ಮಹಾರಾಷ್ಟ್ರದ ಅಕೋಲ ಜಿಲ್ಲೆಯಲ್ಲಿ ಸದ್ಯಕ್ಕೆ ಮಳೆ ಕೈಕೊಟ್ಟಿದೆ. ಜನ ನೀರಿಗಾಗಿ ಹಾತೊರೆಯುತ್ತಿದ್ದಾರೆ. ಆದರೆ ಒಂದು ಬಾರಿ ಇಲ್ಲಿ ಮಳೆ ಬಂತೆಂದರೆ ಸಾಕು ಇಡೀ ಗ್ರಾಮವೇ ನೆರೆಗೆ ತುತ್ತಾಗುತ್ತದೆ. ಫಲವತ್ತಾದ ಮಣ್ಣು ಕೊಚ್ಚಿ ಹೋಗುತ್ತದೆ. ಮಳೆ ನೀರು ವ್ಯರ್ಥವಾಗುತ್ತದೆ.
ನಮ್ಮ ಗ್ರಾಮದಲ್ಲೊಂದು ಡ್ಯಾಂ ನಿರ್ಮಿಸಿ ಪುಣ್ಯ ಕಟ್ಟಿಕೊಳ್ಳಿ ಎಂದು ಇಲ್ಲಿನ ಜನತೆ ಸರ್ಕಾರಿ ಅಧಿಕಾರಿಗಳನ್ನು ನಿರಂತರವಾಗಿ ಒತ್ತಾಯಿಸುತ್ತಲೇ ಬಂದಿದ್ದಾರೆ. ಆದರೆ ಪ್ರಯೋಜನ ಮಾತ್ರ ಶೂನ್ಯ.
ಇದರಿಂದ ಕಂಗಾಲಾದ ರೈತ ಸಂಜಯ್ ತಿಡ್ಕೆ ಸ್ವತಃ ತಾವೇ ಸ್ವಂತ ಖರ್ಚಿನಲ್ಲಿ ತನ್ನ ಸ್ವಂತ ಜಾಗದಲ್ಲಿ ಡ್ಯಾಂ ನಿರ್ಮಿಸುವ ಕಾರ್ಯಕ್ಕೆ ಮುಂದಾದರು. ಈ 42 ವರ್ಷದ ರೈತ ಅದಕ್ಕಾಗಿ ತನ್ನ 10 ಎಕರೆ ಜಮೀನನ್ನು 55 ಲಕ್ಷಕ್ಕೆ ಮಾರಿದರು. ಡ್ಯಾಂ ನಿರ್ಮಾಣ ಕಾರ್ಯ ಆರಂಭಿಸಿದರು.
ಮಾರ್ಚ್ನಲ್ಲಿ ಇವರು ಡ್ಯಾಂ ನಿರ್ಮಿಸಲು ಆರಂಭಿಸಿದ್ದು, ಇದೀಗ ಅದು ಪೂರ್ಣಗೊಳ್ಳುವ ಹಂತದಲ್ಲಿದೆ. ಇದಕ್ಕೆ ಅವರ ವ್ಯಯಿಸಿದ್ದು 20 ಲಕ್ಷ ರೂಪಾಯಿ. ಸರ್ಕಾರದ ಅನುದಾನಕ್ಕೆ ಕೇಳಿಕೊಂಡರೂ ಅಧಿಕಾರಿಗಳು ನಮ್ಮಲ್ಲಿ ಅಂತಹ ಯೋಜನೆಯಿಲ್ಲ ಎಂದು ಜಾರಿಕೊಂಡಿದ್ದಾರೆ.
ಈ ಡ್ಯಾಂ 3 ಕೋಟಿ ಲೀಟರ್ ಸಂಗ್ರಹಿಸುವ ಸಾಮರ್ಥ್ಯ ಹೊಂದಿದೆ. ಇದರ ನೀರನ್ನು ಗ್ರಾಮದ ಎಲ್ಲಾ ರೈತರು ಉಚಿತವಾಗಿ ಬಳಕೆ ಮಾಡಲು ನಾನು ಅನುಮತಿ ನೀಡುತ್ತೇನೆ ಎಂದಿದ್ದಾರೆ.
ಈ ಕಾರ್ಯಕ್ಕೆ ಇಳಿದಾಗ ಗ್ರಾಮಸ್ಥರು ಇವರನ್ನು ಹುಚ್ಚ ಎಂದು ಕರೆದಿದ್ದರು, ಆದರೀಗ ಅವರ ಪಾಲಿಗೆ ಇವರು ದೇವರಾಗಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.