ಇನ್ನೂ ಹುಡುಗ. ಹಿರಿಯರಿಂದ ಎಷ್ಟೋ ವಿಷಯಗಳನ್ನು ಕಲಿಯುವ ವಯಸ್ಸು.
ಮಹರ್ಷಿಗಳೇ ಇವನನ್ನು ಹೊಗಳಿದರು. ಇವನ ತಂದೆಗೆ ಇಂತಹ ಮಗನನ್ನು ಪಡೆದದ್ದು ನಿಮ್ಮ ಭಾಗ್ಯ ಎಂದರು.
ಯಮನಿಂದ ವಿದ್ಯೆ ಕಲಿತು, ಹೊಗಳಿಸಿಕೊಂಡು ಬಂದ ಈ ಪುಣ್ಯಪುರುಷ – ನಚಿಕೇತ.
ಲೋಕದಲ್ಲಿ ಜ್ಞಾನಕ್ಕಿಂತಲೂ ಉತ್ತಮವಾದ ಐಶ್ವರ್ಯವಿಲ್ಲ. ಜ್ಞಾನವನ್ನು ಸಂಪಾದಿಸಿ ಇತರರಿಗೂ ಅದನ್ನು ಬೋಧಿಸುವರು ಪುಣ್ಯಪುರುಷರು. ನಚಿಕೇತನು ಎಳೆತನದಲ್ಲೇ ಜ್ಞಾನವನ್ನು ಸಂಪಾದಿಸಿ ಲೋಕಕ್ಕೆ ಹರಡಿದ ಬಾಲ ಋಷಿ.
ಉದ್ದಾಲಕ – ವಿಶ್ವವರಾದೇವಿ
ಋಷಿಗಳದು ತುಂಬಾ ಪವಿತ್ರವಾದ ಜೀವನ. ಎಲ್ಲರಿಗೂ ಒಳ್ಳೆಯದಾಗಲಿ ಎಂಬುದೇ ಅವನ ಜೀವನದ ಗುರಿ. ವೇದಗಳನ್ನು ತಾವು ಪಾರಾಯಣ ಮಾಡಿ ಇತರರಿಗೆ ಬೋಧಿಸುವುದು, ಯಜ್ಞಗಳನ್ನು ಮಾಡುವುದು, ತಪಸ್ಸು ಇವೇ ಅವರ ನಿತ್ಯ ಕಾರ್ಯಗಳಾಗಿದ್ದುವು. ಅವರು ವಾಸಿಸುತ್ತಿದ್ದ ಪ್ರವೇಶವನ್ನು ತಪೋವನ ಎಂದು ಕರೆಯುತ್ತಿದ್ದರು. ಅಂತಹ ಒಂದು ತಪೋವನದಲ್ಲಿ ಋಷಿಗಳ ಅನೇಕ ಕುಟೀರಗಳಿದ್ದುವು. ಕಟೀರವೆಂದರೆ ಅವರು ವಾಸಮಾಡುವ ಗುಡಿಸಲು. ಉದ್ದಾಲಕ ಎಂಬ ಋಷಿಯೂ ಅವನ ಹೆಂಡತಿ ವಿಶ್ವವರಾದೇವಿಯೂ ಒಂದು ಕುಟೀರದಲ್ಲಿದ ವಾಸವಾಗಿದ್ದರು.
ಉದ್ದಾಲಕ ವಿದ್ವಾಂಸನಾದ ಋಷಿ. ಯಜ್ಞಗಳನ್ನು ಮಾಡಿ ಆತ ತುಂಬ ಪ್ರಸಿದ್ಧನಾಗಿದ್ದ. ಅನ್ನದಾನದಲ್ಲೂ ಆತನದು ಎತ್ತಿದ ಕೈ. ತಂದೆ ತಾತಂದಿರ ಕಾಲದಿಂದಲೂ ದಾನಕ್ಕೆ ಹೆಸರಾದ ಮನೆ ಅವರದು. ಆದ್ದರಿಂದಲೇ ಆತನನ್ನು ಎಲ್ಲರೂ ವಾಜಶ್ರವಸ (ಎಂದರೆ ವಿಶೇಷವಾಗಿ ಅನ್ನದಾನ ಮಾಡಿದವನು) ಎಂದು ಕರೆಯುತ್ತಿದ್ದರು . ಆತನಲ್ಲಿದ್ದ ಒಂದೇ ಒಂದು ದೋಷವೆಂದರೆ ಕೋಪ; ಬೆಂಕಿಯಂತಹ ಕೋಪ. ಅದು ಬಂದಿತೆಂದರೆ ತೀರಿತು, ಯಾರೂ ಎದುರು ನಿಂತು ಮಾತನಾಡುವಮತೆಯೇ ಇಲ್ಲ. ಆದರೆ ಮನಸ್ಸು ಒಳ್ಳೆಯದು. ಕೋಪ ಇಳಿದ ಮೇಲೆ ಆತನಷ್ಟು ಒಳ್ಳೆಯವನೇ ಇಲ್ಲವೆನಿಸುತ್ತಿತ್ತು.
ವಿಶ್ವವರಾದೇವಿ ತುಂಬಾ ಶಾಂತ ಸ್ವಭಾವದವಳು. ಮನೆಗೆಲಸ ಚೊಕ್ಕವಾಗಿ ಮಾಡಿಕೊಂಡು, ಗಂಡನ ಯಜ್ಞಕಾರ್ಯಗಳಲ್ಲೂ ಸಹಾಯವಾಗುತ್ತಿದ್ದಳು. ಪತಿಯೇ ದೇವರೆಂದು ನಂಬಿದ ಪತಿವ್ರತೆ.
ಯಜ್ಞಮಾಡಿ ಪಡೆದ ಹುಡುಗ ಹುಡುಗರಲ್ಲಿ ರತ್ನ
ಆದರೆ ಆಕೆಗೆ ಮಕ್ಕಳಿರಲಿಲ್ಲ. ಅದೇ ಅವಳಿಗೆ ದುಃಖ. ದೇವರೇ, ಮನೆಯ ಕೀರ್ತಿಯನ್ನು ಬೆಳಗುವ ಒಬ್ಬ ಮಗನನ್ನು ಕೊಡು – ಎಂದು ಆಕೆ ಪ್ರತಿದಿನವೂ ದೇವರನ್ನು ಬೇಡುತ್ತಿದ್ದಳು.
ವಾಜಶ್ರವಸನು, ‘ವಿಶ್ವವರಾ, ನೀನೇನೂ ದುಃಖಪಡಬೇಡ. ಯಜ್ಞ ಮಾಡಿ, ದೇವತೆಗಳನ್ನು ಮೆಚ್ಚಿಸಿ ಮಗನನ್ನು ಪಡೆಯುತ್ತೇನೆ’ ಎಂದ ಸಮಾಧಾನ ಹೇಳಿದ.
ಯಜ್ಞವನ್ನು ಮಾಡಿದ್ದೂ ಆಯಿತು. ವಿಶ್ವವರಾದೇವಿ ಗರ್ಭಿಣಿಯಾದಳು. ಒಂದು ಶುಭದಿನದಲ್ಲಿ ಆಕೆ ಮುದ್ದು ಮಗನನ್ನು ಹೆತ್ತಳು. ಆಕೆಯ ಸಂತೋಷಕ್ಕೆ ಮಿತಿಯೇ ಇಲ್ಲ. ವಾಜಶ್ರವಸನಿಗೂ ಸಂತೋಷ.
ಮಗುವಿಗೆ ಸಂಭ್ರಮದಿಂದ ನಾಮಕರಣ ಮಾಡಿ, ನಚಿಕೇತ ಎಂದು ಹೆಸರಿಟ್ಟರು. ನಿಜವಾಗಿಯೂ ಅವನದು ಬಂಗಾರದಂತೆ ಹೊಳೆಯುವ ಮೈಬಣ್ಣ! ಹೊಳೆ ಹೊಳೆಯುವ ಕಣ್ಣುಗಳು, ಪುಟ್ಟ ಮೂಗು, ಹಾಲಿನ ಕೆನೆಯಂತಹ ಮೆತ್ತಗಿರುವ ಕೆನ್ನೆ, ಹಣೆಯಲ್ಲಿ ಮಿನುಗುವ ತಿಲಕ, ತುಟಿಯಲ್ಲಿ ಕುಲುಕುಲು ನಗೆ! ಕಂಡವರೆಲ್ಲರೂ ಮುದ್ದಾಡಿ ಹೊಗಳುವರೇ!
ಎಳೆಯ ನಚಿಕೇತ
ನಚಿಕೇತನು ಚೆನ್ನಾಗಿ ಮಾತನಾಡಿ ಓಡಾಡವಂತಾದ. ತಂದೆಯ ಯಜ್ಞಮಂಟಪಕ್ಕೆ ಹೋಗುವುದೆಂದರೆ ಅವನಿಗೆ ಬಹಳ ಇಷ್ಟ. ಆದರೆ ಅಲ್ಲಿ ತಂದೆಯ ಹತ್ತಿರಕ್ಕೆ ಹೋಗಲು ಭಯ. ದೂರದಲ್ಲೇ ನಿಂತು ಋಷಿಗಳು ಹೇಳುವ ಮಂತ್ರಗಳನ್ನು ಕೇಳುತ್ತಿದ್ದ. ತಾಯಿಯ ದೇವರ ಮುಂದೆ ಸ್ತೋತ್ರಗಳನ್ನು ಹೇಳುತ್ತಿರುವಾಗ ಅಮ್ಮಾ,ನನಗೂ ಸ್ತ್ರೋತ್ರ ಕಲಿಸು ಎನ್ನುತ್ತಿದ್ದ. ಕೆಲವು ಸ್ತ್ರೋತ್ರಗಳನ್ನು ಅವನು ತಾಯಿಯಿಂದ ಕಲಿತೂ ಇದ್ದ. ಕಲಿತು ನೆನಪಿಟ್ಟುಕೊಳ್ಳುವುದರಲ್ಲಿ ಅವನು ತುಂಬಾ ಚೂಟಿ. ಒಂದು ಸಲ ಹೇಳಿಸಿಕೊಂಡರೂ ಸ್ತೋತ್ರವೆಲ್ಲಾ ಬಾಯಿಗೆ ಬಂದುಬಿಡುತ್ತಿತ್ತು.
ನಚಿಕೇತನಿಗೆ ಹಟ, ತುಂಟತನ ಮೊದಲಾದುವು ಸೇರವು. ನಿತ್ಯವೂ ಹಾಸಿಗೆಯಿಂದ ಹೊತ್ತಿಗೆ ಮುಂಚೆ ಏಳುವುದು. ತಪೋವನದ ಗಿಡಗಳಿಂದ ಹೂವು ಆರಿಸಿ ತಾಯಿಗೆ ತಂದುಕೊಂಡುವುದು ಅವನ ಮೊದಲ ಕೆಲಸ. ಆಮೇಲೆ ಸ್ನಾನ, ದೇವರ ಮುಂದೆ ಸ್ತೋತ್ರ ಹೇಳುವುದು. ಅದಾದ ಮೇಲೆ ತಾಯಿಯೊಡನೆ ಗೋಪೂಜೆ ಮಾಡಿಯೇ ಹಾಲು ಕುಡಿಯುವುದು.
ವಾಜಶ್ರವಸನ ಗೋಶಾಲೆಯಲ್ಲಿ ಹಿಂದು ಹಿಂಡಾಗಿ ಬೇಕಾದಷ್ಟು ಹಸುಗಳಿದ್ದುವು. ವಾಜಶ್ರವಸನು ರಾಜರ ಮತ್ತು ಶ್ರೀಮಂತರ ಮನೆಗಳಲ್ಲಿ ಯಜ್ಞ ಮಾಡಿಸಲು ಹೋದಾಗ ಅವರ ಹಸುಗಳನ್ನು ದಾನವಾಗಿಯೂ ದಕ್ಷಿಣೆಯಾಗಿಯೂ ಕೊಡುತ್ತಿದ್ದರು. ಆ ಕಾಲದಲ್ಲಿ ಗೋವುಗಳೇ ಐಶ್ವರ್ಯ. ಯಾರ ಬಳಿ ಹೆಚ್ಚು ಹಸುಗಳಿದ್ದರೆ ಅವನೇ ಶ್ರೀಮಂತ.
ಗೋಶಾಲೆಯಲ್ಲಿ ಒಂದು ದಿನ ಪೂಜೆಯ ಸಮಯದಲ್ಲಿ ನಚಿಕೇತ ತಾಯಿಯನ್ನು ಕೇಳಿದ:
‘ಅಮ್ಮಾ, ಹಸುವನ್ನು ಏತಕ್ಕಾಗಿ ಪೂಜಿಸಬೇಕು?”
“ಮಗೂ, ಅದು ಹಾಲು ಕೊಟ್ಟು ಎಲ್ಲರನ್ನು ತಾಯಿಯ ಹಾಗೆ ಕಾಪಾಡುತ್ತದೆ. ಆದ್ದರಿಂದಲೇ ಅದನ್ನು ಗೋಮಾತೆ ಎನ್ನುವುದು.”
