News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಪರಮವೈಭವ ಸಂಪನ್ನ ವಿಶ್ವಗುರು ಭಾರತ ನಿರ್ಮಾಣದ ಜವಾಬ್ದಾರಿ ಮುಂದಿನ ಪೀಳಿಗೆಯ ಮೇಲಿದೆ: ಡಾ. ಮೋಹನ್‌ ಭಾಗವತ್

ನಾಗ್ಪುರ: ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ತನ್ನ ರೇಶಿಂಬಾಗ್ ಪ್ರಧಾನ ಕಚೇರಿಯಲ್ಲಿ ವಾರ್ಷಿಕ ವಿಜಯದಶಮಿ ಆಚರಣೆ ನಡೆಸಿದ್ದು, ಆಚರಣೆಯು  ಸಾಂಪ್ರದಾಯಿಕ ಭವ್ಯತೆ, ಅನುಕರಣೀಯ ಶಿಸ್ತು ಮತ್ತು ದೇಶಭಕ್ತಿಯ ಉತ್ಸಾಹದಿಂದ ತುಂಬಿತ್ತು.

ಈ ಐತಿಹಾಸಿಕ ಮತ್ತು ಪವಿತ್ರ ಸಂದರ್ಭದ ಆರಂಭದಲ್ಲಿ, ಸಂಘದ ಮುಖ್ಯಸ್ಥ (ಸರಸಂಘಚಾಲಕ್) ಡಾ. ಮೋಹನ್ ಭಾಗವತ್, ಪೂರ್ಣ ಗಣವೇಷ ಧರಿಸಿ, ಮಂತ್ರಗಳ ಪಠಣದೊಂದಿಗೆ ಸಾಂಪ್ರದಾಯಿಕ ಶಸ್ತ್ರ ಪೂಜೆಯನ್ನು ನೆರವೇರಿಸಿದರು. ಆಚರಣೆಯ ನಂತರ, ಸಂಘದ ಮೊದಲ ಸರಸಂಘಚಾಲಕ ಮತ್ತು ಸಂಸ್ಥಾಪಕರಿಗೆ ಗೌರವ ಸಲ್ಲಿಸಿ ರಾಷ್ಟ್ರವನ್ನು ನಿರ್ಮಿಸುವ ಪ್ರತಿಜ್ಞೆಯನ್ನು ಪುನರುಚ್ಚರಿಸಿದರು. ಅವರೊಂದಿಗೆ ಹಿರಿಯ ಪತ್ರಕರ್ತ ಮತ್ತು ದೈನಿಕ್ ಜಾಗರಣ್‌ನ ಪ್ರಧಾನ ಸಂಪಾದಕ ಸಂಜಯ್ ಗುಪ್ತಾ ಕೂಡ ಸೇರಿಕೊಂಡರು, ಅವರು ಆರ್‌ಎಸ್‌ಎಸ್ ಸಂಸ್ಥಾಪಕ ಡಾ. ಕೇಶವ ಬಲಿರಾಮ್ ಹೆಡ್ಗೆವಾರ್ ಸಮಾಧಿಗೆ ಪುಷ್ಪ ನಮನ ಸಲ್ಲಿಸಿದರು. ನಂತರ ಡಾ. ಭಾಗವತ್ ವೇದಿಕೆಗೆ ಬಂದು ಸ್ವಯಂಸೇವಕರನ್ನು ಉದ್ದೇಶಿಸಿ ವಾರ್ಷಿಕ ವಿಜಯದಶಮಿ ಭಾಷಣವನ್ನು ನೀಡಿದರು.‌

