ಬೆಂಗಳೂರು: ಶಿವಶರಣರ ವಚನಗಳು; ಹರಿದಾಸರ ಪದಗಳು; ಹಿಂದಿ ಸಂತರ ದೋಹಾಗಳು ಹಾಗೆಯೇ ಮಹಾರಾಷ್ಟ್ರ ಸಂತರು ‘ಅಭಂಗ್’ಗಳ ರೂಪದಲ್ಲಿ ಭಕ್ತಿಯ ಭಾವಧಾರೆಯನ್ನು ಹರಿಸಿದ್ದಾರೆ. ವಿಶೇಷವೆಂದರೆ, ಅಂತಾರಾಷ್ಟ್ರೀಯ ಖ್ಯಾತಿಯ ಕಥಕ್ ಜೋಡಿ ನಿರುಪಮಾ ರಾಜೇಂದ್ರ ಅವರು ಈ ‘ಅಭಂಗ್’ ಎಂಬ ಭಕ್ತಿಯ ಕಾವ್ಯಧಾರೆಯನ್ನು ನೃತ್ಯಧಾರೆಯಾಗಿ ಹರಿಸಲಿದ್ದಾರೆ.
ಜನವರಿ 27 ರ ಶುಕ್ರವಾರ ಬೆಂಗಳೂರಿನಲ್ಲಿ ನಡೆಯಲಿರುವ 33 ನೇ ಕಿಂಕಿಣಿ ನೃತ್ಯೋತ್ಸವದಲ್ಲಿ ನಿರುಪಮಾ ರಾಜೇಂದ್ರರ ವಿಶೇಷ ‘ಯುಗಳ’ ಭಕ್ತಿಯ ನೃತ್ಯಧಾರೆಯಾಗಿ ಹರಿಯಲಿದೆ. ಮಹಾರಾಷ್ಟ್ರ ಸಂತರು, ಭಕ್ತಿಯ ಪರಾಕಾಷ್ಟೆಯಲ್ಲಿ ಸೃಷ್ಟಿಸಿದ ಅಭಂಗ್ಗಳನ್ನು ನಿರುಪಮಾ ರಾಜೇಂದ್ರ ನೃತ್ಯರೂಪಕ್ಕಿಳಿಸಲಿದ್ದಾರೆ.
ನಿರುಪಮಾ ರಾಜೇಂದ್ರ ಪ್ರಸ್ತುತಪಡಿಸುವ ‘ತಾಲ್’ ಶುದ್ಧ ನೃತ್ಯದಲ್ಲಿ ಭಾರತದ ಸಂಸ್ಕೃತಿ, ಶ್ರದ್ದೆ ಮತ್ತು ಮೌಲ್ಯಗಳು ಅನಾವರಣಗೊಳ್ಳಲಿವೆ.
ರಾಮ ಮತ್ತು ಸೀತೆ ಲಂಕೆಯಿಂದ ಪುಷ್ಪಕ ವಿಮಾನದಲ್ಲಿ ಅಯೋಧ್ಯೆಗೆ ಮರಳುತ್ತಿರುತ್ತಾರೆ. ಇಂಥ ಸನ್ನಿವೇಶದಲ್ಲಿ ಅವರು ರಾಮಾಯಣದ ಒಂದೊಂದೇ ಘಟನಾವಳಿಯನ್ನು ನೆನಪಿಸಿಕೊಳ್ಳುತ್ತಾ ಸಾಗುವ ಸನ್ನಿವೇಶಗಳನ್ನು ನೃತ್ಯರೂಪದಲ್ಲಿ ನಿರುಪಮಾ ರಾಜೇಂದ್ರ ರಂಗದ ಮೇಲೆ ತೆರೆದಿಡಲಿದ್ದಾರೆ.