“ಅದು ಸರಿ, ಆದರೆ ಹಾಲು ಕೊಟ್ಟರೆ ಪೂಜಿಸಬೇಕೆ?”
“ಅದನ್ನು ಪೂಜಿಸಿ ನಮಸ್ಕರಿಸಿದರೆ ತಾಯಿಯನ್ನೇ ನಮಸ್ಕರಿಸಿದಷ್ಟು ಪುಣ್ಯ. ಅದಕ್ಕೆ ಪ್ರದಕ್ಷಿಣೆ ಮಾಡಿದರೆ ತೀರ್ಥಕ್ಷೇತ್ರಗಳನ್ನು ಸುತ್ತಿದಷ್ಟು ಪುಣ್ಯ. ”
ನಚಿಕೇತನಿಗೆ ಎಲ್ಲಾ ವಿಚಿತ್ರವೆನಿಸಿತು.
“ಪುಣ್ಯದಿಂದ ಏನಮ್ಮ ಪ್ರಯೋಜನ?”
“ಪುಣ್ಯದಿಂದ ಸ್ವರ್ಗವೆಂದು ನೀನು ಕೇಳಿಲ್ಲವೆ? ಅಂದರೆ ದೇವತೆಗಳಿರುವ ಲೋಕ. ಬೇಕುಬೇಕಾದ ಸುಖಗಳಿರುವ ಲೋಕವೇ ಸ್ವರ್ಗ.”
ಅದನ್ನು ಕೇಳಿ ಅವನಿಗೆ ಗೆಳೆಯನಾದ ಸೋಮನ ನೆನಪಾಯಿತು. ಸೋಮನು ಇನ್ನೊಬ್ಬ ಋಷಿಯ ಮಗ. ತುಂಬಾ ಬಡವ. ನಚಿಕೇತನು ತಾಯಿಗೆ ಹೇಳಿದ:
“ಅಮ್ಮಾ, ಪಾಪ, ಸೋಮನ ಮನೆಯಲ್ಲಿ ಒಂದು ಹಸುವಾದರೂ ಇಲ್ಲ. ಹೋಗಲಿ, ಈ ಮುದಿ ಹಸುವನ್ನಾದರೂ ಅವನಿಗೆ ದಾನ ಮಾಡಿಬಿಡೋಣ. ಅವನಿಗೂ ಪುಣ್ಯದಿಂದ ಸ್ವರ್ಗ ಸಿಕ್ಕಲಿ.”
“ತಪ್ಪು, ನಚಿಕೇತ, ಮುದಿ ಹಸುವನ್ನು ದಾನ ಮಾಡಿದರೆ ನಮಗೆ ಪಾಪ ಬರುತ್ತದೆ. ಏಕೆಂದರೆ ಅದು ಹಾಲು ಕೊಡುವುದಿಲ್ಲ. ಅವರಿಗೆ ಯಾವ ಪ್ರಯೋಜನವೂ ಅದರಿಂದ ಆಗುವುದಿಲ್ಲ. ಅಂತಹುದನ್ನ ದಾನಮಾಡಿದ ಪಾಪಕ್ಕಾಗಿ ನಾವು ನರಕಕ್ಕೆ ಹೋಗಬೇಕಾಗುತ್ತದೆ.”
“ನರಕದಲ್ಲಿ ಬೇಕಾದ ಸುಖಗಳಿರುವುದಿಲ್ಲವೆ?”
“ಪಾಪ ಮಾಡಿದವರಿಗೆ ಸುಖವೆಲ್ಲಿಯದು ಮಗೂ? ಅಂತಹವರಿಗೆ ಅಲ್ಲಿನ ರಾಜನಾದ ಯಮನು ಶಿಕ್ಷೆ ಮಾಡುತ್ತಾನೆ! ಇವೆಲ್ಲ ತಿಳಿಯಬೇಕಾದರೆ ವಿದ್ಯೆಯನ್ನು ಕಲಿಯಬೇಕಪ್ಪ.”
“ಅಮ್ಮಾ, ಹಾಗಾದರೆ ನಾನು ಕೂಡಲೆ ವಿದ್ಯೆ ಕಲಿಯಬೇಕು” ಎಂದ ನಚಿಕೇತ. ಅಂದಿನಿಂದಲೇ ಅವನಿಗೆ ವಿದ್ಯೆಯ ಮೇಲೆ ಆಸಕ್ತಿ ಹುಟ್ಟಿತು.
ನನಗೆ ವಿದ್ಯೆ ಬೇಕು
ವಾಜಶ್ರವಸ ಋಷಿಗೂ ಈ ಯೋಚನೆ ಬಂದಿತ್ತು. ನಚಿಕೇತನಿಗೆ ಆತನೇ ಮೊದಲು ಅಕ್ಷರಾಭ್ಯಾಸ ಮಾಡಿಸಿದ. ಅವನಾದರೂ ಸಾಮಾನ್ಯನೆ? ಅವನದು ಪಾದರಸದಂತೆ ಬಲು ಚುರುಕು ಬುದ್ಧಿ. ಕೆಲವೇ ದಿನಗಳಲ್ಲಿ ಚಿಕ್ಕ ಚಿಕ್ಕ ವಾಕ್ಯಗಳನ್ನು ಬರೆಯುವಂತಾದ.
ಒಂದು ದಿನ ಕುಟೀರಕ್ಕೆ ಮಹರ್ಷಿಗಳಾದ ಆಚಾರ್ಯರು ಬಂದರು. ಆ ದಿನ ಅವರು ಅವನಿಗಾಗಿ ಒಂದು ಮಾವಿನ ಹಣ್ಣನ್ನು ತಂದಿದ್ದರು. ಅವರನ್ನು ಕಂಡೊಡನೆ ನಚಿಕೇತನು ನಮಸ್ಕರಿಸಿ ಅವರ ತೊಡೆಯೇರಿ ಕುಳಿತ. ಅವರು ಪ್ರೀತಿಯಿಂದ ಅವನಿಗೆ ಹಣ್ಣನ್ನು ಕೊಟ್ಟರು.
“ನನಗೆ ಈ ಹಣ್ಣು ಬೇಡ” ಎಂದು ನಚಿಕೇತ.
“ಮತ್ತೇನು ಬೇಕು?”
“ನನಗೆ ವಿದ್ಯೆ ಬೇಕು.”
“ಎಂತಹ ವಿದ್ಯೆ ಬೇಕು?”
“ಜ್ಞಾನವನ್ನು ಕೊಡುವ ವಿದ್ಯೆ.”
ಅಷ್ಟರಲ್ಲಿ ವಾಜಶ್ರವಸ ಋಷಿಯ ಮಗನನ್ನು ಗದರಿಸಿ, ಹಿರಿಯರ ಬಳಿ ಹುಚ್ಚಾಪಟ್ಟೆ ಮಾತನಾಡುತ್ತೀಯಾ ಮೂರ್ಖ? ಒಳಕ್ಕೆ ಹೋಗು ಎಂದ. ನಚಿಕೇತನಿಗೆ ಮುಖ ಚಿಕ್ಕದಾಯಿತು. ಅವನು ಮೆಲ್ಲನೆ ಎದ್ದು ತಾಯಿಯ ಬಳಿಗೆ ಹೊರಟುಹೋದ.
ಮಹರ್ಷಿಗಳಿಗೆ ತುಂಬ ಮರುಕವಾಯಿತು. ಅವರು, ವಾಜಶ್ರವಸರೇ, ಅವನ ಮನಸ್ಸನ್ನು ಏಕೆ ನೋಯಿಸಿದಿರಿ? ಇಷ್ಟು ಎಳೆಯ ಹುಡುಗ ತಿಂಡಿಯನ್ನು ಬಯಸಲಿಲ್ಲ. ವಿದ್ಯೆಯನ್ನು ಬಯಸಿದ. ನೀವು ಸಂತೋಷಪಡಬೇಕು. ಅವನ ಮುಖದ ಕಾಂತಿಯನ್ನು ನೋಡಿದರೆ ಅವನೊಬ್ಬ ಮಹಾಪುರುಷನಾಗುತ್ತಾನೆ ಎಂದು ತೋರುತ್ತದೆ. ಅವನಿಗೆ ಉಪನಯನ ಮಾಡಿ ವಿದ್ಯಾಭ್ಯಾಸ ಮಾಡಿಸಿ” ಎಂದರು.
ವಾಜಶ್ರವಸ ಋಷಿಗೆ ಮುಂದೆ ಏನು ಮಾತಾನಾಡುವುದಕ್ಕೂ ತೋಚಲಿಲ್ಲ. “ಅಪ್ಪಣೆ, ಆದರೆ ತಮ್ಮಲ್ಲಿ ಒಂದು ಪ್ರಾರ್ಥನೆ” ಎಂದ.
“ಏನು ಹೇಳಿರಿ.”
ತಾವೇ ಅವನಿಗೆ ಆಚಾರ್ಯರಾಗಿ ವೇದಗಳನ್ನು ಪಾಠ ಮಾಡಿಸಬೇಕು.
ಸರಿ, ಹಾಗೆಯೇ ಆಗಲಿ, ಇಂತಹ ಶಿಷ್ಯ ನನಗೆ ತಾನೇ ಮತ್ತೆಲ್ಲಿ ಸಿಕ್ಕಬೇಕು? ಇಂತಹ ವಿದ್ಯಾರ್ಥಿಗೆ ಪಾಠ ಹೇಳಿದರೆ ಗುರುವಿಗೆ ಕೀರ್ತಿ ಬರುತ್ತದೆ.
ಕುಟೀರದಲ್ಲಿ ಉಪನಯನದ ಏರ್ಪಾಟು ನಡೆಯಿತು. ಉಪನಯನವೆಂದರೆ ಸಂಪ್ರದಾಯದ ಒಂದು ಶುಭ ಕಾರ್ಯ. ವೇದವಿದ್ಯೆ ಕಲಿಯುವ ಮೊದಲು ಈ ಕಾರ್ಯ ಆಗಲೇಬೇಕಾಗಿತ್ತು. ಈ ಕಾರ್ಯದಲ್ಲಿ ಹುಡುಗನಿಗೆ ‘ಯಜ್ಞೋಪವೀತ’ ಅಂದರೆ ‘ಜನಿವಾರವನ್ನು’ ಹಾಕುವ ಶಾಸ್ತ್ರ ನಡೆಯುತ್ತದೆ. ಅಂದಿನಿಂದ ಅವನು ‘ವಟು’ ಅವನನ್ನು ‘ಬ್ರಹ್ಮಚಾರಿ’ ಎನ್ನುವುದೂ ಉಂಟು.
ನಚಿಕೇತನಿಗೆ ಉಪನಯನವಾಯಿತು. ಮಹರ್ಷಿಗಳೊಡನೆ ಅವನು ಹೊರಡಲು ಸಿದ್ಧನಾದಾಗ ವಾಜಶ್ರವಸನು ಮಗನಿಗೆ ಹೇಳಿದ, “ನಚಿಕೇತ ವಿದ್ಯಾವಂತನಾಗಿ ಬಾ. ಎಂದೂ ಗುರುಗಳಿಗೆ ಎದುರಾಡಬೇಡ. ಅವರ ಮನಸ್ಸನ್ನು ನೋಯಿಸುವ ಯಾವ ಕೆಲಸವನ್ನೂ ಮಾಡಬೇಡ. ವಿನಯ ಮತ್ತು ಸೇವೆಗಳಿಂದ ಅವರನ್ನು ಮೆಚ್ಚಿಸಿ ವಿದ್ಯೆ ಕಲಿ.”
ಆಗಿನ ಕಾಲದ ವಿದ್ಯಾಭ್ಯಾಸ ಕ್ರಮವೇ ಹಾಗಿತ್ತು. ಬ್ರಹ್ಮಚಾರಿಯು ಗುರುಕುಲಾಶ್ರಮದಲ್ಲೇ ಇದ್ದುಕೊಂಡು ವೇದಗಳನ್ನು ಕಲಿಯಬೇಕಾಗಿತ್ತು. ಗುರುಕುಲಾಶ್ರಮವೆಂದರೆ ವಿದ್ಯೆಯನ್ನು ಕಲಿಸುತ್ತಿದ್ದ ಶಾಲೆ. ಅಲ್ಲಿ ವೇದಗಳನ್ನು ಕಲಿಸುವ ಗುರುಗಳಿಗೆ ಆಚಾರ್ಯರೆಂದು ಹೆಸರು. ಗುರುವು ಹೇಳಿದಂತೆ ಕೇಳಿಕೊಂಡು ಅಲ್ಲಿಯ ನಿಯಮಗಳನ್ನು ಪಾಲಿಸಬೇಕಾಗಿತ್ತು. ವಿದ್ಯಾರ್ಥಿಯು ಭಿಕ್ಷೆ ಬೇಡಿ ತನ್ನ ಹೊಟ್ಟೆಗೆ ತಾನೇ ಆಹಾರ ಸಂಪಾದಿಸಬೇಕು.
