ಭಾರತೀಯ ಚಿತ್ರರಂಗದ ಪಿತಾಮಹ ಎನಿಸಿಕೊಂಡಿರುವ ದಾದಾ ಸಾಹೇಬ್ ಫಾಲ್ಕೆ ನಿರ್ದೇಶಕನಾಗಿ, ನಿರ್ಮಾಪಕನಾಗಿ, ಚಿತ್ರಕಥೆಗಾರನಾಗಿ ಸಿನಿಮಾ ರಂಗಕ್ಕೆ ಸಲ್ಲಿಸಿದ ಸೇವೆ, ಕೊಡುಗೆ ಎಂದೆಂದಿಗೂ ಅಜರಾಮರ. ಸಿನಿಮಾ ರಂಗಕ್ಕೆ ಅವರು ಹಾಕಿಕೊಟ್ಟ ಅಡಿಪಾಯವೇ ಇಂದು ಭಾರತೀಯ ಚಿತ್ರರಂಗವನ್ನು ಇಷ್ಟು ಎತ್ತರಕ್ಕೆ ಬೆಳೆಸಿದೆ ಎಂದರೆ ತಪ್ಪಾಗಲಾರದು.
1870ರ ಎ.30ರಂದು ದೇಶಷ್ಟ ಬ್ರಾಹ್ಮಣ ಮರಾಠಿ ಕುಟುಂಬದಲ್ಲಿ ಜನಿಸಿದ ಇವರ ಮೂಲ ಹೆಸರು ದುಂಡೀರಾಜ್ ಗೋವಿಂದ್ ಪಾಲ್ಕೆ. ಮಹಾರಾಷ್ಟ್ರದಲ್ಲಿ ಶಿಕ್ಷಣ ಪೂರೈಸಿದ ಇವರು ಬಳಿಕ ಬರೋಡಾಗೆ ತೆರಳಿ ಅಲ್ಲಿ ಶಿಲ್ಪ, ಎಂಜಿನಿಯರಿಂಗ್, ಡ್ರಾಯಿಂಗ್, ಛಾಯಾಚಿತ್ರವನ್ನು ಅಧ್ಯಯನ ಮಾಡಿದರು. ಗೋದ್ರಾದಲ್ಲಿ ಸಣ್ಣ ಛಾಯಾಗ್ರಾಹಕನಾಗಿ ವೃತ್ತಿ ಆರಂಭಿಸಿದ ಇವರು ಬಳಿಕ ಹಲವಾರು ವೃತ್ತಿ ಮಜಲುಗಳನ್ನು ದಾಟಿ ಕೊನೆಗೆ ಸಿನಿಮಾರಂಗಕ್ಕೆ ಬಂದರು.
1913ರಲ್ಲಿ ತೆರೆ ಕಂಡ, ಅವರು ನಿರ್ದೇಶಿಸಿದ ಮೊದಲ ಚಿತ್ರ ರಾಜ ಹರಿಶ್ಚಂದ್ರ ಭಾರತದ ಮೊದಲ ಪೂರ್ಣಾವಧಿಯ ಚಲನಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಮೋಹಿನ ಭಸ್ಮಾಸುರ, ಸತ್ಯವಾನ್ ಸಾವಿತ್ರಿ, ಲಂಕಾ ದಹನ, ಶ್ರೀಕೃಷ್ಣ ಜನ್ಮ, ಕಾಳಿಯಾ ಮರ್ಧನ್ ಭಾರತೀಯರು ಎಂದೆಂದಿಗೂ ಮರೆಯಲಾಗದ ಸಿನಿಮಾಗಳಾಗಿವೆ.
ಅವರು ತಮ್ಮ ಜೀವಮಾನದಲ್ಲಿ ಒಟ್ಟು 95 ಸಿನಿಮಾಗಳನ್ನು, 26 ಕಿರು ಚಿತ್ರಗಳನ್ನು ನಿರ್ದೇಶಿಸಿದ ಕೀರ್ತಿಯನ್ನು ಹೊಂದಿದ್ದಾರೆ. ಅವರ ಒಂದೊಂದು ಚಿತ್ರವೂ ಭಾರತೀಯ ಚಿತ್ರರಂಗದಲ್ಲಿ ಅಭೂತಪೂರ್ವ ಮೈಲಿಗಲ್ಲನ್ನು ಸಾಧಿಸಿದೆ. ಹಲವಾರು ಮುಖಿಚಿತ್ರ, ಸಾಕ್ಷ್ಯಚಿತ್ರ, ಶಿಕ್ಷಣ, ಕಾಮಿಡಿ ಚಿತ್ರಗಳನ್ನು ನಿರ್ದೇಶಿಸಿ ಕೀರ್ತಿಯೂ ಇವರಿಗೆ ಸಲ್ಲುತ್ತದೆ.
ಅವರು ಭಾರತೀಯ ಚಿತ್ರರಂಗಕ್ಕೆ ನೀಡಿದ ಸೇವೆಯ ಗೌರವಾರ್ಥವಾಗಿ 1969ರಲ್ಲಿ ಭಾರತ ಸರ್ಕಾರ ಅವರ ಹೆಸರಿನಲ್ಲಿ ‘ದಾದಾ ಸಾಹೇಬ್ ಫಾಲ್ಕೆ’ ಪ್ರಶಸ್ತಿಯನ್ನು ಆರಂಭಿಸಿತು. ಸಿನಿಮಾ ರಂಗದಲ್ಲಿ ಜೀವಮಾನದ ಸಾಧನೆ ಮಾಡಿದ ಸಾಧಕರಿಗೆ ಪ್ರತಿವರ್ಷ ಈ ಪ್ರಶಸ್ತಿಯನ್ನು ಕೊಡಲಾಗುತ್ತದೆ. ಭಾರತ ಚಿತ್ರರಂಗದ ಅತ್ಯುನ್ನತ ಪ್ರಶಸ್ತಿ ಇದಾಗಿದೆ. ಅಷ್ಟೇ ಅಲ್ಲದೇ 1971ರಲ್ಲಿ ಇವರ ಮುಖವುಳ್ಳ ಪೋಸ್ಟಲ್ ಸ್ಟಾಂಪ್ನ್ನು ಬಿಡುಗಡೆಗೊಳಿಸಲಾಯಿತು.
ಇಂದು ಭಾರತೀಯ ಚಿತ್ರರಂಗದಲ್ಲಿ ಸಾಕಷ್ಟು ಬದಲಾವಣೆಗಳಾಗಿದೆ. ನೂತನ ತಂತ್ರಜ್ಞಾನಗಳನ್ನು ಅಳವಡಿಸಿರುವ ವಿಶ್ವದರ್ಜೆಯ ಸಿನಿಮಾಗಳು ನಮ್ಮಲ್ಲಿ ತಯಾರಾಗುತ್ತಿವೆ. ಆದರೂ ತಂತ್ರಜ್ಞಾನಕ್ಕೆ ಅಭಾವವಿದ್ದ ಅಂದಿನ ಕಾಲದಲ್ಲೂ ಒಳ್ಳೆಯ ಸಿನಿಮಾಗಳನ್ನು ತಯಾರಿಸಿದ ಕೀರ್ತೀ ದಾದಾ ಸಾಹೇಬ್ ಅವರಿಗೆ ಸಲ್ಲುತ್ತದೆ. ಅದಕ್ಕಾಗಿಯೇ ಅವರು ಭಾರತೀಯ ಚಿತ್ರರಂಗದ ಪಿತಾಮಹ ಎನಿಸಿಕೊಂಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.