ಹುಬ್ಬಳ್ಳಿ: ಕನ್ನಡದಲ್ಲಿ ಶಾಯರಿ ಬರೆಯುವ ಮೂಲಕ ಸಾರಸ್ವತ ಲೋಕದಲ್ಲಿ ವಿಭಿನ್ನವಾಗಿ ಗುರುತಿಸಿಕೊಂಡಿದ್ದ ಪ್ರೊ.ಇಟಗಿ ಈರಣ್ಣ ಶಿವಮೊಗ್ಗದ ತಮ್ಮ ನಿವಾಸದಲ್ಲಿ ಭಾನುವಾರ ವಿಧಿವಶರಾಗಿದ್ದಾರೆ.
ಬಳ್ಳಾರಿ ಜಿಲ್ಲೆಯ ವಿವಿಧ ವಿದ್ಯಾಲಯಗಳಲ್ಲಿ ಕನ್ನಡ ಉಪನ್ಯಾಸಕರಾಗಿ ಅವರು ಸೇವೆ ಸಲ್ಲಿಸಿದ್ದರು. ಬಳ್ಳಾರಿ ಜಿಲ್ಲೆಯ ಹಿರೇಹಡಗಲಿ ಇವರ ಮೂಲ ಊರು. ಕನ್ನಡದಲ್ಲಿ ಯಾರೂ ಶಾಯರಿ ಬರೆಯುವ ಗೋಜಿಗೆ ಹೋಗಿಲ್ಲ, ಆ ಕೆಲಸವನ್ನು ನಾನು ಮಾಡಬೇಕು ಎನ್ನುತ್ತಿದ್ದ ಅವರು, ಮಾತೃಭಾಷೆಯ ಉಳಿವೂ ಅವರ ಮೂಲ ಧ್ಯೇಯವಾಗಿತ್ತು.
ಕನ್ನಡ ಶಾಯರಿಗಳು ಎಂಬ ಪುಸ್ತಕವನ್ನೂ ಅವರು ಪ್ರಕಟಿಸಿದ್ದು, 12ಕ್ಕೂ ಹೆಚ್ಚು ಮುದ್ರಣ ಕಂಡಿದೆ. ಕನ್ನಡದ ಹಿರಿತೆರೆಯಲ್ಲೂ ಅವರ ಶಾಯರಿ ಮಿಂಚಿದ್ದು, ಸುದೀಪ್ ಅಭಿನಯದ ಸ್ಪರ್ಷ ಚಿತ್ರದ ‘ಚಂದಕಿಂತ ಚಂದ ನೀನೇ ಸುಂದರ’ ಎಂಬ ಜನ ಮೆಚ್ಚಿದ ಗೀತೆ ರಚಿಸಿದ್ದು ಇಟಗಿ ಈರಣ್ಣನವರು.
ಕಬೀರರ ದೋಹೆಗಳಾದಿಯಾಗಿ ಅನ್ಯ ಭಾಷೆಯ ಅನೇಕ, ಸಾಹಿತ್ಯಿಕ, ಕಾವ್ಯ, ನಾಟಕಗಳನ್ನು ಕನ್ನಡಕ್ಕೆ ತರ್ಜುಮೆ ಮಾಡಿದ ಹಿರಿಮೆ ಇವರದು. ಉಸಿರು ನಿಲ್ಲುವ ಮುನ್ನ ಹೆಸರು ಗಳಿಸಬೇಕು ಎಂದು ಸದಾ ಹೇಳುತ್ತಿದ್ದ ಈರಣ್ಣನವರು, ಶಾಯರಿಗಳ ಮೂಲಕ ತಮ್ಮ ಮಾತಿಗೆ ಅನ್ವರ್ಥವಾಗಿ ಬದುಕಿದವರು.
ಕಳೆದ 4 ದಿನಗಳ ಹಿಂದೆ ಅವರಿಗೆ ಮಾತೃವಿಯೋಗವಾಗಿತ್ತು. 66 ವರ್ಷದ ಪ್ರೊ.ಇಟಗಿ ಈರಣ್ಣ ವಿಧಿವಶವಾಗಿದ್ದರೂ, ಅವರ ಶಾಯರಿಗಳು ಮಾತ್ರ ಕನ್ನಡ ಸಾರಸ್ವತ ಲೋಕದಲ್ಲಿ ಅಜರಾಮರ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.