ಹೊರಡುವ ಸಮಯದಲ್ಲಿ ನಚಿಕೇತನು ಬಂದು ತಾಯಿಯ ಪಾದಗಳನ್ನು ಮುಟ್ಟಿ, “ಅಮ್ಮಾ, ಹೋಗಿಬರುತ್ತೇನೆ” ಎಂದ.
ವಿಶ್ವವರಾದೇವಿಗೆ ತನ್ನ ಮಗನು ವಿದ್ಯೆ ಕಲಿಯಲು ಹೋಗುತ್ತಿರುವನೆಂಬ ಸಂತೋಷವೇನೋ ಇತ್ತು. ಆದರೆ ಮನೆ ಬಿಟ್ಟು ದೂರ ಹೋಗುವ ಮಗನಿಗಾಗಿ ದುಃಖವೂ ಉಕ್ಕಿಬಂದಿತು. ಆದರೂ ಕಣ್ಣೀರನ್ನೂ ಒರೆಸಿಕೊಂಡು ಹರಸಿದಳು – ‘ಪುಟ್ಟಾ, ಇನ್ನು ನಿನಗೆ ಗುರುಗಳೇ ತಂದೆ ತಾಯಿಗಳು ಗುರುಕುಲಾಶ್ರಮವೇ ನಿನ್ನ ಮನೆ. ಗುರುಗಳು ನಿನಗೆ ಜ್ಞಾನವನ್ನು ಕೊಡುವ ದೇವರು. ಅವರು ಹೇಳಿದಂತೆ ಕೇಳು.”
ನಚಿಕೇತನು ಗುರುಗಳೊಡನೆ ಹೊರಟುಹೋದ ಮೇಲೆ ಅವನ ತಾಯಿಗೆ ಅವನದೇ ಚಿಂತೆ. ಗುರುಕುಲದಲ್ಲಿ ಎಷ್ಟು ಕಷ್ಟವೋ ಎಂದು. ವಾಜಶ್ರವಸ ಅವಳಿಗೆ ಸಮಾಧಾನ ಹೇಳುವನು.
ಗುರುಕುಲಕ್ಕೆ ಭೂಷಣ
ತಂದೆತಾಯಿಗಳನ್ನು ಬಿಟ್ಟು ಆಶ್ರಮಕ್ಕೆ ಬಂದ ಹೊಸತರಲ್ಲಿ ನಚಿಕೇತನಿಗೆ ಅಲ್ಲಿನ ನಿಯಮಗಳನ್ನು ಪಾಲಿಸುವುದು ಕಷ್ಟವೆನಿಸಿತ್ತು. ಆದರೆ ಬರಬರುತ್ತಾ ಅವನಿಗೆ ಮನೆ ಮರೆತೇಹೋಯಿತು. ಆಶ್ರಮ, ಗುರುಗಳು, ವಿದ್ಯೆ ಮೂರರಲ್ಲೇ ಮನಸ್ಸು ನಿಂತಿತು. ಅಲ್ಲಿ ಹಲವು ವರ್ಷಗಳಿಂದಲೂ ವಿದ್ಯಾಭ್ಯಾಸ ಮಾಡುತ್ತಿದ್ದ ಹತ್ತಾರು ವಿದ್ಯಾರ್ಥಿಗಳಿದ್ದರು. ಆದರೆ ನಿಯಮಪಾಲನೆಯಲ್ಲಿ ನಚಿಕೇತನೇ ಎಲ್ಲರಿಗೂ ಮೇಲೆನಿಸಿದ.
ಆಶ್ರಮದ ವಿದ್ಯಾರ್ಥಿಗಳೆಲ್ಲರೂ ಏಳುವ ಮೊದಲೇ ನಚಿಕೇತ ನಿದ್ರೆಯಿಂದ ಏಳುತ್ತಿದ್ದ. ಅನಂತರ ವಿದ್ಯಾಮಂದಿರದಲ್ಲಿ ವೇದಪಾಠ. ಆಚಾರ್ಯರು ಎತ್ತರವಾದ ಪೀಠದ ಮೇಲೆ ಕುಳಿತು ಹೇಳಿಕೊಡುವರು. ಶಿಷ್ಯೆರೆಲ್ಲರೂ ಚಾಪೆಯ ಮೇಲೆ ಕುಳಿತು ಕಲಿಯುವರು. ಆಮೇಲೆ ಆ ತಪೋವನದ ಋಷಿಗಳ ಮನೆಗಳಿಗೆ ಭಿಕ್ಷೆಗೆ ಹೋಗಬೇಕು. ತಂದುದನ್ನು ಗುರುಗಳ ಅಪ್ಪಣೆಯಂತೆ ಒಟ್ಟಿಗೆ ಕುಳಿತು ಊಟಮಾಡುವರು. ರಾತ್ರಿ ಮಲಗುವುದು ಕೂಡ ಚಾಪೆಯ ಮೇಲೆಯೇ.
ಮಧ್ಯಾಹ್ನದಲ್ಲಿ ಬೇರೆ ಕೆಲಸಗಳಿರುತ್ತಿದ್ದುವು. ಬಟ್ಟೆ ಒಗೆಯುವುದು, ಪಾಠಶಾಲೆ ಗುಡಿಸುವುದು, ತಮಗೂ ಆಚಾರ್ಯರಿಗೂ ಯಜ್ಞಕ್ಕೆ ಬೇಕಾದ ಹೂವು ದರ್ಭೆಗಳನ್ನು ತರುವುದು, ಆಶ್ರಮದ ಗಿಡಗಳಿಗೆ ನೀರೆರೆಯುವುದು, ಹಸುಗಳಿಗೆ ಮೇವು ಕೂಡಿಸುವುದು – ಇವೇ ಮೊದಲಾದುವು.
ಆಚಾರ್ಯರು ಹೇಳಿದ ಕೆಲಸವನ್ನು ಮಾಡುವುದೆಂದರೆ ನಚಿಕೇತನಿಗೆ ಅದೇನು ಸಂತೋಷವೋ! “ನಚಿಕೇತ ಕುಮಾರಾ” ಎಂದು ಅವರು ಕರೆಯುವುದೇ ತಡ, “ಗುರುದೇವ, ಏನಪ್ಪಣೆ?” ಎಂದು ಕೈ ಜೋಡಿಸಿ ನಿಲ್ಲುತ್ತಿದ್ದ. ಅವನಿಗೆ ಕೆಲಸ ಹೇಳಬೇಕಾಗಿಯೇ ಇಲ್ಲ. ಆಚಾರ್ಯರ ಮುಖಭಾವದಿಂದಲೇ ತಿಳಿದುಕೊಂಡು ಆ ಕೆಲಸ ಮಾಡಿ ಬರುತ್ತಿದ್ದನು ನಚಿಕೇತ.
ನಚಿಕೇತನು ಗುರುಗಳನ್ನು ಮೆಚ್ಚಿಸಿ ವಿದ್ಯೆ ಕಲಿತದ್ದು ಹೀಗೆ. ಯಾವ ಪಾಠವೇ ಆಗಲಿ, ಅವನಿಗೆ ಒಂದೇ ಸಲಕ್ಕೆ ಬಾಯಿಗೆ ಬಂದುಬಿಡುತ್ತಿತ್ತು. ಪ್ರತಿದಿನವೂ ಅವನಿಗೆ ಹೊಸ ಪಾಠ. ಕಲಿತಿದ್ದನ್ನು ಅವನು ಮರೆಯುವಂತೆಯೇ ಇಲ್ಲ. ಅವನಿಗೆ ಪಾಠ ಹೇಳುವಾಗ ಆಚಾರ್ಯರಿಗೆ ಎಷ್ಟು ಆಯಾಸವಿದ್ದರೂ ಮರೆತುಹೋಗುತ್ತಿತ್ತು. ಆಶ್ರಮಕ್ಕೆ ಬಂದ ದೊಡ್ಡ ದೊಡ್ಡ ವಿದ್ವಾಂಸರೆಲ್ಲರೂ “ಎಷ್ಟು ಬುದ್ಧಿವಂತ! ಯಾರೀ ವಿದ್ಯಾರ್ಥಿ? ಈ ರತ್ನದಂತಹ ಹುಡುಗ ಯಾರ ಮಗ? ಇವನ ತಂದೆತಾಯಿಗಳ ಪುಣ್ಯವೇ ಪುಣ್ಯ!” ಎಂದು ನಚಿಕೇತನನ್ನು ಹೊಗಳುತ್ತಿದ್ದರು.
‘ಯಮನನ್ನು ನೋಡಬೇಕು’
ಒಂದು ಸಲ ಗುರುಕುಲಾಶ್ರಮದಲ್ಲಿ ಒಂದು ದುಃಖದ ಸಂಗತಿ ನಡೆದುಹೋಯಿತು. ಆಗ ನಚಿಕೇತನು ಹನ್ನೆರಡು ವರ್ಷದ ಬಾಲಕ. ನಚಿಕೇತ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದ ಒಂದು ಕರಿಯ ಹಸು ಸತ್ತುಹೋಯಿತು. ಆಗ ಅವನ ದುಃಖ ಹೇಳತೀರದು. ಆಚಾರ್ಯರು ಅವನನ್ನು ಸಮಧಾನಪಡಿಸಿ ಹೇಳಿದರು.
“ನಚಿಕೇತಕುಮಾರ, ಸತ್ತುಹೋದ ಮುದಿ ಹಸುವಿಗಾಗಿ ಅತ್ತರೇನು ಪ್ರಯೋಜನ? ಸತ್ತುಹೋದವರು ಮತ್ತೆ ಬದುಕಲಾರರು. ಎಲ್ಲರೂ ಒಂದಲ್ಲ ಒಂದು ದಿನ ಸಾಯಲೇಬೇಕು.”
“ಹಾಗಾದರೆ ಹಸು ಇಲ್ಲೇ ಇದೆಯಲ್ಲಾ ಗುರುದೇವ?”
“ಹಸುವಿನ ಶರೀರ ಮಾತ್ರ ಇದೆಯಪ್ಪ. ಅದರ ಪ್ರಾಣಗಳನ್ನು ಯಮನು ತೆಗೆದುಕೊಂಡು ಹೋಗಿದ್ದಾನೆ. ಯಮನೆಂದರೆ ಮೃತ್ಯುದೇವಗೆ!”
ಕೂಡಲೆ ಅವನಿಗೆ ತಾಯಿಯ ನೆನಪಾಯಿತು. ಅವನು ಹೇಳಿದ “ಹೌದು ಗುರುದೇವ, ಚಿಕ್ಕಂದಿನಲ್ಲಿ ನಮ್ಮ ತಾಯಿಯೂ ಹಾಗೆಯೇ ಹೇಳಿದ್ದರು. ಅಂದಿನಿಂದಲೂ ಆ ಯಮನನ್ನು ನೋಡಬೇಕೆಂದು ನನಗೆ ಆಸೆ.”
ಆಚಾರ್ಯರು ನಕ್ಕು ಹೇಳಿದರು – “ಅದು ಅಷ್ಟು ಸುಲಭವಲ್ಲಪ್ಪಾ ನಚಿಕೇತ. ಏಕೆಂದರೆ ಯಮನ ಬಳಿಗೆ ಹೋಗುವುದೆಂದರೆ ಸತ್ತಹಾಗೆಯೇ ಅರ್ಥ. ಅಂತಹವರು ಮತ್ತೆ ಬದುಕಿ ಬರಲಾರರು.”
ನಚಿಕೇತನಿಗೆ ತುಂಬಾ ನಿರಾಸೆಯಾಯಿತು. “ಹಾಗಾದರೆ ಯಮನನ್ನು ನೋಡಿಬರಲು ಯಾರಿಗೂ ಸಾಧ್ಯವೆ ಇಲ್ಲವೆ?” ಎಂದು ಪ್ರಶ್ನಿಸಿದ.
“ತುಂಬಾ ಸಾಹಸಿಗಳಾದ ತಪಸ್ವಿಗಳಿಗೆ ಅದು ಸಾಧ್ಯವಿರಬಹುದು. ಆದರೆ ಅಂತಹ ಸಾಹಸವನ್ನು ಈವರೆಗೆ ಯಾರೂ ಮಾಡಿಲ್ಲ. ಇರಲಿ, ಕತ್ತಲಾಯಿತು ಬಾ, ಒಳಕ್ಕೆ ಹೋಗೋಣ ಎನ್ನುತ್ತಾ ಆಚಾರ್ಯರೇನೋ ಹೊರಟು ಹೋದರು. ನಚಿಕೆತನಿಗೆ ಎಲ್ಲಿಲ್ಲದ ಚಿಂತೆ. ಅವನು ಕೊನೆಗೆ ತನ್ನಲ್ಲೇ, “ಇರಲಿ, ಸಾಹಸ ಮಾಡಿ ಆ ಯಮನನ್ನು ಎಂದಾದರೂ ನಾನು ನೋಡಲೇಬೇಕು” ಎಂದುಕೊಂಡನು. ಹೀಗೆಯೇ ಕೆಲವು ದಿನಗಳು ಕಳೆದುವು.
