ಜೂನ್ 26 ವಿಶ್ವ ಮಾದಕದ್ರವ್ಯ ವಿರೋಧಿ ದಿನ. ಜಗತ್ತಿನಾದ್ಯಂತ ಯುವಜನತೆ ಅಮಲಿನ ಭಯಾನಕ ಲೋಕದಲ್ಲಿ ತೇಲಾಡುವುದನ್ನು ತಪ್ಪಿಸಿ, ಅವರಿಗೆ ಹೊಸತೊಂದು ಜೀವನವನ್ನು ಕಟ್ಟಿಕೊಡುವ ಸಲುವಾಗಿ, ಮಾದಕದ್ರವ್ಯಗಳ ವಿರುದ್ಧದ ಹೋರಾಟವನ್ನು ಗಟ್ಟಿಗೊಳಿಸುವ ಸಲುವಾಗಿ ಜನ್ಮತಾಳಿದ ದಿನ. ಮಾದಕದ್ರವ್ಯದಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿಯನ್ನು ಮೂಡಿಸಲೂ ವಿಶ್ವಸಂಸ್ಥೆ ಈ ದಿನವನ್ನು ಆಚರಣೆಗೆ ತಂದಿತು.
ಭಾರತವೂ ಸೇರಿದಂತೆ ಅನೇಕ ರಾಷ್ಟ್ರಗಳಲ್ಲಿ ಮಾದಕ ವ್ಯಸನ ಒಂದು ಅನಿಷ್ಟದಂತೆ ಹಬ್ಬುತ್ತಿದೆ. ಹೆಚ್ಚು ಹೆಚ್ಚು ಯುವಜನತೆ, ಅದರಲ್ಲೂ ಹದಿಹರೆಯದ ಪ್ರಾಯದಲ್ಲೇ ಇದಕ್ಕೆ ದಾಸರಾಗುತ್ತಿದ್ದಾರೆ. ಅತ್ಯಂತ ನಿಗೂಢವಾಗಿ ನಡೆಯುತ್ತಿದ್ದ ಇದರ ಕಳ್ಳದಂಧೆಗಳು ಇತ್ತೀಚಿನ ದಿನಗಳಲ್ಲಿ ಎಗ್ಗಿಲ್ಲದಂತೆ ನಡೆಯುತ್ತಿರುವುದು ಅಪಾಯದ ಮುನ್ಸೂಚನೆ ನೀಡಿದೆ. ಕಾನೂನು, ಪೊಲೀಸ್ ವ್ಯವಸ್ಥೆ ದುರ್ಬಲವಾಗಿರುವುದೇ ಇದಕ್ಕೆ ಮುಖ್ಯ ಕಾರಣ.
ವಿಶ್ವಸಂಸ್ಥೆಯ ಡ್ರಗ್ಸ್ ಆಂಡ್ ಕ್ರೈಂ ವರದಿಯ ಪ್ರಕಾರ ಜಗತ್ತಿನಾದ್ಯಂತ 200 ಮಿಲಿಯನ್ ಜನ ಇದಕ್ಕೆ ದಾಸರಾಗಿದ್ದಾರೆ.
ಪಾಕಿಸ್ಥಾನ, ಅಫ್ಘಾನಿಸ್ತಾನದಂತಹ ರಾಷ್ಟ್ರಗಳಿಂದ ಭಾರತಕ್ಕೆ ಕಳ್ಳದಂಧೆಯ ಮೂಲಕ ಗಾಂಜಾ, ಹೆರಾಯಿನ್, ಕೊಕೆನ್ಗಳಂತಹ ಮಾದಕ ವಸ್ತುಗಳನ್ನು ಸಾಗಾಣೆಯಾಗುತ್ತಿದೆ. ಇದೇ ಕಾರಣದಿಂದ ಗಡಿ ರಾಜ್ಯಗಳಲ್ಲಿ ಅದರಲ್ಲೂ ಪಂಜಾಬ್ನಲ್ಲಿ ಮಾದಕವ್ಯಸನ ಹೆಚ್ಚಿನ ಪ್ರಮಾಣದಲ್ಲಿ ಯುವ ಜನರನ್ನು ಬಲಿಪಡೆಯುತ್ತಿದೆ.
ಶಾಲಾ-ಕಾಲೇಜುಗಳ ಆವರಣಗಳಲ್ಲೇ ಮಾದಕ ವಸ್ತುಗಳ ಮಾರಾಟ ನಡೆಯುತ್ತಿದ್ದು, ಅಮಲಿನ ನಶೆಯ ಪರಿಣಾಮವಾಗಿ ಹಲವಾರು ವಿದ್ಯಾರ್ಥಿಗಳು ಪ್ರಾಣ ಕಳೆದುಕೊಂಡಿರುವ ಘಟನೆಗಳೂ ಆಗಾಗ ನಡೆಯುತ್ತಿದೆ. ಈ ಬಗ್ಗೆ ನಮ್ಮ ಆಡಳಿತ ವ್ಯವಸ್ಥೆ ಕಣ್ಣಿದ್ದೂ ಕುರುಡಾಗಿದೆ.
ಮಾದಕವ್ಯಸನದಂತಹ ಗಂಭೀರ ಸಮಸ್ಯೆಯನ್ನು ಲಘುವಾಗಿ ಪರಿಗಣಿಸದೆ ಅದರ ವಿರುದ್ಧ ಕಠಿಣ ಹೋರಾಟವನ್ನು ಆರಂಭಿಸಿ, ಕ್ರಮಕೈಗೊಳ್ಳಬೇಕಾದ ಜವಾಬ್ದಾರಿ ಸರ್ಕಾರ ಮತ್ತು ನಾಗರಿಕರೆಲ್ಲರ ಮೇಲೂ ಇದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.