ಪುತ್ತೂರು: ಸುದಾನ ವಸತಿಯುತ ಶಾಲೆ, ನೆಹರುನಗರ ಪುತ್ತೂರು ಇಲ್ಲಿನ ವಿದ್ಯಾರ್ಥಿಗಳಾದ ವಿಷ್ಣು ಇ.ಎಸ್ ಮತ್ತು ಸಮರ್ಥ ಬಿ ಇವರು ಅಮೇರಿಕಾದ ಪಿಟ್ಸ್ಬರ್ಗ್ನಲ್ಲಿ ಮೇ 15 ರಿಂದ ಮೇ 22ರ ವರೆಗೆ ನಡೆಯುವ ISEF ಸಮ್ಮೇಳನದಲ್ಲಿ ಆಹ್ವಾನಿತ ವೀಕ್ಷಕರಾಗಿ ಭಾಗವಹಿಸಲಿದ್ದಾರೆ. ಅಲ್ಲದೆ ಅಮೆರಿಕಾದ ಪ್ರಮುಖ ಸಂಶೋಧನಾ ಸಂಸ್ಥೆಗಳು, ವಿಶ್ವವಿದ್ಯಾನಿಲಯಗಳು, ವಿಜ್ಞಾನ ವಸ್ತು ಸಂಗ್ರಹಾಲಯ ಮುಂತಾದವುಗಳನ್ನು ಫಿಟ್ಸ್ ಬರ್ಗ್ ಮತ್ತು ವಾಶಿಂಗ್ಟನ್ ನಲ್ಲಿ ಸಂದರ್ಶಿಸಲಿದ್ದಾರೆ. ಇವರ ಈ ಪ್ರವಾಸಕ್ಕೆ ಭಾರತ-ಯುಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವೇದಿಕೆ (IUSSTF) ಪ್ರಾಯೋಜಕರಾಗಿದ್ದಾರೆ.
ವಿಜ್ಞಾನದ ಅಧ್ಯಯನ ಮತ್ತು ಸಂಶೋಧನೆ (ಐರಿಸ್) ವತಿಯಿಂದ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗ, ಇಂಟೆಲ್& ಕಾಂಫಿಡೆರೇಶನ್ ಆಫ್ ಇಂಡಿಯನ್ ಇಂಡಸ್ಟ್ರಿ(ಸಿಐಐ), ಸಹಯೋಗದೊಂದಿಗೆ ಗುಜರಾತ್ ನ ಅಹಮದಾಬಾದ್ ನಲ್ಲಿರುವ ಸಯನ್ಸ್ ಸಿಟಿಯಲ್ಲಿ ಡಿ.4, 2014 ರಿಂದ ಡಿ.7, 2014ರ ತನಕ ಜರಗಿದ ರಾಷ್ಟ್ರ ಮಟ್ಟದ ವಿಜ್ಞಾನ ಯೋಜನಾ ಸ್ಪರ್ಧೆಯಲ್ಲಿ ಮಂಡಿಸಿದ ಸಂಶೋಧನೆ- ‘ಡೈರಿಯ ದನಗಳಿಗೆ ಉರಿಯೂತ ಫಾರ್ Scleropyrum pentandrum ರಿಂದ ಪರಿಣಾಮಕಾರಿ ಮೂಲಿಕೆ ಮುಲಾಮು’ ಇದಕ್ಕೆ ಗ್ರ್ಯಾಂಡ್ ಅವಾರ್ಡ್ ಪಡೆದಿದ್ದರು. ಗುಜರಾತ್ ಸರಕಾರದ ವತಿಯಿಂದ ಸಸ್ಯ ವಿಜ್ಞಾನ ವಿಭಾಗದಲ್ಲಿ ಕೊಡಮಾಡುವ ನಗದು ರೂ.2000 ವಿಶೇಷ ಪುರಸ್ಕಾರವೂ ಈ ಸಂಶೋಧನೆಗಾಗಿ ಇವರಿಗೆ ಲಭಿಸಿತ್ತು.
ನಂತರ ಜ.3, 2015 ರಿಂದ ಜ.7, 2015 ರ ವರೆಗೆ ಮುಂಬೈ ವಿಶ್ವ ವಿದ್ಯಾನಿಲಯದಲ್ಲಿ ನಡೆದ ತರಬೇತಿ ಶಿಬಿರ ಮತ್ತು ರಾಷ್ಟ್ರೀಯ ಬಾಲ ವಿಜ್ಞಾನ ಸಮ್ಮೇಳನದಲ್ಲಿ, ಫೆ.6, 2015 ರಿಂದ ಫೆ.8, 2015ರ ವರೆಗೆ ನವದೆಹಲಿಯಲ್ಲಿ ನಡೆದ ತರಬೇತಿ ಶಿಬಿರದಲ್ಲಿಯೂ ಭಾಗವಹಿಸಿದ್ದರು.