ವಿಶ್ವಜಿತ್ ಯಾಗ
ಇತ್ತ ನಚಿಕೇತನ ತಂದೆಯಾದ ವಾಜಶ್ರವಸ ಋಷಿಯು ಒಂದು ದೊಡ್ಡ ಯಾಗವನ್ನು ಮಾಡಲು ನಿಶ್ಚಯಿಸಿದನು. ಅದರ ಹೆಸರು ವಿಶ್ವಜಿತ್ ಯಾಗ. ವಾಜಶ್ರವಸನು ಎಲ್ಲಾ ತಪೋವನಗಳ ಋಷಿಗಳಿಗೂ ಕರೆಕಳುಹಿಸಿದನು. ಹತ್ತು ದಿನಗಳ ಮೊದಲೇ ಗುರುಕುಲಾಶ್ರಮಕ್ಕೆ ಬಂದು, “ಆಚಾರ್ಯರೇ, ಯಾಗಕ್ಕೆ ತಾವು ಶಿಷ್ಯರನ್ನೆಲ್ಲಾ ಕರೆದುಕೊಂಡು ಮುಂಚಿತವಾಗಿ ಬರಬೇಕು. ನಮ್ಮ ನಚಿಕೇತನನ್ನೂ ಕರೆದುಕೊಂಡು ಬನ್ನಿ” ಎಂದು ಹೇಳಿಹೋದ.
ಗೊತ್ತಾದ ದಿನದಲ್ಲಿ ಆಚಾರ್ಯರು ಶಿಷ್ಯರೊಡನೆ ಹೊರಟರು. ಆಗಿನ ಕಾಲದಲ್ಲಿ ನಡೆದೇ ಪ್ರಯಾಣ ಮಾಡಬೇಕಾಗಿತ್ತಲ್ಲವೆ? ದಾರಿಯಲ್ಲಿ ನಚಿಕೇತನು ಆಚಾರ್ಯರನ್ನು ಕೇಳಿದ, “ಗುರುದೇವ, ನಮ್ಮ ತಂದೆ ವಿಶ್ವಜಿತ್ ಯಾಗವನ್ನು ಏತಕ್ಕೆ ಮಾಡುತ್ತಿದ್ದಾರೆ?”
“ಕುಮಾರ ವಿಶ್ವಜಿತ್ ಎಂದರೆ ಪ್ರಪಂಚವನ್ನೇ ಗೆಲ್ಲುವುದೆಂದು ಅರ್ಥ. ಪ್ರಪಂಚದಲ್ಲಿ ಶ್ರೇಷ್ಠನೆಂಬ ಕೀರ್ತಿ ಮತ್ತು ಸ್ವರ್ಗದಲ್ಲಿ ಅಪಾರ ಸುಖಗಳನ್ನು ಪಡೆಯಲು ನಿಮ್ಮ ತಂದೆ ಈ ಯಾಗವನ್ನು ಮಾಡುತ್ತಿದ್ದಾರೆ.”
ಸ್ವರ್ಗ ಪಡೆಯಬೇಕಾದರೆ ಪುಣ್ಯ ಕಾರ್ಯಗಳನ್ನು ಮಾಡಬೇಕೆಂದು ನನ್ನ ತಾಯಿಯವರು ಹೇಳಿದ್ದರಲ್ಲ?”
“ಹೌದಪ್ಪ , ಈ ಹಾಗದಿಂದ ಅಂತಹ ಪುಣ್ಯ ಬರುತ್ತದೆ. ಏಕೆಂದರೆ ಈ ಯಾಗದಲ್ಲಿ ಅಪಾರವಾದ ಅನ್ನದಾನ ನಡೆಯುತ್ತದೆ. ಸಾವಿರಾರು ಗೋವುಗಳನ್ನು ದಾನ ಮಾಡಲಾಗುತ್ತದೆ. ಅಷ್ಟೇ ಅಲ್ಲ. ತನ್ನಲ್ಲಿ ಏನೂ ಉಳಿಸಿಕೊಳ್ಳದೆ ಎಲ್ಲವನ್ನೂ ದಾನ ಮಾಡಲೇಬೇಕೆಂದು ಈ ಯಾಗದ ನಿಯಮ.”
“ಅಬ್ಬ, ಹಾಗಾದರೆ ಏನೇನು ದಾನ ಮಾಡಬೇಕು ಗುರುದೇವ?”
ನಚಿಕೇತ, ಒಡವೆ, ವಸ್ತು ಎಲ್ಲವನ್ನೂ ದಾನ ಮಾಡಬಹುದು. ತನಗೆ ಪ್ರಿಯವಾಗಿರುವ ಮತ್ತು ಇತರರಿಗೆ ಉಪಯೋಗವಾಗುವ ದಾನವನ್ನು ಎಷ್ಟು ಮಾಡಿದರೆ ಅಷ್ಟು ಪುಣ್ಯ!”
“ಗುರುದೇವ, ನಾನು ತಂದೆಗೆ ಬಹಳ ಪ್ರೀತಿಯ ಮಗ. ಹಾಗಾದರೆ ನನ್ನನ್ನೂ ದಾನ ಮಾಡಬಹುದೇ?”
ಆಚಾರ್ಯರು ನಕ್ಕು ಹೇಳಿದರು: “ನಚಿಕೇತ, ತುಂಬಾ ಚೆನ್ನಾಗಿ ಕೇಳಿದೆ. ನಿನ್ನನ್ನು ದಾನ ಮಾಡಬೇಕಾದ ಅಗತ್ಯವಾದರೂ ಏನಿದೆ? ನೀನೇನೂ ಭಯ ಪಡಬೇಡ. ನಿಮ್ಮ ತಂದೆ ನಿನ್ನನ್ನು ಯಾರಿಗೂ ದಾನ ಕೊಡಲಾರರು.”
ಹೀಗೆ ಮಾತನಾಡುತ್ತಾ ಅಂತೂ ಕುಟೀರವನ್ನು ತಲುಪಿದ್ದೇ ತಡ ನಚಿಕೇತನಿಗೆ ತಾಯಿಯನ್ನು ಕಾಣುವ ಆತುರ ಸಿಡಿಯಿತು. ಅವನು ಬಂದು ಪಾದಗಳಿಗೆ ನಮಸ್ಕರಿಸಿದಾಗ ವಿಶ್ವವರಾದೇವಿಗೆ ಆದ ಸಂತೋಷ ಅಷ್ಟಿಷ್ಟಲ್ಲ.
ವಿಶ್ವಜಿತ್ ಯಾಗವು ಪ್ರಾರಂಭವಾಯಿತು. ಮಂಗಳ ವಾದ್ಯಗಳು, ನೂರಾರು ಕಂಬಗಳ ಚಪ್ಪರಗಳು, ಸಾವಿರಾರು ಜನರ ಸಭೆ, ನೂರಾರು ಮಂದಿ ಮಹರ್ಷಿಗಳು-ನೋಡುವುದಕ್ಕೆ ಎರಡು ಕಣ್ಣು ಸಾಲದು. ನೂರಾರು ಕಂಠಗಳಿಂದ ವೇದಮಂತ್ರಗಳ ಧ್ವನಿ ಆಕಾಶಕ್ಕೆ ಮುಟ್ಟುತ್ತಿದೆ. ವಾಜಶ್ರವಸನು ಆ ದಿನ ಕೋಪವಿಲ್ಲದೆ ಬಹುಶಾಂತ ಮನಸ್ಸಿನಿಂದ ಹೋಮ ಮಾಡುತ್ತಿದ್ದಾನೆ. ಯಾಗದ ನಿಯಮವೇ ಹಾಗೆ.
“ವಾಜಶ್ರವಸ ಋಷಿಗಳೇ, ಯಜ್ಞ ಮುಗಿಯುವವರೆಗೂ ಕೋಪ ಬಿಡಬೇಕು. ಬಾಯಲ್ಲಿ ನೀವು ಏನು ಹೇಳುತ್ತೀರೋ ಆ ಕೆಲಸ ತಪ್ಪದೆ ನಡೆಯಬೇಕಲು. ಇಲ್ಲದಿದ್ದರೆ ಯಾಗವೇ ನಿಷ್ಫಲವಾಗುತ್ತದೆ” ಎಂದು ಮಹರ್ಷಿಗಳೆಲ್ಲರೂ ಮೊದಲೇ ತಿಳಿಸಿದ್ದರು.
ತಂದೆ ಹೀಗೇಕೆ ಮಾಡಿದ?
ಮಧ್ಯಾಹ್ನದ ವೇಳೆಗೆ ಗೋದಾನದ ಸಮಯ ಬಂದಿತು. ಪುರೋಹಿತರು “ವಾಜಶ್ರವಸ, ದಾನ ಮತ್ತು ದಕ್ಷಿಣೆಗಳಿಗೆ ಹಸುಗಳ ಹಿಂಡನ್ನು ತರಿಸಿರಿ” ಎಂದರು.
ವಾಜಶ್ರವಸನು ತನ್ನ ಗೋಶಾಲೆಗೆ ಸೇವಕರನ್ನು ಕಳುಹಿಸಿ ಗೋವುಗಳನ್ನು ತರಿಸಿದ. ಒಂದಲ್ಲ, ಎರಡಲ್ಲ, ನೂರಾರು ಹಸುಗಳು ಯಜ್ಞಮಂಟಪದ ಮುಂದೆ ಬಂದು ನಿಂತವು. ನಚಿಕೇತನು ಆ ಹಸುಗಳ ಬಳಿಗೆ ಹೋದ. ಅವನ್ನು ಒಂದೊಂದಾಗಿ ಪರೀಕ್ಷಿಸತೊಡಗಿದ.
ಆ ಹಿಂಡಿನಲ್ಲಿದ್ದ ಕೆಲವು ಹಸುಗಳು ತುಂಬಾ ಸಣಕಲಾಗಿದ್ದುವು. ಇನ್ನು ಕೆಲವಕ್ಕೆ ಹಲ್ಲುಗಳೆಲ್ಲಾ ಉದುರಿಹೋಗಿವೆ. ಅವು ಮೇವನ್ನೇ ತಿನ್ನಲಾರವು. ಇನ್ನು ಕೆಲವಂತೂ ತುಂಬಾ ಮುದಿಯಾಗಿದ್ದು ಈಗಲೋ ಆಗಲೋ ಸಾಯುವಂತೆ ಬಿದ್ದುಕೊಂಡಿವೆ. ಉಳಿದುವು ಬರಡು ಹಸುಗಳು, ಅವು ಹಾಲನ್ನು ಕೊಡುವುದಿಲ್ಲ.
ನಚಿಕೇತನಿಗೆ ಅವನ್ನು ಕಂಡು ತುಂಬಾ ಸಂಕಟವಾಯಿತು. ಅವನು ಯೋಚನೆ ಮಾಡಿದ:
“ತಂದೆ ಹೀಗೇಕೆ ಮಾಡಿದ? ಒಳ್ಳೆಯ ಹಸುಗಳೆಲ್ಲಾ ಏನಾದುವು? ಯಾರಿಗೂ ಉಪಯೋಗವಿಲ್ಲದ, ಕೆಲಸಕ್ಕೆ ಬಾರದ ಈ ಹಸುಗಳನ್ನು ದಾನಮಾಡಿದರೆ ಪುಣ್ಯ ಹೇಗೆ ಬಂದೀತು? ಈ ಹಸುಗಳಿಗೆಲ್ಲಾ ಮೇವನ್ನೊದಗಿಸುವುದು ಯಾರಿಗಾದರೂ ಕಷ್ಟ. ಅಪ್ಪನೂ ಅದಕ್ಕಾಗಿಯೇ ದಾನದ ಹೆಸರಿನಲ್ಲಿ ಇವನ್ನು ಬೇರೆಯವರಿಗೆ ಕಟ್ಟುತ್ತಿದ್ದಾನೆ. ಇದು ತಪ್ಪು, ಅಪ್ಪನು ಮಾಡುತ್ತಿರುವುದು ಮೋಸ. ಸ್ವರ್ಗಕ್ಕಾಗಿ ಅವನು ಯಾಗ ಮಾಡುತ್ತಿದ್ದಾನೆ. ಆದರೆ ಇಂತಹ ದಾನ ಮಾಡುವುದರಿಂದ ಆತನು ನರಕಕ್ಕೆ ಹೋಗಬೇಕಾಗುತ್ತದಲ್ಲ!”
ನರಕದ ಹೆಸರು ನೆನಪಾದ ಕೂಡಲೇ ನಚಿಕೇತನಿಗೆ ಮೈ ನಡುಗಿತು. ದುಃಖ ಉಕ್ಕಿ ಬಂದಿತು.
