷರ ಕೈಗೆ ಸಿಗುವುದಿಲ್ಲ ಎಂಬ ತನ್ನ ಪ್ರತಿಜ್ಞೆ ಉಳಿಸಿಕೊಂಡ.
ಆದರೆ, ಶಿಕ್ಷೆಯ ದಿನಾಂಕ ಹಿಂದೂಡಿದ್ದು 23ರಂದೇ ಎಂದು ಭಗತ್ಸಿಂಗ್ ಸಂಗಡಿಗರಿಗೆ ತಿಳಿಸಲಾಯಿತು. ಇದಕ್ಕುತ್ತರವಾಗಿ ಅವರು ಹೆದರುತ್ತಿರುತ್ತಾರೆಂದು ಭಾವಿಸಿದ ಜೈಲರ್ಗೆ ಅವರು ಗಟ್ಟಿಯಾಗಿ ನಗುತ್ತಿರುವುದನ್ನು ಕಂಡು ಪ್ರಾಣಭಯವಿಲ್ಲದ ಜೈಲರನಿಗೆ ಕೆಲಕ್ಷಣಕಾಲ ದಿಗ್ಭ್ರಮೆಯಾಯಿತು. ಲೆನಿನ್ ಬಗ್ಗೆ ಪುಸ್ತಕ ಓದುತ್ತಿದ್ದ ಭಗತ್ ಮಡಿಚಿಟ್ಟು ಶಿಕ್ಷೆಗೆ ಸಿದ್ಧನಾದ. ಸುಖದೇವ್,ರಾಜಗುರು ಅವನನ್ನು ಅನುಸರಿಸಿದರು. ಅವರ ನಿರ್ಭಯತೆ ಜೈಲರ್ಗೆ ಆಶ್ಚರ್ಯವೆನಿಸಿತು. ಆದರೂ ಫಾಸಿಶಿಕ್ಷೆಯ ಕಾದಿದ್ದವರಿಗೆ ಕೊನೆ ಆಸೆ ಏನು ಎಂದು ಕೇಳಿದಾಗ ಅವರ ಉತ್ತರ ಸಾಯುವಾಗಲೂ ಎಷ್ಟು ಅಚಲವಾಗಿತ್ತೆಂದು ತಿಳಿಯುತ್ತದೆ. ನಮ್ಮ ಕೊನೆ ಆಸೆ ಮತ್ತು ಮೊದಲ ಆಸೆ ಎಂದರೆ ನಮ್ಮ ತಾಯಿನಾಡು ಸ್ವತಂತ್ರವಾಗುವುದು ಎಂದರು. ಆ ಮೂವರ ಗಟ್ಟಿ ನಿಲುವು ಕೇಳಿ ಅದು ನಮ್ಮ ಕೈಯಲ್ಲಿಲ್ಲ ಬೇರೆ ಏನಾದರೂ ಕೇಳಿ ಎಂದರು.
ಆಗ ಭಗತ್ಸಿಂಗ್ ಹೇಳಿದ ನಮ್ಮ ಮೇಲೆ ನ್ಯಾಯಾಲಯದ ಪ್ರಕಾರ ನಾವು ನಿಮ್ಮ ಮೇಲೆ ಯುದ್ಧ ಸಾರಿದ ಆರೋಪವಿದೆ, ಹಾಗಾಗಿ ನಾವೀಗ ನಿಮ್ಮ ಖೈದಿಗಳು ನಮ್ಮನ್ನು ಗುಂಡು ಹೊಡೆದು ಸಾಯಿಸಬೇಕೆಂದ. ಮತ್ತು ನಾವು ಈಗಾಗಲೇ ಪಂಜಾಬ್ ಗವರ್ನರ್ಗೆ ಪತ್ರವನ್ನು ಬರೆದು ನೇಣು ಹಾಕಬೇಡಿ, ನಮಗೆ ಗುಂಡು ಹೊಡೆಯಿರಿ, ಅದಕ್ಕಾಗಿ ನಮ್ಮನ್ನು ಸಾಯಿಸಲು ಪಂಜಾಬ್ನಿಂದ ತುಕಡಿಯೊಂದು ಕಳಿಸಲು ಮತ್ತು ಕ್ರಮ ಕೈಗೊಳ್ಳಲು ತಿಳಿಸಿದ್ದೇವೆ. ಎಂದ. ಅಬ್ಬಾ ! ಸಾಯುವ ಕ್ಷಣದಲ್ಲೂ ಎಂಥಾ ವೀರಾವೇಶದ ಮಾತುಗಳು. ಜೈಲೇ ಒಂದು ಕ್ಷಣ ಅದುರಿ ಹೋದಂತೆ ಭಾಸವಾಯಿತು!.
