ಭಾರತ ಸಂಸ್ಕೃತಿಯ ತವರು ಇಲ್ಲಿನ ಪ್ರತಿಯೊಂದು ಆಚರಣೆಗೂ ಅದರದೇ ಆದ ವಿಶೇಷತೆಯಿದೆ. ಅಲ್ಲದೆ ಸಂಬಂಧಗಳಿಗೆ ಮಹತ್ವ ಕೊಡೋ ಈ ನಾಡಲ್ಲಿ ಸಂಬಂಧವನ್ನು ಗಟ್ಟಿಯಾಗಿರಿಸಲು ಅನೇಕ ಹಿನ್ನಲೆಯನ್ನು ಆಧಾರವಾಗಿಟ್ಟುಕೊಂಡು ಹಬ್ಬವನ್ನು ಆಚರಿಸಲಾಗುತ್ತದೆ. ಅದೇ ರೀತಿ ಒಡಹುಟ್ಟಿದವರ ಹಬ್ಬವಾದ ರಕ್ಷಾಬಂಧನವು ಸಹ ಐತಿಹಾಸಿಕ ಕಥೆಗಳನ್ನೊಳಗೊಂಡಿದೆ.
ಅಂದು ಯುದ್ಧದಲ್ಲಿ ಇಂದ್ರನು ರಾಕ್ಷಸರ ಜೊತೆ ಸೋಲುವ ಕ್ಷಣ ಬಂದಾಗ ಇಂದ್ರನು ಬೃಹಸ್ಪತಿಯ ಮೊರೆ ಹೋಗುತ್ತಾನಂತೆ ಬೃಹಸ್ಪತಿಯ ಸಲಹೆಯ ಮೇರೆಗೆ ಶ್ರಾವಣ ಹುಣ್ಣಿಮೆಯಂದು ರೇಷ್ಮೆ ದಾರವನ್ನು ಇಂದ್ರಾಣಿಯು ಇಂದ್ರನ ಕೈಗೆ ಕಟ್ಟುತ್ತಾಳೆ. ಇದರ ಪರಿಣಾಮವೋ ಏನೋ ಇಂದ್ರನು ಯುದ್ಧದಲ್ಲಿ ಜಯ ಹೊಂದುತ್ತಾನಂತೆ. ಇದು ಪೌರಾಣಿಕ ಕಥೆ ಈ ಹಿನ್ನಲೆಯಿಂದಲೇ ಈ ಹಬ್ಬವನ್ನು ಆಚರಿಸಲಾಗುತ್ತದೆ ಎಂಬುದು ಪ್ರತೀತಿ.
ತಂಗಿ ತನ್ನ ಅಣ್ಣನ ಯಶಸ್ಸು, ಶ್ರೇಯೋಭಿವೃದ್ದಿ ಹಾಗೇನೇ ಅವನ ಬಾಳಲ್ಲಿ ನೆಮ್ಮದಿಯನ್ನು ಕರುಣಿಸಿ ರಕ್ಷಿಸು ಎಂದು ಹಾರೈಸುವ ಮುಖಾಂತರ ರಾಖಿಯನ್ನು ಕಟ್ಟುವುದು ವಾಡಿಕೆ.
ಶ್ರಾವಣ ಹುಣ್ಣಿಮೆಯಂದು ಬರೋ ಈ ಹಬ್ಬ ಅಣ್ಣ-ತಂಗಿಯ ಸಂಭಂದಕ್ಕೆ ಅರ್ಥ ಕಲ್ಪಿಸೋ ಪವಿತ್ರವಾದ ದಿನ. ಹಿಂದೆ ಉತ್ತರ ಭಾರತದಲ್ಲಿ ಹೆಚ್ಚು ಪ್ರಚಲಿತದಲ್ಲಿದ್ದ ಈ ಹಬ್ಬವನ್ನು ಇತ್ತೀಚೆಗೆ ದಕ್ಷಿಣ ಭಾರತದಲ್ಲಿಯೂ ಆಚರಿಸಲಾಗುತ್ತಿದೆ. ಭಾರತದೆಲ್ಲೆಡೆ ಯಾವುದೇ ಜಾತಿ ಭೇದವಿಲ್ಲದೆ ಎಲ್ಲಾ ಜನಾಂಗದವರು ಈ ಹಬ್ಬವನ್ನು ಅತೀ ಸಂಭ್ರಮದಿಂದ ಆಚರಿಸೋದೇ ಈ ದಿನದ ವಿಶೇಷ.
