ಮಂಗಳೂರು: ಅವನಿಗೆ ಬಾಲ್ಯದಿಂದಲೂ ರಾಷ್ಟ್ರಸೇವೆಯ ಕನಸು. ಅದಕ್ಕಾಗಿ ಸದಾ ತುಡಿಯುತ್ತಿತ್ತು ಆತನ ಮನಸ್ಸು. ಇದೀಗ ಅದರ ಮೊದಲ ಮೆಟ್ಟಿಲು ಮುಟ್ಟಿದ ಹೆಮ್ಮೆ ಆತನದು. ಅವನೇ ಶ್ರವಣ್ ಕುಮಾರ್ ಬಿ.ಎಸ್.
ಮೂಲತಃ ಕಾಸರಗೋಡಿನ ಬೈಲಂಪಾಡಿ ಅವರ ಊರು. ಮಂಗಳೂರು ವಿಶ್ವವಿದ್ಯಾಲಯದ ಕಾಲೇಜಿನಲ್ಲಿ ಬಿ.ಎಸ್ಸಿ ಓದುತ್ತಿರುವ ಹಾಗೂ ಎನ್ಸಿಸಿ ಕೆಡೆಟ್ ಶ್ರವಣ್, ರಾಜಧಾನಿ ನವದೆಹಲಿಯಲ್ಲಿ ಜ.26 ರಂದು ನಡೆಯುವ ಗಣರಾಜ್ಯೋತ್ಸವ ಪರೇಡ್ಗೆ ಕರ್ನಾಟಕ ಹಾಗೂ ಗೋವಾ ನಿರ್ದೇಶನಾಲಯ ಘಟಕದಿಂದ ಆಯ್ಕೆಯಾಗಿದ್ದಾನೆ.
ಅಂದಾಜು 8 ಹಂತಗಳ ಪರೀಕ್ಷಾ ಕ್ಯಾಂಪ್ಗಳಲ್ಲಿ ಯಶಸ್ವಿಯಾದ ಶ್ರವಣ್ ಅಂತಿಮ ಸುತ್ತಿನಲ್ಲೂ ಸೈ ಎನಿಸಿಕೊಂಡಿದ್ದಾನೆ. ಮೂರು ಹಂತಗಳು ಮಂಗಳೂರಿನಲ್ಲೇ ನಡೆದವು. 4 ನೇ ಕ್ಯಾಂಪ್ ಮೈಸೂರು (ರಾಜ್ಯಮಟ್ಟ), 5, 6 ಮತ್ತು 7 ನೇ ಕ್ಯಾಂಪ್ ಬೆಂಗಳೂರಿನಲ್ಲಿ ಜರುಗಿದವು ಎನ್ನುವ ಶ್ರವಣ್ ಈ ಪ್ರಕ್ರಿಯೆಗೆಂದು ಸೆ.28 ರಂದೇ ಮನೆಯಿಂದ ಹೊರಟಿರುವುದಾಗಿ ಹೇಳುತ್ತಾನೆ.
ಪರೇಡ್ಗೆ ಆಯ್ಕೆಯಾದ ಕುರಿತು ನ್ಯೂಸ್-13ನೊಂದಿಗೆ ಸಂತಸ ಹಂಚಿಕೊಂಡಿರುವ ಶ್ರವಣ್, ಆರ್ಮಿ ರೆಜಿಮೆಂಟ್, ಮಹಾರಾಷ್ಟ್ರ, ರಜಪೂತ್ ಹೀಗೆ ಪ್ರತ್ಯೇಕ ಗುಂಪುಗಳೂ ಇರುತ್ತವೆ. ಅಲ್ಲಿ ಆಯಾ ರಾಜ್ಯಗಳ ಪ್ರತಿನಿಧಿಗಳು ಮಾತ್ರ ಇರುತ್ತಾರೆ. ಆದರೆ, ಎನ್ಸಿಸಿ ಯಲ್ಲಿ ದೇಶದ ಎಲ್ಲ ರಾಜ್ಯಗಳ ಪ್ರತಿನಿಧಿಗಳೂ ಇರುವುದರಿಂದ ’ ರಾಷ್ಟ್ರೀಯ ಐಕ್ಯತೆ’ಯನ್ನು ನಾನು ಇದರಲ್ಲಿ ಕಂಡೆ ಎನ್ನುತ್ತಾನೆ.
ದೇಶಸೇವೆಯ ಕಲ್ಪನೆಗಳು ಗರಿಗೆದರಲು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಪರ್ಕವೇ ಪ್ರಮುಖ ಕಾರಣ. ಚಿಕ್ಕಂದಿನಿಂದಲೂ ಆರ್ಎಸ್ಎಸ್ನ ಶಾಖೆಗೆ ಹೋಗುತ್ತಿದ್ದ ನನಗೆ, ಉದಾತ್ತ ವಿಚಾರಗಳು, ಸತ್ಚಿಂತನೆಗಳು ಪ್ರೇರಕವಾದವು. ಅಲ್ಲಿ ನಾನು ಕಲಿತ ಶಿಸ್ತು, ಸಂಯಮ, ರಚನಾತ್ಮಕ ಚಿಂತನೆಗಳು ನನ್ನನ್ನು ರಾಷ್ಟ್ರಜಾಗೃತಿಯತ್ತ ಸೆಳೆದುಕೊಂಡಿವೆ. ಸಂಘದ ಪ್ರೇರಕ ಶಕ್ತಿಯೂ ಈ ಪರೇಡ್ಗೆ ಆಯ್ಕೆಯಾಗುವಲ್ಲಿ ಬಹುಮುಖ್ಯ ಪಾತ್ರವಹಿಸಿದೆ ಎಂದು ಶ್ರವಣ್ ತಮ್ಮ ’ಸಂಸ್ಕಾರದ ಗರಡಿ’ಯನ್ನು ಸ್ಮರಿಸಿದರು.
ತಮ್ಮ ಮಹಾವಿದ್ಯಾಲಯದ ಹಿರಿಯರೂ ಆದ ಗಣೇಶ ಪಿ.ಅವರ ಪ್ರೋತ್ಸಾಹ, ಬೆಂಬಲ ಮರೆಯುವಂತಿಲ್ಲ ಎನ್ನುವ ಶ್ರವಣ್ ಅವರು, ಪರೇಡ್ನಲ್ಲಿ ಭಾಗವಹಿಸುವುದೇ ಒಂದು ಸೌಭಾಗ್ಯ. ಇದೊಂದು ದೇಶಸೇವೆಯ ಧನ್ಯತೆ ನೀಡುತ್ತಿದೆ. ಆಯ್ಕೆಯಾಗಿದ್ದಕ್ಕೆ ಹೆಮ್ಮೆ ಇದೆ. ನನ್ನ ಈ ಧ್ಯೇಯ ಸಾಧನೆಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಪ್ರೇರಕ ಶಕ್ತಿಗಳಾದ ಮಹಾವಿದ್ಯಾಲಯ, ಗುರುವೃಂದ, ಪಾಲಕರು, ಸ್ನೇಹಿತರು ಸರ್ವರಿಗೂ ನಾನು ಋಣಿ ಎಂದು ಶ್ರವಣ್ ಮಾತಿಗೆ ವಿರಾಮ ನೀಡಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.