ಬೇರೆ ಏನಾದರೂ ಕೇಳುವಂತೆ ಭಗತ್ಸಿಂಗ್ನನ್ನು ಒತ್ತಾಯಿಸಿದಾಗ ನನ್ನ ಹೆತ್ತತಾಯಿಯಿಂದ ರೊಟ್ಟಿ ಮಾಡಿಸಿಕೊಂಡು ತಿನ್ನುವ ಆಸೆ ಎಂದ. ನಿಮ್ಮ ಕುಟುಂಬಕ್ಕೆ ನಿಮ್ಮನ್ನು ನೋಡುವ ಅವಕಾಶ ನಿರಾಕರಿಸಲಾಗಿದೆ, ಇನ್ನು ರೊಟ್ಟಿ ತಿನ್ನುವುದು ಹೇಗೆ ಸಾಧ್ಯ? ಎಂದು ಜೈಲರ್ ನುಡಿದಾಗ, ಭಗತ್ ಹೇಳಿದ, ಅದು ನನಗೆ ಗೊತ್ತಿದೆ ನನ್ನ ತಾಯಿ ನಾನು ಚಿಕ್ಕವನಿದ್ದಾಗ ನನ್ನ ಹೊಲಸನ್ನು ಹೇಗೆ ಸ್ವಚ್ಛಗೊಳಿಸುತ್ತಿದ್ದಳೋ ಹಾಗೆ ಈಗ ಜೈಲಿನಲ್ಲಿ ತೇಲೂರಾಮನೆಂಬ ಸಫಾಯಿ ಕರ್ಮಚಾರಿಯು ಮಾಡಿಕೊಟ್ಟ ರೊಟ್ಟಿ ತಿನ್ನುವೆನೆಂದು ಹೇಳಿ ಆತನಿಂದ ಮಾಡಿಸಿಕೊಂಡು ಪ್ರೀತಿಯಿಂದ ತಿಂದನು. ಮೂವರು ಅವನನ್ನು ಅನುಸರಿಸಿದರು.
ಜೈಲರ್ ಮೂವರಿಗೆ ಸ್ನಾನ ಮಾಡಿ ಬರುವಂತೆ ಹೇಳಿದಾಗ, ಮೂವರು ತಮ್ಮ ದೇಹವೆಂಬ ಕುಸುಮ ತಾಯಿನಾಡಿಗೆ ಅರ್ಪಣೆಯಾಗಲಿದೆ ಅದಕ್ಕಾಗಿ ಶುದ್ಧಿಯಾಗಬೇಕೆಂದು ಸ್ನಾನ ಮಾಡಿ ಬಂದರು. ನಂತರ ಕಪ್ಪುಬಟ್ಟೆ ಧರಿಸಿ ಮೂವರು ಒಬ್ಬರಿಗೊಬ್ಬರು ಅಪ್ಪಿಕೊಂಡು ಮತ್ತು ಹೆಗಲ ಮೇಲೆ ಕೈ ಹಾಕಿಕೊಂಡು ರಾಮಪ್ರಸಾದ್ ಬಿಸ್ಮಿಲ್ಲ್ ಬರೆದ ‘ಮೇರೆ ರಂಗ್ ದೇ ಬಸಂತಿ ಚೋಲಾ’ ದೇಶಭಕ್ತಿಯನ್ನು ಹಾಡುತ್ತ ಬಲಿವೇದಿಕೆಗೆ ಬಂದರು. ಅವರಲ್ಲಿ ಎಳ್ಳಷ್ಟು ಸಾವಿನ ಭಯವಿರಲಿಲ್ಲ, ಅವರು ಅಂದಿದ್ದರು, ನಮ್ಮನ್ನು ನೇಣಿಗೇರಿಸಿ ಕೊಲ್ಲಬಹುದು ಆದರೆ, ನಮ್ಮ ಕಣ್ಣಲ್ಲಿ ಬ್ರಿಟಿಷರಿಗೆ ಸಾವಿನ ಭಯ ಕಿಂಚಿತ್ತೂ ಕಾಣಿಸದು ಎಂದಿದ್ದರು.