“ಇಂದಿನ ಪ್ರಪಂಚವು ಭೂರಾಜಕೀಯ ಒತ್ತಡಗಳಿಂದ, ಆರ್ಥಿಕ ಅನಿಶ್ಚಿತತೆ, ಪರಿಸರ ಬಿಕ್ಕಟ್ಟುಗಳು ಮತ್ತು ವರ್ಚಸ್ಸಿಗಾಗಿ ನಡೆಯುತ್ತಿರುವ ಹೋರಾಟಗಳಲ್ಲಿ ವಿನಾಶವನ್ನು ಕಾಣುತ್ತಿದೆ. ಈ ಎಲ್ಲಾ ಸಮಸ್ಯೆಗಳಿಗೆ ಭಾರತದ ಬಳಿ ಉತ್ತರಗಳಿವೆ ಎಂಬುದು ಅವರಿಗೆ ತಿಳಿದಿದೆ. ಆದ್ದರಿಂದ, ನಮ್ಮ ಕಾರ್ಯಕರ್ತರು ವ್ಯಕ್ತಪಡಿಸಿದ ವಿಚಾರಗಳನ್ನು ಉತ್ತಮ ರೀತಿಯಲ್ಲಿ ಆಲಿಸಲಾಯಿತು. ತದನಂತರ ಚರ್ಚೆಗಳೂ ನಡೆದವು. ಶತಾಬ್ದಿಯ ಸಂದರ್ಭದಲ್ಲಿ ದೇಶದಲ್ಲೂ ಮತ್ತು ಜಗತ್ತಿನಾದ್ಯಂತ ಪ್ರಾರಂಭವಾದ ಎಲ್ಲಾ ರೀತಿಯ ಸಂವಾದಗಳು; ಭವಿಷ್ಯದಲ್ಲೂ ಸತತವಾಗಿ ಹಾಗೂ ನಿರಂತರವಾಗಿ ಮುಂದುವರಿಯುವಂತೆ ನಮ್ಮ ಕಾರ್ಯಕರ್ತರು ಯೋಜನೆಗಳನ್ನು ರೂಪಿಸುವಲ್ಲಿ ನಿರತರಾಗಿದ್ದಾರೆ” ಎಂದು ಭಾಷಣದಲ್ಲಿ ಹೇಳಿದರು..

ಪಂಚ ಪರಿವರ್ತನೆ (ಐದು ಉಪಕ್ರಮಗಳು) – ಸಾಮಾಜಿಕ ಸಾಮರಸ್ಯ, ಕುಟುಂಬ ಪ್ರಬೋಧನ, ಪರಿಸರ ಸಂರಕ್ಷಣೆ, ಸ್ವ-ಬೋಧೆ ಮತ್ತು ಸ್ವದೇಶಿ, ಹಾಗೂ ನಾಗರಿಕ ಶಿಷ್ಟಾಚಾರ – ಈ ಐದೂ ಉಪಕ್ರಮಗಳನ್ನು (ಪಂಚ ಪರಿವರ್ತನೆ) ಸಮಾಜದ ಎಲ್ಲಾ ವರ್ಗಗಳು ಮತ್ತು ಸ್ತರಗಳಲ್ಲೂ ಸ್ವಾಗತಿಸಲಾಗಿದೆ. ವಿಶ್ವದ ಇತರ ದೇಶಗಳಲ್ಲೂ ಇವುಗಳ ಅವಶ್ಯಕತೆಯ ಮನವರಿಕೆಯಾಗಿದೆ. ಇವು ಕೇವಲ ಒಂದು ವರ್ಷಕ್ಕೆ ಮಾತ್ರ ಸೀಮಿತವಾದ ಕಾರ್ಯಕ್ರಮಗಳಲ್ಲ; ಬದಲಾಗಿ, ನಮ್ಮ ನಡವಳಿಕೆಯಲ್ಲಿ ಪರಿವರ್ತನೆಯನ್ನು ತರುವ ವ್ಯಾವಹಾರಿಕ ಶೈಲಿಯಾಗಿದೆ ಎಂದರು.

