ಈ ಚುನಾವಣೆ ಅಮೇರಿಕಾದ ಸಂಪ್ರದಾಯವಾದಿಗಳಿಗೂ ಆಧುನಿಕವಾದಿಗಳಿಗೂ ನಡೆಯುತ್ತಿರುವ ನೇರ ಸ್ಪರ್ಧೆ. ಅಮೇರಿಕನ್ನರಿಗೆ ಟ್ರಂಪ್ ಕೂಡ ಬೇಕು. ಹಿಲರಿ ಕೂಡ ಬೇಕು ಆದರೆ ಆರಿಸಬೇಕಾದ್ದು ಒಬ್ಬರನ್ನು.
ವಿಶ್ವವೇ ಕುತೂಹಲದಿಂದ ಎದುರು ನೋಡುತ್ತಿರುವ ಮುಕ್ತ ಜಗತ್ತಿನ ಅತ್ಯಂತ ಪ್ರಾಚೀನ ಪ್ರಜಾಪ್ರಭುತ್ವ ಹಾಗೂ ಶಕ್ತಿಶಾಲಿ ಅಮೇರಿಕಾ ದೇಶದ 58ನೇ ಅಧ್ಯಕ್ಷೀಯ ಚುನಾವಣೆ ನವೆಂಬರ್ 8ರಂದು ನಿರ್ಣಾಯಕವಾಕಲಿದೆ. ಶ್ವೇತಭವನದ ಅಭ್ಯರ್ಥಿಯ ಆಯ್ಕೆಯ 21 ತಿಂಗಳುಗಳ ಚುನಾವಣಾ ಪ್ರಚಾರದ ಜ್ವರ ನಕಾರಾತ್ಮಕವಾಗಿ, ನಿರಾಸಾದಾಯಕವಾಗಿ ಕೊನೆಗೊಂಡಿದೆ. ಅಮೇರಿಕಾದ ಇತಿಹಾಸದಲ್ಲಿಯೇ ನಂಬಿಕೆಗಳಿಗೆ ಅರ್ಹವಿರದ, ನೀರಸವಾದ ಇಬ್ಬರು ಅಭ್ಯರ್ಥಿಗಳು ಅಧ್ಯಕ್ಷೀಯ ಚುನಾವಣೆಯನ್ನು ಅತ್ಯಂತ ಕೀಳುಮಟ್ಟಕ್ಕೆ ಕೊಂಡೊಯ್ದು ನಿಲ್ಲಿಸಿದ್ದಾರೆ. ಅದಕ್ಕೆ ಕಹಿಯಾಗಿ, ಖಾರವಾಗಿ ಧ್ರುವೀಕರಣಗೊಂಡಿರುವ ಮತದಾರ ಸಮುದಾಯಗಳೇ ಸಾಕ್ಷಿ. ಮಹಾ ತತ್ವಜ್ಞಾನಿ ಅರಿಸ್ಟಾಟಲ್ ಪ್ರಕಾರ ಪ್ರಜಾಭುತ್ವ ಎಂದರೆ ”ಇರುವ ಕೆಟ್ಟ ವ್ಯವಸ್ಥೆಗಳಲ್ಲಿರುವ ಉತ್ತಮ ಆಯ್ಕೆ”. ಅಮೇರಿಕಾದ ಮತದಾರರ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ಇರುವ ಇಬ್ಬರೂ ಕೆಟ್ಟ ಅಭ್ಯರ್ಥಿಗಳ ಮಧ್ಯೆಯೇ ಗೋಚರಿಸುವ ಉತ್ತಮರನ್ನು ಆರಿಸಿ ಕಳುಹಿಸಬೇಕಾದ ಅನಿವಾರ್ಯತೆ ಅವರ ಮುಂದಿದೆ.
“ಮಿಸ್ಟರ್ ಗೋರ್ಬಚೇವ್(ಸೋವಿಯತ್ ಒಕ್ಕೂಟದ ಅಧ್ಯಕ್ಷ), ಈ ದ್ವಾರವನ್ನು ತೆರೆಯಿರಿ, ಈ ಗೋಡೆಯನ್ನು ಒಡೆಯಿರಿ” 12 ಜೂನ್ 1987ರಲ್ಲಿ ಅಂದಿನ ಅಮೇರಿಕಾದ ಅಧ್ಯಕ್ಷ ರೊನಾಲ್ಡ್ ರೇಗನ್ ಬರ್ಲಿನ್ ಗೋಡೆಯಿಂದ ವಿಭಜಿಸಲ್ಪಟ್ಟಿದ್ದ ಅಂದಿನ ಪಶ್ಚಿಮ ಜರ್ಮನಿಯಲ್ಲಿ ನಿಂತು ಸೋವಿಯತ್ ರಷ್ಯಾವನ್ನೂ, ಕಮ್ಯುನಿಷ್ಟರನ್ನೂ ಉದ್ದೇಶಿಸಿ ಮಾತನಾಡಿದ್ದರು.
ಆದರೆ 2016ರಲ್ಲಿ ಅಮೇರಿಕಾದಲ್ಲಿ ಕಾಣಸಿಗುತ್ತಿರುವ ಒಂದು ಘೋಷಣೆ “ಗೋಡೆಯನ್ನು ಕಟ್ಟೋಣ”. ಯುರೋಪನ್ನು ವಿಭಜಿಸಿದ್ದ ಬರ್ಲಿನ್ ಗೋಡೆಯನ್ನು ಒಡೆಯುವಲ್ಲಿ ಸಫಲವಾಗಿದ್ದ ಅಂದಿನ ಅಮೇರಿಕಾಗೂ ಹಾಗೂ ಮತ್ತೆ ಅಮೇರಿಕಾದಲ್ಲಿಯೇ ಗೋಡೆ ಕಟ್ಟಲು ಹೊರಟ ಪ್ರಸ್ತುತ ಸಂದರ್ಭ; ಕಾಲದ ಮಹಿಮೆಯನ್ನೂ ಆ ದೇಶದ ಸಧ್ಯದ ಪರಿಸ್ಥಿತಿಯನ್ನೂ ಸೂಚಿಸುತ್ತಿದೆ. ಅಮೇರಿಕಾ ಸಂಯುಕ್ತ ಸಂಸ್ಥಾನದಲ್ಲಿನ ಈ ಬೆಳವಣಿಗೆ ವಿಶ್ವದಲ್ಲಿ ನಡೆಯುತ್ತಿರುವ ಬೆಳವಣಿಗೆಯೂ ಹೌದು. ಅನ್ವೇಷಣೆ, ಹೂಡಿಕೆ, ತಂತ್ರಜ್ಞಾನ ಹೊಸ ಆಲೋಚನೆಗಳಿಗೆ ಪ್ರಧಾನ ಜಾಗತಿಕ ಕೇಂದ್ರವಾಗಿಯೇ ಉಳಿಯಲಿರುವ ಅಮೇರಿಕಾದಲ್ಲಿನ ಈ ಬೆಳವಣಿಗೆ ಜಗತ್ತನ್ನೇ ಪ್ರಭಾವಿಸಲಿದೆ. ಒಂದೆಡೆ ಜಪಾನ್, ಇಸ್ರೇಲ್, ಭಾರತ, ಹೀಗೆ ಜಗತ್ತಿನಾದ್ಯಂತ ಬಲಪಂಥೀಯ ರಾಜಕೀಯ ಪಕ್ಷಗಳೇ ಅಧಿಕಾರಕ್ಕೆ ಬರುತ್ತಿರುವ ಹೊತ್ತಿನಲ್ಲಿ ಅಮೇರಿಕಾವೂ ಅದನ್ನೇ ಆರಿಸಿಕೊಂಡಲ್ಲಿ ಯಾವುದೇ ಅಚ್ಚರಿಯಿಲ್ಲ. ಯಾಕೆಂದರೆ ಬೇಕೋ ಬೇಡವೋ ಆದರೆ ಅತಂತ್ರತೆ, ಅರಾಜಕತೆ, ಅಸುರಕ್ಷತೆ ಎಂಬುದು ಯಾರಿಗೂ ಇಷ್ಟವಿಲ್ಲ. ಎಲ್ಲರಿಗೂ ತಾವು ಮೊದಲು ಶ್ರೇಷ್ಟವಾಗುವ ಆಸೆ. ಹೇಗಾಗಬೇಕೆಂಬ ಮಾರ್ಗದ ಬಗ್ಗೆ ಯಾರೂ ತಲೆ ಕೆಡಿಸಿಕೊಂಡಂತಿಲ್ಲ ಆದರೆ ಸೇರುವ ಗುರಿಯ ಕುರಿತು ಸ್ಪಷ್ಟತೆಯಿದೆ. ಹಾಗಾಗಿಯೇ ಅಮೇರಿಕಾವನ್ನು ಹೇಗೆ ಶ್ರೇಷ್ಟವಾಗಿಸುವುದು? ಐಸ್ಐಸ್ ಅನ್ನು ಹೇಗೆ ಕೊನೆಗಾಣಿಸುವುದು, ಸಮಾನತೆ, ಉದಾರತೆ, ಸ್ವಾತಂತ್ರ್ಯವನ್ನು ಹೇಗೆ ಸಾಧಿಸಬೇಕೆಂಬ ಸ್ಪಷ್ಟತೆ ಎರಡೂ ಅಭ್ಯರ್ಥಿಗಳಿಗಿಲ್ಲ.
