ಆ ಬಾಲಕನ ಹೆಸರು ದಿನೇಶ್, ಶೇ. 90 ರಷ್ಟು ವಿಕಲಾಂಗ, ಮೇಲಾಗಿ ಬಡ ಕುಟುಂಬದಿಂದ ಬಂದವನು. ಆದರೆ ಈ ನ್ಯೂನ್ಯತೆಗಳು ಆತನ ಸಾಧನೆಗೆ ಅಡ್ಡಿಯಾಗಲಿಲ್ಲ. ಇತ್ತೀಚಿಗೆ ಪ್ರಕಟವಾದ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಶೇ. 93.75 ರಷ್ಟು ಅಂಕ ಪಡೆದು ಆತ ತೇರ್ಗಡೆಯಾಗಿದ್ದಾನೆ.
ದಿನೇಶ್ ತಂದೆ ಬೀರಾ ಗೌಡ ಕೃಷಿ ಕಾರ್ಮಿಕ ಮತ್ತು ಕೂಲಿಯಾಳು ಆಗಿ ಕೆಲಸ ಮಾಡುತ್ತಾರೆ. ಹುಟ್ಟುತ್ತಲೇ ವಿಕಲಾಂಗನಾದ ತನ್ನ ಮಗನನ್ನು ಕಂಡು ಅವರು ಚಿಂತಾಕ್ರಾಂತರಾಗಿದ್ದರು. ಆದರೂ ತನ್ನ ಮಗನಿಗೆ ಉತ್ತಮ ಶಿಕ್ಷಣ ನೀಡಿಯೇ ನೀಡುತ್ತೇನೆ ಎಂದು ಪಣತೊಟ್ಟರು.
ಎಲ್ಲಾ ಅಡೆತಡೆಗಳನ್ನು ಮೆಟ್ಟಿ ನಿಂತು ಮಗನನ್ನು ಸ್ಥಳೀಯ ಕನ್ನಡ ಮಾಧ್ಯಮ ಶಾಲೆಗೆ ಸೇರಿಸಿದರು. 3 ವರ್ಷಗಳ ಕಾಲ ಬೀರಾ ಅವರೇ ಮಗನನ್ನು ಹೊತ್ತುಕೊಂಡು ಹೋಗಿ ಶಾಲೆಗೆ ಬಿಡುತ್ತಿದ್ದರು, ಹೊತ್ತುಕೊಂಡೇ ಮನೆಗೆ ಕರೆ ತರುತ್ತಿದ್ದರು. ಸೈಕಲ್ ಮೇಲೆ ಕೂರಲೂ ದಿನೇಶ್ಗೆ ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ದಿನಕ್ಕೆ 3 ಕಿ.ಮೀ ಹೊತ್ತುಕೊಂಡು ಹೋಗುತ್ತಿದ್ದರು.
ಇವರ ಊರು ಕುಮುಟಾ ತಾಲೂಕಿನ ಹರ್ಕೆಡೆ. ದಿನೇಶ್ ಸಹೋದರ ಕುಮುಟಾದಲ್ಲಿ ಬಿಎ ಪದವಿ ಮಾಡುತ್ತಿದ್ದಾನೆ.
ನಾನು ವಿಕಲಾಂಗ ಎಂದು ನನ್ನ ಸಹಪಾಠಿಗಳು, ಶಿಕ್ಷಕರು ತುಚ್ಛವಾಗಿ ಕಾಣಲಿಲ್ಲ, ಅವರೆಲ್ಲ ಉತ್ತಮ ಸಹಕಾರ ನೀಡಿದರು. ಪ್ರತಿ ಹೆಜ್ಜೆಯಲ್ಲೂ ಸಹಕಾರ ನೀಡಿದರು. ನನ್ನ ತಂದೆ ಹೊತ್ತುಕೊಂಡು ನನ್ನನ್ನು ಶಾಲೆಗೆ ಬಿಡುತ್ತಿದ್ದರು. ಅವರಿಗೆ ನಾನು ಕಲಿಯಬೇಕು ಎಂಬ ಹಂಬಲ ಎಷ್ಟಿತ್ತು ಎಂಬುದು ಅದರಿಂದಲೇ ತಿಳಿಯುತ್ತದೆ. ಈ ಎಲ್ಲಾ ಅಂಶಗಳು ನನ್ನನ್ನು ಉತ್ತಮವಾಗಿ ಕಲಿಯುವಂತೆ ಮಾಡಿದವು. ಅದರ ಫಲವಾಗಿ ನಾನಿಂದು ಡಿಸ್ಟಿಂಕ್ಷನ್ ಪಡೆದೆ ಎನ್ನುತ್ತಾನೆ ದಿನೇಶ್.
ಕಾಲೇಜಿಗೆ ಹೋಗಬೇಕಾದರೆ ಇನ್ನು ಕುಮುಟಾಗೆ ಹೋಗಬೇಕು, ದಿನ ನಿತ್ಯ ಬಸ್ನಲ್ಲಿ ಅಲ್ಲಿ ತನಕ ಹೋಗುವುದು ದಿನೇಶ್ಗೆ ಸಾಧ್ಯವಾಗದ ಕಾರಣ ಆತ ಮುಂದಿನ ಶಿಕ್ಷಣವನ್ನು ಕರೆಸ್ಪಾಂಡೆನ್ಸ್ ಆಗಿ ಮಾಡಲು ನಿರ್ಧರಿಸಿದ್ದಾನೆ.
ಅದೇನೆಯಿರಲಿ ದಿನೇಶ್ನ ಕಲಿಯುವ ಹಂಬಲಕ್ಕೆ, ಆತನ ತಂದೆಯ ಪ್ರೋತ್ಸಾಹಕ್ಕೆ ನಾವು ಸೆಲ್ಯೂಟ್ ಕೊಡಲೇ ಬೇಕಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.