ಕಾಶ್ಮೀರ ಕಣಿವೆಯಲ್ಲಿ ಈಚೆಗೆ ಹಿಜ್ಬುಲ್ ಮುಜಾಹಿದ್ದೀನ್ ಕಮಾಂಡರ್ ಬುರ್ಹಾನ್ ವಾನಿ ಎಂಬ ಉಗ್ರನೊಬ್ಬನನ್ನು ಪೊಲೀಸರು ಎನ್ಕೌಂಟರ್ನಲ್ಲಿ ಹೊಡೆದುರುಳಿಸಿದರು. ಹತ್ಯೆಗೀಡಾದ ಈ ಉಗ್ರ ವಾನಿ ದಕ್ಷಿಣ ಕಾಶ್ಮೀರದಲ್ಲಿ ದಾಳಿ ನಡೆಸಲು ಸಂಚು ರೂಪಿಸಿದ್ದ. ಈ ಸುಳಿವು ಸಿಕ್ಕಿದ ಹಿನ್ನಲೆಯಲ್ಲಿ ಆತನನ್ನು ವಿಶೇಷ ಕಾರ್ಯಾಚರಣೆ ಮೂಲಕ ಹತ್ಯೆಗೈಯಲಾಯಿತು.
ಆದರೆ ಇದು ಇಡೀ ಕಾಶ್ಮೀರ ಕಣಿವೆಯೇ ಉದ್ವಿಗ್ನಗೊಳ್ಳುವಂತೆ ಮಾಡಿದ್ದು ಮಾತ್ರ ಅತ್ಯಂತ ವಿಪರ್ಯಾಸಕರ. ವಾನಿಯ ಹತ್ಯೆಯಾಗಿದ್ದಕ್ಕೆ ಕಾಶ್ಮೀರ ಕಣಿವೆಯಲ್ಲಿ ಬೆಂಕಿ ಹೊತ್ತಿಕೊಂಡಿತು. ಆ ದಳ್ಳುರಿಯಲ್ಲಿ ಇದುವರೆಗೆ 42 ಕ್ಕೂ ಹೆಚ್ಚು ಮಂದಿ ಜೀವಕಳೆದುಕೊಂಡಿದ್ದಾರೆ. ಈ ಪೈಕಿ ಪೊಲೀಸ್ ಸಿಬ್ಬಂದಿಗಳೇ ಹೆಚ್ಚು. ಅನಂತನಾಗ್ ಜಿಲ್ಲೆಯಲ್ಲಿ ವಾನಿ ಬೆಂಬಲಿಗರ ಗುಂಪೊಂದು ಪೊಲೀಸ್ ಸಿಬ್ಬಂದಿಯಿದ್ದ ಕಾರನ್ನು ಝೇಲಂ ನದಿಗೆ ನೂಕಿ, ಕಾರಿನೊಳಗಿದ್ದ ಎಸ್ಪಿ ಫಿರೋಜ್ ಅಹಮದ್ ಅವರನ್ನು ನೀರಿನಲ್ಲಿ ಮುಳುಗಿಸಿ ಸಾಯಿಸಿದ್ದಾರೆ. ಝೇಲಂ ನದಿ ಕಳೆದ ವರ್ಷ ಪ್ರವಾಹದಿಂದ ಉಕ್ಕಿಹರಿದು ಜನರು ಸಂಕಷ್ಟಕ್ಕೀಡಾಗಿದ್ದಾಗ ಅವರನ್ನು ರಕ್ಷಿಸಲು ಧಾವಿಸಿದ್ದು ಇದೇ ಪೊಲೀಸರು. ಆಗ ಜನರಿಗೆ ಬೇಕಾಗಿದ್ದ ಪೊಲೀಸರು ಈಗ ಬೇಡವಾಗಿದ್ದಾರೆ. ಅವರನ್ನು ಝೇಲಂನದಿಯಲ್ಲಿ ಮುಳುಗಿಸಿ ಸಾಯಿಸುವಂತಹ ಕ್ರೌರ್ಯವನ್ನು ಪ್ರತಿಭಟನಾಕಾರರು ಮೆರೆದಿದ್ದಾರೆ.