ವಿಜ್ಞಾನ ಮತ್ತು ತಂತ್ರಜ್ಞಾನದ ಪ್ರಗತಿಯೊಂದಿಗೆ, ಎಲ್ಲಾ ರೀತಿಯ ಮಾಹಿತಿ ಮತ್ತು ಸುದ್ದಿಗಳು ಈಗ ಸೋಶಿಯಲ್ ಮೀಡಿಯಾ ಮೂಲಕ ಪ್ರತಿಯೊಬ್ಬರಿಗೂ ಸುಲಭವಾಗಿ ಲಭ್ಯವಾಗುತ್ತಿವೆ. ಹಲವು ದೇಶಗಳಲ್ಲಿ, ಯುವ ಪೀಳಿಗೆಯು ಯಾವುದು ‘ಸೂಕ್ತ’ ಮತ್ತು ಯಾವುದು ‘ಸೂಕ್ತವಲ್ಲದ’ ಎಂಬ ವಿವೇಚನೆಯನ್ನು ಬಳಸದೆ ಈ ಮಾಧ್ಯಮಗಳ ಮೂಲಕ ಬರುವ ಮಾಹಿತಿಯನ್ನು ಯಥಾವತ್ತು ಸ್ವೀಕರಿಸುತ್ತಿದೆ. ಇದರ ದುಷ್ಪರಿಣಾಮಗಳನ್ನು ಅನುಭವಿಸಿದ ನಂತರ, ಆ ದೇಶಗಳು ಇಂತಹ ಮಾಧ್ಯಮ ವೇದಿಕೆಗಳ ಮೇಲೆ ಕೆಲವು ನಿಯಮಗಳು ಮತ್ತು ನಿರ್ಬಂಧಗಳನ್ನು ಹೇರಿವೆ. ನಮ್ಮ ದೇಶದಲ್ಲೂ ವಿಶೇಷವಾಗಿ ‘ಒಟಿಟಿ’ (OTT) ವೇದಿಕೆಗಳಿಗೆ ಸಂಬಂಧಿಸಿದಂತೆ ಇಂತಹ ಕ್ರಮಗಳ ಅಗತ್ಯವನ್ನು ಸಮಾಜವು ಹೆಚ್ಚಾಗಿ ಗುರುತಿಸಿದೆ. ಸರ್ಕಾರವು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದರು.

ಮಾಹಿತಿ ಮುಕ್ತವಾಗಿ ಲಭ್ಯವಿದ್ದಾಗಲೂ, ಯಾವುದು ‘ಸೂಕ್ತವಾದದ್ದು’ ಮತ್ತು ಯಾವುದು ‘ಸೂಕ್ತವಲ್ಲದ್ದು’ ಎಂಬುದನ್ನು ವಿವೇಚಿಸುವ ಗುಣವನ್ನು ಯುವ ಪೀಳಿಗೆಗೆ ಕಲಿಸಿಕೊಡಬೇಕಾಗಿದೆ. ಇಂತಹ ವಿವೇಚನೆಯ ಕೊರತೆಯಿಂದಾಗಿ ವೈಯಕ್ತಿಕ, ಕೌಟುಂಬಿಕ ಮತ್ತು ಸಾಮಾಜಿಕ ಜೀವನದಲ್ಲಿ ಅನೇಕ ದುಷ್ಪರಿಣಾಮಗಳು ಎದ್ದು ಕಾಣುತ್ತಿವೆ. ಇಂತಹ ವಿವೇಕದ ಕೊರತೆಯಿಂದಲೇ ಪ್ರಪಂಚದಾದ್ಯಂತ ಯುವ ಪೀಳಿಗೆಯು ಮಾರಕ ಮಾದಕವಸ್ತುಗಳ ದಾಸರಾಗಲು ಕಾರಣವಾಗುತ್ತಿದೆ ಎಂದರು.

ಮಾದಕ ವ್ಯಸನವು ಒಂದು ಗಂಭೀರವಾದ ರಾಷ್ಟ್ರೀಯ ಸಮಸ್ಯೆಯಾಗಿದೆ. ಅದರ ಪರಿಹಾರಕ್ಕಾಗಿ ಸರ್ಕಾರ, ಆಡಳಿತ ಮತ್ತು ಸಮಾಜವು ಈ ಸಮಸ್ಯೆಯನ್ನು ಸರಿಯಾದ ಸಮಯಕ್ಕೆ ಗುರುತಿಸಿ, ಇದನ್ನು ನಿಲ್ಲಿಸಲು ತಕ್ಷಣದ ಕ್ರಮಗಳನ್ನು ಕೈಗೊಳ್ಳಲು ಪ್ರಾರಂಭಿಸಬೇಕು ಎಂದರು.

