ಹುಬ್ಬಳ್ಳಿ: ಬಹುವಿವಾದಿತ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ (ಜೆಎನ್ಯು)ದ ಕುಲಪತಿ ಪ್ರೊ.ಎಂ.ಜಗದೇಶ ಅವರು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಘಟಿಕೋತ್ಸವಕ್ಕೆ ಬರಲಿದ್ದರು ಎಂಬುದು ಇದೀಗ ವಿವಿಧೆಡೆ ಚರ್ಚೆಗೆ ಗ್ರಾಸವಾಗಿದೆ.
ಇದೇ ಮಾ.4 ರಂದು ಕರ್ನಾಟಕ ವಿಶ್ವವಿದ್ಯಾಲಯದ 67ನೇ ಘಟಿಕೋತ್ಸವ ಎಂದು ಕುಲಪತಿ ಪ್ರೊ.ಪ್ರಮೋದ ಗಾಯಿ ಪತ್ರಿಕಾಗೋಷ್ಠಿ ಮೂಲಕ ಹೇಳಿದ್ದರು. ಘಟಿಕೋತ್ಸವದ ಆಮಂತ್ರಣ ಪತ್ರಿಕೆಗಳೂ ಮುದ್ರಣವಾಗಿ, ವಿಶೇಷ ಆಮಂತ್ರಿತರಿಗೆ ಅವು ತಲುಪಿಯೂ ಆಗಿದೆ. ಆದರೆ ಘಟಿಕೋತ್ಸವವನ್ನು ಇದೀಗ ಮುಂದೂಡಲಾಗಿದೆ.
ಕಾರಣಾಂತರದಿಂದ ಘಟಿಕೋತ್ಸವವನ್ನು ಮುಂದೂಡಲಾಗಿದೆ ಎಂದಿರುವ ಕುಲಪತಿ ಗಾಯಿ ಅವರು, ನಿರ್ದಿಷ್ಟ ಕಾರಣ ನೀಡಲು ಹಿಂದೇಟು ಹಾಕಿದ್ದಾರೆ. ಆದರೆ ಜೆಎನ್ಯು ಕುಲಪತಿಗಳಿಗೆ ಘಟಿಕೋತ್ಸವಕ್ಕೆ ಆಹ್ವಾನ ನೀಡಿರುವುದೇ ಕಾರಣ ಎಂಬ ಮಾತುಗಳು ಮಾತ್ರ ಬಲವಾಗಿ ಕೇಳಿ ಬರುತ್ತಿವೆ.
ಜೆಎನ್ಯು ಕುಲಪತಿಗಳ ಆಹ್ವಾನಕ್ಕೆ ಕೆಲ ವಿದ್ಯಾರ್ಥಿ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದ್ದು, ಭದ್ರತೆ ಹಾಗೂ ವಿವಾದದಿಂದ ದೂರವಿರಲು ಬಯಸಿ ಈ ನಿರ್ಣಯ ತೆಗೆದುಕೊಳ್ಳಲಾಗಿದೆ ಎನ್ನಲಾಗಿದೆ.
ಕಳೆದ ವರ್ಷ ನವದೆಹಲಿ ಜೆಎನ್ಯು ವಿಶ್ವವಿದ್ಯಾಲಯದಲ್ಲಿ ಉಗ್ರ ಅಫ್ಜಲ್ ಗುರುವಿನ ಸ್ಮರಣೆ ಹಮ್ಮಿಕೊಳ್ಳಲಾಗಿತ್ತು. ಆಗ ದೇಶ ವಿರೋಧಿ ಘೋಷಣೆಗಳು ಕೇಕೆ ಹಾಕಿದ್ದವು. ಕನ್ಹಯ್ಯ ಕುಮಾರ್ ಹಾಗೂ ರಶೀದ್ ದಿಢೀರ್ ಹೀರೋ ಆಗಿದ್ದರು.
ಕಳೆದ ವಾರ ದೆಹಲಿಯ ರಾಮ್ಜಾಸ್ ಕಾಲೇಜಿನಲ್ಲಿ ರಶೀದ್ಗೆ ಭಾಷಣಕ್ಕೆ ಆಹ್ವಾನ ನೀಡಿದ್ದ ಪರಿಣಾಮ ವಿದ್ಯಾರ್ಥಿಗಳೊಂದಿಗಿನ ಸಂಘರ್ಷ ತಾರಕಕ್ಕೇರಿತ್ತು. ಹಲವು ರಾಜಕೀಯ ಬಣ್ಣವನ್ನೂ ಬಳಿದುಕೊಂಡಿದ್ದ ವಿವಾದ, ಅಭಿವ್ಯಕ್ತಿ ಸ್ವಾತಂತ್ರ್ಯ, ದೇಶದ್ರೋಹದ ಕುರಿತು ಹೆಚ್ಚು ಚರ್ಚಿಸುವಂತೆ ಮಾಡಿದೆ.
ದೇಶ ವಿರೋಧಿ ಚಟುವಟಿಕೆಗಳಿಗೆ ತನ್ನ ಅಂಗಳದಲ್ಲಿ ಆದ್ಯತೆ ನೀಡುತ್ತಿರುವ ವಿವಾದಿತ ವಿಶ್ವವಿದ್ಯಾಲಯದ ಕುಲಪತಿಗಳು ವಿದ್ಯಾಕಾಶಿ ಧಾರವಾಡದ ಪ್ರತಿಷ್ಠಿತ ವಿಶ್ವವಿದ್ಯಾಲಯದ ಘಟಿಕೋತ್ಸವಕ್ಕೆ ಅನಿವಾರ್ಯರೆ ? ಗೊತ್ತಿಲ್ಲ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.