ಮಂಗಳೂರು : ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು 2017, ಫೆಬ್ರವರಿ 10, 11 ಮತ್ತು 12 ರಂದು ಮಂಗಳೂರಿನ ಪುರಭವನದಲ್ಲಿ ನಡೆಸಲುದ್ದೇಶಿಸಿದ ಕೊಂಕಣಿ ಲೋಕೋತ್ಸವದ ಲಾಂಛನ ಹಾಗೂ ಮಳಿಗೆಗಳಿಗೆ ಆಹ್ವಾನವನ್ನು ದಿನಾಂಕ 02.12.2016 ರಂದು ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾ ಗೋಷ್ಟಿಯಲ್ಲಿ ಅನಾವರಣಗೊಳಿಸಲಾಯಿತು. ಅನಾವರಣಗೊಳಿಸಿದ ಅಕಾಡೆಮಿ ಅಧ್ಯಕ್ಷ ರೊಯ್ ಕ್ಯಾಸ್ತೆಲಿನೊ ಸಮಸ್ತ ಕೊಂಕಣಿಗರ ಸಹಕಾರವನ್ನು ಕೋರಿದರು.
ಲಾಂಛನ : ಕೊಂಕಣಿಯಲ್ಲಿ 3 ಧರ್ಮಗಳ 41 ಸಮುದಾಯಗಳ ಜನರಿದ್ದಾರೆ. ಕೊಂಕಣಿಗರನ್ನು ಸಂಕೇತಿಸುವ ನೇರಳೆ ವರ್ಣ, ನಾವೆಲ್ಲರೂ ಭಾರತೀಯರು ಎಂಬರ್ಥದ ತ್ರಿವರ್ಣ ಮೂಡಿ ಬಂದಿದೆ. ಕೊಂಕಣಿಯ ಅನನ್ಯ ಸಾಂಸ್ಕೃತಿಕ ವಾದನ ಗುಮಟೆಯನ್ನು ಮೇಲ್ಭಾಗದಲ್ಲಿ ರಚಿಸಲಾಗಿದೆ. ಪೂರ್ಣ ಚಂದಿರ, ತೆಂಗಿನ ಮರಗಳು ಮತ್ತು ಸಮುದ್ರ ಕೊಂಕಣ ಕರಾವಳಿಯನ್ನು ಪ್ರತಿಬಿಂಬಿಸುತ್ತವೆ. ಕಾವಿವರ್ಣವು ಕೊಂಕಣಿಗರ ಸಾಂಪ್ರದಾಯಿಕ ಕಲೆಯಾದ ಕಾವಿಕಲೆಯನ್ನೂ ಮತ್ತು ಎಡಭಾಗದಲ್ಲಿ ಕಾವಿವರ್ಣದಲ್ಲಿ ಮೂಡಿಬಂದ ಲೇಖನಿ ಕೊಂಕಣಿಯ ಸಮಗ್ರ ಸಾಹಿತ್ಯವನ್ನೂ ಹಾಗೂ 5 ಮಂದಿ ಕಲಾವಿದರು ವಿವಿಧ ಜನಪದ ಸಂಸ್ಕೃತಿಗಳ ಬಾಹುಳ್ಯವನ್ನು,ಸೊಬಗನ್ನು ಪ್ರತಿನಿಧಿಸುತ್ತಿದ್ದಾರೆ. ಕೊಂಕಣಿಯ ಈ ಎಲ್ಲಾ ಸಾಹಿತ್ಯಕ, ಸಾಂಸ್ಕೃತಿಕ ಸೊಗಡನ್ನು ಅದರ ಎಲ್ಲಾ ವೈವಿಧ್ಯಗಳೊಡನೆ ಲೋಕಕ್ಕೆ ಪಸರಿಸುವ ಬಹು ದೊಡ್ಡ ಸಂಭ್ರಮವೇ ಕೊಂಕಣಿ ಲೋಕೋತ್ಸವ.
ಈ ಲಾಂಛನವನ್ನು ಪ್ರಖ್ಯಾತ ಕಲಾವಿದರಾದ ಶ್ರೀ ವಿಲ್ಸನ್ ಜೆ.ಪಿ. ಡಿಸೋಜ ಕಯ್ಯಾರ್ ಇವರು ರಚಿಸಿದ್ದಾರೆ.
ಮಳಿಗೆಗಳು : ಕೊಂಕಣಿಯಲ್ಲಿ ವಿವಿಧ ತಿಂಡಿ ತಿನಿಸುಗಳು, ಆಹಾರ ವಿವಿಧತೆಗಳು, ವಿಶಿಷ್ಟ ಪರಿಕರಗಳು, ವಿಭಿನ್ನ ಆಚರಣೆಗಳು ಇವೆ. ಇವೆಲ್ಲವನ್ನು ಪ್ರದರ್ಶಿಸಲು, ಜನರಿಗೆ ಮಾಹಿತಿ ನೀಡಲು, ಪ್ರದರ್ಶನ ಮತ್ತು ಮಾರಾಟಕ್ಕಾಗಿ ಕೊಂಕಣಿ ಲೋಕೋತ್ಸವದ ಮೂರು ದಿನವೂ ಪುರಭವನದ ಸುತ್ತ, ವಿವಿಧ ಮಳಿಗೆಗಳಿಗೆ ಅವಕಾಶ ಕಲ್ಪಿಸಲಾಗಿದೆ.