ರಿಪಬ್ಲಿಕನ್ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಹಾಗೂ ಡೆಮಾಕ್ರಟಿಕ್ ಪಕ್ಷದ ಉಮೇದುವಾರಿಕೆಯಲ್ಲಿ ಹಿಲರಿ ಕ್ಲಿಂಟನ್ ಎದುರಿಗೆ ಸೋತ ಬರ್ನಿ ಸ್ಯಾಂಡರ್ರ್ಸ್, ಈ ಇಬ್ಬರೂ ವ್ಯಾಪಾರೀ ಕೇಂದ್ರಿತ ಜಾಗತಿಕ ಬಂಡವಾಳ ವ್ಯವಸ್ಥೆಯ ಟೀಕಾಕರರು. ಅಮೇರಿಕಾದ ಇಂದಿನ ಹೀನ ಪರಿಸ್ಥಿತಿಗೆ ಕಳೆದ ಮೂರು ದಶಕಗಳ ಆರ್ಥಿಕ ಸಾಮಾಜಿಕ ನೀತಿಯೇ ಕಾರಣ ಎಂಬುದಾಗಿ ಇಬ್ಬರೂ ಪ್ರತಿಪಾದಿಸುತ್ತಿದ್ದಾರೆ. 1987ರಲ್ಲಿ ರೋನಾಲ್ಡ್ ರೇಗನ್ ಮಾಡಿದ ಐತಿಹಾಸಿಕ ಬರ್ಲಿನ್ ಭಾಷಣದ ಮೂರು ತಿಂಗಳ ನಂತರ 41 ವರ್ಷದ ರಿಯಲ್ ಎಸ್ಟೇಟ್ ಉದ್ಯಮಿ, ವಿಚಿತ್ರ ಮಾತು – ಮುಖಚರ್ಯೆಗಳಿಂದ ರಿಯಾಲಿಟಿ ಶೊಗಳಲ್ಲಿ ಮಿಂಚುತ್ತಿದ್ದ ಡೊನಾಲ್ಡ್ ಟ್ರಂಪ್ ತಮ್ಮ ಮೊದಲ ರಾಜಕೀಯ ನಿಲುವನ್ನು ವ್ಯಕ್ತಪಡಿಸಿದರು. ರಿಪಬ್ಲಿಕನ್ ಪಕ್ಷದ ರೋನಾಲ್ಡ್ ರೇಗನ್ ನಡೆಯನ್ನು ಅಮೇರಿಕಾದ ರಾಜಕಾರಣಿಗಳ “ಮೂರ್ಖತನ” ಎನ್ನುತ್ತಾ, “ಅಮೇರಿಕ ವಿಶ್ವ ಮಾರುಕಟ್ಟೆಯಲ್ಲಿ ವರ್ಷಕ್ಕೆ 200 ಬಿಲಿಯನ್ ಡಾಲರ್ಗಳನ್ನು ವ್ಯಾಪರದ ಕೊರತೆ(ಟ್ರೇಡ್ ಡೆಫಿಸಿಟ್)ಯಿಂದ ಕಳೆದುಕೊಳ್ಳುತ್ತಿದೆ. ಜಪಾನ್, ಸೌದಿ ಅರೇಬಿಯಾ… ಇತ್ಯಾದಿ ದೇಶಗಳು ಅಮೇರಿಕ ಇಲ್ಲದಿದ್ದರೆ ನಶಿಸಿಹೋಗುತ್ತಿದ್ದವು. ಇವುಗಳನ್ನು ರಕ್ಷಿಸಿ, ಸಾಕುತ್ತಾ ಕುಳಿತಿರುವ ಅಮೇರಿಕಾ ಇನ್ನು ಕೆಲವೇ ವರ್ಷಗಳಲ್ಲಿ ಆರ್ಥಿಕವಾಗಿ ಮುಗ್ಗರಿಸಬಹುದಾದ ಅಪಾಯವಿದೆ. ಹಾಗಾಗಿ ಜಪಾನ್ ಸೇರಿದಂತೆ ಅಮೇರಿಕಾದ ಸಹಾಯ ಪಡೆಯುತ್ತಿರುವ ಇತರ ದೇಶಗಳು ಅಮೇರಿಕಾಗೆ ರಕ್ಷಣಾ ಮೊತ್ತವನ್ನು ನೀಡಬೇಕೆಂದು ಆಗ್ರಹಿಸಿದ್ದರು. ವಿಶ್ವದಲ್ಲಿ ಮುಕ್ತ ವ್ಯಾಪಾರ ಎಂಬುದೇ ಇಲ್ಲ. ವಾಸ್ತವಿಕವಾಗಿ ಅಮೇರಿಕಾದ ಕಂಪೆನಿಗಳಿಗೆ ಜಪಾನ್ ಅಥವಾ ಸೌದಿ ಅರೇಬಿಯಾದಂತಹ ದೇಶದಲ್ಲಿ ಹೋಗಿ ವ್ಯವಹಾರ ನಡೆಸಲು ಸಾಧ್ಯವಿಲ್ಲ. ಆದರೆ ಆ ದೇಶಗಳು ಅಮೇರಿಕಾದೊಳಗೆ ಬಂದು ನಮ್ಮದೆಲ್ಲವನ್ನೂ ತೆಗೆದುಕೊಂಡು ಹೋಗುತ್ತಿವೆ. ಇದು ನಮ್ಮ ದೇಶಕ್ಕಾಗುತ್ತಿರುವ ನಷ್ಟ. ನಮ್ಮ ರೈತರು ಸಾಯುತ್ತಿದ್ದಾರೆ. ಮನೆಯಿಲ್ಲದ ಅಮೇರಿಕಾದ ನಿರಾಶ್ರಿತರು ನಮ್ಮ ನಗರಗಳ ಬೀದಿಗಳಲ್ಲಿ ನರಳುತ್ತಿದ್ದಾರೆ. ನಮಗೆ ವಿಶ್ವದ ಶ್ರೀಮಂತ ದೇಶಗಳಿಗೆ ಹಂಚಲು ಹಣವಿದೆ. ಆದರೆ ನಮ್ಮದೇ ದೇಶದ ಜನರನ್ನು ನೋಡಿಕೊಳ್ಳಲು ಆಗುತ್ತಿಲ್ಲ! ಬಡವರು, ಅನಾರೋಗ್ಯ ಪೀಡಿತರು, ರೈತರು, ನಿರಾಶ್ರಿತರು, ನಿರುದ್ಯೋಗಿಗಳು ಇತ್ಯಾದಿ ಜನರಿಗೆ ನಾವು ಸಹಾಯ ಮಾಡುತ್ತಿಲ್ಲ” ಎಂದಿದ್ದರು. ಅಂದಿನ ಅವರ ಲೋಕ ದೃಷ್ಟಿ, ವಿಚಾರ, ಚಿಂತನೆಗಳಲ್ಲಿ ಕಳೆದ 30 ವರ್ಷಗಳಲ್ಲಿ ಇಂದಿನವರೆಗೂ ಯಾವುದೇ ಬದಲಾವಣೆಯಾಗಿಲ್ಲ.
