ಮಂಗಳೂರು : ತುಳು ಚಿತ್ರರಂಗದ ಮತ್ತೊಂದು ಹಾರರ್ ಚಿತ್ರ ‘ಗುಡ್ಡದ ಭೂತ’ ಮೈನವಿರೇಳಿಸುವ, ರೋಮಾಂಚನಗೊಳಿಸುವ ಸನ್ನಿವೇಶಗಳೊಂದಿಗೆ ಮಂಗಳೂರು ಮತ್ತು ಪುತ್ತೂರಿನಲ್ಲಿ ಜನವರಿ 6. 2017 ರಂದು ಬಿಡುಗಡೆಗೊಂಡಿದೆ.
ಮಂಗಳೂರಿನ ಪ್ರಭಾತ್ ಚಿತ್ರಮಂದಿರದಲ್ಲಿ ಶುಕ್ರವಾರ ಬೆಳಗ್ಗೆ 9.30 ಕ್ಕೆ ಚಿತ್ರದ ಬಿಡುಗಡೆ ಸಮಾರಂಭ ನಡೆದಿದ್ದು, ಇದು ಯುವಕರ ತಂಡದ ಒಂದು ಹೊಸ ಪ್ರಯತ್ನ, ಆರಂಭದ ಏಳು ಬೀಳುಗಳನ್ನು ಎದುರಿಸಿ ಈ ಚಿತ್ರ ಯಶಸ್ವಿಯಾಗಿ ಬಿಡುಗಡೆಗೊಂಡಿದೆ ಎಂದು ಚಿತ್ರದ ನಿರ್ದೇಶಕ ಸಂದೀಪ್ ಪಣಿಯೂರು ಹೇಳಿದ್ದಾರೆ.
ನಾಯಕ ನಟ ಸಂದೀಪ್ ಭಕ್ತ ಮಾತನಾಡಿ ಚಲನಚಿತ್ರ ರೋಮಾಂಚನ ಸನ್ನಿವೇಶ ಮತ್ತು ಲವ್ ಸ್ಟೋರಿಯೊಂದಿಗೆ ಕುಟುಂಬ ಸಮೇತರಾಗಿ ನೋಡಬಹುದು. ತುಳು ಪ್ರೇಕ್ಷಕರು ಪ್ರೋತ್ಸಾಹಿಸಿದಲ್ಲಿ ಚಿತ್ರ ಶತದಿನ ಆಚರಿಸಬಹುದು ಎಂದರು.
ಚಲನಚಿತ್ರವು ಮಂಗಳೂರಿನಲ್ಲಿ ಪ್ರಭಾತ್, ಪಿವಿಆರ್, ಬಿಗ್ ಸಿನೆಮಾ, ಸಿನಿಪೊಲಿಶ್, ಪುತ್ತೂರಿನ ಅರುಣಾ, ಸಕಲೇಶಪುರದಲ್ಲಿ ಜೈಮಾರುತಿ, ಕಾರ್ಕಳದ ಪ್ಲಾನೆಟ್ ನಲ್ಲಿ ಬಿಡುಗಡೆಗೊಂಡಿದೆ. 2 ನೇ ಹಂತದಲ್ಲಿ ಉಡುಪಿ ಮತ್ತು ಇತರ ಪ್ರದೇಶಗಳಲ್ಲಿ ಬಿಡುಗಡೆಗೊಳ್ಳಲಿದೆ.
ಈ ಚಲನ ಚಿತ್ರದ ವಿಷೇಶತೆ ಏನೆಂದರೆ ಆತ್ಮ ಮತ್ತು ದೈವದ ನಡುವೆ ಒದ್ದಾಟ ನಡೆಸುವ ಜನರ ಸಮಸ್ಯೆಗೆ ಶೀರೂರು ಮಠದ ಲಕ್ಷ್ಮೀವರ ತೀರ್ಥ ಶ್ರೀಪಾದ ಸ್ವಾಮೀಜಿಯವರು ಬಣ್ಣ ಹಚ್ಚಿ ಅತಿಥಿ ಪಾತ್ರದಲ್ಲಿ ಅಭಿನಯಿಸಿರುವುದು. ಜೊತೆಗೆ ಉಡುಪಿಯ ಹಲವು ರಾಜಕೀಯ ಮುಖಂಡರು ಬಣ್ಣ ಹಚ್ಚಿದ್ದಾರೆ. ಯಶ್ಪಾಲ್ ಸುವರ್ಣ, ಯತೀಶ್ ಕರ್ಕೇರ, ಉದಯಕುಮಾರ್ ಶೆಟ್ಟಿ, ಬೈಕಾಡಿ ಸುಪ್ರಸಾದ್ ಶೆಟ್ಟಿ ಮೊದಲ ಬಾರಿಗೆ ಅಭಿನಯಿಸಿದ್ದಾರೆ.