ಅ. ಕೊಂಕಣಿ ವಿಭಾಗ :
1. ಕೊಂಕಣಿಯ ವಿವಿಧ ಜನಪದ ಕಲೆಗಳನ್ನು ಬಿಂಬಿಸುವ ಮಳಿಗೆಗಳು.
2. ಕೊಂಕಣಿ ಜನಜೀವನವನ್ನು, ಪರಿಸರವನ್ನು ಬಿಂಬಿಸುವ ಜೀವಂತ ಪ್ರಾತ್ಯಕ್ಷಿತೆ ಮಳಿಗೆಗಳು
3. ವಿವಿಧ ಕೊಂಕಣಿ ಪರಿಕರಗಳು, ಸಂಗೀತ ಸಾಧನಗಳು
4. ಕೊಂಕಣಿ ಪುಸ್ತಕ ಮತ್ತು ಸಿಡಿ ಮಾರಾಟ ಮಳಿಗೆಗಳು
5. ಕೊಂಕಣಿ ತಿಂಡಿ ತಿನಿಸು, ಊಟೋಪಚಾರ ಮಳಿಗೆಗಳು
ಆ. ಇತರೆ ವಿಭಾಗ : ವಾಣಿಜ್ಯ ಮಳಿಗೆಗಳು
* ಆಟೋಟದ ವಸ್ತುಗಳು * ಬಟ್ಟೆಬರೆ * ಐಸ್ಕ್ರೀಮ್ * ವಿವಿಧ ಶೈಲಿಯ ತಿಂಡಿ ತಿನಿಸುಗಳು, ಊಟ * ಸಿಹಿ ತಿಂಡಿಗಳು ಹಾಗೂ ಇತರೆ.
ಕೊಂಕಣಿ ಸಾಂಸ್ಕೃತಿಕ ಕಾರ್ಯಕ್ರಮ ನೀಡಲು ತಂಡಗಳಿಗೆ ಆಹ್ವಾನ:
ಈ ಮಹಾಸಮ್ಮೇಳನದ ವೇದಿಕೆಯ ಮೇಲೆ ಮೂರೂ ದಿನಗಳಲ್ಲಿ ನಿರಂತರವಾಗಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ – ಮೂರು ವಿಭಾಗಗಳಿಂದ ಅಂದರೆ (1) ಕಾಲೇಜು ವಿದ್ಯಾರ್ಥಿಗಳು, (2) ಮಹಿಳಾ ಮತ್ತು ಮಕ್ಕಳು, (3) ಇತರ ಕಲಾವಿದರುಗಳಿಂದ ತಂಡಗಳಲ್ಲಿ ಗಾಯನ-ನೃತ್ಯ-ಅಭಿನಯ ಮಿಶ್ರಿತ 15 ನಿಮಿಷಗಳ ಕಾರ್ಯಕ್ರಮ ಹಾಗೂ (4) ಜನಪದ ಕಲಾವಿದ ಪಂಗಡಗಳಿಂದ ಒಂದು ನಿರ್ದಿಷ್ಠ ನೃತ್ಯ ಪ್ರಕಾರದ ಪ್ರದರ್ಶನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು, ತಮ್ಮ ತಂಡದ ವಿವರವನ್ನು ದಿ. 12.12.2016 ರ ಒಳಗಾಗಿ ಕಳುಹಿಸಬಹುದು. ಆಹ್ವಾನಿತ ತಂಡಗಳಿಗೆ ಸೂಕ್ತ ಗೌರವವಧನವನ್ನು ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಕಛೇರಿ, ಮಹಾನಗರ ಪಾಲಿಕೆ ಕಟ್ಟಡ, ಲಾಲ್ಭಾಗ್, ಮಂಗಳೂರು-3 ದೂರವಾಣಿ : 0824 2453167 ಇಲ್ಲಿ ಸಂಪರ್ಕಿಸಬಹುದೆಂದು ಅಕಾಡೆಮಿ ರಿಜಿಸ್ಟ್ರಾರ್ ಡಾ. ಬಿ. ದೇವದಾಸ ಪೈ ತಿಳಿಸಿದರು.
ಪತ್ರಿಕಾ ಗೋಷ್ಟಿಯಲ್ಲಿ ಅಕಾಡೆಮಿ ಸದಸ್ಯರಾದ ಲಾರೆನ್ಸ್ ಡಿಸೋಜ, ಶೇಖರ ಗೌಡ, ಕೆ. ದೇವದಾಸ ಪೈ, ಅಕಾಡೆಮಿ ರಿಜಿಸ್ಟ್ರಾರ್ ಡಾ. ಬಿ. ದೇವದಾಸ ಪೈ ಮತ್ತು ಲೇಖಕ ವಿತೊರಿ ಕಾರ್ಕಳ ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.