ಅನ್ಯದೇಶದ ನಿರಾಶ್ರಿತರು, ಮೆಕ್ಸಿಕನ್ ವಲಸಿಗರು, ಚೀನಾ ಸೇರಿದಂತೆ ತೃತೀಯ ರಾಷ್ಟ್ರಗಳಿಂದ “ಅಮೇರಿಕ ಕನಸು” ಹೊತ್ತು ಬರುತ್ತಿರುವವರು ಹಾಗೂ “ಇಸ್ಲಾಮಿಕ್ ಭಯೋತ್ಪಾದಕ”ರಿಂದ ದೇಶವನ್ನು ರಕ್ಷಿಸಲು ಅಮೇರಿಕಾದ ಗಡಿಯುದ್ದಕ್ಕೂ ಬೃಹತ್ ತಡೆಗಡೆಯನ್ನು ಕಟ್ಟುವ ಆ ಮೂಲಕ ಅಮೇರಿಕಾವನ್ನು ಶ್ರೇಷ್ಟವಾಗಿಸುವ ಜಿಜ್ಞಾಸೆಯಲ್ಲಿರುವ ಡೊನಾಲ್ಡ್ ಟ್ರಂಪ್, ಅವುಗಳ ಜೊತೆಗೆ ಸಡಿಲ ಕೆಣಕು ಮಾತುಗಳು, ವೈಯ್ಯಕ್ತಿಕ ಟೀಕೆ, ಮಹಿಳೆಯರನ್ನು ನೋಡುವ ರೀತಿ ಇತ್ಯಾದಿ ಕಾರಣಗಳಿಂದ ಇಡೀ ಅಧ್ಯಕ್ಷೀಯ ಚುನಾವಣೆ ಟ್ರಂಪ್ ಹಾಗೂ ಟ್ರಂಪೇತರ ಎಂಬ ಎರಡು ಪ್ರಧಾನ ಧಾರೆಯ ಚರ್ಚೆಯಾಗಿ ರೂಪುಗೊಂಡಿದೆ. ಅದಕ್ಕೆ ಪೂರಕವಾಗಿ ಹಿಲರಿ ಕ್ಲಿಂಟನ್ನ ಅಸ್ಪಷ್ಟತೆ, ಅನುಮಾನಸ್ಪದ ನಾಟಕೀಯ ನಡೆಗಳು ಹಾಗೂ ಟ್ರಂಪ್ನ ವೂತುಗಳನ್ನೇ ತನ್ನ ಲಾಭದ ಟ್ರಂಪ್ ಕಾರ್ಡ್ಅನ್ನಾಗಿ ಮಾಡಿಕೊಳ್ಳುತ್ತಿರುವ ಜಾಣ ರಾಜತಾಂತ್ರಿಕ ನಡೆಯೂ ಕಾರಣ. ಹಿಲರಿಯನ್ನು ಯಾಕೆ ಗೆಲ್ಲಿಸಬೇಕು ಎಂಬುದಕ್ಕಿಂತ ಡೊನಾಲ್ಡ್ ಟ್ರಂಪ್ ಯಾಕೆ ಸೋಲಬೇಕು ಎಂಬ ಸ್ಪಷ್ಟತೆ ಹಿಲರಿಯನ್ನು ಸಮರ್ಥಿಸುವವರಿಗಿದೆ. ಅವರು ನಂಬಿರುವುದು ಅಮೇರಿಕಾವನ್ನು ಆಗಬಹುದಾದ “ಅನಾಹುತ”ದಿಂದ ಕಾಪಾಡುವ ರಾಜಕಾರಣ. ಇದೇ ರೀತಿಯ ಸಂದರ್ಭ ಭಾರತೀಯ ಪ್ರಧಾನಿ ನರೇಂದ್ರ ಮೋದಿಯವರು ಲೋಕಸಭೆಯ ಚುನಾವಣೆಗೆ ನಿಂತಾಗಲೂ ಎದುರಾಗಿತ್ತು. ಕಾಕತಾಳಿತವೆಂಬಂತೆ ಕಳೆದ 60 ವರ್ಷಗಳ ಸರಕಾರದ ನೀತಿಗಳನ್ನು ವಿರೋಧಿಸುತ್ತಲೇ ಭಾರತವನ್ನು ವಿಶ್ವಗುರುವನ್ನಾಗಿಸುವ ಪಣವನ್ನೇ ಅವರೂ ತೊಟ್ಟಿದ್ದರು. ಅಬ್ ಕಿ ಬಾರ್ ಟ್ರಂಪ್ ಕಿ ಸರ್ಕಾರ್ ಎಂಬ ಘೋಷವಾಕ್ಯಗಳ ಹಿಂದೆಯೂ ಕಾಣುವುದು ಅಮೇರಿಕಾ ಚುನಾವಣೆಯ ಮೇಲೆ ಬಿದ್ದಿರುವ ಮೋದಿಯವರ ಪ್ರಭಾವಳಿ ಎಂದರೆ ಅದು ಅತಿಶಯೋಕ್ತಿ ಅಲ್ಲ.
ಅಮೇರಿಕಾದಲ್ಲಿ ಕಳೆದ ಮೂರು ದಶಕಗಳಲ್ಲಿ ತಲಾ ಇಬ್ಬರು ಡೆಮಾಕ್ರಾಟಿಕ್ ಹಾಗೂ ಇಬ್ಬರು ರಿಪಬ್ಲಿಕನ್ ಅಧ್ಯಕ್ಷರಾಗಿದ್ದಾರೆ. ಬೆಟ್ಟದ ಮೇಲೆ ಹೊಳೆಯುವ ಅಮೇರಿಕಾ ನಗರದ ಮತ್ತೊಂದು ಮಗ್ಗಲು, ಅಂಧಕಾರದಲ್ಲೇ ಉಳಿದು ಎಲ್ಲರ ನಿರ್ಲಕ್ಷ್ಯಕ್ಕೆ ಗುರಿಯಾದ ಕೆಳಗಿನ ಬಡ, ನೊಂದ, ನಿರಾಶ್ರಿತ ನಗರವನ್ನು ಮೇಲೆತ್ತುವ ಮಾತುಗಳನ್ನಾಡುತ್ತಲೇ ಬಂದಿರುವ ಡೆಮಾಕ್ರಾಟಿಕ್ ಪಕ್ಷದ ಒಬಾಮಾ ಅವಧಿಯೂ ಕೊನೆಗೊಂಡಿದೆ. ರೇಗನ್ ನಂತರದ ಕಳೆದ ಮೂವತ್ತು ವರ್ಷಗಳಲ್ಲಿ ಎರಡೂ ಪಕ್ಷದ ರಾಜಕಾರಣ ಹಾಗೂ ವ್ಯವಸ್ಥೆಯಲ್ಲಿ ವಿಶೇಷವಾದ ವ್ಯತ್ಯಾಸಗಳು ಕಾಣಿಸುವುದಿಲ್ಲ. ಅದರ ಪರಿಣಾಮ ಅಮೇರಿಕಾದ ಜನರ ಮೇಲೂ ಆಗಿದೆ. ಕಳೆದ ಮೂರು ದಶಕಗಳಲ್ಲಿ ಸರಾಸರಿ ಇಬ್ಬರು ದುಡಿಯುವ ಅಥವಾ ಎರಡು ಆದಾಯ ಮೂಲಗಳ ಕುಟುಂಬಗಳು, ಒಂದು ತಲೆಮಾರಿನ ಹಿಂದೆ ಒಬ್ಬರು ದುಡಿಯುತ್ತಿದ್ದ ಅಥವಾ ಒಂದು ಆದಾಯ ಮೂಲದ ಕುಟುಂಬಗಳಿಗಿಂತ ಕೆಟ್ಟ ಪರಿಸ್ಥಿತಿಯಲ್ಲಿವೆ. ಮೂರರಲ್ಲಿ ಒಬ್ಬ ಅಮೇರಿಕನ್ ಪ್ರಜೆ ಮಾಡಿದ ಸಾಲವನ್ನು ತೀರಿಸಲಾಗದ ಸ್ಥಿತಿಯಲ್ಲಿದ್ದಾನೆ. 