ಛೇ, ಅಪ್ಪನಿಗೆ ನರಕವಾಗಕೂಡದು. ನಾನು ಅದನ್ನು ತಪ್ಪಿಸಬೇಕು. ಆದರೆ ಅಪ್ಪನಿಗೆ ಈಗ ಇದನ್ನೆಲ್ಲಾ ಹೇಳುವಂತಿಲ್ಲ. ಆತನಿಗೆ ಸಿಟ್ಟು ಬಂದುಬಿಡುತ್ತದೆ. “ಹಾಗಾದರೆ ಏನು ಮಾಡುವುದು?”
“ನಿನ್ನನ್ನು ಮೃತ್ಯುವಿಗೆ ದಾನಮಾಡಿದ್ದೇನೆ, ಹೋಗು!”
ನಚಿಕೇತ ತುಂಬಾ ಯೋಚಿಸಿದ. ಆದರೆ ಹೆಚ್ಚು ಹೊತ್ತು ಹಾಗೆ ಕುಳಿತಿರುವಂತಿಲ್ಲ. ಕುಳಿತಿದ್ದರೆ ದಾನದ ಕೆಲಸ ನಡೆದುಹೋಗುತ್ತದೆ. ಕೊನೆಗೆ ಅವನಿಗೆ ಉಪಾಯ ಹೊಳೆಯಿತು.
ತನಗೆ ಪ್ರಿಯವಾದ ಎಲ್ಲವನ್ನೂ ದಾನಮಾಡಬೇಕೆಂದು ಈ ಯಾಗದ ನಿಯಮ. ಆದರೆ ತಂದೆಯು ಪ್ರಿಯವಾದುದನ್ನು ಉಳಿಸಿಕೊಂಡು ಬೇಡವಾದುದನ್ನು ಕೊಡುತ್ತಿದ್ದಾನೆ. ಹಾಗೆ ಉಳಿಸಿಕೊಳ್ಳುತ್ತಿರುವುದು ನನಗಾಗಿಯೇ ಇರಬಹುದು. ಅಂದಮೇಲೆ ಅಪ್ಪನಿಗೆ ಎಲ್ಲಾ ವಸ್ತುಗಳಿಗಿಂತಲೂ ಪ್ರಿಯವಾದವನು ನಾನು. ಆದ್ದರಿಂದ ನನ್ನನ್ನೇ ದಾನವಾಗಿ ಕೊಟ್ಟುಬಿಟ್ಟರೆ ಎಲ್ಲಾ ಸರಿಹೋಗುತ್ತದೆ.
ನಚಿಕೇತನು ತಂದೆಗೆ ಒಳ್ಳೆಯದಾಗಲೆಂದು ತನ್ನನ್ನೇ ದಾನ ಮಾಡಿಸಲು ನಿಶ್ಚಯಿಸಿದನು. ಇದನ್ನೇ ತ್ಯಾಗವೆನ್ನುವುದು, ಅವನು ತಂದೆಯ ಪಕ್ಕಕ್ಕೆ ಹೋಗಿ ಮೆಲ್ಲನೆ ಪ್ರಶ್ನಿಸಿದ.
“ಅಪ್ಪಾ, ನನ್ನನ್ನು ಯಾರಿಗೆ ದಾನವಾಗಿ ಕೊಡುತ್ತೀರಿ”
ವಾಜಶ್ರವಸ ಋಷಿ ಒಮ್ಮೆ ಮಗನ ಕಡೆಗೆ ನೋಡಿದ. ಇದೆಂತಹ ಹುಚ್ಚ ಇವನು, ಏನೇನೋ ಕೇಳುತ್ತಾನೆ ಎಂದುಕೊಂಡು ಉತ್ತರ ಕೊಡಲಿಲ್ಲ. ದಾನಕ್ಕೆ ಬೇಕಾದ ಸಿದ್ಧತೆ ಮಾಡುವುದರಲ್ಲಿದ್ದ . ನಚಿಕೇತನು ಮತ್ತೆ ಸ್ವಲ್ಪ ಗಟ್ಟಿಯಾಗಿಯೇ ಕೇಳಿದ
“ಅಪ್ಪಾ, ನನ್ನನ್ನು ಯಾರಿಗೆ ದಾನಮಾಡುತ್ತೀರಿ?”
ವಾಜಶ್ರವಸನಿಗೆ ಸಿಟ್ಟುದ ಬರುವುದರಲ್ಲಿತ್ತು. ಆದರೆ ಕೋಪವನ್ನು ತಡೆದುಕೊಂಡ. ನಚಿಕೇತನು ಇನ್ನು ನಿಧಾನಿಸಿದರೆ ಪ್ರಯೋಜನವಿಲ್ಲ. ಅಪ್ಪನಿಗೆ ಕೇಳಿಸಲಿಲ್ಲವೋ ಏನೋ ಎಂದುಕೊಂಡು “ಅಪ್ಪಾ ನನ್ನನ್ನು ಯಾರಿಗೆ ದಾನಮಾಡುತ್ತೀರಿ, ಹೇಳಿರಿ” ಎಂದು ಸುತ್ತಲಿನವರಿಗೆಲ್ಲಾ ಕೇಳಿಸುವಂತೆ ಪ್ರಶ್ನಿಸಿಬಿಟ್ಟ.
ವಾಜಶ್ರವಸ ಋಷಿಗೆ ತಡೆಯಲಾಗದಷ್ಟು ಕೋಪ ಬಂದು ಬಿಟ್ಟಿತು. ಕೋಪಮಾಡಿಕೊಳ್ಳಬಾರದೆಂಬ ನಿಯಮವನ್ನೇ ಮರೆತುಹೋಗಿ “ನಿನ್ನನ್ನು ಮೃತ್ಯುವಿಗೆ ದಾನ ಕೊಟ್ಟಿದ್ದೇನೆ ಹೋಗು” ಎಂದು ಗದರಿಬಿಟ್ಟ.
ಆ ಮಾತನ್ನು ಕೇಳಿ ಮಹರ್ಷಿಗಳೆಲ್ಲರಿಗೂ ಗಾಬರಿಯಾಯಿತು. ಮಂತ್ರ ಹೇಳುವುದನ್ನು ನಿಲ್ಲಿಸಿಬಿಟ್ಟರು. “ಇದೇನು ವಾಜಶ್ರವಸರೇ, ನಿಯಮವನ್ನೇ ಮರೆತು ಹೋದಿರಲ್ಲ! ಕೋಪದಲ್ಲಿ ಮಗನನ್ನು ಮೃತ್ಯುವಿಗೆ ಕೊಡುವುದಾಗಿ ಬಾಯಲ್ಲಿ ಹೇಳಿಬಿಟ್ಟಿರಿ. ದಾನ ಕೊಡುವ ಕಾಲದಲ್ಲಿ ಆಡಿದ ಮಾತನ್ನು ನಡೆಸಿಕೊಡಲೇಬೇಕು. “ಇಲ್ಲದಿದ್ದರೆ ಯಾಗವೆ ನಿಂತುಹೋಗುತ್ತದೆ. ಈಗೇನು ಮಾಡುತ್ತೀರಿ?” ಎಂದರು.
ವಾಜಶ್ರವಸನಿಗೂ ತನ್ನ ತಪ್ಪು ತಿಳಿಯಿತು. ಅವನಿಗೆ ದಿಕ್ಕು ತೋಚಲಿಲ್ಲ. “ಅಯ್ಯೋ, ಈ ಕೆಟ್ಟ ಕೋಪದಲ್ಲಿ ನಾನು ಇಂತಹ ಮಾತನ್ನಾಡಿದೆನಲ್ಲ, ಇನ್ನೇನು ಗತಿ!” ಎಂದು ಕಣ್ಣೀರು ಸುರಿಸುತ್ತಾ ತನ್ನ ಕುಟೀರದೊಳಕ್ಕೆ ಬಂದುಬಿಟ್ಟ. ಯಾಗ ಅಷ್ಟಕ್ಕೇ ನಿಂತಿತು. ಆತನು ತಲೆಯ ಮೇಲೆ ಕೈಹೊತ್ತು ಚಿಂತಿಸುತ್ತಾ ಕುಳಿತುಬಿಟ್ಟ. ವಿಶ್ವವರಾದೇವಿಯಂತೂ ಮಾತನ್ನೇ ಆಡಲಾರಳು. ಬಿಕ್ಕುತ್ತಾ ಕುಳಿತಿದ್ದಾಳೆ.
ನಚಿಕೇತನು ಕುಟೀರದೊಳಕ್ಕೆ ಬಂದು ತಂದೆಯನ್ನು ನೋಡಿದ. ಅವನಿಗೂ ಸಂಕಟವಾಯಿತು. ಅವನು ಯೋಚಿಸಿದ ಅಪ್ಪನಿಗೆ ಈಗ ತುಂಬಾ ನೋವಾಗಿದೆ. ಮೃತ್ಯುವಿಗೆ ನನ್ನನ್ನು ಕೊಟ್ಟಿದ್ದ ಮಾತ್ರಕ್ಕೆ ಚಿಂತೆಯೇಕೆ ಪಡಬೇಕು? ಮೃತ್ಯುವೆಂದರೆ ಯಮ. ನಾನು ಆತನಿಗೆ ವಿಧೇಯನಾಗಿರಬೇಕು, ಅಷ್ಟೇ ತಾನೇ? ಯಮನು ನನಗೆ ಏನೆಂದು ಅಪ್ಪಣೆ ಕೊಡುತ್ತಾನೋ ನೋಡಿಯೇಬಿಡುತ್ತೇನೆ – ಹೀಗೆಂದುಕೊಂಡು ತಂದೆಯನ್ನು ಕುರಿತು ಹೇಳಿದ. “ಅಪ್ಪಾ ನೀವು ಯೋಚಿಸಬೇಡಿ. ನಮ್ಮದು ಪವಿತ್ರವಾದ ಗೌತಮ ಅರಣಿಗಳ ವಂಶವಲ್ಲವೆ? ಅವರೆಲ್ಲವೂ ಸತ್ಯವಂತರು. ನಿಮ್ಮ ಮಾತು ಕೂಡ ಸತ್ಯವಾಗಿಯೇ ತೀರುತ್ತದೆ.
“ನಾನೆಷ್ಟು ತಪ್ಪು ಮಾಡಿದೆ ಕಂದಾ!” ಎಂದು ವಾಜಶ್ರವಸ ಋಷಿ ಬಾಚಿ ತಬ್ಬಿಕೊಂಡು, “ಇದು ಸತ್ಯವಾಗುವ ಮಾರ್ಗವಿದ್ದರೆ ಮಾಡಪ್ಪ” ಎಂದು ಹೇಳಿದ.
‘ಇದು ಯಾವ ಲೋಕ?’
ಕೂಡಲೇ ನಚಿಕೇತನು ಪದ್ಮಾಸನದಲ್ಲಿ ಕುಳಿತು ಕಣ್ಣು ಮುಚ್ಚಿದ. ಕೈಜೋಡಿಸಿ ಮನಸ್ಸಿನಲ್ಲಿ ಯಮಧರ್ಮರಾಜನನ್ನು ಧ್ಯಾನ ಮಾಡತೊಡಗಿದ. ಹಾಗೆ ಎಷ್ಟೋ ಹೊತ್ತು ಕಳೆಯಿತು. ಅವನಿಗೆ ಹೊರಗಿನ ಲೋಕವೇ ಮರೆತುಹೋಯಿತು. ಇದ್ದಕ್ಕಿದ್ದಂತೆ ಯಾರೋ ಅವನನ್ನು ಕರೆದಹಾಗಾಯಿತು. ತಟ್ಟನೆ ಕಣ್ಣು ತೆರೆದ ನಚಿಕೇತ.
ಅಲ್ಲಿ ವಾಜಶ್ರವಸನೂ ಇಲ್ಲ, ಯಜ್ಞ ಮಂಟಪವೂ ಇಲ್ಲ, ಮಹರ್ಷಿಗಳಾಗಲೀ ಕುಟೀರವಾಗಲೀ ಇಲ್ಲ. ನಚಿಕೇತನು ಕಂಡಿದ್ದೇನು?
