ಧಾರವಾಡ: ನಗದು ರಹಿತ ವ್ಯವಹಾರದ ಮೂಲಕ ಭ್ರಷ್ಟಾಚಾರ ನಿರ್ಮೂಲನೆ ಮಾಡಿ, ಆಡಳಿತದಲ್ಲಿ ಪಾರದರ್ಶಕತೆ ತರಲು ಸಾಧ್ಯವಿದೆ. ಡಿಜಿ ಧನ್ ಮೇಳಗಳ ಮೂಲಕ ದೇಶದ ಆಯ್ದ ನೂರು ನಗರಗಳಲ್ಲಿ ಕಾರ್ಯಕ್ರಮ ನಡೆಸಿ ಜನಜಾಗೃತಿ ಮೂಡಿಸಲಾಗುತ್ತಿದೆ ಎಂದು ಕೇಂದ್ರ ಕುಡಿಯುವ ನೀರು ಹಾಗೂ ನೈರ್ಮಲೀಕರಣ ರಾಜ್ಯ ಸಚಿವ ರಮೇಶ ಜಿಗಜಿಣಗಿ ಹೇಳಿದರು.
ಭಾರತ ಸರಕಾರದ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಮಂತ್ರಾಲಯ,ನೀತಿ ಆಯೋಗ,ಕರ್ನಾಟಕ ಸರಕಾರ ಹಾಗೂ ಜಿಲ್ಲಾಡಳಿತದ ಸಹಯೋಗದಲ್ಲಿ ಇಲ್ಲಿನ ಡಾ.ಮಲ್ಲಿಕಾರ್ಜುನ ಮನಸೂರ ಕಲಾಭವನದಲ್ಲಿ ಏರ್ಪಡಿಸಿದ್ದ ಡಿಜಿಧನ್ ಮೇಳ ಉದ್ಘಾಟಿಸಿ ಅವರು ಮಾತನಾಡಿದರು.
ಡಿಜಿಟಲ್ ಪಾವತಿ, ಉದ್ದೇಶಗಳನ್ನು ಜನರಿಗೆ ತಿಳಿಸಿ,ಅದರ ಅನುಷ್ಠಾನದ ಸರಳ ವಿಧಾನಗಳನ್ನು ತಿಳಿಸಿಕೊಡಲು ಡಿಜಿ ಧನ್ ಮೇಳಗಳು ಸಹಕಾರಿಯಾಗಿವೆ.ಈಗಾಗಲೇ ೬೦ ಕ್ಕೂ ಹೆಚ್ಚು ಮೇಳಗಳು ದೇಶದಾದ್ಯಂತ ನಡೆದಿವೆ. ಒಟ್ಟು ನೂರು ನಗರಗಳಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ.ಕಪ್ಪು ಹಣ,ಭ್ರಷ್ಟಾಚಾರ ನಿರ್ಮೂಲನೆಗೆ ಡಿಜಿಟಲ್ ವ್ಯವಹಾರ ಅವಶ್ಯಕವಾಗಿದೆ. ಭಾರತದಲ್ಲಿ ಸ್ವಾತಂತ್ರ್ಯ ಪೂರ್ವ ಕಾಲದಿಂದಲೂ ನಗದು ರಹಿತ ವ್ಯವಹಾರ ಬಳಕೆಯಲ್ಲಿತ್ತು. ಧಾನ್ಯ ವಿನಿಮಯ ಪದ್ಧತಿ ರೂಢಿಯಲ್ಲಿತ್ತು ಎಂಬುದನ್ನು ಸ್ಮರಿಸಿದ ಸಚಿವ ರಮೇಶ ಜಿಗಜಿಣಗಿ ಅವರು, ಈಗ ಪುನಃ ನಗದು ರಹಿತ ವ್ಯವಹಾರ ಪ್ರೋತ್ಸಾಹಿಸಲು ನೀತಿ ಆಯೋಗ ೧೫೦ ಕೋಟಿ ರೂ.ಗಳನ್ನು ಲಕ್ಕಿ ಗ್ರಾಹಕ ಯೋಜನೆಯಡಿ ಬಹುಮಾನ ವಿತರಿಸಲು ಮೀಸಲಿಟ್ಟಿದೆ. ಜನಧನ್ ಯೋಜನೆಯ ಮೂಲಕ ೨೫ ಕೋಟಿ ಬ್ಯಾಂಕ್ ಖಾತೆಗಳನ್ನು ತೆರೆಯಲು ಕೇಂದ್ರ ಸರಕಾರ ಪ್ರಯತ್ನಿಸುತ್ತಿದೆ. ಬ್ಯಾಂಕ್ ಅಧಿಕಾರಿಗಳು ಬಡ ರೈತರು, ಗ್ರಾಹಕರು ಬಂದಾಗ ಅವರನ್ನು ವಾಪಸು ಕಳುಹಿಸದೇ ಖಾತೆ ತೆರೆಯಲು ಪ್ರೋತ್ಸಾಹಿಸಿ ಎಂದು ಕಿವಿಮಾತು ಹೇಳಿದರು.