18 ವರ್ಷ ತುಂಬುವ ಮೊದಲೇ ಅಮೇರಿಕಾದ ಶೇಕಡ 70% ವಿದ್ಯಾರ್ಥಿಗಳು ಸಾಲಗಾರರಾಗಿರುತ್ತಾರೆ. ಅಧಿಕೃತ ಸರ್ಕಾರಿ ದಾಖಲೆಗಳ ಪ್ರಕಾರ ಕಳೆದ ವರ್ಷ 8,20,000 ಅಮೇರಿಕನ್ ಕುಟುಂಬಗಳು ದಿವಾಳಿಯಾಗಿವೆ. ಹೊರ ಪ್ರಪಂಚಕ್ಕೆ ಅಮೇರಿಕಾ ವಿಶ್ವದ ಪ್ರಬಲ ಆರ್ಥಿಕ ಶಕ್ತಿಯಾಗಿ ಕಾಣುತ್ತಿರಬಹುದು ಆದರೆ ಅಮೇರಿಕಾದೊಳಗೆ ವಾಸಿಸುತ್ತಿರುವ ಕುಟುಂಬಗಳ ನೈಜ ಒಳ ಚಿತ್ರಣ ಬಹಳ ಭಿನ್ನ ಹಾಗೂ ಕರಾಳವಾಗಿದೆ. ಇದಕ್ಕೆ ಕಾರಣವೂ ಇಲ್ಲದಿಲ್ಲ. ಒಂದು ಕಾಲದಲ್ಲಿ ಮಧ್ಯಮ ವರ್ಗವನ್ನು ಭದ್ರಗೊಳಿಸುತ್ತಾ ಮಧ್ಯಮ ವರ್ಗದ ಸ್ವರ್ಗದಂತಿದ್ದ ದೇಶ ಇಂದು ಶ್ರೀಮಂತ ಮೇಲ್ವರ್ಗವನ್ನು ಸಲಹುವ, ಆ ವರ್ಗದ ಹಿತಾಸಕ್ತಿಯನ್ನು ಕಾಪಿಡುವ ದೇಶವಾಗಿ ಬದಲಾವಣೆಗೊಂಡಿದೆ. ಪರಿಣಾಮ, ದಾಖಲೆಗಳು ವಿವರಿಸುವಂತೆ, 1935ರಿಂದ 1980ರ ವರೆಗೆ ಸೃಷ್ಟಿಯಾಗುತ್ತಿದ್ದ ಶೇಕಡಾ 70%ರಷ್ಟು ಹೊಸ ಸಂಪತ್ತು ಕೆಳಸ್ತರದ ಶೇಕಡಾ 90% ಜನಸಂಖ್ಯೆಗೆ ಸಿಗುತ್ತಿತ್ತು. ಮತ್ತು ಮೇಲ್ವರ್ಗದ ಶೇಕಡಾ 10% ಜನರು ಉಳಿದ ಶೇಕಡಾ 30% ಸಂಪತ್ತನ್ನು ತಮ್ಮ ಉಪಯೋಗಕ್ಕಾಗಿ ಬಳಸುತ್ತಿದ್ದರು. ಆದರೆ ಈ ಆದರ್ಶ ಆರ್ಥಿಕ ವ್ಯವಸ್ಥೆ ಬದಲಾದ ಆರ್ಥಿಕ ನೀತಿಯ, ಆರ್ಥಿಕ ರಾಜಕಾರಣದ ಫಲವಾಗಿ ಸಂಪೂರ್ಣ ತಲೆಕೆಳಗಾಯಿತು. 1980ರಿಂದ 2016ರ ವರೆಗಿನ ಸಂದರ್ಭವನ್ನೇ ಗಮನಿಸಿದರೆ ಇದರ ತದ್ವಿರುದ್ಧ ಚಿತ್ರಣ ಸಿಗುತ್ತದೆ. ಈ ಅವಧಿಯಲ್ಲಿ ಮೇಲ್ವರ್ಗದ 10% ಜನರು ನಿರ್ಮಾಣಗೊಂಡ ಹೊಸ ಸಂಪತ್ತಿನ ಹೆಚ್ಚು ಕಡಿಮೆ ಎಲ್ಲವನ್ನೂ ತಾವೇ ಬಳಸಿಕೊಂಡರು. ಹಾಗೂ 90% ಜನರು ಎಲ್ಲ ಸಂಪತ್ತಿನಿಂದ ವಂಚಿತರಾಗಿದ್ದಾರೆ. ಬದಲಾದ ಅಮೇರಿಕಾದ ಈ ಆರ್ಥಿಕ ಮಾದರಿ ಭಾರತ ಸೇರಿದಂತೆ ವಿಶ್ವದ ಇತರೆಡೆಗಳಲ್ಲೂ ಕಾಣಬಹುದಾಗಿದೆ.
ಈ ಆರ್ಥಿಕ ಅಸಮಾನತೆಯ ವಾಸ್ತವತೆಯಿಂದ ಅಮೇರಿಕನ್ನರ ಆದ್ಯತೆಗಳೂ ಬದಲಾಗಿವೆ. ಅದರ ಫಲವಾಗಿ ಅವರು ತಮ್ಮ ಖರ್ಚಿನಲ್ಲೂ ರಾಜಿಮಾಡಿಕೊಳ್ಳಬೇಕಾಗಿದೆ. ತಮ್ಮ ಆಹಾರಕ್ಕಾಗಿ ಅವರು ತಮ್ಮ ಮೊದಲಿನ ಖರ್ಚಿಗಿಂತ ಸುಮಾರು 13%ರಷ್ಟು ಹಣವನ್ನು ಕಡಿಮೆ ಮಾಡಿಕೊಂಡಿದ್ದಾರೆ. ಆಹಾರದ ಸ್ಥಿತಿ ಹೀಗಿದೆ ಎಂದ ಮೇಲೆ ಅವರು ಆರೋಗ್ಯ, ಶಿಕ್ಷಣ, ಬಟ್ಟೆ, ಗೃಹೋಪಯೋಗಿ ವಸ್ತುಗಳು ಇತ್ಯಾದಿ ಕನಿಷ್ಟ ಅನಿವಾರ್ಯ ಸಂಗತಿಗಳ ಮೇಲಿನ ಖರ್ಚಿನ ಮಿತಿಯನ್ನು ವಿವರವಾಗಿ ಹೇಳಬಕಿಲ್ಲ. ಖರ್ಚು ಕಡಿಮೆ ಎಂದ ಮಾತ್ರಕ್ಕೆ ಮಾರುಕಟ್ಟೆಯ ದರಗಳೇನು ಕಡಿಮೆಯಾಗುವುದಿಲ್ಲ. ಅವು ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿರುವುದು ಅಮೇರಿಕಾದ ಬಡವರಲ್ಲಿ ತಿಳಿಯಾಗಿ ತಲ್ಲಣವನ್ನು ಸೃಷ್ಟಿಸುತ್ತಿರುವ ಸಂಗತಿ. ಪರಿಣಾಮ ಅವರು 953% ಮೊತ್ತವನ್ನು ಮಕ್ಕಳ ಸಂರಕ್ಷೆಣೆಗಾಗಿ ವಿನಿಯೋಗಿಸಬೇಕಿದೆ. ಕಾಲೇಜು ಶಿಕ್ಷಣದ ಮೇಲೆ 275% ನಷ್ಟು ಹೆಚ್ಚುವರಿ ಶುಲ್ಕವನ್ನು ಭರಿಸಬೇಕಿದೆ. “ಒಬಾಮಾ ಕೇರ್”ನಂತಹ ಮಹತ್ವದ ಯೋಜನೆ ಜಾರಿಗೊಂಡಿದ್ದರೂ ಸಾಮಾನ್ಯ ಪ್ರಜೆ ಆರೋಗ್ಯ ವಿಮೆಗಾಗಿ ಮೂರು ದಶಕಗಳ ಹಿಂದೆಗಿಂತ 104% ಹೆಚ್ಚುವರಿ ಶುಲ್ಕವನ್ನು ಭರಿಸಬೇಕಿದೆ. ಮೂಲಭೂತ ಅನಿವಾರ್ಯತೆಗಳೂ ತುಟ್ಟಿಗೊಳ್ಳುತ್ತಿರುವ ಹೊತ್ತಿನಲ್ಲಿ ಆದಾಯದ ತಳ ಸಂಕುಚಿತಗೊಳ್ಳುತ್ತಿರುವುದು “ಅಮೇರಿಕಾ ಕನಸಿನ” ಎದರು ಇರುವ ಎಚ್ಚರಿಕೆ.
