ಸುಳ್ಯ : ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ್ ಆದರ್ಶ ಗ್ರಾಮವಾದ ಬಳ್ಪ ಗ್ರಾಮ ಪಂಚಾಯತ್ ನಲ್ಲಿ 2 ನೇ ಹಂತದ ವಿವಿಧ ಕಾಮಗಾರಿಗಳಿಗೆ ಗುರುವಾರ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಶಂಕು ಸ್ಥಾಪನೆ ಮಾಡಿದರು. ಇದೇ ಸಂದರ್ಭದಲ್ಲಿ ರಸ್ತೆ ಉದ್ಘಾಟನೆಯನ್ನು ಮಾಡಲಾಯಿತು.
ಬಳ್ಪ ಗ್ರಾಮದ ಅಭಿವೃದ್ಧಿಯ ದೃಷ್ಟಿಯಿಂದ 5 ಹಂತಗಳ ಕಾರ್ಯಯೋಜನೆ ಈ ಮೊದಲೇ ಸಿದ್ದಪಡಿಸಿದ್ದು ಇದರಲ್ಲಿ ಮೊದಲ ಹಂತ ಪೂರ್ತಿಗೊಂಡಿದೆ. ಇದೀಗ 2 ನೇ ಹಂತದ ಕಾಮಗಾರಿ ಆರಂಭಗೊಂಡು ಖಾಸಗಿ ಸಹಭಾಗಿತ್ವದಲ್ಲಿ ಮುಂದಿನ 6 ತಿಂಗಳಲ್ಲಿ ಪೂರ್ತಿಗೊಳ್ಳುವ ನಿರೀಕ್ಷೆ ಇದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.
ಬಳ್ಪ ಗ್ರಾಮವನ್ನು ಶಾಸಕ ಅಂಗಾರ ಮಾರ್ಗದರ್ಶನದಲ್ಲಿ ದತ್ತು ತೆಗೆದುಕೊಂಡು ಮಾಸ್ಟರ್ಪ್ಲಾನ್ ಸಿದ್ದಪಡಿಸಿ ಅಭಿವೃದ್ಧಿಯ ಜೊತೆಗೆ ಸಾಮಾಜಿಕ ಜಾಗೃತಿ, ಆರ್ಥಿಕ ಸುದೃಢತೆ , ಶಿಕ್ಷಣಯುಕ್ತ ಗ್ರಾಮ ಸೇರಿದಂತೆ 5 ಹಂತಗಳ ಕಾರ್ಯಯೋಜನೆ ಸಿದ್ದಪಡಿಸಲಾಗಿತ್ತು. ಇದರಲ್ಲಿ ಅಭಿವೃದ್ಧಿ ವಿಚಾರಗಳನ್ನು ಮೊದಲ ಹಂತದಲ್ಲಿ ಕೈಗೆತ್ತಿಕೊಂಡು ಶಾಲೆಗೆ ಇ-ಶಿಕ್ಷಣ, ಪ್ರಾಥಮಿಕ ಆರೋಗ್ಯ ಕೇಂದ್ರ, ಸೋಲಾರ್ ಬೀದಿದೀಪ, ರಸ್ತೆ ಡಾಮರೀಕರಣ ಸೇರಿದಂತೆ ಇತರ ಅಭಿವೃಧ್ಧಿ ಕಾರ್ಯಗಳಿಗೆ ಆದ್ಯತೆ ನೀಡಲಾಗಿತ್ತು. ಬೀದಿಗುಡ್ಡೆ ರಸ್ತೆ ಡಾಮರೀಕರಣವು ಸುಮಾರು 1.10 ಕೋಟಿ ರೂಪಾಯಿಯಲ್ಲಿ ಅಭಿವೃದ್ಧಿಗೊಂಡಿದೆ. ಇದಕ್ಕೆ ಸಂಸದರ ಅನುದಾನ ಸೇರಿದಂತೆ ಶಾಸಕರು, ವಿಧಾನಪರಿಷತ್ ಸದಸ್ಯರು, ಜಿಪಂ ಅಧ್ಯಕ್ಷೆಯ ಸಹಕಾರದೊಂದಿಗೆ ರಸ್ತೆ ಕಾಮಗಾರಿ ನಡೆದಿದೆ ಎಂದು ಸಂಸದರು ವಿವರಿಸಿದರು.
ಇದೀಗ ಎರಡನೇ ಹಂತದಲ್ಲಿ ಅಂಗನಾಡಿ ಕಟ್ಟಡಗಳ ನಿರ್ಮಾಣ, ಬಸ್ತಂಗುದಾಣ ರಚನೆ, ಶಾಲೆಗಳ ನವೀಕರಣ ಕೆಲಸವು ಎಂಆರ್ಪಿಎಲ್, ಎನ್ಎಂಪಿಟಿ , ವಿಜಯಾ ಬ್ಯಾಂಕ್ ಹಾಗೂ ದಿವ್ಯರೂಪ ಇನ್ಫೋಟೆಕ್ ಸಹಕಾರದೊಂದಿಗೆ ನಡೆಯಲಿದೆ ಎಂದರು.
ಈ ಸಂದರ್ಭ ಶಾಸಕ ಅಂಗಾರ, ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ತಾಪಂ ಅಧ್ಯಕ್ಷೆ ಚನಿಯ ಕಲ್ತಡ್ಕ,ಜಿಪಂ ಸದಸ್ಯೆ ಆಶಾ ತಿಮ್ಮಪ್ಪ, ತಾಪಂ ಸದಸ್ಯ ಅಶೋಕ್ ನೆಕ್ರಾಜೆ, ಗ್ರಾಪಂ ಅಧ್ಯಕ್ಷ ಪ್ರಕಾಶ್ ಮಾಡ್ನೂರು, ಉಪಾಧ್ಯಕ್ಷೆ ತಾರಾ ರೈ, ಬಿಜೆಪಿ ತಾಲೂಕು ಕಾರ್ಯದರ್ಶಿ ಮುಳಿಯ ಕೇಶವ ಭಟ್, ಎಂಆರ್ಪಿಎಲ್ ಅಧಿಕಾರಿ ವೀಣಾ ಶೆಟ್ಟಿ, ದಿವ್ಯರೂಪ ಇನ್ಫೋಟೆಕ್ನ ಯಾದವ ಕೋಟ್ಯಾನ್, ಮೊಗರೋಡಿ ಕನ್ಟ್ರಕ್ಷನ್ನ ಸುಧಾಕರ ಶೆಟ್ಟಿ,ಆದರ್ಶ ಗ್ರಾಮದ ಸಮನ್ವಾಧಿಕಾರಿ ಲೋಕೇಶ್, ಗ್ರಾಪಂ ಪಿಡಿಒ ಶಂಭು ಕುಮಾರ್ ಶರ್ಮ, ಪ್ರಮುಖರಾದ ಪಟೋಳಿ ಕೃಷ್ಣ ಭಟ್, ಸುಬ್ರಹ್ಮಣ್ಯ ಕುಳ, ಚಂದ್ರಶೇಖರ ಶಾಸ್ತ್ರಿ, ರಮಾನಂದ ಎಣ್ಣೆಮಜಲು, ವಿನೋದ್ ಬೊಳ್ಮಲೆ,ಸುಬ್ರಹ್ಮಣ್ಯ ಕಣ್ಕಲ್, ಭಾಸ್ಕರ ಗೌಡ ಪಂಡಿ ಮೊದಲಾದವರು ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.