ಸುಳ್ಯ : ಭಾರತರತ್ನ ಪ್ರೊ. ಸಿ.ಎನ್.ಆರ್. ರಾವ್ ಮತ್ತು ಅವರ ಪತ್ನಿ ಡಾ. ಇಂದುಮತಿ ರಾವ್ ಅವರು ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆಗೆ ಇತ್ತೀಚೆಗೆ ಭೇಟಿ ನೀಡಿದ್ದರು. ಈ ಭೇಟಿಯಿಂದ ತಮಗೆ ತುಂಬಾ ಸಂತೋಷವಾಗಿದೆ ಎಂದು ತಿಳಿಸಿದ್ದಲ್ಲದೆ ಕನ್ನಡ ಮಾಧ್ಯಮದಲ್ಲಿ ಅನುದಾನರಹಿತವಾಗಿಯೂ ಲಾಭರಹಿತವಾಗಿಯೂ ಶಾಲೆಯನ್ನು ನಡೆಸುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಮುಂದಿನ ವರ್ಷದಿಂದ ಈ ಶಾಲೆಯಲ್ಲಿ ಕಲಿಯುವ ಕನ್ನಡ ಮಾಧ್ಯಮದ ಇಬ್ಬರು ಬಡ ವಿದ್ಯಾರ್ಥಿಗಳ ಏಳು ವರ್ಷಗಳ ಶುಲ್ಕವನ್ನು ತಾನು ಭರಿಸುವುದರ ಮೂಲಕ ಕನ್ನಡ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಲು ಪ್ರೊ. ರಾವ್ ಮುಂದೆ ಬಂದಿದ್ದಾರೆ. ಅವರ ಈ ಮಾದರಿಯು ಆಸಕ್ತ ದಾನಿಗಳಿಗೆ ಪ್ರೇರಣೆಯಾದರೆ ಸ್ನೇಹ ಶಾಲೆಯಲ್ಲಿ ಶಿಕ್ಷಣವನ್ನು ಪೂರ್ಣ ಉಚಿತವಾಗಿ ನೀಡಲು ಸಾಧ್ಯ ಎಂಬುದಾಗಿ ಸಂಸ್ಥೆಯ ಅಧ್ಯಕ್ಷ ಡಾ. ಚಂದ್ರಶೇಖರ ದಾಮ್ಲೆ ಹೇಳಿದ್ದಾರೆ.
ದಾನ ಶುಲ್ಕದ ಯೋಜನೆ ಏನೆಂದರೆ ದಾನಿಗಳು ಒಬ್ಬ ವಿದ್ಯಾರ್ಥಿಯ ವಾರ್ಷಿಕ ಶುಲ್ಕ ರೂ. 10,000/- ವನ್ನು ಪ್ರತಿ ವರ್ಷವೂ ಎಪ್ರಿಲ್ ತಿಂಗಳಲ್ಲಿ ಏಳು ವರ್ಷಗಳ ಅವಧಿಯಲ್ಲಿ ನೀಡಬೇಕು. ಅಂದರೆ ದಾನಿಗಳ ಸಹಾಯದಿಂದ ಒಬ್ಬ ವಿದ್ಯಾರ್ಥಿ ಒಂದನೇಯಿಂದ ಏಳನೇಯ ತನಕ ಕನ್ನಡ ಮಾಧ್ಯಮದಲ್ಲಿ ಉತ್ತಮವಾದ ಉಚಿತ ಶಿಕ್ಷಣ ಪಡೆಯುತ್ತಾರೆ. ವಿದ್ಯಾರ್ಥಿಯ ಎಲ್ಲ ವಿವರಗಳನ್ನು ಹಾಗೂ ಶೈಕ್ಷಣಿಕ ಪ್ರಗತಿಯನ್ನು ವರ್ಷಕ್ಕೆರಡುಬಾರಿ ದಾನಿಗಳಿಗೆ ತಿಳಿಸುತ್ತೇವೆ. ಹೀಗೆ ಏಳು ವರ್ಷಗಳ ಕಾಲ ಉತ್ತಮವಾಗಿ ಕನ್ನಡ ಕಲಿತ ವಿದ್ಯಾರ್ಥಿಗಳು ತಮ್ಮ ಬದುಕಿನುದ್ದಕ್ಕೂ ಕನ್ನಡವನ್ನು ಉಳಿಸುತ್ತಾರೆ ಮತ್ತು ಬೆಳೆಸುತ್ತಾರೆ ಎಂಬ ಆಶಯ ಈ ಯೋಜನೆಯ ಹಿಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.