ಅಮೇರಿಕಾದಲ್ಲಿ ನಡೆಯುವುದು ಲಾಬಿ ರಾಜಕಾರಣ. ಅದಕ್ಕೆ ಒಂದು ಉದಾಹರಣೆಯೆಂದರೆ ಅಲ್ಲಿ ಬಂದೂಕು ನಿಯಂತ್ರಣವಾಗಲಿ, ನಿಷೇಧವಾಗಲಿ ಸಧ್ಯಕ್ಕೆ ಅಸಾಧ್ಯದ ಮಾತು. ಬಂದೂಕು ಕಂಪೆನಿಗಳ ಲಾಬಿ ಅಂಥದ್ದು. 1980ರ ಸುಮಾರಿಗೆ ಅಮೇರಿಕಾದ ಒತ್ತಡ ಗುಂಪುಗಳು ನೇರ ಲಾಬಿಗಾಗಿ 200 ಮಿಲಿಯನ್ ಡಾಲರ್ಗಳನ್ನು ಬಳಸುತ್ತಿದ್ದವು. 2002 ರ ಹೊತ್ತಿಗೆ ಆ ಆಸಕ್ತ ಗುಂಪುಗಳು ಲಾಬಿಗಾಗಿ ಮಾಡಿದ ವೆಚ್ಚ ಸುಮಾರು 2 ಬಿಲಿಯನ್ ಡಾಲರ್ಗಳು. 2012ರಲ್ಲಿ 3.3ಬಿಲಿಯನ್ ಡಾಲರ್ಗಳು ಅಂದರೆ ಲಾಬಿಗಾಗಿಯೇ ಬಳಕೆಯಾಗುತ್ತಿರುವ ಮೊತ್ತ ಕಳೆದ 22 ವರ್ಷಗಳಲ್ಲಿ 7 ಪಟ್ಟು ಏರಿಕೆಯಾಗಿದೆ. ಆ ಮೊತ್ತ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಲೇ ಇದೆ. ಆ ಲಾಬಿಗಳು ಅಮೇರಿಕಾದ ಬಿಲಿಯನೇರ್ಗಳು ವಿಶ್ವ ಯಾವ ದಿಕ್ಕಿನತ್ತ ತೆರಳಬೇಕು ಎಂಬುದನ್ನು ನಿರ್ಧರಿಸುತ್ತವೆ. ಅಮೇರಿಕಾದ ಸಂಸತ್ತು ಅದಕ್ಕೆ ಮುದ್ರೆಯೊತ್ತುತ್ತದೆ. ಭಾರತಕ್ಕೆ ಇಂತಹ ಲಾಬಿ ಗುಂಪುಗಳು ಯಾಕೆ ಬೇಡ ಎಂಬುದನ್ನು ಅಮೇರಿಕಾದ ಈ ನಿದರ್ಶನದಿಂದ ತಿಳಿಯಬಹುದು.
ಭಯೋತ್ಪಾದನೆ ಇನ್ನಿತರ ಸಂಗತಿಗಳ ಕುರಿತು ಟ್ರಂಪ್ನಂತಹದ್ದೇ ಧೋರಣೆ ಹೊಂದಿದ್ದ, ಇರಾಕ್ ಹಾಗೂ ಅಫಘಾನಿಸ್ತಾನದ ತಾಲಿಬಾನ್ ಮೇಲೆ ಯುದ್ಧ ಸಾರಿದ್ದ ಜಾರ್ಜ್ ವಕಾರ್ ಬುಶ್ ನಂತರ 8 ವರ್ಷಗಳ ಹಿಂದೆ “ಬದಲಾವಣೆ ಬೇಕಿದೆ. ನಾವು ಬದಲಾಯಿಸಬಹುದು” ಎಂದು ಅಧಿಕಾರಕ್ಕೆ ಬಂದಿದ್ದ ಬರಾಕ್ ಒಬಾಮನನ್ನು ಸರಾಸರಿ ಅಮೇರಿಕನ್ನರು ತಮ್ಮ ಬದುಕನ್ನೇ ಬದಲಾಯಿಸಬಲ್ಲ ಅಧ್ಯಕ್ಷ ಎಂದೇ ನಂಬಿದ್ದರು. ಒಬಾಮಾ ಅಮೇರಿಕಾದ ಆರ್ಥಿಕತೆಯಲ್ಲಿ ಮೇಲ್ಸ್ತರದ ಬದಲಾವಣೆಗಳನ್ನು ಮಾಡಿದರೆ ಹೊರತು ಆರ್ಥಿಕ ಬುಡವನ್ನೇ ಕ್ರಾಂತಿಕಾರಕವಾಗಿ ಬದಲಾಯಿಸುವ ಪ್ರಯತ್ನಕ್ಕೆ ಕೈ ಹಾಕಲಿಲ್ಲ. ಬದಲಾಗಿ ತಮ್ಮ ಹೆಚ್ಚಿನ ಸಮಯವನ್ನು ವರ್ಣ ಸಮಾನತೆ, ಹಕ್ಕುಗಳು, ಪರಿಸರ ಸಂರಕ್ಷಣೆ, ಶಾಂತಿ, ಬಂದೂಕು ನಿರ್ಬಂಧ ಈ ಎಲ್ಲಾ ಬದಲಾವಣೆಗಳೂ ನಿಧಾನವಾಗಿ ಮತ್ತು ಕಾಲಕ್ರಮೇಣ ಆಗುತ್ತವೆ ಎಂದೇ ಎಲ್ಲರನ್ನೂ ಸಂತೈಸುವ ಪ್ರಯತ್ನ ಮಾಡಿದರು. ಕೊನೆಯ ವರ್ಷದಲ್ಲಂತೂ ಬರ್ನಿ ಸ್ಯಾಂಡರ್ರ್ಸ್ ಹಾಗೂ ತಾಳ್ಮೆ ಕಳೆದುಕೊಂಡ ಕಪ್ಪು ಜನರನ್ನು ಓಲೈಸುವ ಕಾರ್ಯವನ್ನೇ ಮುಖ್ಯವಾಗಿ ಮಾಡಿದರು. ಟಿಪಿಕಲ್ ಅಮೇರಿಕನ್ ಕುಟುಂಬ ವರ್ಷದಿಂದ ವರ್ಷಕ್ಕೆ ಹಿಂದಿನ ವರ್ಷಕ್ಕಿಂತ ಉತ್ತಮವಾದ ಪ್ರಗತಿ ಹೊಂದಲು ಬಯಸುತ್ತಾರೆ. ಅಂದರೆ ಹೊಸ ಗ್ಯಾಜೆಟ್ಗಳು, ಸಣ್ಣ ಪುಟ್ಟ ಸುಖ, ಸಂತೋಷಗಳು ಇತ್ಯಾದಿ. 20ನೇ ಶತಮಾನದ ಅನೇಕ ವರ್ಷಗಳು “ಬಹುದೊಡ್ಡ ಸುಂದರ ನಾಳೆಯಿದೆ” ಎಂಬ ಕನಸು ನಿಜವಾಗಿತ್ತು ಆದರೆ ಕಳೆದ ಕೆಲವು ದಶಕಗಳಲ್ಲಿ ಆ ಆಸೆ ಕರಗತೊಡಗಿದೆ.