ನಿರುಪಮಾ ರಾಜೇಂದ್ರ ಅವರ ಕಥಕ್ ಯುಗಳ ಬಂದಿಯ ಮತ್ತೊಂದು ವಿಶೇಷವೆಂದರೆ; ಖ್ಯಾತ ಗಾಯಕ ಫಯಾಜ್ಖಾನ್ ಅವರ ಕಂಠ ಮಾಧುರ್ಯದಲ್ಲಿ ಮೂಡಿಬರಲಿರುವ ತಿಲ್ಲಾನ ಮಾದರಿಯ ತರಾನಾ ನೃತ್ಯ.
ನಿರುಪಮಾ ರಾಜೇಂದ್ರ ಅವರ ಕಥಕ್ಗೆ ಪ್ರವೀಣ್ ಡಿ ರಾವ್ ಸಂಗೀತ ಸಾಥ್ ನೀಡಲಿದ್ದು, ತಬಲಾ- ತ್ರಿಲೋಚನ್ ಕಂಪ್ಲಿ, ಗುರುಮೂರ್ತಿ ವೈದ್ಯ; ಸಿತಾರ್- ಶ್ರುತಿ ಕಾಮತ್; ಸಾರಂಗಿ- ಸರ್ಫ್ರೋಜ್ ಖಾನ್; ಕೊಳಲು- ಶಿವಲಿಂಗ
ನಿರುಪಮಾ ರಾಜೇಂದ್ರ ಕುರಿತು:
25 ವರ್ಷಗಳಿಂದ ಕಥಕ್ ಲೋಕದ ಧ್ರುವತಾರೆಗಳಂತೆ ಮಿನುಗುತ್ತಿರುವ ನಿರುಪಮಾ-ರಾಜೇಂದ್ರ ನೃತ್ಯ ಜಗತ್ತಿಗೆ ತಮ್ಮನ್ನು ತಾವು ಅರ್ಪಿಸಿಕೊಂಡವರು. ನೃತ್ಯ ಗುರುಗಳಾಗಿ, ನೃತ್ಯ ನಿರ್ದೇಶಕರಾಗಿ, ನಿರ್ಮಾಪಕರಾಗಿ ಹಲವು ಮುಖಗಳಲ್ಲಿ ತಮ್ಮ ಪ್ರತಿಭೆಯನ್ನು ಅನಾವರಣ ಗೊಳಿಸಿಕೊಂಡವರು.
ಕಥಕ್ ಶೈಲಿಯಲ್ಲಿ ವಿಶ್ವದಾದ್ಯಂತ ತಮ್ಮ ಛಾಪು ಮೂಡಿಸಿರುವ ನಿರುಪಮಾ ರಾಜೇಂದ್ರ, ಈ ಮೂಲಕ ಭಾರತೀಯ ನೃತ್ಯ ಪರಂಪರೆಯನ್ನು ಮುಂದುವರಿಸುತ್ತಿದ್ದಾರೆ. ಭಾರತ ಸೇರಿದಂತೆ ಐದು ಖಂಡಗಳ ಹಲವು ರಾಷ್ಟ್ರಗಳಲ್ಲಿ 50 ಲಕ್ಷಕ್ಕೂ ಮಿಕ್ಕಿ ತಮ್ಮ ಅಭಿಮಾನಿ ಬಳಗವನ್ನು ಹೊಂದಿರುವ ಈ ಖ್ಯಾತ ಕಥಕ್ ಜೋಡಿ ನಿಜಕ್ಕೂ ಕರ್ನಾಟಕದ ಹೆಮ್ಮೆ.
150 ಕ್ಕೂ ಹೆಚ್ಚು ನೃತ್ಯರೂಪಕಗಳನ್ನು ರಂಗಕ್ಕೆ ಪರಿಚಯಿಸಿರುವ ನಿರುಪಮಾ ರಾಜೇಂದ್ರ ಪ್ರತಿಷ್ಠಿತ ‘ನೃತ್ಯ ಚೂಡಾಮಣಿ’ ಪ್ರಶಸ್ತಿ ಸೇರಿದಂತೆ ನೂರಾರು ಪ್ರಶಸ್ತಿ, ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ. ಸಂಪರ್ಕಿಸಿ: 7829193195
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.