ಹುಬ್ಬಳ್ಳಿ: ಎಲ್ಲ ಭಾಷೆಗಳ ಮೇಲೆ ಜಾಗತೀಕರಣ ಪ್ರಭಾವ ಹೆಚ್ಚಾಗಿದೆ ಅಲ್ಲದೇ ಇಂಗ್ಲಿಷ್ ಭಾಷೆಯತ್ತ ಆಕರ್ಷಣೆಯು ಸಹಜವಾಗುತ್ತಿದೆ ಎಂದು ನಿವೃತ್ತ ಕೆಎಎಸ್ ಅಧಿಕಾರಿ ವೆಂಕಟೇಶ ಮಾಚಕನೂರ ಅಭಿಪ್ರಾಯಪಟ್ಟರು.
ನಗರದ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ಮಾತೃಭಾಷಾ ದಿನಾಚರಣೆಯಲ್ಲಿ ಮಾತನಾಡಿದ ಅವರು, ಪ್ರತಿ ಭಾಷೆ ಹಾಗೂ ಸಾಹಿತ್ಯ ತನ್ನದೇ ಆದ ವೈಶಿಷ್ಟ್ಯತೆ ಹೊಂದಿರುತ್ತದೆ ಎಂದು ಹೇಳಿದರು.
ಮಾತೃಭಾಷೆಯ ಐತಿಹಾಸಿಕ ಮಹತ್ವ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅದರ ಪ್ರಸ್ತುತತೆ ಕುರಿತು ವಿವರಿಸಿದ ಅವರು, ಮಾತೃಭಾಷೆಯ ಸಾಹಿತ್ಯವನ್ನು ಓದುವ ರೂಢಿ ಇಟ್ಟುಕೊಳ್ಳಬೇಕು. ಮಾತೃಭಾಷೆಯನ್ನು ಪ್ರೀತಿಸಿ, ಅನ್ಯ ಭಾಷೆಯನ್ನೂ ಗೌರವಿಸಿ ಎಂದು ಕಿವಿಮಾತು ಹೇಳಿದರು.
ಕನ್ನಡದಲ್ಲಿ ಅಣಕು ನ್ಯಾಯಾಲಯ ಸ್ಪರ್ಧೆ, ಕನ್ನಡದಲ್ಲಿ ಪರೀಕ್ಷೆ ಬರೆದವರಿಗೆ, ಉತ್ತಮ ಅಂಕಗಳಿಸಿದವರಿಗೆ ಬಹುಮಾನ ನೀಡುವ ಮೂಲಕ ಕಾನೂನು ವಿಶ್ವವಿದ್ಯಾಲಯ ಮಾತೃಭಾಷೆಗೆ ಆದ್ಯತೆ ನೀಡುತ್ತಿದೆ ಎಂದು ಮೌಲ್ಯಮಾಪನ ಕುಲಸಚಿವ ಡಾ.ಜಿ.ಬಿ.ಪಾಟೀಲ್ ಹೇಳಿದರು.
ಭಾಷೆ ಎಂಬುದು ಸಂಸ್ಕೃತಿ. ನಮ್ಮ ಭಾಷೆ ನಿರ್ಲಕ್ಷಿಸಿದರೆ ನಮ್ಮ ಸಂಸ್ಕೃತಿಯನ್ನೇ ನಿರ್ಲಕ್ಷಿಸಿದಂತೆ. ಆದ್ದರಿಂದ ನಮ್ಮ ಸಮಾಜದ ಪ್ರಗತಿಗೆ ಭಾಷೆಯ ಉಳಿವು ಮುಖ್ಯ ಎಂದು ಕಾನೂನು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಸಿ.ಎಸ್.ಪಾಟೀಲ್ ಹೇಳಿದರು.
ಬೋಧಕ, ಬೋಧಕೇತರ ಹಾಗೂ ವಿದ್ಯಾರ್ಥಿ ವೃಂದದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.