ಪರಮವೈಭವ ಸಂಪನ್ನ ವಿಶ್ವಗುರು ಭಾರತವನ್ನು ನಿರ್ಮಿಸುವ ಮಹತ್ತರವಾದ ಜವಾಬ್ದಾರಿಯು ಮುಂಬರುವ ಪೀಳಿಗೆಯ ಹೆಗಲ ಮೇಲೆ ಇರಲಿದೆ. ಈ ಸವಾಲನ್ನು ಸ್ವೀಕರಿಸಲು ಮತ್ತು ಅದನ್ನು ಯಶಸ್ವಿಯಾಗಿ ಉತ್ತರಿಸಲು, ನಮ್ಮ ಯುವಕರು ಎಲ್ಲಾ ಪ್ರಕಾರಗಳಲ್ಲೂ ಸಂಪೂರ್ಣವಾಗಿ ಸಜ್ಜಾಗಬೇಕಾಗಿದೆ ಎಂದರು.

ನಾವು ಅಭಿವೃದ್ಧಿಯ ಸಮಗ್ರ ಮತ್ತು ಸಂತುಲಿತ ದೃಷ್ಟಿಕೋನವನ್ನು ಬೆಳೆಸಿಕೊಳ್ಳುವುದು ಅತ್ಯಗತ್ಯ. ಒಂದು ಸಾಧನವನ್ನು ಯಾವ ರೀತಿಯಲ್ಲಿ ಬಳಸಬೇಕು ಮತ್ತು ಅದರ ಬಳಕೆಯಲ್ಲಿ ಯಾವುದು ‘ಉಚಿತ’ ಅಥವಾ ಯಾವುದು ‘ಅನುಚಿತ’ ಎಂಬುದನ್ನು ನಿರ್ಧರಿಸುವವನು ಮಾನವನೇ ಆಗಿದ್ದಾನೆ. ಆದ್ದರಿಂದ, ಜ್ಞಾನ ಮತ್ತು ತಂತ್ರಜ್ಞಾನವನ್ನು ಗಳಿಸುವುದರ ಜೊತೆಗೆ, ಅವುಗಳ ಸರಿಯಾದ ಬಳಕೆಗೆ ಅಗತ್ಯವಾದ ವಿವೇಚನೆಯನ್ನು ಬೆಳೆಸಿಕೊಳ್ಳಬೇಕು ಹಾಗೂ ಅದರ ಬಳಕೆಯನ್ನು ನಿಯಂತ್ರಿಸುವ ನೈತಿಕ ಮತ್ತು ಪ್ರಾಯೋಗಿಕ ಶಿಸ್ತನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಭಾರತದ ಸನಾತನ ಸಮಗ್ರ ಜೀವನ ದೃಷ್ಟಿಯು, ತನ್ನ ಪೂರ್ಣತೆ ಮತ್ತು ಏಕತೆಯ ಭಾವನೆಯಿಂದ, ಸೌಹಾರ್ದತೆ ಮತ್ತು ಸಂಯಮದ ಮೌಲ್ಯಗಳಲ್ಲಿ ಬೇರೂರಿರುವ ಸಂಸ್ಕೃತಿಯು ಇಡೀ ಜಗತ್ತಿನಲ್ಲಿ ವಿಕಸಿತಗೊಳ್ಳುವುದನ್ನು ಕಾಣಲು ಬಯಸುತ್ತದೆ. ನಮ್ಮ ಹಿರಿಯರು ಈ ದೃಷ್ಟಿಕೋನವನ್ನು “ಸಾ ಪ್ರಥಮಾ ಸಂಸ್ಕೃತಿ ವಿಶ್ವವಾರಾ” – ಅಂದರೆ ಇಡೀ ಜಗತ್ತನ್ನೇ ಅಪ್ಪಿಕೊಳ್ಳಲು ಅರ್ಹವಾದ ಅತ್ಯಂತ ಶ್ರೇಷ್ಠ ಸಂಸ್ಕೃತಿ ಎಂದು ವರ್ಣಿಸಿದ್ದಾರೆ ಎಂದರು.

