ಧಾರವಾಡ : ವಿಜಯಪುರದ ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಶ್ರೀಗಳು ನಾಡಿನೆಲ್ಲಡೆ ಪ್ರವಚನದ ಮೂಲಕ ಧಾರ್ಮಿಕ ಕ್ರಾಂತಿ ಮಾಡುತ್ತಿದ್ದು, ಜನರ ಆಧ್ಯಾತ್ಮಿಕ ಹಸಿವನ್ನು ತಣಿಸುತ್ತಿದ್ದಾರೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಶ್ಲಾಘಿಸಿದರು.
ಅವರು ಕರ್ನಾಟಕ ಕಾಲೇಜ್ ಆವರಣದಲ್ಲಿ ಗುರುವಾರ ಪರಮಪೂಜ್ಯ ಸಿದ್ದೇಶ್ವರ ಶ್ರೀಗಳ ಪ್ರವಚನದ ನಿಮಿತ್ತ ಹಮ್ಮಿಕೊಂಡಿದ್ದ ಅಹಿಂಸಾ ಜೀವನ ದರ್ಶನ ಕುರಿತ ಚಿಂತನ-ಮಂಥನದಲ್ಲಿ ಮಾತನಾಡಿದರು.
ಮನುಷ್ಯ ಇಂದು ಅನೇಕ ಸಮಸ್ಯೆಗಳ ಪರಿಹಾರಕ್ಕಾಗಿ ನವವಿಧದಿಂದ ಪೂಜೆ, ಪ್ರಾರ್ಥನೆ, ಭಕ್ತಿ, ಆರಾಧನೆ ಹಾಗೂ ಹರಕೆ ಮೂಲಕ ದೇವರನ್ನು ಪ್ರಾರ್ಥಿಸುತ್ತಾನೆ. ದಿಢೀರ್ ಭಕ್ತಿ, ಕ್ಷಣಿಕ ಭಕ್ತಿ, ಜಿಜ್ಞಾಸೆ ತಣಿಸುವ ಭಕ್ತಿಗಿಂತ ಶಾಶ್ವತ ಭಕ್ತಿ ಮುಖ್ಯವಾಗಿದೆ. ಅಂತಹ ಶುದ್ಧ ಜ್ಞಾನಧಾರೆಯನ್ನು ಲಕ್ಷಾಂತರ ಜನರಿಗೆ ಹಂಚುವ ಸಿದ್ದೇಶ್ವರ ಶ್ರೀಗಳ ಕಾರ್ಯ ಶ್ಲಾಘನೀಯ ಎಂದರು.
ವರೂರಿನ ಗುಣಧರ ನಂದಿ ಮಹಾರಾಜರು ಅಹಿಂಸೆ ಜೀವನ ದರ್ಶನ ಕುರಿತು ಉಪನ್ಯಾಸ ನೀಡಿ, ಸಿದ್ದೇಶ್ವರ ಶ್ರೀಗಳು ಗುರುಪುಷ್ಯ ಯೋಗವಿದ್ದಂತೆ, ಎಲ್ಲರಿಗೂ ಅಮೃತವನ್ನು ಉಣಬಡಿಸುತ್ತಿದ್ದಾರೆ. ಇದಕ್ಕೆ ಹರಿದು ಬರುತ್ತಿರುವ ಜನ ಸಾಗರವೇ ಸಾಕ್ಷಿ ಎಂದು ಬಣ್ಣಿಸಿದರು.
ಹಿಂಸೆಗಳಲ್ಲಿ ನಾಲ್ಕು ವಿಧಗಳಿದ್ದು, ಆರಂಭಿ ಹಿಂಸೆ, ಉದ್ಯೋಗ ಹಿಂಸೆ, ಸಾರ್ವಜನಿಕ ಅಥವಾ ವಿರೋಧಿ ಹಿಂಸೆ ಹಾಗೂ ಸಂಕಲ್ಪ ಹಿಂಸೆ. ಪಾರಿವಾರಿಕ ಹಿಂಸೆ ಅಂದರೆ ಮನೆಯಲ್ಲಿರುವ ಒಬ್ಬರೊಬ್ಬರಲ್ಲಿಯೂ ಸಾಮ್ಯತೆ ಇರದಿರುವುದು. ಸ್ವರ್ಗ ಸಿಗಲಿ ಎಂದು ಬೇಡುವುದಕ್ಕಿಂತ ಬದುಕನ್ನೇ ಸ್ವರ್ಗವನ್ನಾಗಿ ಮಾಡಿಕೊಳ್ಳಿ. ಮನೆಯಲ್ಲಿ ನಾನು-ನೀನು ಎಂದರೆ ಅಶಾಂತಿ, ನರಕ. ಮುಂದಿನ ಅಪೇಕ್ಷ ಮಾಡಬೇಡಿ. ಭವಿಷ್ಯದಲ್ಲಿ ಬದುಕಬೇಡಿ ಎಂದರು.
ಆತ್ಮಾನಂದ ಶ್ರೀ, ಶ್ರದ್ಧಾನಂದ ಶ್ರೀ, ತಪೋವನದ ಶ್ರೀ, ಸಾಹಿತಿ ಗುರುಲಿಂಗ ಕಾಪಸೆ, ಸೇರಿದಂತೆ ನಾಡಿನ ವಿವಿಧ ಮಠಾಧೀಶರು, ಸಹಸ್ರಾರು ಜನರು ಉಪಸ್ಥಿತರಿದ್ದರು.
ಮೃತ್ಯುಂಜಯ ಅಗಡಿ ಪ್ರಾರ್ಥಿಸಿದರು. ಗಣಿ ಮತ್ತು ಭೂ ವಿಜ್ಞಾನ ಸಚಿವ ವಿನಯ ಕುಲಕರ್ಣಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಸಕ ಅರವಿಂದ ಬೆಲ್ಲದ ವಂದಿಸಿದರು.
ಸರಳತೆ ಮೆರೆದ ಶ್ರೀಗಳು
ಸಿದ್ದೇಶ್ವರ ಶ್ರೀಗಳು ವೇದಿಕೆ ಹತ್ತದೆ ಮುಂಭಾಗದಲ್ಲಿ ಕೆಳಗಡೆಯೇ ಕುರ್ಚಿಯೊಂದರ ಮೇಲೆ ಕುಳಿತು ಸರಳತೆ ಮೆರೆದರು. ಡಾ. ಡಿ. ವೀರೇಂದ್ರ ಹೆಗ್ಗಡೆಯವರು, ನಾವು ಇಂದು ಸಿದ್ದೇಶ್ವರ ಶ್ರೀಗಳ ಪ್ರವಚನ ಆಲಿಸುವುದಕ್ಕಾಗಿ ಬಂದಿದ್ದೆವು. ಆದರೆ ಅವರು ಇಂದು ವೇದಿಕೆ ಹತ್ತದಿರುವುದರಿಂದ ಪ್ರವಚನ ಕೇಳುವ ಭಾಗ್ಯ ತಪ್ಪಿತ್ತಲ್ಲ ಎಂದು ಸಿದ್ದೇಶ್ವರ ಶ್ರೀಗಳೊಂದಿಗೆ ತಮ್ಮ ಅಭಿಪ್ರಾಯ ಹಂಚಿಕೊಂಡರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.