ಹುಬ್ಬಳ್ಳಿ: ಕೈಗಾರಿಕಾ ವಾಣಿಜ್ಯೋದ್ಯಮ ಸಂಸ್ಥೆ ಹಾಗೂ ರಾಜ್ಯ ಸಾಂಬಾರು ಪದಾರ್ಥಗಳ ಅಭಿವೃದ್ಧಿ ಮಂಡಳಿ ಜಂಟಿಯಾಗಿ ನಗರದ ಎಪಿಎಂಸಿ ಆವರಣದಲ್ಲಿ ಆಯೋಜಿಸಿರುವ ಮೆಣಸಿನಕಾಯಿ ಮೇಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ವಿನಯ್ ಕುಲಕರ್ಣಿ ಚಾಲನೆ ನೀಡಿದರು.
ವಿವಿಧ ಬಗೆಯ ಮೆಣಸಿನಕಾಯಿಗಳು ನೋಡುಗರ ಗಮನ ಸೆಳೆಯುತ್ತಿದ್ದು, ಬ್ಯಾಡಗಿ ಮೆಣಸಿನಕಾಯಿ ಸೇರಿದಂತೆ 10 ಕ್ಕೂ ಹೆಚ್ಚು ಬಗೆಯ ಮೆಣಸಿನಕಾಯಿಗಳು ಇಲ್ಲಿ ಖರೀದಿಗೆ ಲಭ್ಯವಿವೆ.
ಸ್ಥಳೀಯ ತಳಿಗಳಾದ ಜಾಮನೂರ್ ಕಡ್ಡಿ, ಜಾಮನೂರ್ ಡಬ್ಬ, ಬ್ಯಾಡಗಿ ಡಬ್ಬ, ಅಣ್ಣಿಗೇರಿ ಡಿಲಕ್ಸ್ ತಳಿಯ ಮೆಣಸಿನಕಾಯಿಗೆ ಮೇಳದಲ್ಲಿ ಭಾರೀ ಬೇಡಿಕೆ ಕಂಡು ಬಂದಿದೆ. ಕೆಜಿಗೆ 170 ರಿಂದ 200 ರೂಪಾಯಿ ವರೆಗೂ ಮೆಣಸಿನಕಾಯಿ ಮಾರಾಟವಾಗುತ್ತಿವೆ.
ದಲ್ಲಾಳಿಗಳ ಹಾವಳಿ ತಪ್ಪಿಸಿ, ರೈತರಿಗೆ ನೆರವಾಗುವ ದೃಷ್ಟಿಯಿಂದ ಹಮ್ಮಿಕೊಂಡಿರುವ ಈ ಮೇಳವು ಇಂದಿನಿಂದ ಮೂರು ದಿನ ನಡೆಯಲಿದೆ. 120ಕ್ಕೂ ಹೆಚ್ಚು ಮಳಿಗೆಗಳನ್ನು ತೆರೆಯಲಾಗಿದೆ.
ಕಳೆದ ವರ್ಷ ಅಂದಾಜು 39 ಮೆಟ್ರಿಕ್ ಟನ್ ಮಾರಾಟವಾಗಿದ್ದು, 2 ಕೋಟಿಯಷ್ಟು ವಹಿವಾಟು ನಡೆದಿತ್ತು. ಈ ಬಾರಿಯೂ ಮೇಳ ಯಶಸ್ವಿಯಾಗುವ ಭರವಸೆ ಇದೆ ಎನ್ನುತ್ತಾರೆ ಆಯೋಜಕರು.
ಮೆಣಸಿನಕಾಯಿಯ ವೈವಿಧ್ಯಮಯ ತಳಿಗಳು ವಿವಿಧ ದರಗಳಿಗೆ ಲಭ್ಯವಿದ್ದು, ಗ್ರಾಹಕರು ಇದರ ಲಾಭ ಪಡೆಯಬಹುದು.
ಸಂಸದ ಪ್ರಲ್ಹಾದ ಜೋಶಿ, ಕಾಂಗ್ರೆಸ್ ಮುಖಂಡ ಸದಾನಂದ ಡಂಗನವರ, ವಾಣಿಜ್ಯೋದ್ಯಮ ಸಂಸ್ಥೆಯ ವಸಂತ ಲದವಾ ಹಾಗೂ ಇತರರು ಇದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.