ಇವರ ಸಾಧನೆಯನ್ನು ಪುರಸ್ಕರಿಸಿ ‘ಐರಿಸ್’ ಭಾರತ-ಯುಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವೇದಿಕೆ (IUSSTF) ಪ್ರಾಯೋಜಕತ್ವದಲ್ಲಿ ಇವರನ್ನು ಆಹ್ವಾನಿತ ವೀಕ್ಷಕರಾಗಿ ಅಮೇರಿಕಾದ ಫಿಟ್ಸ್ ಬರ್ಗ್ ಗೆ ಕಳುಹಿಸುತ್ತಿದೆ.
ಈ ಸಂಬಂಧ ದಿನಾಂಕ 28.04.2015 ರಂದು ನವದೆಹಲಿಯಲ್ಲಿ ನಡೆಯುವ ವಿದಾಯಕೂಟ ಕಾರ್ಯಕ್ರಮದಲ್ಲಿ ಇವರು ಸುದಾನ ಶಾಲೆಯನ್ನು ಪ್ರತಿನಿಧಿಸಲಿದ್ದಾರೆ.
ಇವರು ಸಂಶೋಧಿಸಿದ್ದೇನು?
ಕೆಚ್ಚಲು ಬಾವು ರೋಗ ದನಗಳಲ್ಲಿ ಕಂಡು ಬರುವ ಸಾಮಾನ್ಯ ರೋಗ. ಇದಕ್ಕಾಗಿ ಅಲೋಪಥಿ ಔಷಧಗಳನ್ನು ಬಳಸಿದಾಗ ಔಷಧದ ದುಷ್ಪರಿಣಾಮ ಅಂಶಗಳು ದನದ ಹಾಲಿನಲ್ಲಿ ಹಲವು ದಿನಗಳ ಕಾಲ ಉಳಿಯುವುದು ಮತ್ತು ಆ ಸಮಯದಲ್ಲಿ ಅಂತಹ ಹಾಲು ಬಳಕೆಗೆ ಯೋಗ್ಯವಲ್ಲ. ಆದರೆ ಅಂತಹ ಹಾಲು ಮಾರುಕಟ್ಟೆ ಪ್ರವೇಶಿಸಿ ನಮಗೆ ಅರಿವಿಲ್ಲದೆ ಔಷಧದ ದುಷ್ಪರಿಣಾಮ ಅಂಶಗಳು ನಮ್ಮನ್ನೂ ಬಾಧಿಸುವಂತಾಗಿದೆ.
ಸ್ಥಳೀಯವಾಗಿ ಲಭ್ಯವಿರುವ ‘ನಾಯಿಕುಳಿ‘ (Scleropyrum pentandrum) ಸೊಪ್ಪಿನ ರಸ, ಜೇನು ಮಯಣ, ಸಾಸಿವೆ ಎಣ್ಣೆ ಇವುಗಳನ್ನು ಉಪಯೋಗಿಸಿ ಮುಲಾಮನ್ನು ತಯಾರಿಸಿದ್ದಾರೆ. ಕೆಚ್ಚಲುಬಾವು ರೋಗ ಕಾಣಿಸಿದ ತಕ್ಷಣ ಇದನ್ನು ಕೆಚ್ಚಲಿಗೆ ದಿನಕ್ಕೆ ಮೂರು ಬಾರಿಯಂತೆ 3-4 ದಿನಗಳ ಕಾಲ ಹಚ್ಚಿದರೆ ರೋಗ ವಾಸಿಯಾಗುತ್ತದೆ. ಈ ಔಷಧಿಯು ಯಾವುದೇ ರಾಸಾಯನಿಕ ಅಂಶಗಳನ್ನು ಒಳಗೊಂಡಿಲ್ಲವಾದ್ದರಿಂದ ದನದ ಹಾಲಿನಲ್ಲಿ ದುಷ್ಪರಿಣಾಮ ಅಂಶಗಳು ಕಾಣುವುದಿಲ್ಲ. ಸಂಶೋಧನಾ ಸಮಯದಲ್ಲಿ ಮೂವತ್ತಕ್ಕೂ ಅಧಿಕ ಹೈನುಗಾರರು ಈ ಪ್ರಯೋಜನವನ್ನು ಕಂಡು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಸ್ಥಳೀಯ ಪಶುವೈದ್ಯರು ಇವರ ಸಂಶೋಧನೆ ಒಂದು ಅತ್ಯುತ್ತಮ ಸಂಶೋಧನೆಯಾಗಿದ್ದು ಆರಂಭದ ಹಂತದಲ್ಲಿ ಕೆಚ್ಚಲು ಬಾವಿಗೆ ಉತ್ತಮ ಔಷಧವಾಗಿದೆ ಎಂದು ಶ್ಲಾಘಿಸಿದ್ದಾರೆ.