ಅದೊಂದು ಹೊಸ ಲೋಕ. ಅದೊಂದು ಪಟ್ಟಣ. ಎದುರಿನಲ್ಲಿ ದೊಡ್ಡ ಅರಮನೆ. ಅದರ ಗೋಡೆಗಳೆಲ್ಲಾ ಬಂಗಾರದಂತೆ ಹೊಳೆಯುತ್ತಿದ್ದವು. ನಚಿಕೇತನಿಗೆ ಅದನ್ನು ಕಂಡು ಆಶ್ಚರ್ಯವೋ ಆಶ್ಚರ್ಯ. ನಿಧಾನವಾಗಿ ಎದ್ದು ಅರಮನೆಯ ಬಾಗಿಲ ಬಳಿಗೆ ಬಂದ. ಬಾಗಿಲಲ್ಲಿ ಇಬ್ಬರು ಕಟ್ಟಾಳುಗಳು ಕತ್ತಿ ಹಿಡಿದು ನಿಂತಿದ್ದರು. ದೊಡ್ಡ ಆಕಾರದ, ಹುರಿಮೀಸೆಯ ಆ ಕರಿಯ ಆಳುಗಳನ್ನು ಕಂಡು ನಚಿಕೇತನಿಗೆ ಸ್ವಲ್ಪ ಹೆದರಿಕೆಯಾದರೂ ಧೈರ್ಯ ತಂದುಕೊಂಡು “ಕೇಳಿದ ಅಯ್ಯಾ ನೀವಾರು? ಇದು ಯಾವ ಲೋಕ?”
ಅವರು ಹೇಳಿದರು “ಇದು ಸಂಯಮನೀ ನಗರದಲ್ಲಿ ರಾಜ ಯಮದೇವನ ಅರಮನೆ. ಬ್ರಹ್ಮಚಾರಿಗಳೇ, ತಾವು ಏತಕ್ಕಾಗಿ ಬಂದಿದ್ದೀರಿ?”
‘ಆಹಾ! ನನ್ನ ಪುಣ್ಯವೇ ಪುಣ್ಯ. ಪೂಜ್ಯರೇ , ನಾನು ವಾಜಶ್ರವಸ ಮಗ. ನಾನು ಯಮದೇವರನ್ನು ಕಾಣಲು ತಂದೆಯಿಂದ ಅಪ್ಪಣೆಯಾಗಿದೆ. ದಯವಿಟ್ಟು ನನ್ನನ್ನು ಅವರಲ್ಲಿಗೆ ಕರೆದೊಯ್ಯಿರಿ ಎಂದ ನಚಿಕೇತ. ಆ ಸೇವಕರು ಒಳಕ್ಕೆ ಹೋಗಿ ಮತ್ತೆ ಬಂದು ಹೇಳಿದರು “ಮಹಾತ್ಮನೇ, ಪ್ರಭುಗಳಾದ ಯಮದೇವರು ಯಾವುದೋ ಕೆಲಸದ ಮೇಲೆ ಹೋಗಿದ್ದಾರೆ. ಬರುವುದು ಇನ್ನೂ ಮೂರು ದಿನಗಳಾಗುತ್ತವೆ. ಆದರೂ ಅವರು ಬರುವವರೆಗೆ ತಾವು ನಮ್ಮ ಅತಿಥಿಗಳಾಗಿ ಅರಮನೆಯಲ್ಲಿ ಇರಬಹುದೆಂದು ಮಹಾರಾಣಿಯವರು ಹೇಳಿದ್ದಾರೆ.”
ನಚಿಕೇತನು ಅದಕ್ಕೊಪ್ಪಲಿಲ್ಲ. “ಪೂಜ್ಯರೇ, ನಾನು ಯಮದೇವರ ಅಪ್ಪಣೆಯಂತೆ ನಡೆಯಬೇಕೆಂದು ನನ್ನ ತಂದೆ ಅಪ್ಪಣೆ ಮಾಡಿದ್ದಾರೆ. ಆದ್ದರಿಂದ ಯಮದೇವರು ಬರುವವರೆವಿಗೂ ನಾನು ಇಲ್ಲೇ ಇರಬೇಕಾದುದು ಧರ್ಮ” ಎಂದು ಹೇಳಿಬಿಟ್ಟ. ಅನಂತರ ಅವನು ಅರಮನೆಯ ಹೊರಗೆ ಒಂದು ಸ್ಥಳದಲ್ಲಿ ಕೃಷ್ಣಾಜಿನ (ಜಿಂಕೆಯ ಚರ್ಮ ) ಹಾಸಿ ಕುಳಿತ. ಕಣ್ಣು ಮುಚ್ಚಿ, ಕೈ ಜೋಡಿಸಿ ಧ್ಯಾನದಲ್ಲಿ ಮನಸ್ಸನ್ನು ನಿಲ್ಲಿಸಿದ.
ಮೂರು ರಾತ್ರಿಗಳು ಕಳೆದುಹೋದವು . ನಚಿಕೇತನು ಕುಳಿತ ಜಾಗದಿಂದ ಏಳಲೇ ಇಲ್ಲ. ಅನ್ನ , ನೀರು ಇಲ್ಲದೆ ಉಪವಾಸವೇ ಇದ್ದರೂ ಅವನ ಮನಸ್ಸು ಮಾತ್ರ ದೇವರನ್ನೇ ಧ್ಯಾನಿಸುತ್ತಿತ್ತು. ಇದನ್ನೇ ತಪಸ್ಸು ಎನ್ನುವುದು. ಅವನ ತಪಸ್ಸನ್ನು ಕಂಡು ಸ್ವರ್ಗದ ದೇವತೆಗಳಿಗೆ ಕೂಡ ಆಶ್ಚರ್ಯವಾಯಿತು.
‘‘ಮೂರು ವರಗಳನ್ನು ಕೇಳು”
ನಾಲ್ಕನೆಯ ದಿನ ಯಮನು ಅರಮನೆಗೆ ಬರುತ್ತಲೇ ಅವನಿಗೆ ವಿಷಯವೆಲ್ಲಾ ತಿಳಿಯಿತು. ಯಮನ ರಾಣಿಯೂ ಕೂಡ, “ಮನೆಗೆ ಬಂದ ಅತಿಥಿಯು ಉಪವಾಸವಿರುವುದು ನಮಗೆ ಒಳ್ಳೆಯದಲ್ಲ, ನೀವು ಅವರನ್ನು ಕೂಡಲೇ ಕರೆದುಕೊಂಡು ಬನ್ನಿರಿ” ಎಂದಳು.
ಯಮದೇವನಿಗೆ ನಚಿಕೇತನ ತಪಸ್ಸನ್ನು ನೋಡಿ ಮೆಚ್ಚಿಕೆಯಾಯಿತು. ಚಿಕ್ಕವನಾದ ನಚಿಕೇತನಿಗೆ ದೇವನಾದ ಯಮನು ಕೈಜೋಡಿಸಿ “ಓ ಬ್ರಹ್ಮನ್, ಬ್ರಾಹ್ಮಣೋತ್ತಮನೆ” ಎಂದು ಕರೆದ. ನಚಿಕೇತನು ಕಣ್ಣು ತೆರೆದ. ತನ್ನ ಎದುರಿಗೆ ನಿಂತು ಕಣ್ಣು ಕೋರೈಸುವಂತೆ ಬೆಳಗುತ್ತಿರುವ ಯಮನನ್ನು ಕಂಡು ನಮಸ್ಕರಿಸಿ, “ಭಗವಂತನಾದ ಧರ್ಮರಾಜನೇ , ತಂದೆಯ ಅಪ್ಪಣೆಯಂತೆ ಇಲ್ಲಿಗೆ ಬಂದುಬಿಟ್ಟಿದ್ದೇನೆ. ತಾವು ಅಪ್ಪಣೆ ಮಾಡಿದಂತೆ ನಡೆದುಕೊಳ್ಳುತ್ತೇನೆ” ಎಂದ.
ಯಮಧರ್ಮರಾಜನು ಅವನನ್ನು ಅರಮನೆಯೊಳಕ್ಕೆ ಕರೆದುಕೊಂಡು ಬಂದು ಎತ್ತರವಾದ ಪೀಠದಲ್ಲಿ ಕುಳ್ಳಿರಿಸಿದ. ಅವನ ಪಾದಗಳನ್ನು ತೊಳೆದು ಹಾಲು, ಹಣ್ಣುಗಳನ್ನು ಕೊಟ್ಟು ಉಪಚಾರ ಮಾಡಿದ. ಅನಂತರ ಹೇಳಿದ, “ನಚಿಕೇತ ಕುಮಾರ, ಲೋಕದಲ್ಲಿ ಎಲ್ಲರಿಗೂ ಅತಿತಿಯೇ ದೇವರು. ಆದರೆ ನನ್ನಿಂದ ನೀನು ಮೂರು ರಾತ್ರಿ ಉಪವಾಸವಿರಬೇಕಾಯಿತು. ಕೋಪ ಮಾಡಿಕೊಳ್ಳದೆ ನನ್ನನ್ನು ಕ್ಷಮಿಸು. ಹೀಗೆ ಉಪವಾಸವಿರಿಸಿದ್ದಕ್ಕೆ ಪ್ರತಿಯಾಗಿ ದಿನಕ್ಕೊಂದರಂತೆ ನಿನಗೆ ಮೂರು ವರಗಳನ್ನು ಕೊಡುತ್ತೇನೆ. ಏನು ಬೇಕೋ ಕೇಳು”
“ಯಮದೇವ, ನಿನ್ನ ಕೃಪೆ ಮತ್ತು ಹಿರಿಯರ ಆಶೀರ್ವಾದದಿಂದ ನನಗಾಗಿ ಬೇಡುವುದೇನೂ ಇಲ್ಲ. ಆದರೆ ತಮ್ಮ ಅಪ್ಪಣೆ ಪಾಲಿಸಬೇಕೆಂದು ನನ್ನ ತಂದೆ ಹೇಳಿದ್ದಾರೆ.”
“ನಚಿಕೇತ, ನಿನ್ನ ವಿನಯಕ್ಕೆ ತಕ್ಕುದಾದ ಮಾತನ್ನಾಡಿದೆ. ಆದರೆ ನಾನು ಆಡಿದ ಮಾತನ್ನು ತಪ್ಪಲಾರೆ. ಆದ್ದರಿಂದ ನೀನು ಮೂರು ವರಗಳನ್ನು ಕೇಳಲೇಬೇಕು” ಎಂದ ಯಮ.
ನಚಿಕೇತ ಹೇಳಿದ, “ಯಮದೇವ, ಕೋಪ ಯಾರಿಗಾದರೂ ಒಳ್ಳೆಯದಲ್ಲವೆನಿಸುತ್ತದೆ. ಕೋಪ ಬಂದಾಗ ಮನುಷ್ಯನು ಬಾಯಿಗೆ ಬಂದದ್ದನ್ನು ಅಂದುಬಿಡುತ್ತಾನೆ. ಆಮೇಲೆ ತಾನು ಆಡಿದ ಮಾತಿಗಾಗಿ ಸಂಕಟಪಡುತ್ತಾನೆ. ನನ್ನ ತಂದೆಗೆ ಯಾಗದ ಸಮಯದಲ್ಲಾದರೂ ಮನಸ್ಸಿಗೆ ಶಾಂತಿ ಇದ್ದಿದ್ದರೆ ಇಷ್ಟು ದುಃಖ ಅವರಿಗಾಗುತ್ತಿರಲಿಲ್ಲ. ಶಾಂತ ಸ್ವಭಾವ ಬರಬೇಕಾದರೆ ಸಂತೃಪ್ತಿ ಇರಬೇಕು. ನಮ್ಮ ತಂದೆಗೆ ಯಾಗ ನಿಂತುಹೋಯಿತಲ್ಲ ಎಂಬ ಅತೃಪ್ತಿಯೂ ಈಗ ಉಂಟಾಗಿದೆ.”
ಯಮದೇವನು ಹೇಳಿದ. “ನಚಿಕೇತ, ನಿನ್ನ ಚಿಂತೆಗೆ ಕಾರಣವಿಲ್ಲ, ಏಕೆಂದರೆ ನೀನು ಇಲ್ಲಿಗೆ ಸತ್ತು ಬಂದವನಲ್ಲ. ನಿಮ್ಮ ತಂಧೆ ತಪಸ್ವಿ. ಆತನ ಮಾತು ಸತ್ಯವಾಗಬೇಕೆಂದು ನಾನೇ ನಿನ್ನನ್ನು ಈ ಲೋಕಕ್ಕೆ ಬರಮಾಡಿದೆ. ಆದ್ದರಿಂದ ನಿನಗೇನು ಬೇಕೋ ಸಂತೋಷವಾಗಿ ಕೇಳು.”
“ಹಾಗಾದರೆ ಕೇಳುತ್ತೇನೆ. ನನ್ನ ತಂದೆ ಕೋಪವನ್ನು ಬಿಟ್ಟು ಶಾಂತವಾಗಿ ಸಂತೃಪ್ತನೂ ಆಗಬೇಕು ಮತ್ತು ಇಲ್ಲಿಂದ ಹಿಂತಿರುಗುವ ನನ್ನನ್ನು ನಚಿಕೇತನೆಂದೆ ಗುರುತು ಹಿಡಿದು ಪ್ರೀತಿ ತೋರಬೇಕು. ಹಾಗೆ ಮೊದಲ ವರ ಕೊಡು.”
