ಕಾರ್ಕಳ: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರಕಾರವು ಬಡವರ ಬಗ್ಗೆ ಕಾಳಜಿಯೇ ಇಲ್ಲದ ಜನವಿರೋಧಿ ಸರಕಾರ. ಕಳೆದೆರಡು ವರ್ಷದ ಹಿಂದೆ ಜನ ಕಲ್ಯಾಣದ ಹೆಸರಿನಲ್ಲಿ ಹಲವಾರು ಭರವಸೆ ನೀಡಿ ಅಧಿಕಾರಕ್ಕೆ ಬಂದಿರುವ ಸಿದ್ದರಾಮಯ್ಯ ನೇತೃತ್ವದ ಸರಕಾರವು, ಪ್ರಸ್ತುತ ಆಡಳಿತದಲ್ಲಿ ವೈಫಲ್ಯ ಕಂಡಿದೆ ಎಂದು ಶಾಸಕ, ವಿಧಾನ ಸಭಾ ಪ್ರತಿಪಕ್ಷ ಮುಖ್ಯ ಸಚೇತಕ ವಿ.ಸುನಿಲ್ ಕುಮಾರ್ ಹೇಳಿದ್ದಾರೆ.
ಅವರು ಸೋಮವಾರ ತಾಲೂಕು ಕಚೇರಿಯ ಮುಂಭಾಗ ರಾಜ್ಯ ಸರಕಾರದ ವಿರುದ್ಧ ಬಿಜೆಪಿ ವತಿಯಿಂದ ನಡೆದ ಪ್ರತಿಭಟನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ತಾಲೂಕು ವ್ಯಾಪ್ತಿಯಲ್ಲಿ 94ಸಿ ಹಕ್ಕು ಪತ್ರ ಸಲ್ಲಿಸಿದ ಅರ್ಜಿದಾರರ ಅರ್ಜಿಯನ್ನು ನಾಲ್ಕು ತಿಂಗಳ ಅವಧಿಯಲ್ಲಿ ವಿಲೇವಾರಿ ಮಾಡದಿದ್ದಲ್ಲಿ ತಾಲೂಕು ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಅವರು ಈ ಸಂದರ್ಭ ಎಚ್ಚರಿಸಿದರು.
ರಾಜ್ಯ ಸರಕಾರವು ಗ್ರಾಮಿಣ ಭಾಗದ ಬಡ ರೈತಾಪಿ ವರ್ಗ ಹಾಗೂ ಸಾಮಾನ್ಯ ಜನರ ಹಿತವನ್ನು ಬಲಿಕೊಟ್ಟಿದೆ. ತಮ್ಮ ಆಡಳಿತ ದಿನಗಳಲ್ಲಿ ಹೊಸ ಪದಗಳನ್ನು ಪ್ರಯೋಗಿಸಿ ನಾಗರಿಕರ ಬದುಕಿನ ಮೇಲೆ ಚೆಲ್ಲಾಟ ನಡೆಸುತ್ತಿದೆ. ಕಾರ್ಕಳ ತಾಲೂಕು ಒಂದರಲ್ಲಿಯೇ ಸುಮಾರು 1800 ಅಧಿಕ ಪಡಿತರ ಚೀಟಿಯನ್ನು ಸಸ್ಪೆಂಡ್ ಮಾಡುವ ಮೂಲಕ ಆ ಕುಟುಂಬಗಳಿಗೆ ನೀಡಬೇಕಾಗಿದ್ದ ಪಡಿತರ ಸಾಮಗ್ರಿಗಳನ್ನು ತಡೆಹಿಡಿದಿದೆ.
ಮಠ ಮಂದಿರಗಳ ಮೇಲೆ ನಿಯಂತ್ರಣ ಮಾಡಲು ಹೊರಟ ಈ ಸರಕಾರ, ಗೋ ಹತ್ಯೆ ನಿಷೇಧ ಕಾನೂನನ್ನು ವಾಪಸ್ಸು ಪಡೆಯುವ ಮೂಲಕ ರಾಜ್ಯದ ಬಹು ಸಂಖ್ಯಾತ ಜನರ ಭಾವನೆಗಳಿಗೆ ಅಘಾತವನ್ನುಂಟು ಮಾಡಿದೆ. ಕೂಡಲೇ ರಾಜ್ಯ ಸರ್ಕಾರ ಎಚ್ಚೆತ್ತು ಜನರ ಭಾವನೆಗಳಿಗೆ ಘಾಸಿ ಮಾಡದೆ ಜನಪರ ಆಡಳಿತ ನೀಡಬೇಕೆಂದು ಅವರು ಆಗ್ರಹಿಸಿದರು.
