ಭುವನೇಶ್ವರ: ಒರಿಸ್ಸಾದ ಕರಾವಳಿ ಜಿಲ್ಲೆಯಾದ ಕೇಂದ್ರಪರದಲ್ಲಿ 5 ವರ್ಷದ ಪುಟಾಣಿ ಮುಸ್ಲಿಂ ಬಾಲಕಿಯೊಬ್ಬಳು ಭಗವದ್ಗೀತೆ ವಾಚನ ಸ್ಪರ್ಧೆಯಲ್ಲಿ ಭಾಗವಹಿಸಿದ್ದು ಮಾತ್ರವಲ್ಲ ತನಗಿಂತ ಹಿರಿಯರನ್ನು ಹಿಂದಿಕ್ಕಿ ಸ್ಪರ್ಧೆಯನ್ನು ಗೆದ್ದುಕೊಂಡಿದ್ದಾಳೆ.
ಬುಧವಾರ ನಡೆದ ಸ್ಪರ್ಧೆಯಲ್ಲಿ 1ನೇ ತರಗತಿ ವಿದ್ಯಾರ್ಥಿನಿಯಾದ ಫಿರ್ಧೂಸ್ ಭಾಗವಹಿಸಿ ಉಳಿದ ಎಲ್ಲಾ ಸ್ಪರ್ಧಾರ್ಥಿಗಳಿಗಿಂತಲೂ ಅದ್ಭುತ ಎಂಬ ರೀತಿಯಲ್ಲಿ ಹಿಂದೂ ಧರ್ಮಗ್ರಂಥವನ್ನು ವಾಚನ ಮಾಡಿದ್ದಾಳೆ. ತನ್ನ ವಯಸ್ಸಿನ ಇತರ ಮಕ್ಕಳು ಅಕ್ಷರಾಭ್ಯಾಸದಲ್ಲಿ ತೊಡಗಿದ್ದರೆ ಈಕೆ ಮಾತ್ರ ಭಗವದ್ಗೀತೆಯ ಸಾಲುಗಳನ್ನು ಒಂಚೂರು ತಪ್ಪದಂತೆ ನಿರರ್ಗಳವಾಗಿ ವಾಚಿಸಿ 100ರಲ್ಲಿ 90 ಅಂಕ ಗಳಿಸಿ ಎಲ್ಲರನ್ನು ಆಶ್ಚರ್ಯಚಕಿತಗೊಳಿಸಿದ್ದಾಳೆ.
‘ಅಸ್ಸಾಂನಲ್ಲಿ ಮುಸ್ಲಿಂ ಗಾಯಕಿ ಹಾಡು ಹಾಡಿದಕ್ಕೆ ಆಕೆಯ ವಿರುದ್ಧ ಫತ್ವಾ ಹೊರಡಿಸಲಾಗಿತ್ತು. ಆದರೆ ಇಲ್ಲಿ ಮುಸ್ಲಿಂ ಬಾಲಕಿ ಭಗವದ್ಗೀತೆಯನ್ನು ವಾಚಿಸಿ ಕೋಮು ಸೌಹಾರ್ದತೆಗೆ ಹೊಸ ಉದಾಹರಣೆ ನೀಡಿದ್ದಾಳೆ’ ಎಂದು ಸ್ಥಳಿಯರು ಹೆಮ್ಮೆಪಟ್ಟುಕೊಳ್ಳುತ್ತಿದ್ದಾರೆ.
‘ನನ್ನ ಶಿಕ್ಷಕರು ನನಗೆ ನೈತಿಕ ಶಿಕ್ಷಣ ನೀಡಿದ್ದಾರೆ. ಜೀವಿಸಿ ಮತ್ತು ಇತರರನ್ನು ಜೀವಿಸಲು ಬಿಡಿ ಎಂಬ ತತ್ವವನ್ನು ಅಳವಡಿಸಿಕೊಂಡಿದ್ದೇನೆ. ಸಮಸ್ತ ಜೀವಸಂಕುಲ ಈ ವಿಸ್ತೃತ ಜಾಗತಿಕ ಕುಟುಂಬದ ಸದಸ್ಯರು ಎಂಬುದನ್ನು ನನ್ನ ಗುರುಗಳು ನನಗೆ ಹೇಳಿಕೊಟ್ಟಿದ್ದಾರೆ’ ಎಂದು ಫರ್ದೂಸ್ ಹೇಳುತ್ತಾಳೆ.
ಆಕೆಯ ಪೋಷಕರೂ ತಮ್ಮ ಮಗಳ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದು, ಅವಳ ಸಾಧನೆಗೆ ಶಿಕ್ಷಕರೆ ಕಾರಣ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.