ಇಷ್ಟಕ್ಕೂ ಎನ್ಕೌಂಟರ್ನಲ್ಲಿ ಹತನಾದ ೨೨ರ ಹರಯದ ಉಗ್ರಗಾಮಿ ಬುರ್ಹಾನ್ ವಾನಿ ಪೊಲೀಸರಿಗ ಬೇಕಾಗಿದ್ದ ಮೋಸ್ಟ್ ವಾಂಟೆಡ್ ವ್ಯಕ್ತಿ. ಕಣಿವೆ ರಾಜ್ಯ ಕಾಶ್ಮೀರದಲ್ಲಿ ಉಗ್ರಗಾಮಿ ಚಟುವಟಿಕೆಗಳ ಹೊಸಹುಟ್ಟಿಗೆ ಈ ಬುರ್ಹಾನ್ ವಾನಿ ಕಾರಣನಾಗಿದ್ದ. ಫೇಸ್ಬುಕ್ ಮತ್ತು ವಾಟ್ಸ್ಅಪ್ಗಳಲ್ಲಿ ಹರಿದಾಡುತ್ತಿದ್ದ ಆತನ ವಿಡಿಯೋಗಳಲ್ಲಿ ಉಗ್ರಗಾಮಿ ಕೃತ್ಯಗಳಲ್ಲಿ ಪಾಲ್ಗೊಳ್ಳಲು ಆತ ಕಾಶ್ಮೀರದ ಯುವಕರನ್ನು ಪ್ರಚೋದಿಸುತ್ತಿರುವ ಹಸಿಹಸಿ ದೃಶ್ಯ ಕಂಡುಬಂದಿದೆ. ಹೀಗಾಗಿಯೇ ಆತನನ್ನು ಪೊಲೀಸರು ಅನಿವಾರ್ಯವಾಗಿ ಎನ್ಕೌಂಟರ್ನಲ್ಲಿ ಸಾಯಿಸಬೇಕಾಯಿತು. ಆದರೆ ಇಂತಹವನ ಬಗ್ಗೆಯೂ ಸಹಾನುಭೂತಿ ವ್ಯಕ್ತಪಡಿಸಿ ಪ್ರತಿಭಟನೆ ನಡೆಸುತ್ತಾರೆಂದರೆ ಅದು ದೇಶವಿರೋಧಿ ಚಟುವಟಿಕೆಗಳಿಗೆ ಬೆಂಬಲ ನೀಡಿದಂತೆಯೇ. ಕರ್ಫ್ಯೂ ವಿಧಿಸಿದ್ದರೂ ವಾನಿಯ ಶವಯಾತ್ರೆಗೆ 20 ಸಹಸ್ರಕ್ಕೂ ಹೆಚ್ಚು ಜನ ಸೇರಿದ್ದರೆಂದರೆ ಅದೆಂತಹ ನಾಚಿಕೆಗೇಡಿನ ಸಂಗತಿ!