ಭಗತ್ಸಿಂಗ್ನು ಅಲ್ಲಿ ನೆರದಿರುವ ಬ್ರಿಟಿಷರನ್ನು ಕಂಡು ಹೇಳಿದ ನೀವು ಅದೃಷ್ಟವಂತರು ಎಂದ, ಅವರಿಗೆ ವಿಚಿತ್ರವಾಗಿ ಏಕೆಂದು ಕೇಳಿದಾಗ ನಾವು ಬಲಿಗಂಬವೇರುವುದನ್ನು ಕಣ್ತುಂಬಿಕೊಳ್ಳಲು ಸಾಕಷ್ಟು ಜನ ನೆರೆದಿದ್ದಾರೆ ಆದರೆ ಅವರಿಗೆ ನಮ್ಮನ್ನು ನೋಡುವ ಭಾಗ್ಯವಿಲ್ಲ ನಿಮಗಿದೆ ಎಂದಾಗ ಅವರು ಆ ಮಾತಿನಿಂದ ದಂಗಾದರು. ಭಾರತ ಮಾತಾ ಕೀ ಜೈ, ಇನ್ ಕಿಲಾಬ್ ಜಿಂದಾಬಾದ್ ,ವಂದೇ ಮಾತರಂ ಎಂಬ ಘೋಷವಾಕ್ಯಗಳು ಜೈಲು ತುಂಬ ಅನುರಣಿಸುತ್ತಿದ್ದವು. ನಂತರ ಮೂವರು ಒಬ್ಬರಿಗೊಬ್ಬರು ತಮ್ಮ ಮುಖವನ್ನು ನೋಡಿ ಉರುಳು ಬೀಳುವ ಹಗ್ಗವನ್ನು ಚುಂಬಿಸಿ ಭಾರತ್ ಮಾತಾ ಕೀ ಜೈ ಎಂದು ಕೂಗಿ ಕೊರಳೊಡ್ಡಿದರು. ಭಾರತಮಾತೆಯ ಅಡಿದಾವರೆಗೆ ವೀರಕುಸುಮಗಳು ಅರ್ಪಿತವಾದವು.
ಅವರು ಹುತಾತ್ಮರಾದರೂ ಅವರು ಸಾಯುವಾಗ ನಗುನಗುತ್ತ ಇದ್ದರೆಂಬ ವಾರ್ತೆ ದೇಶಾದ್ಯಂತ ತಿಳಿದಾಗ ಅವರ ಶವದ ಬಗ್ಗೆ ಭಯ ಹೊಂದಿ ಬ್ರಿಟಿಷರು, ಯಾರಿಗೂ ತಿಳಿಯದಂತೆ ರಾತ್ರಿ ಅವರ ಶರೀರವನ್ನು ತೆಗೆದುಕೊಂಡು ಹಿಂದಿನ ಜೈಲಿನ ಬಾಗಿಲ ಮೂಲಕ ಸಾಗಿಸಿ ಟ್ರಕ್ನಲ್ಲಿ ಚೀಲವೊಂದರಲ್ಲಿ ತುಂಬಿ ಸತ್ಲೇಜ್ ನದಿ ತೀರಕ್ಕೊಯ್ದು ಸೀಮೆಎಣ್ಣೆ ಹಾಕಿ ಬೆಂಕಿ ಹಚ್ಚಿದರು. ಇದು ಜನರಿಗೆ ಗೊತ್ತಾಗಿ ಪಂಜು ಹಿಡಿದುಕೊಂಡು ಬರುತ್ತಿರುವುದು ಕಂಡು ಅಧಿಕಾರಿಗಳು ತಮ್ಮ ಪ್ರಾಣ ಉಳಿಸಿಕೊಳ್ಳಲು ಅರೆಬೆಂದ ಶವಗಳನ್ನು ನದಿಗೆಸೆದು ಓಡಿದರು.
