ಬಂಟ್ವಾಳ : ಮಂಗಳವಾರ ರಾತ್ರಿಯಿಂದ ಸುರಿದ ಧಾರಾಕಾರ ಮಳೆ , ಅಬ್ಬರದ ಸಿಡಿಲು, ಮಿಂಚಿಗೆ ಬಂಟ್ವಾಳ ಪರಿಸರದಲ್ಲಿ ರಾತ್ರಿಯಿಡಿ ವಿದ್ಯುತ್ ಮಾಯವಾಗಿದ್ದು ಪರಿಣಾಮ ಬುಧವಾರ ಪುರವಾಸಿಗಳಿಗೆ ಕುಡಿಯುವ ನೀರಿನ ಪೂರೈಕೆಯು ಪುರಸಭೆಯಿಂದ ಸ್ಥಗಿತಗೊಂಡಿತ್ತು. ಮಂಗಳವಾರ ರಾತ್ರಿ 7ಗಂಟೆಗೆ ಆರಂಭವಾದ ಸಿಡಿಲು,ಮಿಂಚು,ಮಳೆಗೆ ಕಡಿತವಾಗಿದ್ದ ವಿದ್ಯುತ್ ಬೆಳಗ್ಗಿನ ವರೆಗೂ ಮಾಯವಾಗಿತ್ತು. ಇದರಿಂದಾಗಿ ಬಂಟ್ವಾಳ ಜಕ್ರಿಬೆಟ್ಟಿನಲ್ಲಿರುವ ಪುರಸಭೆಯ ಸಮಗ್ರ ಕುಡಿಯುವ ನೀರಿನ ಟಾಂಕಿಯಲ್ಲಿ ನೀರಿನ ಸಂಗ್ರಹವಾಗದೆ ಇದ್ದು ಬೆಳಿಗ್ಗೆ ಕುಡಿಯುವ ನೀರಿಗಾಗಿ ಪುರವಾಸಿಗಳು ಅಕ್ಕಪಕ್ಕದ ಬಾವಿ, ಬೋರ್ವೆಲ್ ಗಳಿಗೆ ಮೊರೆ ಹೋಗಬೇಕಾಯಿತು.
ಮುಂಜಾನೆಯವೇಳೆಗೆ ವಿದ್ಯುತ್ ಕಣ್ಣುಮುಚ್ಚಾಲೆ ಆಟವಾಡುತ್ತಿದ್ದು 9 ಗಂಟೆ ಬಳಿಕ ವಿದ್ಯುತ್ ಬಂದಿದೆ. ಸಿಡಿಲಿನ ಅಬ್ಬರಕ್ಕೆ ಬಹುತೇಕ ಕಡೆ ವಿದ್ಯುತ್ ಟ್ರಾನ್ಸ್ ಫಾರ್ಮರ್ ಹಾನಿಯಾದ ಬಗ್ಗೆಯೂ ವರದಿಯಾಗಿದೆ. ರಾತ್ರೆಯಿಂದ ಮುಂಜಾನೆಯವರೆಗೂ ಸುರಿದ ಜಡಿ ಮಳೆ ಬಿಸಿಲ ಭೇಗೆಯಿಂದ ಬಳಲುತ್ತಿದ್ದ ಜನರಿಗೆ ತಂಪನ್ನು ನೀಡಿತು. ಮಳೆಯಿಂದ ತಾಲೂಕಿನಲ್ಲಿ ಹಾನಿಯ ಬಗ್ಗೆ ಯಾವುದೇ ವರದಿಯಾಗಿಲ್ಲ.
ಈ ನಡುವೆ ಬಂಟ್ವಾಳ ಪುರಸಭೆ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆಯೂ ತಲೆದೂರಿದ ಬಗ್ಗೆ ವರದಿಯಾಗಿದೆ. ಸೋಮವಾರ ನಡೆದ ಸಾಮಾನ್ಯ ಸಭೆಯಲ್ಲೂ ಕುಡಿಯುವ ನೀರಿನ ಸಮಸ್ಯೆಯ ಕುರಿತಂತೆ ಸದಸ್ಯರು ಗಮನ ಸೆಳೆದಿದ್ದರು. ಆದರೂ ಬಸ್ತಿ ಪಡ್ಪು ,ಕಂಚಿಕಾರ ಪೇಟೆ, ನಿತ್ಯಾನಂದ ನಗರ , ಲೆಕ್ಕೆಸಿರಿ ಪಾದೆ ಸಹಿತ ಗುಡ್ಡ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಿಗಡಾಯಿಸಿದೆ ಎಂದು ಸದಸ್ಯರು ಸಭೆಯಲ್ಲಿ ದೂರಿರುವುದನ್ನು ಇಲ್ಲಿ ನೆನಪಿಸಬಹುದಾಗಿದೆ. ಈ ಬಗ್ಗೆ ದೂರಿತ್ತರೂ ಪುರಸಭೆಯ ಅಧಿಕಾರಿಗಳು ಸ್ಪಂದಿಸುತ್ತಿಲ್ಲವೆಂದು ಆರೋಪಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.