ಮಕ್ಕಳ ಪ್ರವಾಸದಲ್ಲಿ ಜಾತಿ ವಿಷ ಬೀಜ ಬಿತ್ತಿ ಕೆಲವೇ ಮಕ್ಕಳ ಪ್ರವಾಸದ ಯೋಜನೆ ಮಾಡಿರುವುದನ್ನು ನಿಲ್ಲಿಸಿ ಎಲ್ಲಾ ಮಕ್ಕಳಿಗೆ ಸಮಾನ ಅವಕಾಶ ನೀಡಬೇಕು. 94ಸಿ ಅರ್ಜಿಗಳ ಶೀಘ್ರ ವಿಲೇವಾರಿ, ಕುಡಿಯುವ ನೀರು ಸರಬರಾಜು ಯೋಜನೆಗಳಿಗೆ ಅನುದಾನ ಬಿಡುಗಡೆ, ಮಳೆಗಾಲಕ್ಕೆ ಮುನ್ನ ನೆನೆಗುದಿಗೆ ಬಿದ್ದಿರುವ ಗ್ರಾಮೀಣ ರಸ್ತೆಗಳಿಗೆ ಡಾಮರೀಕರಣ, ಅನಿಯಮಿತ ವಿದ್ಯುತ್ ಕಡಿತದಿಂದ ಗ್ರಾಮೀಣ ಜನತೆಗಾಗುವ ತೊಂದರೆ ನಿವಾರಣೆ, ರಾಜ್ಯದ ಎಲ್ಲಾ ದಕ್ಷ-ಪ್ರಾಮಾಣಿಕ ಅಧಿಕಾರಿಗಳಿಗೆ ರಕ್ಷಣೆ ನೀಡಬೇಕು ಎಂಬ ಬೇಡಿಕೆಗಳಿಗೆ ತಹಶೀಲ್ದಾರ್ ಮೂಲಕ ಮನವಿ ಸಲ್ಲಿಸಿದರು.
ಬಿಜೆಪಿ ಉಡುಪಿ ಜಿಲ್ಲಾ ಉಪಾಧ್ಯಕ್ಷ ಬೋಳ ಸದಾಶಿವ ಶೆಟ್ಟಿ, ಬಿಜೆಪಿ ಕಾರ್ಕಳ ಕ್ಷೇತ್ರಾಧ್ಯಕ್ಷ ಮಣಿರಾಜ್ ಶೆಟ್ಟಿ, ಉಡುಪಿ ಜಿ.ಪಂ.ಅಧ್ಯಕ್ಷೆ ಸವಿತಾ ಕೋಟ್ಯಾನ್, ರೈತ ಮೋರ್ಚಾ ಮುಖಂಡ ಮುಟ್ಲುಪ್ಪಾಡಿ ಸತೀಶ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ರವೀಂದ್ರ ಕುಮಾರ್, ಹಿರಿಯ ಮುಖಂಡ ಬೋಳ ಪ್ರಭಾಕರ ಕಾಮತ್, ನ್ಯಾಯವಾದಿ ಎಂ.ಕೆ.ವಿಜಯ ಕುಮಾರ್, ಜಿ.ಪಂ.ಸದಸ್ಯರಾದ ಉದಯ ಎಸ್.ಕೋಟ್ಯಾನ್, ಮಮತಾ ಅಧಿಕಾರಿ, ತಾ.ಪಂ.ಅಧ್ಯಕ್ಷೆ ವಿಜಯ ಕುಮಾರಿ, ಉಪಾಧ್ಯಕ್ಷೆ ಮಾಲಿನಿ ಶೆಟ್ಟಿ, ಸದಸ್ಯ ಜಯರಾಮ್ ಸಾಲ್ಯಾನ್, ಕುಕ್ಕುಂದೂರು ಗ್ರಾ.ಪಂ. ಅಧ್ಯಕ್ಷ ಅಂತೋನಿ ಡಿಸೋಜಾ, ಎಪಿಎಂಸಿ ಸದಸ್ಯ ಪ್ರದೀಪ್ ಕೋಟ್ಯಾನ್, ನಗರಾಧ್ಯಕ್ಷ ಗಿರಿಧರ್ ನಾಯಕ್, ಪ್ರಧಾನ ಕಾರ್ಯದರ್ಶಿ ಪ್ರಕಾಶ್ ರಾವ್, ಪುರಸಭೆ ಸದಸ್ಯರಾದ ಪಾರ್ಶ್ವನಾಥ ಮರ್ಮ, ಲಲಿತಾ ಆರ್.ಭಟ್, ಬಿಜೆಪಿ ಪ್ರಮುಖರಾದ ಪ್ರಿಯಾಂಕ ಸುನಿಲ್ ಕುಮಾರ್, ನಂದಕುಮಾರ್ ಹೆಗ್ಡೆ ಮತ್ತಿತರರು ಉಪಸ್ಥಿತರಿದ್ದರು.
ಸಾಣೂರು ನರಸಿಂಹ ಕಾಮತ್ ಕಾರ್ಯಕ್ರಮ ನಿರೂಪಿಸಿದರು.
(ಫೊಟೋ:೨೭-ಪ್ರತಿಭಟನೆ)
===============
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.