ಟ್ರಂಪ್ ಅಮೇರಿಕನ್ನರಿಗೆ ತೋರಿಸಿದ ಆಸೆ ಸಣ್ಣದೇನಲ್ಲ. ಅದು ಅಮೇರಿಕಾವನ್ನು ಶ್ರೇಷ್ಟವಾಗಿಸುವ, ಅದನ್ನು ಪರಮ ವೈಭವಕ್ಕೆ ಕೊಂಡೊಯ್ಯುವ ಮಹತ್ವಾಕಾಂಕ್ಷೆ. ಅದು ಭಾರತವನ್ನು ವಿಶ್ವಗುರುವನ್ನಾಗಿಸಲು ಹೊರಟ ಮೋದಿಯವರ ಮಹತ್ವಾಕಾಂಕ್ಷೆಯಷ್ಟೇ ಪ್ರಬಲ. ಆದರೆ ಅದು ಹೇಗೆ ಸಾಧ್ಯ ಎಂಬುದು ಡೊನಾಲ್ಡ್ ಜೆ. ಟ್ರಂಪ್ನಷ್ಟೇ ಗೊಂದಲಕಾರಿ ಹಾಗೂ ಅನುಮಾನಸ್ಪದ. ಹಾಗೆಂದು ಅಮೇರಿಕನ್ನರು ಆತನನ್ನು ಪೂರ್ತಿ ನಂಬದಿದ್ದರೂ ಗೋಡೆ ಕಟ್ಟಲು ಹೊರಟ ಯೋಜನೆಗೆ ಸಂಪ್ರದಾಯವಾದಿ, ಬಿಳಿ ಹಾಗೂ ಮೂಲ ಅಮೇರಿಕನ್ನರು ತಮ್ಮ ಧ್ವನಿಯನ್ನು ಸೇರಿಸುತ್ತಿದ್ದಾರೆ. ಹಿಲರಿಗೆ ಅಂತಹ ಯೋಚನೆಗಳಿಲ್ಲದಿದ್ದರೂ ಒಬಾಮಾ ಪರಂಪರೆಯನ್ನೇ ಮುಂದುವರೆಸುವ ಜಾಣ ಹಾಗೂ ರಕ್ಷಣಾತ್ಮಕ ನಡೆಗೆ ಚುನಾವಣಾ ಪೂರ್ವ ಸಮೀಕ್ಷೆಗಳು ಬಹುಪರಾಕ್ ಎಂದಿವೆ. ಆದರೂ ಇದರ ಹಿಂದೆ ಮಾನಸಿಕವಾಗಿ ಜನರ ಮುಂದೆ ಟ್ರಂಪ್ ವಿರೋಧಿ ಅಲೆ ನಿರ್ಮಿಸುವ, ಅವರನ್ನು ದ್ವೇಷಿಸುವ ಮಾಧ್ಯಮಗಳ ಕಳಕಳಿಯೂ ಹೌದು.
ಕಳೆದ ಮೂವತ್ತು ವರ್ಷಗಳಲ್ಲಿ ಡೊನಾಲ್ಡ್ ಟ್ರಂಪ್ ಚಿಂತನೆ, ಮಾತು, ಹೀಯಾಳಿಕೆ, ನಿಂದನೆ, ಅರ್ಧಸತ್ಯ ಇತ್ಯಾದಿಗಳು ಬದಲಾಗದೆ ಹಾಗೆಯೇ ಉಳಿದಿದೆ. ಹಿಲರಿ ಕ್ಲಿಂಟನ್ ತಮ್ಮ ಪಕ್ಷದ ಪೂರ್ವಜರು ಹೇಳಿಕೊಂಡು ಬರುತ್ತಿದ್ದ ಬೆಟ್ಟದ ಕೆಳಗಿರುವ ಕತ್ತಲೆಯ ಅಮೇರಿಕಾವನ್ನು ಮೇಲೆತ್ತುವ ಮಾತುಗಳನ್ನೆ ಹೊಸ ಸಂದರ್ಭಕ್ಕೆ ತಕ್ಕಂತೆ ತಿಳಿಸುತ್ತಿದ್ದಾರೆ. 1984ರ ಡೆಮಾಕ್ರಾಟಿಕ್ ರಾಷ್ಟ್ರೀಯ ಸಮಾವೇಷದಲ್ಲಿ ನ್ಯೂಯಾರ್ಕ್ನ ಗವರ್ನರ್ ಮಾಡಿದ್ದ “ಎರಡು ನಗರಗಳ ಕಥೆ” ಎಂಬ ಭಾಷಣದ ತಿರುಳನ್ನೇ ಡೆಮಾಕ್ರಟಿಕ್ ಪಕ್ಷದ ಹಿಲರಿ ಕ್ಲಿಂಟನ್ರ ಹಿಂದಿನವರಾದ, ಅಮೇರಿಕಾ ಕಂಡ ಪ್ರಸಿದ್ಧ ಅಧ್ಯಕ್ಷ ಬಿಲ್ ಕ್ಲಿಂಟನ್ ಹಾಗೂ ಪ್ರಸ್ತುತ ಅಧ್ಯಕ್ಷ ಬರಾಕ್ ಒಬಾಮಾ, ಭಿನ್ನರೂಪದಲ್ಲಿ ಬದಲಾವಣೆಯ ಹೆಸರಿನಲ್ಲಿ ಪುನರುಚ್ಛರಿಸಿದರು. ಅದನ್ನೇ ಈ ಕಾಲಕ್ಕೆ ತಕ್ಕಂತೆ ಬದಲಾಯಿಸಿ “ಎಲ್ಲರಿಗೂ ಕೆಲಸಮಾಡುವ ಆರ್ಥಿಕತೆ” ಎಂಬ ಭಾಷಣ ಮಾಡುತ್ತಿದ್ದಾರೆ. ಕೆಲವು ವರ್ಷಗಳ ಹಿಂದೆ ಡೊನಾಲ್ಡ್ ಟ್ರಂಪ್ರನ್ನು ಯಾರೂ ಗಂಭಿರವಾಗಿ ಪರಿಗಣಿಸಿರಲಿಲ್ಲ. ಆದರೆ ಇಂದು ಅನೇಕರು ಅವರನ್ನು ಗಂಭೀರವಾಗಿ ಪರಿಗಣಿಸುತ್ತಿದ್ದಾರೆ. ಅದಕ್ಕೆ ಕಾರಣ ಅಮೇರಿಕಾದ ಮುಂದಿನ ಭವಿಷ್ಯ ಹಿಂದಿನಂತಿರದೆ ಭಿನ್ನವಾಗಿರಲಿದೆ.