“ಹಾಗೆಯೇ ಆಗಲಪ್ಪ, ಆತನಿಗೆ ಕೋಪ ಹೋಗಿ ಶಾಂತಿ ಲಭಿಸುತ್ತದೆ. ಯಾಗವೂ ಪೂರ್ಣವಾಗಿ ಸಂತೃಪ್ತಿ ಸಿಕ್ಕುತ್ತದೆ. ಮಗನ ಮುಖ ನೋಡಿ ಸಮಾಧಾನವೂ ಸಿಕ್ಕುತ್ತದೆ. ಇನ್ನು ಎರಡನೆಯ ವರ ಕೇಳು.”
ಅಗ್ನಿವಿದ್ಯೆ
“ಯಮದೇವ, ಸ್ವರ್ಗದಲ್ಲಿ ದೇವತೆಗಳಿರುತ್ತಾರೆಂದು ಕೇಳಿದ್ದೇನ. ಸ್ವರ್ಗಲೋಕದಲ್ಲಿರುವವರಿಗೆ ಯಾರ ಭಯವೂ ಇಲ್ಲ. ಮುದಿತನವೂ ಇಲ್ಲ. ಸಾವೂ ಇಲ್ಲ. ದೇವತ್ವ ಸಿಕ್ಕಬೇಕಾದರೆ ಅಗ್ನಿವಿದ್ಯೆ ತಿಳಿಯಬೇಕೆಂದು ಕೇಳಿದ್ದೇನೆ. ಆದ್ದರಿಂದ ನನಗೆ ಅಗ್ನಿವಿದ್ಯೆಯನ್ನು ಉಪದೇಶಿಸು .”
ಯಮನಿಗೆ ಬೇರೆ ಏನು ಹೇಳುವುದಕ್ಕೂ ದಾರಿ ಇರಲಿಲ್ಲ. ಇಂತಹ ಬಾಲಕನಿಗೆ ಅಂತಹ ವಿದ್ಯೆ ಹೇಳುವುದೇ? ಎನಿಸಿತು. ಆದರೂ, “ನಚಿಕೇತ, ನಿನಗೆ ಶ್ರದ್ಧೆ ಇದೆ. ಶ್ರದ್ಧೆ ಇರುವವರಿಗೆ ಯಾವ ವಿದ್ಯೆಯೂ ಕಲಿಯಲೂ ಕಷ್ಟವಲ್ಲ. ಹೇಳುತ್ತೇನೆ ಕೇಳು,” ಎಂದು ಹೇಳಿ ಅಗ್ನಿವಿದ್ಯೆಯನ್ನು ಉಪದೇಶ ಮಾಡಿದ. ಎಲ್ಲಾ ಹೇಳಿದ್ದಾದ ಮೇಲೆ, “ನಚಿಕೇತ, ಜ್ಞಾಪಕಶಕ್ತಿ ಹೆಚ್ಚಾಗಿದ್ದರೆ ಮಾತ್ರ ಈ ವಿದ್ಯೆ ನೆನಪಿರುತ್ತದೆ. ಆದ್ದರಿಂದ ನಾನು ಈಗ ಉಪದೇಶಿಸಿದ್ದನ್ನು ಹೇಳು ನೋಡೋಣ” ಎಂದ.
ನಚಿಕೇತನಿಗೆ ಅದೆಲ್ಲಾ ನೀರು ಕುಡಿದ ಹಾಗೆ. ಅವನು ಏಕಸಂಧಿಗ್ರಾಹಿ! ಅಂದರೆ ಒಂದು ಸಲ ಹೇಳಿಕೊಟ್ಟರೆ ಮರೆಯುವವನೇ ಅಲ್ಲ. ಯಮದೇವನ ಮುಂದೆ ಚಾಚೂ ತಪ್ಪದೆ ಎಲ್ಲವನ್ನೂ ಹೇಳಿಬಿಟ್ಟ. ಯಮನು ಮೆಚ್ಚುತ್ತಾ, “ನಿನ್ನನ್ನು ಇನ್ನು ಪರೀಕ್ಷಿಸಬೇಕಾಗಿಲ್ಲ. ನೀನು ಜ್ಞಾನವಂತನಾಗಿಬಿಟ್ಟೆ. ನಾನಾಗಿ ನಿನಗೆ ಇನ್ನೊಂದು ವರ ಕೊಡುತ್ತಿದ್ದೇನೆ. ನಿನಗೆ ನಾನು ಹೇಳಿಕೊಟ್ಟ ಈ ಅಗ್ನಿವಿದ್ಯೆ ನಿನ್ನ ಹೆಸರಿನಲ್ಲೇ ‘ನಾಚಿಕೇತಾಗ್ನಿ’ ಎಂದು ಪ್ರಸಿದ್ಧವಾಗುತ್ತದೆ. ಈ ನಾಚಿಕೇತಾಗ್ನಿಯನ್ನು ಆಚರಿಸಿದವರಿಗೆ ಸ್ವರ್ಗದಲ್ಲಿ ದೇವತ್ವ ಸಿಕ್ಕಲಿ. ನಿನಗೆ ಇನ್ನು ದೇವತ್ವ ತಾನಾಗಿಯೇ ಸಿಕ್ಕುತ್ತದೆ” ಎನ್ನುತ್ತಾ ಒಂದು ಹೊಳೆಹೊಳೆಯುವ ದಿವ್ಯವಾದ ರತ್ನಗಳ ಮಾಲೆಯನ್ನು ಅವನ ಕೊರಳಿಗೆ ಹಾಕಿದ.
ಆತ್ಮವಿದ್ಯೆ
ಇನ್ನು ಮೂರನೆಯ ವರ ಕೇಳಬೇಕಲ್ಲ? ನಚಿಕೇತನಿಗೆ ಗುರುಕುಲಾಶ್ರಮದ ನೆನಪಾಯಿತು. ಅಲ್ಲಿ ಹಸು ಸತ್ತಿದ್ದೂ, ತಾನು ದುಃಖಪಟ್ಟಿದ್ದೂ ನೆನಪಾಯಿತು. ಅವನು ಕೇಳಿದ, ಯಮದೇವ, ಪ್ರತಿಯೊಬ್ಬರೂ ಲೋಕದಲ್ಲಿ ಹುಟ್ಟಿ ಸಾಯುತ್ತಾರೆ. ಪಾಪಪುಣ್ಯಗಳನ್ನು ಮಾಡಿ ಅನೇಕ ಸುಖ ದುಃಖಗಳನ್ನು ಅನುಭವಿಸುತ್ತಾರೆ. ಶರೀರ ಸತ್ತರೂ ಆತ್ಮ ಎಂಬುದು ಇದ್ದು, ಪುನರ್ಜನ್ಮ ಎತ್ತುವರೆಂದು ಅನೇಕರು ಹೇಳುತ್ತಾರೆ. ಇದರ ಗುಟ್ಟೇನು? ಈ ದುಃಖಗಳನ್ನು ಕಳೆದುಕೊಳ್ಳಲು ಸುಲಭ ಮಾರ್ಗ ಇಲ್ಲವೆ? ಇದ್ದರೆ ತಿಳಿಸಿರಿ. ಇದೇ ನನಗೆ ಬೇಕಾದ ಮೂರನೆಯ ವರ.
ಯಮನು ಈ ಮಾತನ್ನು ಕೇಳಿ ಮೂಗಿನ ಮೇಲೆ ಬೆರಳಿಟ್ಟುಕೊಂಡ. ಏಕೆಂದರೆ ಇದಕ್ಕೆ ಉತ್ತರವನ್ನು ಚಿಕ್ಕಮಕ್ಕಳು ತಿಳಿದುಕೊಳ್ಳುವುದು ತುಂಬಾ ಕಷ್ಟ ಆದ್ದರಿಂದ ಯಮ ಹೇಳಿದ:
“ಬೇಡಪ್ಪಾ, ಬೇರೇನಾದರೂ ಕೇಳು. ಒಡವೆ, ಹಣ, ಭೂಮಂಡಲದ ದೊರೆತನ, ಏನು ಕೇಳಿದರೂ ಕೊಡುತ್ತೇನೆ. ಆದರೆ ನೀನು ಈಗ ಕೇಳಿದ ವಿದ್ಯೆಗೆ ಆತ್ಮವಿದ್ಯೆ ಎಂದು ಹೆಸರು . ದೇವತೆಗಳಂತಹ ದೊಡ್ಡವರಿಗೂ ಕಲಿಯಲು ಕಷ್ಟವಾದ ವಿದ್ಯೆ. ಬೇರೇನಾದರೂ ಕೇಳು.”
ಆದರೆ ನಚಿಕೇತನು ಇದಕ್ಕೆಲ್ಲ ಜಗ್ಗುವನೆ? ಸ್ವರ್ಗದ ದೇವತ್ವ ಸಿಕ್ಕುವ ಅಗ್ನಿವಿದ್ಯೆಯನ್ನೇ ಅವನು ಕಲಿತಿರುವಾಗ ಸಾಮಾನ್ಯವಾದ ಸುಖಗಳು ಅವನಿಗೇಕೆ ಬೇಕು? ಲೋಕದ ಜನರಿಗೆ ಉಪಕಾರವಾಗುವಂತಹ ವಿದ್ಯೆಯನ್ನು ಅವನು ಬಿಟ್ಟುಕೊಡುತ್ತಾನೆಯೆ?” ‘ಯಮದೇವ, ಕೊಡುತ್ತೇನೆಂದು ಮೊದಲೇ ತಾವು ಹೇಳಿದ್ದೀರಿ. ನನಗೆ ಆತ್ಮವಿದ್ಯೆ ಕಲಿಸಿರಿ. ನಿಮ್ಮಂತಹ ಗುರುಗಳು ಇನ್ನು ನನಗೆ ಹುಡುಕಿದರೂ ಸಿಕ್ಕುವುದಿಲ್ಲ” ಎಂದುಬಿಟ್ಟ.
ಯಮದೇವನು ಬಾಲ ಋಷಿಯಾದ ನಚಿಕೇತನಿಗೆ ಆತ್ಮವಿದ್ಯೆಯನ್ನು ಹೇಳಲೇಬೇಕಾಯಿತು. ಅದರೊಡನೆ ಯೋಗವಿದ್ಯೆಯನ್ನೂ ಹೇಳಿದ. ಅದು ತುಂಬಾ ಪವಿತ್ರವಾದುದು. ದೇವರನ್ನು ಒಲಿಸುವ ವಿದ್ಯೆ. ಪ್ರಪಂಚದ ಎಲ್ಲ ಮಾನವರಿಗೂ ಒಳ್ಳೆಯದನ್ನು ಕೋರುತ್ತಾ ಯಮದೇವನು ಹೇಳಿದ, “ಮಹಾತ್ಮನಾದ ನಚಿಕೇತನಕುಮಾರನೇ, ಪ್ರಪಂಚದಲ್ಲಿ ಮನುಷ್ಯರಾಗಿ ಹುಟ್ಟುವುದೇ ಒಂದು ಭಾಗ್ಯ. ಅವನು ಒಳ್ಳೆಯವರ ಸ್ನೇಹಮಾಡಿ, ಒಳ್ಳೆಯದನ್ನು ಕಲಿತು, ಎಲ್ಲರಿಗೂ ಒಳ್ಳೆಯದನ್ನು ಮಾಡಬೇಕು. ಅದನ್ನೇ ಪುಣ್ಯವೆನ್ನುತ್ತೇವೆ. ಕೆಟ್ಟವರ ಸ್ನೇಹ ಮಾಡಿ, ಮನಸ್ಸಿಗೆ ಬಂದಂತೆ ಕೆಟ್ಟ ಕೆಲಸಗಳನ್ನು ಮಾಡಿ ಇತರರನ್ನು ನೋಯಿಸಿದರೆ ಪಾಪ. ಕೆಟ್ಟ ಕೆಲಸ ಮಾಡಿದ ಮೇಲೆ ದುಃಖ ಬಂದೇಬರುತ್ತದೆ. ಆದ್ದರಿಂದ ಪಾಪ ಮಾಡದವನು ಜ್ಞಾನವಂತ. ಪಾಪ ಮಾಡುವವನೇ ಅಜ್ಞಾನಿ . ಅಜ್ಞಾನಿ ತನ್ನ ಪಾಪಕ್ಕಾಗಿ ಪುನರ್ಜನ್ಮವೆತ್ತಿ ದುಃಖ ಅನುಭವಿಸುತ್ತಾನೆ. ಆದ್ದರಿಂದಲೇ ಶರೀರ ಸತ್ತರೂ ಆತ್ಮ ಇದೆಯೆನ್ನುವುದು. ಈ ದುಃಖಗಳನ್ನೆಲ್ಲಾ ತಪ್ಪಿಸಿಕೊಳ್ಳುವುದನ್ನೇ ‘ಮುಕ್ತಿ’ ಎನ್ನುತ್ತಾರೆ. ಮುಕ್ತಿಗೆ ದಾರಿಯೆಂದರೆ ದೇವರ ಭಕ್ತಿ . ದೇವರೆಂದರೆ ಎಲ್ಲರಿಗೂ ದೊಡ್ಡವನು. ಅವನನ್ನು ಪರಬ್ರಹ್ಮ, ಪರಮಾತ್ಮ ಮುಂತಾದ ಅನೇಕ ಹೆಸರುಗಳಿಂದ ಪೂಜಿಸುತ್ತೇವೆ. ಆತನೇ ಸೂರ್ಯನಾಗಿ, ಚಂದ್ರನಾಗಿ, ಮನುಷ್ಯನಾಗಿ, ಪ್ರಾಣಿಗಳಾಗಿ ಕಾಣಿಸುತ್ತಾನೆ. ಆದ್ದರಿಂದಲೇ ಪ್ರಪಂಚದಲ್ಲಿ ನಾವು ಎಲ್ಲೆಲ್ಲೂ ದೇವರಿದ್ದಾನೆಂದು ಹೇಳುವುದು. ಎಲ್ಲರನ್ನೂ ನಾವು ಸಮಾನವಾಗಿ ಭಾವಿಸಬೇಕು. ಯಾರಲಲ್ಲೂ ಮೇಲುಕೀಳುಗಳನ್ನು ಎಣಿಸಬಾರದು. ಎಲ್ಲರಿಗೂ ಒಳ್ಳೆಯದನ್ನೇ ಮಾಡಬೇಕು. ಅದೇ ದೇವರ ಸೇವೆ. ಅಂತಹವರಿಗೇ ಮುಕ್ತಿ . ನಚಿಕೇತ, ನೀನು ದೇವರ ಭಕ್ತನಾಗು, ಎಲ್ಲರಿಗೂ ಒಳ್ಳೆಯದನ್ನು ಮಾಡು.” ಈ ರೀತಿ ಅನೇಕ ನೀತಿಗಳನ್ನು ಯಮನು ಉಪದೇಶಿಸಿದನು.