ಜನರು ಶವಗಳನ್ನು ಹುಡುಕಿತಂದು ಗೌರವದಿಂದ ಅಂತ್ಯಸಂಸ್ಕಾರವನ್ನು ಮಾಡಿದರು. ನಮ್ಮ ಈ ಶವದಿಂದ ಭೂಮಾತೆಯ ಸುಗಂಧ ಹೊಮ್ಮತ್ತದೆ, ನನ್ನಂತಹ ಸಾವಿರರು ಭಗತ್ಸಿಂಗ್ರು ಹುಟ್ಟಿ ಬರುತ್ತಾರೆ, ಬ್ರಿಟಿಷ್ ಸಿಂಹಾಸನ ಕಿತ್ತೊಗೆಯುತ್ತಾರೆಂದು ಹೇಳಿದ ಆ ಮಾತು 1947 ಆಗಸ್ಟ್ 15ರಂದು ನಿಜವಾಯಿತು.
ಇಂತಹ ಧೀರರು ನಮ್ಮ ಯುವಜನಾಂಗಕ್ಕೆ ಮಾದರಿ ಅವರ ಕ್ರಾಂತಿಮಾರ್ಗಕ್ಕೆ ಅರ್ಥವಿತ್ತು ಮತ್ತು ಅದರಲ್ಲಿ ತ್ಯಾಗ, ಮತ್ತು ಪ್ರಾಣವನ್ನು ಪಣಕ್ಕಿಟ್ಟು ಹೋರಾಡಿದ ಇವರನ್ನು ನೆನೆಯುವ ಮತ್ತು ಅವರನ್ನು ಅನುಸರಿಸಿ ಅನ್ಯಾಯಕ್ಕಾಗಿ ಸಿಡಿದೇಳುವ ಕಾರ್ಯ ಯುವಕರಿಂದಾಗಬೇಕು. ಅವರು ಯಾವಾಗಲೂ ನಮ್ಮ ದೇಶದ ಧ್ರುವತಾರೆಗಳು, ಅವರ ಬಗ್ಗೆ ಸಾಕಷ್ಟು ಸ್ಮರಣೀಯ ಕಾರ್ಯಕ್ರಮ ದೇಶಸೇವಾ ಕಾರ್ಯಗಳು ನಿಸ್ವಾರ್ಥತೆಯಿಂದ ನಡೆಯಲಿ, ಅದಕ್ಕಾಗಿ ಸರಕಾರವು ಪ್ರೋತ್ಸಾಹ ನೀಡಲಿ. ಪಠ್ಯಕ್ರಮಗಳಲ್ಲಿ ಅವರ ಬಗ್ಗೆ ಚಿಣ್ಣರಿಗೆ ತಿಳುವಳಿಕೆ ನೀಡಲಿ, ಕ್ರಾಂತಿವೀರರ ಪುಸ್ತಕಗಳು ಶಾಲಾ ವಿದ್ಯಾರ್ಥಿಗಳಿಗೆ ನೀಡಿ ದೇಶಪ್ರೇಮವನ್ನು ಉಜ್ವಲಗೊಳಿಸಲು ಇದು ಸಕಾಲ.
-ಹನುಮಂತ.ಮ.ದೇಶಕುಲಕರ್ಣಿ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.