ಈ ಚುನಾವಣೆಯಲ್ಲಿ ಯಾರು ಗೆದ್ದರೂ, ಸೈದ್ಧಾಂತಿಕ ಭಿನ್ನಾಭಿಪ್ರಾಯಗಳೇನೇ ಇದ್ದರೂ ಮುನ್ನಡೆಸಬೇಕಾದ್ದು ಜಗತ್ತಿನ ಭವಿಷ್ಯವನ್ನು. ಯಾಕೆಂದರೆ ಅಮೇರಿಕಾದ ಸರಿಯಾದ ನಿರ್ಧಾರಗಳು ಪ್ರಪಂಚದ ಪ್ರಗತಿಗೆ ಕಾರಣವಾಗುತ್ತವೆ. ಅದರ ಒಂದು ತಪ್ಪು-ದುಡುಕು ನಿರ್ಧಾರ ಮತ್ತೊಂದು ವಿಶ್ವಯುದ್ಧವನ್ನೇ ಪ್ರಾರಂಭಿಸುವಂತಾಗಬಹುದು. ಹಾಗಾಗಿ ಈ ಅಸಹ್ಯ ಚುನಾವಣೆಯಲ್ಲಿ ಗೆಲ್ಲುವ ಅಮೇರಿಕಾದ ನೂತನ ಅಧ್ಯಕ್ಷರು ಅಲ್ಲಿನ ಹಾಗೂ ವಿಶ್ವದ ಹಿತಕ್ಕಾಗಿ ಸಾಮಾಜಿಕ ಮನ್ವಂತರಕ್ಕಾಗಿ ಪಾಲಿಸಬೇಕಾದ್ದು ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದ ಪ್ರಾಮಾಣಿಕ ವಾಗ್ವಾದ. ಅದರಿಂದ ರೂಪುಗೊಳ್ಳುವ ಹೊಸ ದಾರಿಯನ್ನು ಪಾಲಿಸುವ ಮೂಲಕ ತನ್ನ ದೊಡ್ಡತನವನ್ನು ಕಾಯ್ದುಕೊಳ್ಳಬೇಕಿದೆ. ಹಾಗಾಗದೇ ಇದ್ದರೆ ಈ ವಿಶ್ವದ ಏಕೈಕ ಮಹಾ ಶಕ್ತಿಯುತ ದೇಶ ಕಾಲಾಂತರದಲ್ಲಿ ಮರೆಯಾಗಲಿದೆ. ಅಮೇರಿಕಾದಲ್ಲಿನ ಈ ಬೆಳವಣಿಗೆ 21ನೇ ಶತಮಾನ ಏಷ್ಯಾ ಖಂಡದ್ದಾಗುವಲ್ಲಿ ಮಹತ್ವದ ಪಾತ್ರವಹಿಸಲಿದೆ.
ಸ್ವಿಂಗ್ ರಾಜ್ಯಗಳ ಪರಿಣಾಮ: 270 ಎಲೆಕ್ಟೋರಲ್ ಕಾಲೇಜು ಮತಗಳನ್ನು ಗೆಲ್ಲುವ ಅಭ್ಯರ್ಥಿ ಶ್ವೇತಭವನದ ಚುಕ್ಕಾಣಿ ಹಿಡಿಯಲಿದ್ದಾರೆ. ಹಿಲರಿ ಕ್ಲಿಂಟನ್ ಚುನಾವಣಾ ಪ್ರಚಾರದ ಉದ್ದಕ್ಕೂ ರಾಜತಾಂತ್ರಿಕ ಸಭ್ಯತೆಯನ್ನು ಕಾಯ್ದುಕೊಂಡಿದ್ದರೂ ಆಡಳಿತ ಕಾರ್ಯದಲ್ಲಿ ವೈಯ್ಯಕ್ತಿಕ ಮಿಂಚಂಚೆಯ ಸರ್ವರ್ ಬಳಸಿರುವ ಆರೋಪ ಹೊತ್ತಿದ್ದ ಕಾರಣ ಅವರನ್ನು ಜನರು ನಂಬಲು ಸಿದ್ಧರಿಲ್ಲ. ಪ್ರಾರಂಭದಲ್ಲಿ 12% ಅಂಕಗಳ ಮುನ್ನಡೆಯನ್ನು ಕಾಯ್ದುಕೊಂಡಿದ್ದ ಹಿಲರಿ ಚುನಾವಣೆಗೆ ಕೆಲವೇ ಘಂಟೆಗಳಿರುವ ಹೊತ್ತಿನಲ್ಲಿ ಕೇವಲ 4% ಅಂಕಗಳ ಮುನ್ನಡೆಯನ್ನು ಸಾಧಿಸಿರುವುದು ನೋಡಿದರೆ ಹಾಗೂ ಫ್ಲೋರಿಡಾ, ಉತ್ತರ ಕೆರೋಲಿನಾ, ಪೆನ್ನಿಸೆಲ್ವಿಯಾ, ಓಹಿಯೋ, ಮಿಚಿಗನ್, ಮತ್ತು ಕೊಲೊರಾಡೊ ಎಂಬ ವಾಲುವ ರಾಜ್ಯಗಳು(ಸ್ವಿಂಗ್ ಸ್ಟೇಸ್ಟ್ಸ್) ಯಾರ ಕಡೆಗೂ ವಾಲಬಹುದಾದ ಕಾರಣದಿಂದ ಈ ಚುನಾವಣೆ ತನ್ನ ರೋಚಕತೆಯನ್ನು ಉಳಿಸಿಕೊಂಡಿದೆ. ಈ ರಾಜ್ಯಗಳಲ್ಲಿ ಟ್ರಂಪ್ ತೀವ್ರ ಸ್ಪರ್ಧೆಯನ್ನು ನೀಡುತ್ತಿದ್ದಾರೆ. ಹಾಗಾಗಿಯೇ ಒಬಾಮಾರವರು ಈ ರಾಜ್ಯಗಳಲ್ಲಿ ತೀವ್ರವಾದ ಪ್ರಚಾರವನ್ನು ಕೈಗೊಳ್ಳುತ್ತಿದ್ದಾರೆ. ಯಾವುದೇ ಕಾರಣಕ್ಕೂ ಟ್ರಂಪ್ ಅಧ್ಯಕ್ಷರಾಗಬಾರದೆಂಬುದನ್ನು ತಮ್ಮ ಎಂಟು ವರ್ಷಗಳ ಕಾರ್ಯವನ್ನು ಪಣಕ್ಕಿಟ್ಟು ಕೇಳುತ್ತಿದ್ದಾರೆ. ಸ್ವಿಂಗ್ ರಾಜ್ಯಗಳೇ ಈ ಚುನಾವಣೆಯ ದಿಕ್ಕನ್ನು ಬದಲಾಯಿಸಲಿವೆ. ಚುನಾವಣೆಗೆ ಒಂದು ದಿನ ಬಾಕಿ ಇರುವಾಗಲೇ ಎಫ್.ಬಿ.ಐ (ಫೆಡರಲ್ ಬ್ಯೂರೋ ಆಫ್ ಇನ್ವೆಷ್ಟಿಗೇಶನ್) ಅಧಿಕಾರಿಗಳು ಹಿಲರಿಯವರ ಮಿಚಂಚೆ ಪ್ರಕರಣದಲ್ಲಿ ಯಾವುದೇ ಪುರಾವೆಗಳು ದೊರೆಯದ ಕಾರಣ ಅವರನ್ನು ಆರೋಪ ಮುಕ್ತಗೊಳಿಸಿವೆ. ಇದು ಹಿಲರಿಯವರಿಗೆ ಕೊನೆಯ ಕ್ಷಣದಲ್ಲಿ ದೊರೆತ ವರದಾನ. ಇದರಿಂದ ಚುನಾವಣೆಯಲ್ಲಿ ಅವರಿಗೆ ಸಹಾಯವಾಗಬಹುದು. ಆದರೂ ಇದನ್ನು ಹಿಲರಿಯವರ ಗೆಲುವು ಎನ್ನುವುದಕ್ಕಿಂತಲೂ ಪುರಾವೆಗಳನ್ನು ಶೋಧಿಸಲಾಗದ ಎಫ್.ಬಿ.ಐ ನ ಸೋಲು.