ಕಾಶ್ಮೀರ ಕಣಿವೆಯ ತಲೆಕೆಟ್ಟ ಯುವಕರನ್ನು ಒತ್ತೊಟ್ಟಿಗೆ ಇಡಿ. ಏಕೆಂದರೆ ಅಲ್ಲಿ ಕೆಲವೊಂದು ಗುಂಪು ಯಾವಾಗಲೂ ಉಗ್ರಗಾಮಿಗಳಿಗೆ ನೇರವಾಗಿ ಬೆಂಬಲ ವ್ಯಕ್ತಪಡಿಸುತ್ತಲೇ ಇರುತ್ತದೆ. ಆದರೆ ನೆರೆಯ ಪಾಕಿಸ್ಥಾನ ಉಗ್ರ ವಾನಿಯ ಹತ್ಯೆಯಾಗಿದ್ದಕ್ಕೆ ಕಣ್ಣೀರು ಹಾಕಿದ್ದು ಮಾತ್ರ ಎಂತಹ ಸೋಜಿಗ. ಬುರ್ಹಾನ್ ವಾನಿಯನ್ನು ಕಾಶ್ಮೀರಿ ನಾಯಕ, ಆತನ ಹತ್ಯೆ ಖಂಡನೀಯ ಎಂದು ಸ್ವತಃ ಪಾಕ್ ಪ್ರಧಾನಿ ನವಾಜ್ ಷರೀಫ್ ಬಣ್ಣಿಸಿರುವುದು ಅತ್ಯಂತ ಆಘಾತಕಾರಿ. ಉಗ್ರಗಾಮಿ ಚಟುವಟಿಕೆಗಳ ತವರೂರೇ ಪಾಕಿಸ್ಥಾನ. ಅದರ ಕಹಿ ಫಲವನ್ನು ಆ ದೇಶ ಸಾಕಷ್ಟು ಅನುಭವಿಸಿದೆ. ಹೀಗಿದ್ದರೂ ಪಾಕ್ ಪ್ರಧಾನಿ ಷರೀಫ್ ಹತ್ಯೆಗೀಡಾದ ವಾನಿಯನ್ನು ‘ಜನಪ್ರಿಯ ಕಾಶ್ಮೀರಿ ನಾಯಕ’ ಎಂದು ಬಣ್ಣಿಸಿರುವುದು ಅವರ ಭಾರತವಿರೋಧಿ ನಿಲುವಿಗೆ ಸಾಕ್ಷಿ. ಇಂತಹ ಘಟನೆಗಳನ್ನೇ ಆಧಾರವಾಗಿಟ್ಟುಕೊಂಡು ಭಾರತದ ಆಂತರಿಕ ವಿಚಾರದಲ್ಲಿ ಮೂಗು ತೂರಿಸುವ ಕೆಲಸವನ್ನು ಪಾಕ್ ಮಾಡುತ್ತಲೇ ಇರುತ್ತದೆ. ಇದು ಆ ದೇಶದ ಜಾಯಮಾನ. ಅದಕ್ಕೇನೂ ಮಾಡುವಂತಿಲ್ಲ.
ಈಗ್ಗೆ 3 ವರ್ಷಗಳ ಹಿಂದೆ ಇದೇ ಕಾಶ್ಮೀರದ ಅನಂತನಾಗ್ನಲ್ಲಿ ನಡೆದ ಮುಖಾಮುಖಿಯೊಂದರಲ್ಲಿ ಮೇಜರ್ ಮನೀಷ್ ಪಿತಾಂಬರೆ ಎಂಬ ಸೈನ್ಯಾಧಿಕಾರಿಯೊಬ್ಬರು ಹಿಜಬುಲ್ ಮುಜಾಹಿದ್ದೀನ್ ಉಗ್ರಗಾಮಿ ಸಂಘಟನೆಯ ಮೋಸ್ಟ್ ವಾಂಟೆಡ್ ಟೆರರಿಸ್ಟ್ ಶೋಹೆಲ್ ಫೈಸಲ್ನನ್ನು ಕೊಂದುಹಾಕಿದ್ದರು. ಶೋಹೆಲ್ ಫೈಸಲ್ ದೆಹಲಿ ಹೈಕೋರ್ಟ್ ಮೇಲೆ ನಡೆದ ಬಾಂಬ್ ದಾಳಿಯ ರೂವಾರಿ. ಆತನನ್ನು ಪೊಲೀಸರು ಇನ್ನಿಲ್ಲದಂತೆ ಹುಡುಕುತ್ತಿದ್ದರು. ಆದರೆ ಸಿಕ್ಕಿರಲಿಲ್ಲ. ಕೊನೆಗೂ ಆತ ಶವವಾಗಿ ಸಿಕ್ಕಿದ. ಆತನನ್ನು ಕೊಂದು ಹಾಕಬೇಕೆಂಬ ಇರಾದೆಯಂತೂ ಮೇಜರ್ ಮನೀಷ್ಗೆ ಇರಲಿಲ್ಲ. ಜೀವಂತ ಸೆರೆಹಿಡಿಯಬೇಕೆಂಬುದೇ ಅವರ ಉದ್ದೇಶವಾಗಿತ್ತು. ಆದರೆ ಕಾರ್ಯಾಚರಣೆ ವೇಳೆ ಫೈಸಲ್ ತನ್ನ ಎಕೆ-೪೭ ಬಂದೂಕಿನಿಂದ ಒಂದೇ ಸಮನೆ ಗುಂಡುಗಳನ್ನು ಹಾರಿಸಿದಾಗ ಮನೀಷ್ಗೆ ಆತನನ್ನು ಕೊಲ್ಲದೆ ಅನ್ಯಮಾರ್ಗವೇ ಉಳಿದಿರಲಿಲ್ಲ. ಆ ಉಗ್ರಗಾಮಿಯೇನೋ ಸತ್ತ. ಆದರೆ ಈ ಎನ್ಕೌಂಟರ್ ವೇಳೆ ಬಂದೆರಗಿದ ಒಂದು ಗ್ರೆನೇಡ್ ಮೇಜರ್ ಮನೀಷ್ ಪಿತಾಂಬರೆಯನ್ನು ಆಹುತಿ ತೆಗೆದುಕೊಂಡಿತ್ತು.
