ಸುಳ್ಯ : ಅಧಿಕ ಭಾರ ತುಂಬಿದ 18 ಮರಳು ಲಾರಿಗಳನ್ನು ದ.ಕ. ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ನೇತೃತ್ವದಲ್ಲಿ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ ವಶಕ್ಕೆ ತೆಗೆದುಕೊಳ್ಳಲಾಗಿದೆ. ಸುಳ್ಯದಿಂದ ಸಂಪಾಜೆ ಮಧ್ಯೆ ತಪಾಸಣೆ ನಡೆಸಿದ ಜಿಲ್ಲಾಧಿಕಾರಿ ಮತ್ತು ಅಧಿಕಾರಿಗಳು ಅಧಿಕ ಭಾರ ತುಂಬಿ ಸಂಚರಿಸುವ ಮರಳು ಲಾರಿಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
10 ಟನ್ ಮರಳು ಸಾಗಾಟಕ್ಕೆ ಮಾತ್ರ ಲಾರಿಗಳಿಗೆ ಪರವಾನಗಿ ನೀಡಲಾಗಿದೆ. ಆದರೆ ಹಲವು ಲಾರಿಗಳಲ್ಲಿ 15, 20 ಟನ್ಗಳಷ್ಟು ಅಧಿಕ ಭಾರಗಳನ್ನು ತುಂಬಲಾಗಿತ್ತು. ಲಾರಿಗಳನ್ನು ವಶಕ್ಕೆ ಪಡೆದ ಅಧಿಕಾರಿಗಳು ಅವುಗಳನ್ನು ತೂಕ ಮಾಡಿ ಅಧಿಕ ಭಾರ ಇರುವ ಲಾರಿಗಳನ್ನು ಮುಟ್ಟುಗೋಲು ಹಾಕಿ ಸರಿಯಾದ ಪ್ರಮಾಣದಲ್ಲಿ ಮರಳು ತುಂಬಿದ್ದ ಲಾರಿಗಳನ್ನು ಮಾತ್ರ ಬಿಡಲಾಯಿತು. ಆದರೆ ಬಹುತೇಕ ಲಾರಿಗಳಲ್ಲಿ ಶೇ.180, 200ರಷ್ಟು ಅಧಿಕ ಭಾರವಿತ್ತು. ಅಧಿಕ ಭಾರವಿರುವ ಲಾರಿಗಳನ್ನು ವಶಕ್ಕೆ ಪಡೆಯಲಾಗಿದ್ದು ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ತಿಳಿಸಿದ್ದಾರೆ.
ವಶಪಡಿಸಿಕೊಳ್ಳಲಾದ ಲಾರಿಗಳ ಮರಳು ಸಾಗಾಟ ಪರವಾನಗಿಯನ್ನು ರದ್ದುಪಡಿಸಲು, ಅಧಿಕ ಭಾರ ತುಂಬಿದ ಲಾರಿಗಳ ಮೇಲೆ ಕೇಸು ದಾಖಲಿಸಲು ಮತ್ತು ಲಾರಿಗಳಲ್ಲಿ ಸಾಗಿಸಲಾದ ಮರಳನ್ನು ವಶಕ್ಕೆ ಪಡೆಯಲು ಜಿಲ್ಲಾಧಿಕಾರಿ ತಹಶೀಲ್ದಾರ್ಗೆ ಸೂಚನೆ ನೀಡಿದ್ದಾರೆ.
ಪ್ರೊಬೇಷನರಿ ಎಸ್ಪಿ ಸುಮನ್.ಡಿ.ಪನ್ನೇಕರ್, ಸುಳ್ಯ ತಹಶೀಲ್ದಾರ್ ಶ್ರೀನಿವಾಸ ಶೆಟ್ಟಿ, ಪೊಲೀಸ್ ವೃತ್ತ ನಿರೀಕ್ಷಕ ಬಿ.ಎಸ್.ಸತೀಶ್, ಕಂದಾಯ ನಿರೀಕ್ಷಕ ಮುರಳೀಧರ್, ನಗರ ಪಂಚಾಯಿತಿ ಮುಖ್ಯಧಿಕಾರಿ ಚಂದ್ರಕುಮಾರ್ ಮತ್ತಿತರ ಅಧಿಕಾರಿಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.