ನಚಿಕೇತನಿಗೆ ಜ್ಞಾನೋದಯವಾಗಿತ್ತು. ಅವನ ಮುಖದಲ್ಲಿ ದೇವತೆಗಳನ್ನೂ ಮೀರಿಸಿದ ತೇಜಸ್ಸು ಬಂದಿತು. ಆನಂದದಿಂದ ಅವನು, ‘ಅಪ್ಪಣೆ ಯಮದೇವ, ನಿನಗೆ ನಮೋನಮೋ, ನಿನಗೆ ನಮಸ್ಕಾರಗಳು’ ಎನ್ನುತ್ತಲೇ ದೇವತೆಗಳೆಲ್ಲರೂ ಅವನ ಮೇಲೆ ಹೂಮಳೆ ಸುರಿಸಿದರು.
“ನಚಿಕೇತ, ಈ ಜ್ಞಾನವನ್ನು ಲೋಕದಲ್ಲಿ ಪ್ರಸಾರ ಮಾಡು. ಇನ್ನು ನಿನ್ನ ತಂದೆಯ ಬಳಿಗೆ ಹೋಗು’’ ಎನ್ನುತ್ತಾ ಪ್ರಪಂಚದ ಜನರಿಗೆ ಕೇಳಿಸುವಂತೆ ಯಮನು ಹೀಗೆ ಹೇಳಿದ “ಉತ್ತಿಷ್ಠತ, ಜಾಗ್ರತ, ಪ್ರಾಪ್ಯ ವರಾನ್ ನಿಬೋಧತ” (ಪ್ರಪಂಚದ ಮಾನವರೇ, ಎದ್ದೇಳಿ, ಜ್ಞಾನಿಗಳಿಂದ ಕಲಿತು ಒಳ್ಳೆಯ ಮಾರ್ಗವನ್ನು ತಿಳಿಯಿರಿ.)
ಮತ್ತೆ ಬಂದ ತಾಯಿಯ ಬಳಿಗೆ
ಈ ಕೂಗು ಪ್ರಪಂಚಕ್ಕೆಲ್ಲಾ ಕೇಳಿಸಿತು. ಭಾರತದ ಎಲ್ಲ ತಪೋವನಗಳಿಗೂ ಕೇಳಿಸಿತು. ವಾಜಶ್ರವಸನ ಯಜ್ಞಮಂಟಪಕ್ಕೂ ಕೇಳಿಸಿತು. ಆಗ ವಾಜಶ್ರವಸನು ಹೊರಕ್ಕೆ ಬಂದು ಆಕಾಶದ ಕಡೆಗೆ ನೋಡಿದನು. ಋಷಿಗಳೂ ಜನರೂ ನೋಡುತ್ತಲೇ ಇದ್ದರು. ಪ್ರಕಾಶಮಾನವಾದ, ಕಣ್ಣುಕೋರೈಸುವ ಬೆಳಕು ಆಕಾಶದಿಂದ ಯಜ್ಞಮಂಟಪದ ಬಳಿ ಇಳಿಯಿತು. ಎಲ್ಲರಿಗೂ ನಚಿಕೇತ ಕಾಣಿಸಿದ.
“ಮಗೂ, ನಚಿಕೇತ ಕುಮಾರ, ಬಾಪ್ಪಾ, ನನ್ನನ್ನು ಕ್ಷಮಿಸು” ಎಂದು ವಾಜಶ್ರವಸನು ಎರಡೂ ಕೈಗಳನ್ನು ಚಾಚಿ ಮಗನನ್ನು ಕರೆದುಕೊಂಡ. ವಿಶ್ವವರಾದೇವಿಯೂ ಸಹ ಸಂತೋಷದಿಂದ, “ಕಂದ ನಿನ್ನ ಮುಖದಲ್ಲಿ ಈ ದಿವ್ಯವಾದ ಕಾಂತಿ ಹೇಗೆ ಬಂದಿತು? ಈ ರತ್ನಮಾಲೆ ಎಲ್ಲಿಯದು?” ಎಂದು ಕೇಳಿದಳು.
ನಚಿಕೇತನು ಎಲ್ಲರಿಗೂ ವಿವರವಾಗಿ ತನ್ನ ಕಥೆಯನ್ನು ತಿಳಿಸಿದನು. ಎಲ್ಲ ಋಷಿಗಳೂ ನಚಿಕೇತನನ್ನು ಹೊಗಳಿದರು. ವಾಜಶ್ರವಸನನ್ನು ಕುರಿತು, “ವಾಜಶ್ರವಸ ಮಹರ್ಷಿಗಳೇ, ಯಮನಿಂದಲೇ ಹೊಗಳಿಸಿಕೊಂಡ ಮಹಾ ಪುರುಷನು ನಿಮ್ಮ ಮಗನಾಗಿ ಹುಟ್ಟಿದ್ದು ನಿಮ್ಮ ಭಾಗ್ಯ. ಈತನು ತಂದೆಗೆ ಒಳ್ಳೆಯದನ್ನು ಬೇಡಿದ. ನಿಮ್ಮ ಯಾಗಕ್ಕೆ ಇಮ್ಮಡಿಯಾದ ಫಲ ಬರುವಂತೆ ಮಾಡಿದ. ನಿಮಗೆ ದೇವತ್ವ ಬರುವಂತೆ ಮಾಡಿದ. ನಿಮಗೆ ದೇವತ್ವ ಬರುವಂತೆ ಮಾಡಿದ. ನಾಚಿಕೇತಾಗ್ನಿ ವಿದ್ಯೆಯನ್ನು ತಂದು ನಮ್ಮೆಲ್ಲರಿಗಿಂತಲೂ ಪೂಜ್ಯನಾದ. ಆತ್ಮವಿದ್ಯೆಯನ್ನು ತಂದು ಬಾಲ ಋಷಿಯಾದ. ಈತನ ಚರಿತ್ರೆ ವೇದಗಳಲ್ಲೂ ಶಾಶ್ವತವಾಗಿ ನಿಲ್ಲುತ್ತಿದೆ ಎಂದರು. “ಹೀಗೆ ನಚಿಕೇತನು ಮಹರ್ಷಿಯಾದನು.
ಕಠೋಪನಿಷತ್ತು
ನಚಿಕೇತನ ಚರಿತ್ರೆಯು ಭಾರತದ ಪವಿತ್ರ ಗ್ರಂಥಗಳಾದ ವೇದಗಳಲ್ಲಿ ಇದೆ. ಯಜುರ್ವೇದದ ಒಂದು ಭಾಗವಾಗಿರುವ ಕೃಷ್ಣಯಜುರ್ವೇದದಲ್ಲಿ ಕಠೋಪನಿಷತ್ತು ಎಂಬ ವೇದಾಂತದ ಉಪದೇಶವಿದೆ. ನಚಿಕೇತನು ಯಮನಲ್ಲಿಗೆ ಹೋಗಿ ಪಡೆದ ವರಗಳು ಮತ್ತು ಉಪದೇಶದ ವಿವರಗಳು ಈ ಉಪನಿಷತ್ತಿನಲ್ಲಿವೆ. ತುಂಬಾ ಪವಿತ್ರವಾದ ಈ ಉಪನಿಷತ್ತನ್ನು ಅನೇಕರು ಇಂದಿಗೂ ಭಕ್ತಿಯಿಂದ ಪಠಿಸುತ್ತಾರೆ. ಪ್ರಪಂಚದ ಮೂಲೆ ಮೂಲೆಗಳಲ್ಲೂ ಅನೇಕ ಭಾಷೆಗಳಲ್ಲಿ ಇದರ ಅನುವಾದವಾಗಿದೆ. ಭಾರತೀಯರೇ ಅಲ್ಲದೆ ಇತರ ದೇಶಗಳಲ್ಲೂ ಈ ಉಪನಿಷತ್ತಿನ ಬಗ್ಗೆ ಅನೇಕ ಗ್ರಂಥಗಳನ್ನು ವಿದ್ವಾಂಸರು ಬರೆದಿದ್ದಾರೆ. ಹೀಗೆ ಪ್ರಖ್ಯಾತನಾದ ಬಾಲ ಋಷಿ ನಚಿಕೇತನು ನಮ್ಮ ಭಾರತದವನೆಂಬುದು ನಮಗೆ ಹೆಮ್ಮೆ.
ನಚಿಕೇತನು ಯಮಲೋಕದಿಂದ ಭೂಮಿಗೆ ಜ್ಞಾನ ವಿದ್ಯೆಯನ್ನು ತಂದ ಮಹಾನುಭಾವ. ವಯಸ್ಸಿನಲ್ಲಿ ಬಾಲಕನಾದರೂ ಜ್ಞಾನದಿಂದ ಆತನು ಮಹರ್ಷಿ. ವಿದ್ಯೆಯೇ ಶ್ರೇಷ್ಠವೆಂದು ಯಮನ ಬಳಿ ವಾದಿಸಿ, ಸಾಧಿಸಿದ ವಿದ್ಯಾರತ್ನ ತಂದೆತಾಯಿಗಳನ್ನೂ ಗುರುಹಿರಿಯರನ್ನೂ. ಭಕ್ತಿಯಿಂದ ಸೇವಿಸಿ ಲೋಕಕ್ಕೆ ಒಳ್ಳೆಯದನ್ನು ಆಚರಿಸಿ ತೋರಿಸಿಕೊಟ್ಟ ಪುಣ್ಯಪುರುಷ ಈತ. ಸ್ವರ್ಗದ ಜ್ಞಾನ ದೀಪವನ್ನು ಭೂಮಿಗೆ ತಂದ ಮಹಾನುಭಾವ.
ಕಠೋಪನಿಷತ್ತಿನಲ್ಲಿ ಗುರು ಮತ್ತು ಶಿಷ್ಯರು ದೇವರನ್ನು ಹೀಗೆ ಬೇಡುತ್ತಾರೆ.
ಓಂ ಸಹ ನಾವವತು
ಸಹ ನೌ ಭುನಕ್ತು
ಸಹ ವೀರ್ಯಂ ಕರವಾವಹೈ
ತೇಜಸ್ವಿ ನಾವಧೀತಮಸ್ತು
ಮಾ ವಿದ್ವಿಷಾವಹೈ||
ಓಂ ಶಾಂತಿಃ ಶಾಂತಿಃ ಶಾಂತಿಃ
“ದೇವರು ನಮ್ಮನ್ನು ಒಟ್ಟಿಗೆ ಕಾಪಾಡಲಿ, ನಮ್ಮನ್ನು ಒಟ್ಟಿಗೆ ಪೋಷಿಸಲಿ. ನಾವು ಒಟ್ಟಿಗೆ ಶಕ್ತಿವಂತರಾಗೋಣ. ನಾವು ಒಬ್ಬರನ್ನೊಬ್ಬರು ದ್ವೇಷಿಸದೆ ಗೆಳೆತನದಿಂದ ಬಾಳುವಂತಾಗಲಿ. ನಮ್ಮ ಎಲ್ಲ ನೋವುಗಳೂ ಪರಿಹಾರವಾಗಲಿ.”
ಕೃಪೆ : ಕಣಜ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.