ಇಂತಹ ಮೈನವಿರೇಳಿಸುವ ಸುದ್ದಿಯನ್ನು ನಮ್ಮ ಮಾಧ್ಯಮಗಳು ತಕ್ಷಣ ಪ್ರಸಾರ ಮಾಡಬೇಕಿತ್ತು. ವಾಹಿನಿಗಳಿಗೆ ಅದೊಂದು ಬ್ರೇಕಿಂಗ್ ನ್ಯೂಸ್ ಆಗಬೇಕಿತ್ತು. ಆದರೆ…? ಅದೇ ಸಮಯದಲ್ಲಿ ಎನ್ಡಿ ಟಿವಿ, ಸಿಎನ್ಎನ್-ಐಬಿಎನ್ ಮೊದಲಾದ ಪ್ರಮುಖ ವಾಹಿನಿಗಳು ಬಲು ಪೈಪೋಟಿಯಿಂದ ಪ್ರಸಾರಮಾಡುತ್ತಿದ್ದ ಮಹತ್ವದ ಸುದ್ದಿ ಯಾವುದು ಗೊತ್ತೆ? ಬಾಲಿವುಡ್ ನಟ ಸಂಜಯ್ದತ್ ನಿರ್ದೋಷಿ ಎಂಬ ನ್ಯಾಯಾಲಯದ ತೀರ್ಪನ್ನು! ಸಂಜಯ್ದತ್ ವಿರುದ್ದ ಪ್ರಬಲ ಸಾಕ್ಷ್ಯಾಧಾರಗಳು ಇರಲಿಲ್ಲ. ಹಾಗಾಗಿ ನ್ಯಾಯಾಲಯ ಆತನಿಗೆ ನಿರ್ದೋಷಿ ಎಂಬ ಪಟ್ಟ ನೀಡಿತ್ತು. ವಾಹಿನಿಗಳಿಗೆ ಇಷ್ಟೇ ಸಾಕಾಯಿತು. ಸಂಜಯ್ ಪರವಾಗಿ ತುತ್ತೂರಿ ಬಾರಿಸಲು ಶುರುಹಚ್ಚಿಕೊಂಡವು. ಮನೀಷ್ ಪಿತಾಂಬರೆ ಹುತಾತ್ಮನಾದ ಸುದ್ದಿ ಮೂಲೆಗೆ ಹೋಯಿತು. ಮನೀಷ್ ಪಿತಾಂಬರೆ ಕಾರ್ಯಾಚರಣೆಗೆ ಮುನ್ನ ಮುಂದಾಗುವ ಅನಾಹುತದ ಬಗ್ಗೆ ಯೋಚಿಸುತ್ತಾ ಕುಳಿತುಕೊಂಡಿರಲಿಲ್ಲ. ಆತನ ತಕ್ಷಣದ ಗುರಿ – ಮೋಸ್ಟ್ ವಾಂಟೆಡ್ ಉಗ್ರನನ್ನು ಸದೆಬಡಿಯುವುದಾಗಿತ್ತು. ಅಂತಹ ವೇಳೆ ಆತನಿಗೆ ತನ್ನ ಪ್ರಾಣ ಬಹು ಅಮೂಲ್ಯ ಎನಿಸಲಿಲ್ಲ. ದೇಶದ ಹಿತವೇ ಮುಖ್ಯ ಎನಿಸಿತು. ದೇಶಕ್ಕಾಗಿ, ದೇಶದ ರಕ್ಷಣೆಗಾಗಿ ಆ ವೀರಯೋಧ ತನ್ನ ಜೀವವನ್ನೇ ಬಲಿದಾನ ಮಾಡಿದ್ದ. ನಮ್ಮ ವಾಹಿನಿಗಳಿಗೆ ಮಾತ್ರ ಅದೊಂದು ಬ್ರೇಕಿಂಗ್ ನ್ಯೂಸ್ ಆಗಲೇ ಇಲ್ಲ! ಆ ಸುದ್ದಿಯನ್ನು ಮೊಟ್ಟಮೊದಲು ಬಿತ್ತರಿಸಿದ್ದು ಬಿಬಿಸಿ ಎಂಬ ವಿದೇಶಿ ಸುದ್ದಿ ವಾಹಿನಿ.