ಈ ಯೋಜನೆಯ ತಯಾರಿಯಲ್ಲಿ ಶ್ರೀ ಬದನಾಜೆ ಶಂಕರ ಭಟ್, ಪೂಗವನ ಫಾರ್ಮ್ಸ್ , ವಿಟ್ಲ, ಪುತ್ತೂರು ತಾಲೂಕಿನ ಪಶು ವೈದ್ಯರಾದ ಡಾ. ಎಂ ಎಸ್ ಭಟ್ ,ಯೆಳ್ಮುಡಿ, ಡಾ. ಸತಿಶ್ ರಾವ್, ಪುತ್ತೂರು , ಡಾ.ರಾಮಪ್ರಕಾಶ್, ಉಪ್ಪಿನಂಗಡಿ, ಡಾ ಪ್ರಸನ್ನ ಹೆಬ್ಬಾರ್, ಪುತ್ತೂರು, ಡಾ.ಪ್ರಭಾಕರ್ ನಾಯಕ್ ಪಾಣಾಜೆ, ಯೆನೆಪೋಯ ರಿಸರ್ಚ್ ಸೆಂಟರ್ನ ಉಪ ನಿರ್ದೇಶಕರಾದ ಶ್ರೀಮತಿ ರೇಖ ಪಿಡಿ, ಎನ್.ಜಿ.ಎಸ್.ಎಂ ಕಾಲೇಜ್ -ನಿಟ್ಟೆಯ ಪ್ರಾಂಶುಪಾಲರಾದ ಡಾ. ಸಿ.ಎಸ್ ಶಾಸ್ತ್ರಿ, ,ಉಪ ಪ್ರಾಂಶುಪಾಲರಾದ ಡಾ. ನಾರಾಯಣ ಚರಾಯಲು, ಎಸ್.ಡಿ.ಎಂ ಕಾಲೇಜ್ – ಉಡುಪಿಯ ವೈದ್ಯರಾದ ಡಾ.ಸುನಿಲ್ ಕುಮಾರ್, ಪಶು ವೈದ್ಯ ಕಾಲೇಜ್, ಹೆಬ್ಬಾಳ, ಬೆಂಗಳೂರಿನ ವೈದ್ಯರಾದ ಡಾ. ಪಿ.ಟಿ. ರಮೇಶ್, ವಿವೇಕಾನಂದ ಕಾಲೇಜ್ – ಪುತ್ತೂರಿನ ರಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥ ಶ್ರೀ ಕೃಷ್ಣ ಕಾರಂತ, ಸಸ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥ ಶ್ರೀ ಗಣರಾಜ ಭಟ್, ಪುತ್ತೂರು ಪರಿಸರದ ಹಾಲು ಉತ್ಪಾದಕರು, ಸುದಾನ ಶಾಲೆಯ ಮುಖ್ಯ ಸಂಚಾಲಕರಾದ ಶ್ರೀ ವಿಜಯ್ ಹಾರ್ವಿನ್, ಆಡಳಿತ ಮಂಡಳಿ, ಮುಖ್ಯ ಗುರುಗಳಾದ ಶ್ರೀಮತಿ ಶೋಭಾ ನಾಗರಾಜ್, ಮತ್ತು ಶಿಕ್ಷಕರು ಸಹಕರಿಸಿದ್ದರು.
ಸಂಶೋಧನೆಗೆ ನವೋದಯ ಪ್ರೌಢ ಶಾಲೆ, ಬೆಟ್ಟಂಪಾಡಿಯ ವಿಜ್ಞಾನ ಶಿಕ್ಷಕಿ ಭುವನೇಶ್ವರಿ ಎಂ. ಇವರು ಮಾರ್ಗದರ್ಶನ ನೀಡಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.