ಧಾರವಾಡ: ಅಧ್ಯಾತ್ಮ, ಸಂಗೀತ, ಸಾಹಿತ್ಯ, ಸಂಸ್ಕಾರ, ಗಣಿತ, ವಿಜ್ಞಾನ ಹೀಗೇ ಎಲ್ಲ ಕ್ಷೇತ್ರಗಳಲ್ಲೂ ಜಗತ್ತಿಗೆ ಬೆಳಕು ನೀಡಿದ್ದು ಭಾರತ ಎಂದು ಖ್ಯಾತ ವಾಗ್ಮಿ ಪ್ರಕಾಶ ಮಲ್ಪೆ ಹೇಳಿದರು.
ನಗರದ ಮಗದುಮ್ ಕಲ್ಯಾಣ ಮಂಟಪದಲ್ಲಿ ರಾಮಕೃಷ್ಣ ವಿವೇಕಾನಂದ ಭಾವ ಪ್ರಚಾರ ಪರಿಷತ್ನ ತೃತೀಯ ವಾರ್ಷಿಕ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಿದ ಅವರು, ವಿವೇಕಾನಂದರ ದೃಷ್ಟಿಯಲ್ಲಿ ಭಾರತ ಕುರಿತು ಉಪನ್ಯಾಸ ನೀಡಿದರು.
ಸ್ವಾಮಿ ವಿವೇಕಾನಂದರು ಚಿಕ್ಯಾಗೊ ಸಮ್ಮೇಳನಕ್ಕೆ ಹೋಗಿದ್ದು ನೆಪ ಮಾತ್ರ, ಮುಖ್ಯವಾಗಿ ಭಾರತವನ್ನು ಹಾವಾಡಿಗರ ದೇಶ, ಬಡ, ಹೀನ, ದುರ್ಬಲ ದೇಶ ಎಂದು ಜರಿಯುತ್ತಿದ್ದವರಿಗೆ ಭಾರತದ ಅಂತಃಸತ್ವವನ್ನು ಮನವರಿಕೆ ಮಾಡಿಕೊಡುವುದೇ ಅವರ ನೈಜ ಉದ್ದೇಶವಾಗಿತ್ತು ಎಂದರು.
ಸಂಸ್ಕೃತಿ ಮತ್ತು ನದಿ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಈ ನಿಟ್ಟಿನಲ್ಲಿ ನೋಡಿದರೂ ವಿಶ್ವಮಟ್ಟದಲ್ಲಿ ಭಾರತವೇ ಶ್ರೇಷ್ಠವಾಗಿದೆ. ಏಕೆಂದರೆ, ಚೀನಾದಲ್ಲಿ ಇರುವುದು ಕೇವಲ 2 ನದಿಗಳು, ವಿಶ್ವದ ದೊಡ್ಡಣ್ಣ ಎಂದು ಬೀಗುವ ಅಮೆರಿಕೆಯಲ್ಲಿ ಇರುವುದೂ ಕೇವಲ 2 ನದಿ, ಸೂರ್ಯ ಮುಳುಗದ ಸಾಮ್ರಾಜ್ಯ ಎಂದು ಮೆರೆಯುವ ಇಂಗ್ಲೆಂಡ್ನಲ್ಲಿ ಥೇಲ್ಸ್ ನದಿ ಒಂದೇ, ರಷ್ಯಾದಲ್ಲಿರುವುದೂ ಒಂದೇ ನದಿ ಎಂದ ಮಲ್ಪೆ ಅವರು, ಗಂಗಾ, ಸಿಂಧು, ಸರಸ್ವತಿ, ಯಮುನಾ, ಗೋದಾವರಿ, ನರ್ಮದಾ, ಕಾವೇರಿ, ಕಪಿಲಾ, ನೇತ್ರಾವತಿ, ಕೃಷ್ಣಾ, ಭೀಮಾ, ಫಲ್ಗುಣಿ, ಸರಯೂ, ಗಂಡಕಿ, ಮಲಪ್ರಭಾ, ಘಟಪ್ರಬಾ, ವರದಾ, ಶಾಲ್ಮಲಾ ಹೀಗೆ ಅಸಂಖ್ಯ ನದಿಗಳುಳ್ಳ ಭಾರತ ಸಾಂಸ್ಕೃತಿಕ ಸಮೃದ್ಧಿಯನ್ನು ಹೊಂದಿದೆ ಎಂದು ಹೇಳಿದರು.
ಏಳಿ, ಎದ್ದೇಳಿ ಎಂದ ವಿವೇಕಾನಂದರ ಮಾತು ನಮ್ಮ ಆತ್ಮಾವಲೋಕನಕ್ಕೆ ದಾರಿ. ಏಕೆಂದರೆ, ನಮ್ಮಲ್ಲಿರುವ ಆತ್ಮವಿಸ್ಮೃತಿ ಸ್ವಭಾವವೇ ನಮ್ಮ ದೌರ್ಬಲ್ಯವಾಗಿದೆ. ಅದರಿಂದ ಹೊರಬಂದು ಆತ್ಮವಿಶ್ವಾಸದಿಂದ ಬದುಕುವ ಚಿಂತನೆ ವೃದ್ಧಿಸಬೇಕಿದೆ ಎಂದರು.