ಕಾಶ್ಮೀರ ಕಣಿವೆಯಲ್ಲಿ ಪೊಲೀಸ್ ಕಾರನ್ನು ನದಿಗೆ ತಳ್ಳಿ ಎಸ್ಪಿಯನ್ನು ಸಾಯಿಸಿದ ಘಟನೆ ಎಷ್ಟು ವಾಹಿನಿಗಳಲ್ಲಿ ಬ್ರೇಕಿಂಗ್ ನ್ಯೂಸ್ ಆಗಿ ಪ್ರಸಾರವಾಗಿದೆ? ಹಾಗಿದ್ದರೆ ಅದೊಂದು ಪ್ರಮುಖ ಸುದ್ದಿಯಲ್ಲವೆ? ವಾನಿ ಒಬ್ಬ ಉಗ್ರ ಎಂದು ಗೊತ್ತಿದ್ದರೂ ಆತನ ಬಗ್ಗೆ ಏಕೆ ಕರುಣೆ? ಆತ ಸತ್ತನೆಂಬ ಕಾರಣಕ್ಕೆ ೩೪ಕ್ಕೂ ಹೆಚ್ಚು ಅಮಾಯಕರು ಏಕೆ ಬಲಿಯಾಗಬೇಕು? ಇದು ದೇಶದ ಭದ್ರತೆಯ ಪ್ರಶ್ನೆಯಲ್ಲವೇ? ದೇಶದ ಬುದ್ಧಿಜೀವಿಗಳಾಗಲೀ, ವಿಚಾರವಾದಿಗಳಾಗಲೀ ಈ ಬಗ್ಗೆ ಏಕೆ ತುಟಿ ಬಿಚ್ಚಿಲ್ಲ?
ಭಯೋತ್ಪಾದನೆಯ ಭೂತ ಈಗ ಕಾಶ್ಮೀರಕ್ಕೇ ಸೀಮಿತವಾಗಿಲ್ಲ. ನೆರೆಯ ಕೇರಳದಲ್ಲಿ ೨೧ ಮಂದಿ ನಾಪತ್ತೆಯಾಗಿದ್ದು ಅವರೆಲ್ಲ ಐಎಸ್ಐಎಸ್ ಉಗ್ರ ಸಂಘಟನೆಗೆ ಸೇರಿರುವ ಸಾಧ್ಯತೆ ಇದೆ ಎಂದು ಆ ರಾಜ್ಯದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರೇ ವಿಧಾನಸಭೆಯಲ್ಲಿ ಮಾಹಿತಿ ನೀಡಿದ್ದಾರೆ. ನಾಪತ್ತೆಯಾದವರ ಪೈಕಿ ಇಬ್ಬರು ಯುವಕರು ಇಸ್ಲಾಮಿಕ್ ವಿದ್ವಾಂಸ ಡಾ. ಝಕೀರ್ ನಾಯ್ಕ್ ಅವರೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂಬ ವಿಚಾರವನ್ನು ಆ ಯುವಕರ ತಂದೆಯೇ ಬಹಿರಂಗಪಡಿಸಿದ್ದಾರೆ. ಕಾಸರಗೋಡಿನ 17 ಮಂದಿ ಹಾಗು ಪಾಲಕ್ಕಾಡ್ನ 4 ಮಂದಿ ನಾಪತ್ತೆಯಾದವರಲ್ಲಿ ಸೇರಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಐಎಸ್ಐಎಸ್ ಮತ್ತು ಜವಾತ್-ಉಲ್-ಮುಜಾಹಿದ್ದೀನ್ ಬಾಂಗ್ಲಾದೇಶ್ ಉಗ್ರಗಾಮಿ ಸಂಘಟನೆಗಳು ಅಲ್ಲಿನ ಮುಸ್ಲಿಂ ಸಮುದಾಯದ ನಿರುದ್ಯೋಗಿ ಯುವಕರನ್ನು ಉಗ್ರವಾದದತ್ತ ಸೆಳೆಯುತ್ತಿವೆ ಎಂದು ಸಿಐಡಿ ಅಧಿಕಾರಿಗಳೇ ತಿಳಿಸಿದ್ದಾರೆ. ಹೀಗೆ ಭಯೋತ್ಪಾದನೆ ನಮ್ಮ ನೆರೆಯಲ್ಲಿ, ಅಷ್ಟೇಕೆ ನಮ್ಮ ಕಾಲಬುಡದಲ್ಲೇ ಕಾಣಿಸಿದೆ. ನಿರುದ್ಯೋಗಿ ಯುವಕರು ಭಯೋತ್ಪಾದಕರಾಗುವಂತೆ ಝಕೀರ್ ನಾಯ್ಕ್ ಅವರ ಪ್ರಚೋದನಾಕಾರಿ ಬೋಧನೆಗಳು ಪ್ರೇರಿಸುತ್ತಿವೆ ಎಂಬುದು ಸುಳ್ಳಲ್ಲ.
ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಕಾಶ್ಮೀರದಲ್ಲಿ ಭುಗಿಲದ್ದ ಹಿಂಸಾಚಾರವನ್ನು ಖಂಡಿಸಿರುವುದು ಒಂದು ಶ್ಲಾಘನೀಯ ಕ್ರಮ. ಆದರೆ ಮಾಜಿ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಅವರು, ಬುರ್ಹಾನ್ ವಾನಿಯ ಹತ್ಯೆಯಿಂದಾಗಿ ಕಾಶ್ಮೀರದ ಅಸಂತುಷ್ಟರಿಗೆ ಹೊಸ ಐಕಾನ್ ಸಿಕ್ಕಂತಾಗಿದೆ. ಇನ್ನಷ್ಟು ಯುವಕರು ಉಗ್ರ ಸಂಘಟನೆಗಳಿಗೆ ಸೇರುವ ಸಾಧ್ಯತೆ ಇದೆ ಎಂದಿರುವುದು ಮಾತ್ರ ಆಘಾತಕಾರಿ. ಮಾಜಿ ಮುಖ್ಯಮಂತ್ರಿಯಾಗಿ ಅವರು ಹೀಗೆ ಹೇಳಬಾರದಿತ್ತು. ಈಗೆದ್ದಿರುವ ಹಿಂಸಾಚಾರವನ್ನು ಉಗ್ರಶಬ್ದಗಳಲ್ಲಿ ಖಂಡಿಸಬೇಕಿತ್ತು. ಆ ಕೆಲಸವನ್ನು ಅವರು ಮಾಡಿಲ್ಲ.
