1982ರಲ್ಲಿ ಅಂತಾರಾಷ್ಟ್ರೀಯ ನೃತ್ಯ ಸಂಸ್ಥೆ (ಐಟಿಐ) ಪ್ರತಿ ವರ್ಷ ಎಪ್ರಿಲ್ ೨೯ ಅನ್ನು ವಿಶ್ವ ನೃತ್ಯ ದಿನವನ್ನಾಗಿ ಆಚರಿಸಲು ನಿರ್ಧರಿಸಿತು. ಆಧುನಿಕ ನೃತ್ಯ ಪ್ರಕಾರವನ್ನು ಜಗತ್ತಿಗೆ ಪರಿಚಯಿಸಿದ ಜೀನ್ ಜಾರ್ಜ್ ನೊವೆರೆ (1727-1810) ಅವರ ಸವಿನೆನಪಿಗಾಗಿ ವಿಶ್ವದ ಸರ್ವ ನೃತ್ಯ ಪ್ರೇಮಿಗಳಿಂದ ಈ ದಿನವನ್ನು ಸಂಭ್ರಮಿಸಲು ನಿರ್ಧರಿಸಲಾಯಿತು.
ವಿಶ್ವ ನೃತ್ಯ ದಿನವನ್ನು ಆಚರಿಸುವ ಉದ್ದೇಶ ಮುಖ್ಯವಾಗಿ ಜಗತ್ತಿನ ಎಲ್ಲಾ ರಾಜಕೀಯ, ಸಾಂಸ್ಕೃತಿಕ ಮತ್ತು ಸಾಂಪ್ರದಾಯಿಕ ಕಲಾ ಪ್ರಕಾರಗಳನ್ನು ಮೀರಿದ ಪ್ರೀತಿಯೊಂದು ಜನಮಾನಸದಲ್ಲಿ ಹರಡಲು ನೃತ್ಯವೊಂದೇ ಇರುವ ಉಪಾಯ ಮತ್ತು ಪರಿಹಾರ ಎಂದು ಅರಿತ ಕಲಾಪ್ರೇಮಿಗಳು ನೃತ್ಯದಿಂದ ನಮ್ಮ ನಡುವೆ ಹುದುಗಿ ಹೋಗಿರುವ ಕಂದಕಗಳನ್ನು ಸಂಪೂರ್ಣ ಅಳಸಿ ಒಂದು ಸುಂದರ ಅನುಭೂತಿಯನ್ನು ಪಡೆಯುವುದಕ್ಕಾಗಿ ಮಾಡಿದ ವ್ಯವಸ್ಥೆ ಎಂದು ಹೇಳಿದರೆ ಅತಿಶಯೋಕ್ತಿ ಆಗಲಾರದು. ಅಂತಾರಾಷ್ಟ್ರೀಯ ಡ್ಯಾನ್ಸ್ ಕೌನ್ಸಿಲ್ ಪ್ರತಿ ವರ್ಷ ಪ್ರಪಂಚದಲ್ಲಿ ನೃತ್ಯ ಪ್ರಕಾರಗಳನ್ನು ಪ್ರಚುರಪಡಿಸಲು ಕೆಲಸ ಮಾಡುತ್ತಲೇ ಇದೆ.
ಪ್ರತಿ ವರ್ಷ ಸಾಮಾನ್ಯ ನಾಗರಿಕರಲ್ಲಿ ನೃತ್ಯದ ಬಗ್ಗೆ ಪ್ರೀತಿ ಹೆಚ್ಚಿಸಲು ಈ ಸಂಸ್ಥೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಲೇ ಬರುತ್ತಿದೆ. ಅಷ್ಟೇ ಅಲ್ಲದೆ ಪ್ರತಿ ದೇಶದ ಸರಕಾರಗಳು ತಮ್ಮ ರಾಷ್ಟ್ರದ ಶಿಕ್ಷಣ ವ್ಯವಸ್ಥೆಯಲ್ಲಿ ನೃತ್ಯವನ್ನು ಒಂದು ಭಾಗವಾಗಿ ಅಳವಡಿಸುವ ಮೂಲಕ ಮಕ್ಕಳನ್ನು ಬಾಲ್ಯದಿಂದಲೇ ನೃತ್ಯದತ್ತ ಸೆಳೆಯಲು ಪ್ರಯತ್ನ ಮಾಡಬೇಕು ಎಂದು ಸರ್ಕಾರಗಳನ್ನು ಒತ್ತಾಯಿಸುತ್ತಲೇ ಬಂದಿದೆ. ಅದಲ್ಲದೆ ಜನ ಸಾಮಾನ್ಯರಿಗಾಗಿ ತೆರೆದ ವೇದಿಕೆಯಲ್ಲಿ ನೃತ್ಯ ಕಾರ್ಯಕ್ರಮಗಳು, ನೃತ್ಯ ಪ್ರದರ್ಶನಗಳು, ಬೀದಿ ನೃತ್ಯ ಕಾರ್ಯಕ್ರಮಗಳು, ವಿವಿಧ ಮಾಧ್ಯಮಗಳಲ್ಲಿ ನೃತ್ಯದ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನಗಳನ್ನು ಈ ಸಂಸ್ಥೆ ನಡೆಸುವ ಮೂಲಕ ಹೆಚ್ಚೆಚ್ಚು ಜನರು ಇದಕ್ಕೆ ಮನ ಸೋಲುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ.