ರಾಮ, ಕೃಷ್ಣ, ಬುದ್ಧ, ಅಂಬೇಡ್ಕರ್, ಲಾಲ್, ಬಾಲ್, ಪಾಲ್, ಸಾವರ್ಕರ್, ಭಗತ್ ಸಿಂಗ್, ಸುಖದೇವ್, ರಾಜಗುರು, ಆಜಾದ್, ರಾಮಕೃಷ್ಣ ಪರಮಹಂಸರು, ವಿವೇಕಾನಂದರು, ಸ್ವಾಮಿ ದಯಾನಂದ ಸರಸ್ವತಿ, ವಿಶ್ವಕವಿ ರವೀಂದ್ರನಾಥ್ ಟ್ಯಾಗೂರ್, ಸೀತೆ, ಸಾವಿತ್ರಿ, ರಾಣಿ ಚೆನ್ನಮ್ಮ, ಅಬ್ಬಕ್ಕ, ಅಕ್ಕಮಹಾದೇವಿ, ಶರಣರು, ಯೋಗಿಗಳು ಮುಂತಾದ ಮಹಾಪುರುಷರೆಲ್ಲ ಜನಿಸಿದ್ದು ಭಾರತದಲ್ಲೇ ಎಂಬುದು ಈ ನೆಲದ ಗುಣಕ್ಕೆ ಸಾಕ್ಷಿ ಎಂದರು.
ಜಗತ್ತಿಗೆ ಶೂನ್ಯ ಕೊಟ್ಟವರು ನಾವು, ಗೋದಾಯನ ಸೂತ್ರ(ಪೈಥಾಗೋರಸನ ಪ್ರಮೇಯ) ಕೊಟ್ಟವರು, ಉದಯರಾಗ, ಸಂಧ್ಯಾರಾಗ, ಮೇಘಮಲ್ಹಾರದಂತಹ ಅಪರೂಪದ ರಾಗಗಳನ್ನು ಕೊಟ್ಟವರು ನಾವು. ಕೃಷ್ಣನ ಕೈಯಲ್ಲಿ ಕೊಳಲು, ಶಾರದೆಯ ಕೈಯಲ್ಲಿ ವೀಣೆ, ಶಂಭುವಿನ ಕೈಯಲ್ಲಿ ಡಮರು ಹೀಗೇ ಸಂಗೀತ ಸಂಸ್ಕೃತಿಯು ನಮಗೆ ದೈವದತ್ತ ಕಾಣಿಕೆ ಎಂದರು.
ಇದೀಗ ವಿದೇಶಕ್ಕೆ ಹೋಗಿ ಬರುವುದು ಪ್ರತಿಷ್ಠೆಯ ವಿಷಯವಾಗಿದೆ. ಆದರೆ ಪ್ರಾಚೀನ ಕಾಲದಲ್ಲಿಯೇ ವಿದೇಶಿಗರು ನಮ್ಮಲ್ಲಿ ಅಧ್ಯಯನಕ್ಕಾಗಿ ಬಂದದ್ದು ನಮ್ಮ ಹಿರಿಮೆ. ನಮ್ಮಲ್ಲಿ ಆ ಸಂದರ್ಭದಲ್ಲಿಯೇ ನಲಂದಾ, ತಕ್ಷಶಿಲೆ, ಉಜ್ಜಯಿನಿ ಮುಂತಾದ ವಿಶ್ವವಿದ್ಯಾಲಯಗಳು ನಮ್ಮಲ್ಲಿ ವಿರಾಜಮಾನವಾಗಿದ್ದವು ಎಂದ ಅವರು, ನಮ್ಮ ದೇಶದ ಶೈಕ್ಷಣಿಕ ಔನ್ನತ್ಯವನ್ನು ವಿವರಿಸಿದರು.
ಭಾಷೆ ಮತ್ತು ಸಂಸ್ಕೃತಿಗೂ ಅವಿನಾಭಾವ ಸಂಬಂಧವಿದೆ. ಸಂಸ್ಕೃತ ನಮ್ಮ ನೆಲದ ಉತ್ಕೃಷ್ಟ ಭಾಷೆ. ಇಂಗ್ಲಿಷ್ನ ಅವೆಷ್ಟೋ ಪದಗಳಲ್ಲಿ ಸಂಸ್ಕೃತದ ಹಿನ್ನೆಲೆಯನ್ನು ಗಮನಿಸಬಹುದೆಂದು ಉದಾಹರಿಸಿದ ಅವರು, ಪರಭಾಷೆಯ ವಿರೋಧ ಸಲ್ಲ ಎಂದೂ ಹೇಳಿದರು.
ನಮ್ಮ ಭೂಮಿ ಬರೀ ಮಣ್ಣಲ್ಲ, ಅದು ನಮ್ಮ ಮಾತೃಭೂಮಿ ಎಂದು ಹೇಳುವ ಮೂಲಕ ಜಗತ್ತನ್ನು ಬೆರಗುಗೊಳಿಸಿದ ತಾಕತ್ತು ವಿವೇಕಾನಂದರದ್ದು. ಅವರ ಜೀವನದ ಓದು ನಮ್ಮ ದೇಶವನ್ನು ವಿಶ್ವಗುರುವನ್ನಾಗಿ ಮಾಡಬಲ್ಲದು ಎಂದು ಅವರು ಅಭಿಪ್ರಾಯಪಟ್ಟರು.
ಆತ್ಮವಿಭುದಾನಂದಜಿ ಮಹಾರಾಜ್ (ವಿಶಾಖಾ ಪಟ್ಟಣ), ಸೌಖ್ಯಾನಂದರು ಹಾಗೂ ಇತರರು ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.