‘ಹಿಂದೂ ವಿಶ್ವದೃಷ್ಟಿ’ (Hindu World View): ಇದು ಯಾವುದೇ ನಿರ್ದಿಷ್ಟ ಪೂಜಾ ಪದ್ಧತಿ, ನಿರ್ದಿಷ್ಟ ಆಹಾರ ಪದ್ಧತಿ ಅಥವಾ ಜೀವನಶೈಲಿ, ಅಥವಾ ಯಾವುದೇ ನಿರ್ದಿಷ್ಟ ಸಾಮಾಜಿಕ ಅಥವಾ ರಾಜಕೀಯ ಸಿದ್ಧಾಂತ, ಯಾವುದೇ ನಿರ್ದಿಷ್ಟ ಜಾತಿ, ಭಾಷೆ ಅಥವಾ ಪ್ರದೇಶಕ್ಕೆ ಬದ್ಧವಾಗಿರಬೇಕಾದ ಅನಿವಾರ್ಯತೆ ಇಲ್ಲ. ಈ ಎಲ್ಲಾ ಭೇದಭಾವಗಳನ್ನು ಮೀರಿ, ಆಧ್ಯಾತ್ಮಿಕತೆ, ಮಾನವೀಯತೆ ಮತ್ತು ವಿಶ್ವಬಂಧುತ್ವ ಇದರ ಪ್ರಮುಖ ಲಕ್ಷಣಗಳಾಗಿವೆ ಎಂದರು.

ಭಾರತ ಎಂಬುದು ಜ್ಞಾನದ ಬೆಳಕಿನಲ್ಲಿ ತಲ್ಲೀನರಾಗಿರುವವರ ಭೂಮಿಯಾಗಿದೆ, ಇಲ್ಲಿ “ಭಾ” ಎಂದರೆ ಜ್ಞಾನದ ಬೆಳಕು. ಇಡೀ ಜಗತ್ತನ್ನು ಒಂದುಗೂಡಿಸುವ ಸಾಮರ್ಥ್ಯ ಮತ್ತು ಬಯಕೆಯನ್ನು ಹೊಂದಿರುವ ಈ ‘ಹಿಂದೂ ವಿಶ್ವದೃಷ್ಟಿ’ (Hindu World View) ಚಿಂತನೆಯನ್ನು ನೆನಪಿಸಿಕೊಳ್ಳುವುದು ಮತ್ತು ಪೋಷಿಸುವುದು ಭಾರತದ ಪ್ರಗತಿ ಮತ್ತು ಏಕತೆಗೆ ಅತ್ಯಗತ್ಯವಾದ ಪೂರ್ವಾಪೇಕ್ಷೆ ಆಗಿದೆ ಎಂದರು.

“ತೇರಾ ವೈಭವ ಅಮರ ರಹೇ ಮಾ, ಹಮ್ ದಿನ್ ಚಾರ್ ರಹೇಂ ನಾ ರಹೇಂ” (ಓ ತಾಯೇ, ನಿನ್ನ ವೈಭವವು ಶಾಶ್ವತವಾಗಿರಲಿ; ನಾವು ಇನ್ನು ಕೆಲವು ದಿನಗಳು ಬದುಕಿದ್ದರೂ ಇರದಿದ್ದರೂ ಚಿಂತೆಯಿಲ್ಲ) ಎಂಬ ಮಾತುಗಳಲ್ಲಿ ವ್ಯಕ್ತವಾದಂತೆ ಇವು ಏಕಪಕ್ಷೀಯ ಸ್ವರೂಪವಾಗಿವೆ. ಆಪ್ತತೆ, ಸ್ನೇಹ ಮತ್ತು ಬಾಂಧವ್ಯದ ಭಾವನೆಯ ಮೇಲೆ ಸ್ಥಾಪಿತವಾದ ಸಂಬಂಧಗಳು ಎಂದಿಗೂ ಷರತ್ತುಗಳಿಗೆ ಒಳಪಡುವುದಿಲ್ಲ. ಸಂಬಂಧಗಳು ಬೆಳೆಯುವ ಈ ಬುನಾದಿಯ ಮೇಲೆ ನಾವು ದೃಢವಾಗಿ ನಿಂತರೆ ಸಾಕು. ನಮ್ಮ ಸ್ವಾತಂತ್ರ್ಯ ಹೋರಾಟಗಾರರು ರಾಷ್ಟ್ರದ ಕುರಿತಾಗಿ ಸಂಪೂರ್ಣ ಮತ್ತು ಷರತ್ತುರಹಿತ ಭಕ್ತಿಯ ಈ ಭಾವನೆಯನ್ನೇ ಪ್ರದರ್ಶಿಸಿದರು. ಅಂತಿಮವಾಗಿ ಬ್ರಿಟಿಷ್ ಸರ್ಕಾರವು ಭಾರತವನ್ನು ತೊರೆಯುವಂತೆ ಮಾಡಿದ್ದು ಇದೇ ಭಕ್ತಿಯಾಗಿತ್ತು ಎಂದರು.