ಮಾಜಿ ಮುಖ್ಯಮಂತ್ರಿ, ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್ ಮಾತನಾಡಿ, ಡಿಜಿಧನ್ ಮೇಳದಲ್ಲಿ ನೇರ ವಸ್ತು ಪ್ರದರ್ಶನ ಮತ್ತು ಮಳಿಗೆಗಳ ಮೂಲಕ ಜನಸಾಮಾನ್ಯರಿಗೆ ತಿಳುವಳಿಕೆ ನೀಡುವ ವ್ಯವಸ್ಥೆ ಮಾಡಿರುವದು ಶ್ಲಾಘನೀಯ ಕಾರ್ಯವಾಗಿದೆ ಎಂದರು.
ಸಂಸದ ಪ್ರಹ್ಲಾದ ಜೋಷಿ ಮಾತನಾಡಿ, ದೇಶದ ಸಂಪತ್ತಿನ ಸಮಾನ ಹಂಚಿಕೆ ಆದರೆ,೨೧ ನೇ ಶತಮಾನ ಭಾರತದ ಶತಮಾನವಾಗಲಿದೆ. ಡಿಜಿಟಲ್ ವ್ಯವಹಾರವು ಜನಾಂದೋಲನವಾಗಿ ಪರಿವರ್ತನೆಯಾಗಬೇಕು.ಇದರಿಂದ ದೇಶದ ಅಮೂಲಾಗ್ರ ಬದಲಾವಣೆ, ಬಡತನ ನಿರ್ಮೂಲನೆ ಸಾಧ್ಯವಿದೆ.ಭಾರತ ವೇಗವಾಗಿ ಆರ್ಥಿಕಾಭಿವೃದ್ಧಿ ಹೊಂದುತ್ತಿರುವ ರಾಷ್ಟ್ರವಾಗಿ ಬೆಳೆಯುತ್ತಿದೆ ಎಂದರು.
ಶಾಸಕ ಅರವಿಂದ ಬೆಲ್ಲದ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿ.ಪಂ.ಅಧ್ಯಕ್ಷೆ ಚೈತ್ರಾ ಶಿರೂರ,ನೀತಿ ಆಯೋಗದ ನಿರ್ದೇಶಕ ಎನ್.ಕೆ.ಸಂತೋಷಿ, ಭಾರತ ಸರಕಾರ ಇಲೆಕ್ಟ್ರಾನಿಕ್ ಡಿಲೆವರಿ ಆಫ್ ಸಿಟಿಜನ್ ಸರ್ವಿಸಸ್ ನಿರ್ದೇಶಕ ಡಾ.ಸುನೀಲ ಪನ್ವರ್ ,ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕ ವಿಜಯಕುಮಾರ್ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಸ್ವಾಗತಿಸಿ,ಪ್ರಾಸ್ತಾವಿಕವಾಗಿ ಮಾತನಾಡಿದರು. ಅಪರ ಜಿಲ್ಲಾಧಿಕಾರಿ ಇಬ್ರಾಹಿಂ ಮೈಗೂರ ವಂದಿಸಿದರು.
ಡಿಜಿಧನ್ ಮೇಳದ ಭಿತ್ತಿ ಚಿತ್ರ ಸ್ಪರ್ಧೆಗಳ ವಿಜೇತರು
ಕಿರಿಯರ ವಿಭಾಗ: ಲೋಹಿತ್ ಪತ್ತಾರ ( ಪ್ರಥಮ),ಗುರುನಾಥ ಪತ್ತಾರ (ದ್ವಿತೀಯ),ಪ್ರಶಾಂತ ಇನಾಂದಾರ ( ತೃತೀಯ),ರಣವೀರಸಿಂಗ್ ರಜಪೂತ ಹಾಗೂ ಅಶ್ವಿನಿ ವಗ್ಗರ್ ( ಸಮಾಧಾನಕರ)
ಹಿರಿಯರ ವಿಭಾಗ: ಭರತ್ ಎಂ.ಎಲ್ ( ಪ್ರಥಮ),ವಿನಾಯಕ ಕಾಟೇನಹಳ್ಳಿ (ದಿತೀಯ),ಪ್ರವೀಣ ದೊಡ್ಡಮನಿ (ತೃತೀಯ),ವಿವೇಕ ಆರ್.ಎಂ.ಹಾಗೂ ಕಿರಣ ಜೋಳಿಹೊಳಿ ( ಸಮಾಧಾನಕರ ಬಹುಮಾನಗಳು)
ಹವ್ಯಾಸಿ ( ವೃತ್ತಿಪರ) ವಿಭಾಗ; ಮಹಾಂತೇಶ ಬಹುರೂಪಿ (ಪ್ರಥಮ),ಶೃತಿ ಕೊಕಾಟಿ (ದ್ವಿತೀಯ),ನೀತಿ ಮರ್ಜಿ ( ತೃತೀಯ),ವಿನಾಯಕ ನಾಯ್ಕ ಹಾಗೂ ಸಕ್ಕೂಬಾಯಿ ಬಹುರೂಪಿ ( ಸಮಾಧಾನಕರ ಬಹುಮಾನಗಳು)
ಘೋಷವಾಕ್ಯ ರಚನೆ ಸ್ಪರ್ಧೆಯ ವಿಜೇತರು;
ಸಾಕ್ಷಿ ಕದಮ್ ( ಪ್ರಥಮ), ಚೇತನ ಪಾಟೀಲ( ದ್ವಿತೀಯ) ಹಾಗೂ ಸ್ವಾತಿ ಬಡಿಗೇರ ( ತೃತೀಯ)
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.