ನಾಯಕ ನಟನಾಗಿ ಸಂದೀಪ್ ಭಕ್ತ, ನಾಯಕಿಯಾಗಿ ಆಶ್ವಿತಾ ನಾಯಕ್ ಅಭಿನಯಿಸಿದ್ದಾರೆ. ತುಳುನಾಡ ರತ್ನ ದಿನೇಶ್ ಅತ್ತಾವರ ಪ್ರಮುಖ ಪಾತ್ರದಲ್ಲಿದ್ದಾರೆ. ತಾಂತ್ರಿಕ ವರ್ಗದಲ್ಲಿ ಛಾಯಾಗ್ರಹಣ ಆರ್ ಅಂತೋಣಿ ಹಾಗೂ ಸುರೇಂದ್ರ ಪಣಿಯೂರು, ಸಂಗೀತ ನಿರ್ದೇಶನ ಪ್ರಸ್ತುತ ಮುಂಬಯಿಯಲ್ಲಿ ನೆಲೆಸಿರುವ ಸುಭಾಷ್ ಬೋಳಾರ್ ಅವರದು. ಚಿತ್ರದ ಸಂಭಾಷಣೆ ಪ್ರಕಾಶ್ ಪೂಜಾರಿ ಮಾಡಿದ್ದಾರೆ.
ಚಿತ್ರದಲ್ಲಿ ಟೈಟಲ್ ಹಾಡಿನ ಜೊತೆ ರೊಮ್ಯಾಂಟಿಕ್ ಹಾಡು, ಮೆಲೋಡಿ ಹಾಡು, ಥ್ರಿಲ್ ಹಾಡು ಹೀಗೆ ಮೂರು ಹಾಡುಗಳಿದ್ದು, ಅವುಗಳಿಗೆ ಆರ್.ಎಸ್ ಸುರೇಶ್ ಬಲ್ಮಠ ಸಾಹಿತ್ಯ ಬರೆದಿದ್ದಾರೆ. ಉಡುಪಿ ಮತ್ತು ಕಟೀಲ್ ನ ಪ್ರಕೃತಿ ರಮಣೀಯ ತಾಣಗಳಲ್ಲಿ ಚಿತ್ರೀಕರಣ ನಡೆದಿದೆ.
ಶ್ರೀ ಕಟಿಲೇಶ್ವರಿ ಮೀಡಿಯಾ ಬ್ಯಾನರ್ ನಡಿಯಲ್ಲಿ ನಿರ್ಮಾಪಕರಾಗಿ ನಿತಿನ್ ಪಣಿಯೂರು ಜೊತೆಗೆ ಯತಿರಾಜ್ ಭಟ್, ನಿತ್ಯ ಅದಮಾರು ಹಾಗೂ ನಾಗರಾಜ್ ಪಣಿಯೂರು ಸಹ ನಿರ್ಮಾಪಕರಾಗಿ ಸುಮಾರು ನಲವತ್ತು ಲಕ್ಷ ವೆಚ್ಚದಲ್ಲಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಚಿತ್ರದ ಒಟ್ಟು ಸಮಯ 2.17 ನಿಮಿಷ.
ನಿರ್ದೇಶಕ ಸಂದೀಪ್ ಪಣಿಯೂರು ಕನ್ನಡದಲ್ಲಿ ಹೆಸರು ಮಾಡಿದ ‘ಗುಡ್ಡೆದ ಭೂತ’ ಧಾರವಾಹಿಯಿಂದ ಸ್ಪೂರ್ತಿಗೊಂಡು ಅದೇ ಹೆಸರಲ್ಲಿ ತುಳು ಚಲನ ಚಿತ್ರ ನಿರ್ಮಿಸಿರುವುದಾಗಿ ಹೇಳಿದ್ದಾರೆ. ಆರಂಭದ ಚಿತ್ರೀಕರಣದಲ್ಲಿ ಅಡೆತಡೆಗಳುಂಟಾಗಿ ಮತ್ತೆ ಚಿತ್ರ ಯಶಸ್ವೀಯಾಗಿ ಚಿತ್ರೀಕರಣ ಮುಗಿಸಿದ್ದು ಚಿತ್ರ ಅದ್ಬುತ ಸಂದೇಶವನ್ನು ಹೊತ್ತು ಕುಟುಂಬ ಸಮೇತ ವೀಕ್ಷಿಸುವ ಮನೋರಂಜನಾ ಚಿತ್ರ ಎಂದು ಅವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.