ಇಂಟರ್ನ್ಯಾಶನಲ್ ಡ್ಯಾನ್ಸ್ ಕೌನ್ಸಿಲ್ (ಸಿಐಡಿ) ಆರ್ಥಿಕ ಲಾಭದಿಂದ ನಡೆಸುವ ಸಂಸ್ಥೆ ಆಗಿರುವುದಿಲ್ಲ. ಪ್ಯಾರಿಸ್ನ ಯುನೆಸ್ಕೋದ ಕೇಂದ್ರ ಕಚೇರಿಯಲ್ಲಿ ತನ್ನ ಕೆಲಸಗಳನ್ನು ನಿರ್ವಹಿಸುವ ಈ ಸಂಸ್ಥೆ 120 ರಾಷ್ಟ್ರಗಳಲ್ಲಿ ತನ್ನ ಅಂಗ ಸಂಸ್ಥೆಗಳನ್ನು ಹೊಂದಿದೆ.
ನೃತ್ಯವನ್ನು ನಿಮ್ಮ ಬಾಳಿನಲ್ಲಿ ತನ್ನಿ ಎಂದು ಕಳೆದ ವರ್ಷ ಸಿಐಡಿ ಕರೆ ನೀಡಿತ್ತು. ಯಾವುದೇ ಭಾಷೆಯ ತೊಡಕಿಲ್ಲದೆ, ಮನಸ್ಸಿಗೆ ಮತ್ತು ದೇಹಕ್ಕೆ ಸಮಾನಾಂತರವಾಗಿ ಖುಷಿ ನೀಡುವ ಮೂಲಕ ಶಬ್ದಗಳಲ್ಲಿ ವಿವರಿಸಲು ಆಗದ್ದನ್ನು ದೇಹ ಭಾಷೆಯ ಮೂಲಕ ಪ್ರಪಂಚಕ್ಕೆ ಪಸರಿಸುವ ಕಲೆ ಆಗಿರುವ ನೃತ್ಯವನ್ನು ನಮ್ಮ ಜೀವನದಲ್ಲಿ ಉಸಿರಾಗಿಸುವ ಮೂಲಕ ಸಹಜವಾಗಿ ಅಳವಡಿಸಬೇಕು ಎನ್ನುವುದು ವಿಶ್ವ ನೃತ್ಯಪ್ರಿಯರ ಕೂಗು.
ಪ್ರಪಂಚದಲ್ಲಿರುವ ಸುಮಾರು 200ರಾಷ್ಟ್ರಗಳಲ್ಲಿ ಅರ್ಧದಷ್ಟು ರಾಷ್ಟ್ರಗಳಲ್ಲಿ ನೃತ್ಯಕ್ಕೆ ಕಾನೂನಾತ್ಮಕವಾಗಿ ಅವಕಾಶ ಇಲ್ಲದಿರುವುದನ್ನು ಅಂತಾರಾಷ್ಟ್ರೀಯ ನೃತ್ಯ ಕೌನ್ಸಿಲ್ ಗಂಭೀರವಾಗಿ ಸ್ವೀಕರಿಸಿದೆ. ಅಂತಹ ರಾಷ್ಟ್ರಗಳಲ್ಲಿ ಸರಕಾರಗಳ ಆರ್ಥಿಕ ಪ್ರೋತ್ಸಾಹ ಕೂಡ ಇಲ್ಲದಿರುವುದು ನೃತ್ಯ ಕುಂಠಿತವಾಗಿರುವುದಕ್ಕೆ ಕಾರಣವಾಗಿದೆ.
ಎಪ್ರಿಲ್ 29 ರಂದು ದೆಹಲಿಯಲ್ಲಿ ನೂರು ಜನ ಕಲಾವಿದರು ಏಕಕಾಲಕ್ಕೆ ನೃತ್ಯ ಪ್ರದರ್ಶಿಸುವ ಮೂಲಕ ವಿಶ್ವ ನೃತ್ಯ ದಿನವನ್ನು ವಿದ್ಯುಕ್ತವಾಗಿ ಆಚರಿಸಲು ತೀರ್ಮಾನಿಸಿದ್ದಾರೆ. ಈ ಮೂಲಕ ‘ನೃತ್ಯಕ್ಕೆ ಯಾವುದೇ ಸೀಮೆಯಿಲ್ಲ’ ಎನ್ನುವುದನ್ನು ಪ್ರಪಂಚಕ್ಕೆ ತಿಳಿಸಲು ಕಲಾವಿದರು ತೀರ್ಮಾನಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.