ತಂಗಿಯಾದವಳು ಅಣ್ಣನ ಹಣೆಗೆ ಕುಂಕುಮದ ತಿಲಕವನ್ನಿಟ್ಟು ಬಲಗೈಗೆ ರಾಖಿಯನ್ನು ಕಟ್ಟಿ ಆರತಿ ಬೆಳಗಿ ಸಿಹಿಯನ್ನು ಬಾಯಿಗೆ ನೀಡಿ ಅಣ್ಣನಿಂದ ಉಡುಗೊರೆ ಪಡೆಯುವ ಮೂಲಕ ಅತೀ ಸಂತಸದಿಂದ ಆಚರಿಸೋ ಹಬ್ಬಾನೇ ರಕ್ಷಾಬಂಧನ.
ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ಭಾರತದಲ್ಲಿ ಭಾರತೀಯರೆಲ್ಲರೂ ಸಹೋದರರಂತೆ ಪರಸ್ಪರ ಸಾಮರಸ್ಯದಿಂದ ಜೀವಿಸಿದರೆ ಭಾರತ ಅಭಿವೃದ್ಧಿಯಾಗುವುದು. ರಕ್ಷಾಬಂಧನ ಉತ್ಸವ ಆಚರಿಸುವ ಮೂಲಕ ಜಾತಿ, ಮತ, ಭಾಷೆ ಎಂಬ ಭೇದವಿಲ್ಲದೆ ಎಲ್ಲರೂ ಒಗ್ಗಟ್ಟಿನಿಂದ ಬಾಳುವಂತಾಗಬೇಕು, ಒಳಗಿನ ಭಿನ್ನಮತಗಳನ್ನು ಹೊರಗಿನ ಶತ್ರುಗಳನ್ನು ಏಕತೆಯಿಂದ ಎದುರಿಸಬೇಕೆಂದು ಸಂದೇಶವನ್ನು ಸಾರುವ ಮೂಲಕ ಸಾಮರಸ್ಯದ ಜೊತೆಗಿನ ಸಹಬಾಳ್ವೆ ಹಾಗು ಸಮಾಜಮುಖಿ ಚಿಂತನೆಯ ಸಾಕಾರತೆಗಾಗಿ ಅತ್ಯಂತ ಅರ್ಥಗರ್ಭಿತ ಆಚರಣೆ ರಕ್ಷಾಬಂಧನ.
ಪ್ರತಿಯೊಬ್ಬ ಭಾರತಿಯನೂ ತನ್ನ ಸಹೋದರ-ಸಹೋದರಿಯಂತೆ ಎಂದು ಭಾವಿಸಿ ಮಾತೃರೂಪಿಯಾಗಿರುವ ಈ ಭಾರತಾಂಬೆಯ ರಕ್ಷಣೆ ಎಲ್ಲರ ಕರ್ತವ್ಯ ಎಂದು ಸೂಚಿಸುವ ಪ್ರೇರಣಾದಾಯಕ ಮಾರ್ಗ ಇದಾಗಿದೆ.
ಹೀಗೆ ಭ್ರಾತೃತ್ವದ ಮೂಲಕ ರಾಷ್ಟ್ರೀಯ ಪ್ರಜ್ಞೆ ಮೂಡಿಸುವ ಹಬ್ಬ ರಕ್ಷಾಬಂಧನ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.