ಕಾಶ್ಮೀರದಲ್ಲಿ ಭಯೋತ್ಪಾದನೆ ಮೂಲೋತ್ಪಾಟನೆಯಾಗಬೇಕಾದರೆ ರಾಜಕಾರಣಿಗಳು ಉಗ್ರಗಾಮಿಗಳ ಬಗ್ಗೆ ಸಹಾನುಭೂತಿ ತೋರುವುದನ್ನು ಮೊದಲು ಬಿಡಬೇಕು. ರಾಜಕೀಯದ ಲಾಭನಷ್ಟದ ಲೆಕ್ಕಾಚಾರ ಬದಿಗಿಟ್ಟು ಏಕರೂಪದ ನಿಲುವನ್ನು ಹೊಂದುವುದು ಇಂತಹ ಬಿಕ್ಕಟ್ಟಿನ ಸಂದರ್ಭದಲ್ಲಿ ಅತ್ಯಂತ ಅಗತ್ಯ. ದೇಶ ವಿಭಜನೆಯ ಜೊತೆಜೊತೆಗೇ ಬಳುವಳಿಯಾಗಿ ಬಂದ ಪ್ರತ್ಯೇಕತಾವಾದವನ್ನು ದೂರಮಾಡುವಂತಹ ಪ್ರಬಲ ರಾಜಕೀಯ ಕ್ರಮ ಕೈಗೊಳ್ಳಬೇಕಾಗಿದೆ. ಪ್ರತ್ಯೇಕತಾವಾದಿಗಳಿಗೆ ಪಾಕಿಸ್ಥಾನ ನಿರಂತರವಾಗಿ ಬೆಂಬಲ ನೀಡುತ್ತಾ ಬಂದಿದೆ. ಮೊನ್ನೆ ಕೂಡ ಪಾಕ್ ರಾಯಭಾರಿ ವಿಶ್ವಸಂಸ್ಥೆಯಲ್ಲಿ ವಾನಿ ಹತ್ಯೆಯ ಬಗ್ಗೆ ಪ್ರಸ್ತಾಪಿಸಿ ವಿಶ್ವದ ಗಮನ ಸೆಳೆಯಲು ಪ್ರಯತ್ನಿಸಿದ್ದು ಅತ್ಯಂತ ಖಂಡನೀಯ. ಆತನ ಈ ಕ್ರಮಕ್ಕೆ ಭಾರತ ಕಟುವಾಗಿಯೇ ಉತ್ತರ ನೀಡಿರುವುದು ಶ್ಲಾಘನೀಯ. ಪಾಕಿಸ್ಥಾನಕ್ಕೆ ಅಂತಹ ಭಾಷೆಯಲ್ಲೇ ಉತ್ತರಿಸಬೇಕು. ಬೇರೆ ಭಾಷೆ ಪಾಕಿಸ್ಥಾನಕ್ಕೆ ಅರ್ಥವಾಗುವುದಿಲ್ಲ. ಬಹುಸಂಖ್ಯಾತ ಕಾಶ್ಮೀರಿಗಳು ಉಗ್ರಗಾಮಿತ್ವದ ವಿರುದ್ಧ ಒಗ್ಗಟ್ಟಾಗಿ ಪ್ರತಿಭಟಿಸುವುದು ಇಂದಿನ ತುರ್ತು ಅಗತ್ಯ. ಈ ರಗಳೆಯೆಲ್ಲಾ ನಮಗ್ಯಾಕೆ ಎಂದು ಚಿಂತಿಸುವುದು ಸಂಕುಚಿತ ಮನೋಭಾವದ ಪ್ರದರ್ಶನವಾಗುತ್ತದೆ. ಅಷ್ಟೇ ಅಲ್ಲ, ಅದು ದೇಶವಿರೋಧಿ ನಡುವಳಿಕೆ ಎನಿಸಿಕೊಳ್ಳುತ್ತದೆ. ಅಂತಿಮವಾಗಿ ಕಾಶ್ಮೀರದಲ್ಲಿ ಶಾಂತಿ ನೆಲೆಸಬೇಕೆಂದಾದರ ಬುರ್ಹಾನ್ ವಾನಿಯಂತಹ ಉಗ್ರರಿಗೆ ಹುತಾತ್ಮ ಪಟ್ಟ ಕಟ್ಟುವುದನ್ನು ಮೊದಲು ಅಲ್ಲಿನ ದಾರಿ ತಪ್ಪಿದ ಯುವಕರು ಕೈ ಬಿಡಬೇಕು. ಇಂತಹ ವಿದ್ಯಮಾನಗಳು ನಡೆದಾಗ ಮೂಗುತೂರಿಸುವ ನೆರೆಯ ಪಾಕಿಸ್ಥಾನದ ಸಹಾನುಭೂತಿಯ ಹೇಳಿಕೆಗಳಿಗೆ ಕಿವಿಗೊಡಬಾರದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.