ತಮ್ಮವರ ಸಾವಿನಿಂದ ಉಂಟಾಗುವ ಮಾನಸಿಕ ವೇದನೆಯನ್ನು ವಿವರಿಸಲು ಸಾಧ್ಯವಿಲ್ಲ, ಒಬ್ಬರ ಅಗಲುವಿಕೆಯಿಂದ ಕಾಡುವ ಒಂಟಿತನ ಎಲ್ಲಕ್ಕಿಂತಲೂ ಕ್ರೂರ. ಇಂತಹ ನೋವು, ಒಂಟಿತನ, ವೇದನೆಯನ್ನು ಮರೆಯಲು ಒಬ್ಬೊಬ್ಬರು ಒಂದೊಂದು ತರನಾದ ಮಾರ್ಗವನ್ನು ಅನುಸರಿಸುತ್ತಾರೆ.
ನೇಪಾಳದ 68ವರ್ಷದ ದುರ್ಗಾ ಕಾಮಿ ಕೂಡ ತನ್ನ ಬಾಳ ಸಂಗಾತಿಯ ಅಗಲುವಿಕೆಯ ನೋವಿಂದ ಹೊರ ಬಂದಿಲ್ಲ. ಅವರು ಪತ್ನಿಯ ಸಾವಿನ ಬಳಿಕ ತಮ್ಮ ಒಂದು ಕೊಠಡಿಯ ಮನೆಯಲ್ಲೇ ವಾಸವಾಗಿದ್ದರು. ಆದರೆ ಒಂಟಿತನ ಎಂಬುದು ತೀವ್ರವಾಗಿ ಕಾಡುತ್ತಿತ್ತು. ಅದರಿಂದ ಹೊರಬರುವ ತೀವ್ರತೆಗೆ ಅವರು ಒಳಗಾದರು.
ಕೊನೆಗೂ ಒಂದು ಧೈರ್ಯಶಾಲಿ ನಿರ್ಧಾರವನ್ನೇ ತೆಗೆದುಕೊಂಡ 68ರ ಈ ವಯೋವೃದ್ಧ ಶಾಲಾ ಸಮವಸ್ತ್ರ ತೊಟ್ಟು, ಪುಸ್ತಕಗಳ ಬ್ಯಾಗ್ ಹಿಡಿದು, ವಾಕಿಂಗ್ ಸ್ಟಿಕ್ ಊರುತ್ತಾ ಶಾಲೆಗೆ ಹೋಗಲು ನಿರ್ಧರಿಸಿದರು.
ಶಿಕ್ಷಣ ಪೂರೈಸುವ ಆಶಯ ಅವರಿಗೆ ಮೊದಲೇ ಇತ್ತಾದರೂ ಅದು ಬಡತನದ ಕಾರಣದಿಂದಾಗಿ ಸಾಧ್ಯವಾಗಿರಲಿಲ್ಲ. ಆದರೀಗ ಜೀವನದ ಸಂಧ್ಯಾ ಕಾಲದಲ್ಲಿ ಅವರು ಶಿಕ್ಷಣ ಪಡೆಯುವ ಮನಸ್ಸು ಮಾಡಿ ಶಾಲೆಯತ್ತ ಹೆಜ್ಜೆಯಿಟ್ಟಿದ್ದಾರೆ. ಒಂಟಿತನದಿಂದ ಹೊರಬರುವ ಉದ್ದೇಶವೂ ಇದರ ಹಿಂದಿದೆ.
ಕಾಮಿ ಅವರಿಗೆ ಆರು ಮಕ್ಕಳು ಮತ್ತು 8 ಮೊಮ್ಮಕ್ಕಳಿದ್ದಾರೆ, ಆದರೂ ವಾರದಲ್ಲಿ ಆರು ದಿನ ತಪ್ಪದೇ ಶಾಲೆಗೆ ಹೋಗುತ್ತಾರೆ. ಇದರಿಂದ ಅವರ ಒಂಟಿತನ ದೂರವಾಗಿದೆ. ೨೦ ಮಕ್ಕಳಿರುವ 10 ನೇ ತರಗತಿಯಲ್ಲಿ ತಾನೂ ಮಗುವಾಗಿ ಅವರು ಪಾಠ ಕೇಳುತ್ತಾರೆ. ಮಕ್ಕಳೊಂದಿಗೆ ಬೆರೆಯುತ್ತಾರೆ. ಇವರನ್ನು ಮಕ್ಕಳೆಲ್ಲ ಪ್ರೀತಿಯಿಂದ ’ಕಾಮಿ ಬಾ’ (‘ಬಾ’ ಎಂದರೆ ನೇಪಾಳಿ ಭಾಷೆಯಲ್ಲಿ ‘ತಂದೆ’ ಎಂದರ್ಥ) ಎಂದೇ ಕರೆಯುತ್ತಾರೆ.
ಪಾಠಗಳು ಕಾಮಿ ಬಾ ಅವರಿಗೆ ಕಷ್ಟವಾಗುತ್ತಿವೆ, ನಮಗಿಂತ ಓದಿನಲ್ಲಿ ಅವರು ಹಿಂದಿದ್ದಾರೆ. ಆದರೆ ಅವರಿಗೆ ನಾವು ಸಹಾಯ ಮಾಡುತ್ತೇವೆ ಎಂದು ಮಕ್ಕಳು ಪ್ರೀತಿಯಿಂದ ಹೇಳುತ್ತಾರೆ.
ಜೀವನದಲ್ಲಿ ಒಂಟತನವೆನ್ನುವುದು ಎಷ್ಟೊಂದು ಕ್ರೂರ ಮತ್ತು ಅದನ್ನು ಹೇಗೆ ಸಕಾರಾತ್ಮಕ ಮಾರ್ಗದಲ್ಲಿ ಎದುರಿಸಬಹುದು ಎಂಬುದಕ್ಕೆ ಕಾಮಿ ಬಾ ಅವರೇ ಉದಾಹರಣೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.