ಭಾರತದ ಮೇಲೆ ಬೀರುವ ಪರಿಣಾಮ: ಈ ಚುನಾವಣೆಯಲ್ಲಿ ಯಾರೇ ಗೆದ್ದರೂ ಅಮೇರಿಕಾದ ಅಧಿಕಾರ ಸಮನ್ವಯತೆ ಹಾಗೂ ಏಷ್ಯಾದ ಆಸಕ್ತಿಗೆ ಅಮೇರಿಕಾದ ಮುಂದಿರುವ ಏಕೈಕ ಪ್ರಬಲ ಶಕ್ತಿ ಭಾರತ. ಭಾರತಕ್ಕೆ ಅಮೇರಿಕಾದ ಅನಿವಾರ್ಯತೆಗಿಂತಲೂ ಅಮೇರಿಕಾಕ್ಕೆ ಭಾರತದ ಅನಿವಾರ್ಯತೆಯಿದೆ. ಆದರೆ ಅದು ತೋರ್ಪಡಿಸುತ್ತಿಲ್ಲ. ಎರಡೂ ದೇಶಗಳು ವರ್ಷದಿಂದ ವರ್ಷಕ್ಕೆ ದ್ವಿಪಕ್ಷೀಯ ಸಂಬಂಧವನ್ನು ಸದೃಢಗೊಳಿಸುತ್ತಲೇ ಸಾಗುತ್ತಿವೆ. ಭಯೋತ್ಪಾದನೆ, ಚೀನಾದ ದಮನಕಾರಿ ನೀತಿಯನ್ನು ಹತ್ತಿಕ್ಕುವುದು, ಭದ್ರತಾ ಒಪ್ಪಂದಗಳು, ಪ್ರಾದೇಶಿಕ ಸ್ಥಿರತೆ, ಶಾಂತಿ ಶುದ್ಧ ಶಕ್ತಿಯ ಮೂಲಗಳು ಹಾಗೂ ಪರಿಸರ ಮಾಲಿನ್ಯದ ತಡೆ ಇತ್ಯಾದಿ ಸಂಗತಿಗಳ ಝಾಗತಿಕ ಯಶಸ್ಸಿಗೆ ಭಾರತ ಮತ್ತು ಅಮೇರಿಕಾ ಒಟ್ಟಾಗಲೇಬೇಕು. 21ನೇ ಶತಮಾನದ ಜಾಗತಿಕ ಔನ್ನತ್ಯಕ್ಕೆ ವಿಶ್ವದ ಯಾವುದೇ ಶಕ್ತಿಗೂ ಭಾರತವನ್ನು ನಿರ್ಲಕ್ಷಿಸಿ ಹೋಗುವ ಸಾಧ್ಯತೆಯೇ ಇಲ್ಲ. ಆದರೂ ಅಭ್ಯರ್ಥಿಗಳ ಆದ್ಯತೆಯ ಮೇಲೆ ಭದ್ರ ಸಂಬಂಧದ ಗಾಢತೆ ಮತ್ತು ಪಕ್ವತೆ ರೂಪುಗೊಳ್ಳಲಿದೆ.
ನವೆಂಬರ್ ಮೊದಲ ಸೋಮವಾರದ ನಂತರದ ಮೊದಲ ಮಂಗಳವಾರವೇ ಚುನಾವಣೆ ಯಾಕೆ?
ವಿಶ್ವವೇ ನಿಬ್ಬೆರಗಾಗಿ ಕಾದು ಕುಳಿತಿರುವ, ನಾಲ್ಕು ವರ್ಷಕ್ಕೊಮ್ಮೆ ನಡೆಯುವ ಅಮೇರಿಕ ಅಧ್ಯಕ್ಷೀಯ ಚುನಾವಣೆಯ ದಿನ ನವೆಂಬರ್ 8ಕ್ಕೆ ನಿಗದಿಯಾಗಿದೆ. 1845ರಲ್ಲಿ ಅಮೇರಿಕಾದ ಕಾಂಗ್ರೆಸ್ ನವೆಂಬರ್ ಮೊದಲ ಸೋಮವಾರದ ನಂತರದ ಮೊದಲ ಮಂಗಳವಾರವನ್ನು ಚುನಾವಣಾ ದಿನವಾಗಿ ಘೋಷಿಸಿತು. ಅಂದಿನಿಂದಲೂ ಚುನಾವಣಾ ಪ್ರಕ್ರಿಯೆಯಲ್ಲಿ ಅನೇಕ ಬದಲಾವಣೆಗಳಾದರೂ ಅಮೇರಿಕಾ ಇದೇ ಪದ್ಧತಿಯನ್ನು ಹಬ್ಬದಂತೆ ಪಾಲಿಸಿಕೊಂಡು ಬರುತ್ತಿದೆ. ಇದಕ್ಕೆ ಅನೇಕ ಕಾರಣಗಳಿವೆ.
ನವೆಂಬರ್ ತಿಂಗಳೇ ಯಾಕೆ?: ಆ ಸಮಯದಲ್ಲಿ ಅಮೇರಿಕಾದ ಬಹುಸಂಖ್ಯಾತರು ಕೃಷಿಕರಾಗಿದ್ದರು. ನವೆಂಬರ್ ಹೊತ್ತಿಗೆ ತಮ್ಮ ಕೃಷಿ ಚಟುವಟಿಕೆಗಳಿಗೆ ವಿರಾಮವಿರುತ್ತಿತ್ತು.
ಮೊದಲ ಸೋಮವಾರದ ನಂತರದ ಮೊದಲ ಮಂಗಳವಾರವೇ ಚುನಾವಣೆ ಯಾಕೆ?: ವ್ಯಾಪಾರಿಗಳು ತಮ್ಮ ಕಳೆದ ತಿಂಗಳ ಲೆಕ್ಕವನ್ನು ಮುಗಿಸುವುದು ತಿಂಗಳಿನ ಮೊದಲಿನ ದಿನ. ತಿಂಗಳ ಮೊದಲ ದಿನ ಇಟ್ಟರೆ ವ್ಯಾಪಾರಿಗಳೂ ಸೇರಿದಂತೆ ಇತರ ವ್ಯವಹಾರಸ್ಥರು ಚುನಾವಣೆಯಲ್ಲಿ ಪಾಲ್ಗೊಳ್ಳದೇ ಹೋಗಬಹುದು ಎಂಬ ಆಲೋಚನೆಯಲ್ಲಿ ಈ ದಿನವನ್ನೇ ಆರಿಸಲಾಯಿತು. ಜೊತೆಗೆ ನವೆಂಬರ್ ಒಂದನೇ ತಾರೀಕು ಅಮೇರಿಕಾದಲ್ಲಿ “ಎಲ್ಲಾ ಸಂತರ ದಿನ” ಎಂದು ಆಚರಿಸಲಾಗುತ್ತದೆ. ಅದು ರೋಮನ್ ಕ್ಯಾಥೋಲಿಕ್ ಸಮುದಾಯದವರಿಗೆ ಪವಿತ್ರ ದಿನ. ಇನ್ನು ಮಂಗಳವಾರವೇ ಯಾಕೆ ಎಂದರೆ ದೂರ ಪ್ರದೇಶದಿಂದ ಮತಗಟ್ಟೆ ಕೇಂದ್ರಕ್ಕೆ ಪ್ರಯಾಣ ಬೆಳೆಸುವವರು ಭಾನುವಾರ ತಮ್ಮ ಮನೆಯನ್ನು ಬಿಟ್ಟರೆ ಸೋಮವಾರ ತಲುಪುವುದು ಕಷ್ಟಸಾಧ್ಯವಾಗಿತ್ತು. ಹಾಗಾಗಿ ಇದನ್ನು ಮೊದಲ ಸೋಮವಾರದ ನಂತರದ ಮೊದಲ ಮಂಗಳವಾರದಂದೇ ನಡೆಸಲು ತೀರ್ಮಾನಿಸಲಾಯಿತು. ಆ ಪ್ರಕಾರ ನವೆಂಬರ್ನಲ್ಲಿ ಬೇಗ ಎಂದರೆ ನವೆಂಬರ್ 2ಕ್ಕೆ ಹಾಗೂ ತಡವಾಗಿ ಎಂದರೆ ನವೆಂಬರ್ ಎಂಟಕ್ಕೆ ಎಂಬ ಎಲ್ಲರಿಗೂ ಅನ್ವಯವಾಗಬಲ್ಲ ತರ್ಕ ಈ ದಿನದ ಹಿಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.