ರಾಷ್ಟ್ರೀಯ ಸ್ವಯಂಸೇವಕ ಸಂಘವು ಹಿಂದು ಭಾವನೆಯನ್ನು ಜಾಗೃತಗೊಳಿಸಲು ಮತ್ತು ಇಡೀ ಸಮಾಜವನ್ನು ಒಂದು ಸುಸಂಘಟಿತ ಮತ್ತು ಶಕ್ತಿಯುತ ಸಮಾಜವಾಗಿ ನಿರ್ಮಿಸಲು ಶ್ರಮಿಸುತ್ತಿದೆ. ಶಕ್ತಿಯಿಲ್ಲದೆ ವೈಯಕ್ತಿಕ ಜೀವನದಿಂದ ಹಿಡಿದು ಜಾಗತಿಕ ಜೀವನದವರೆಗಿನ ಜೀವನಾಧಾರ, ಪ್ರಗತಿ ಮತ್ತು ರಕ್ಷಣೆ ಸಾಧ್ಯವಿಲ್ಲ. ಸಂಘಟಿತ ಮತ್ತು ಶಕ್ತಿಯುತ ಹಿಂದು ಸಮಾಜವನ್ನು ನಿರ್ಮಿಸಲು ಪ್ರತಿಪಾದಿಸುವುದು ಅಥವಾ ಕೆಲಸ ಮಾಡುವುದು ಸಂಘದ ಕಾರ್ಯ ಎಂದರು.

ನಮ್ಮ ಭಾರತವು ವಿಶಾಲವಾದದ್ದು, ವೈವಿಧ್ಯಮಯ ಪ್ರಕೃತಿ ಮತ್ತು ಸಮೃದ್ಧ ನೈಸರ್ಗಿಕ ವಾತಾವರಣಗಳಿಂದ ಅಲಂಕೃತಗೊಂಡಿದೆ. ಇದು ವಿವಿಧ ಪಂಥಗಳನ್ನು ಅನುಸರಿಸುವ, ವಿವಿಧ ಪ್ರದೇಶಗಳಿಗೆ ಸೇರಿದ, ವಿವಿಧ ಭಾಷೆಗಳನ್ನು ಮಾತನಾಡುವ, ವಿಭಿನ್ನ ಜಾತಿಗಳು, ಆಹಾರ ಪದ್ಧತಿಗಳು ಮತ್ತು ಆಚಾರ-ವಿಚಾರಗಳನ್ನು ಹೊಂದಿರುವ ಸಮೂಹಗಳನ್ನೊಳಗೊಂಡ ಜೀವಂತ ಮತ್ತು ವರ್ಣರಂಜಿತ ಸಮಾಜವಾಗಿದೆ; ಆದರೂ ಒಟ್ಟಾಗಿ, ನಾವು ಒಂದೇ ಸಮಾಜವನ್ನು ರೂಪಿಸುತ್ತೇವೆ. ನಮ್ಮ ಪರಸ್ಪರ ವ್ಯವಹಾರಗಳಲ್ಲಿ, ಈ ಸದ್ಭಾವನೆ ಮತ್ತು ಆಪ್ತತೆಯ ಭಾವನೆಯು ನಮ್ಮ ಆಲೋಚನೆ, ಮಾತು ಮತ್ತು ಕೃತಿಗಳಲ್ಲಿ ಇರಬೇಕು ಮತ್ತು ವ್ಯಕ್ತವಾಗಬೇಕುವ ಎಂದರು.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top