22 ವರ್ಷಗಳ ಹಿಂದೆ ಕಮ್ಯುನಿಸ್ಟ್ ಪಕ್ಷವನ್ನು ತೊರೆದು ಆರ್ ಎಸ್ ಎಸ್ ಸೇರಿದ ಕಾರಣಕ್ಕಾಗಿ ಸದಾನಂದ ಮಾಸ್ಟರ್ ಅವರ ಎರಡೂ ಕಾಲುಗಳನ್ನು ಕಮ್ಯುನಿಸ್ಟ್ ನ ಗೂಂಡಾಗಳು ತುಂಡರಿಸಿದ್ದರು. ನಂತರ ಮಾಸ್ಟರ್ ಕೃತಕ ಕಾಲುಗಳನ್ನು ಜೋಡಿಸಿ ತನ್ನ ಹೊಸ ಜೀವನವನ್ನು ಆರಂಭಿಸಿದರು. ಇಂದು ಅವರು ಕೇರಳದ ಅತ್ಯಂತ ಸೂಕ್ಷ್ಮ ವಿಧಾನಸಭಾ ಕ್ಷೇತ್ರವಾದ ಕಣ್ಣೂರಿನ ಕೂತ್ತುಪರಂಬ್ ನ BJP ಯ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಶೋಭಾ ವಾರಿಯರ್ ಅವರ ಜೊತೆ ತಮ್ಮ ಜೀವನದ ಘಟನೆಗಳನ್ನು ಹಂಚಿದರು. ಅದರ ಕನ್ನಡ ಅನುವಾದ ಇಲ್ಲಿದೆ.
ಸುಮಾರು 6 ಅಡಿಗಿಂತ ಹೆಚ್ಚು ಉದ್ದದ, ನಗುಮುಖದ ಈ ವ್ಯಕ್ತಿಯೇ ಸದಾನಂದ ಮಾಸ್ಟರ್. ಇಂದು ಅವರು ಕೇರಳದ ಅತ್ಯಂತ ಸೂಕ್ಷ್ಮ ವಿಧಾನಸಭಾ ಕ್ಷೇತ್ರವಾದ, ಕೊಲೆ ಎನ್ನುವುದು ಸಾಮಾನ್ಯ ಘಟನೆ ಎನ್ನುವ ಕಣ್ಣೂರಿನ ಕೂತ್ತುಪರಂಬ್ ನ BJP ಯ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಮಾಸ್ಟರ್ 1994 ರಲ್ಲಿ 30 ನೆಯ ವಯಸ್ಸಿನಲ್ಲಿದ್ದಾಗ ತನ್ನ ಎರಡೂ ಕಾಲುಗಳನ್ನು CPI-M ನ (ಕಮ್ಯುನಿಸ್ಟ್ ಪಾರ್ಟಿ ಇಂಡಿಯ-ಮಾರ್ಕಿಸ್ಟ್) ಕಾರ್ಯಕರ್ತರ ದ್ವೇಷದ ಹಾಗೂ ಕೊಲೆಯ ರಾಜಕೀಯದಿಂದ ಕಳೆದುಕೊಂಡಿದ್ದರು. ಕೃತಕ ಕಾಲುಗಳಿಂದ ನಡೆಯುವಂತಾಗಲು ಅವರಿಗೆ 6 ತಿಂಗಳುಗಳೇ ಹಿಡಿದುವು. ಸದಾನಂದ ಮಾಸ್ಟರ್ (52 ವರ್ಷ, ಮಾಶ್ಶು ಎಂದೇ ಸ್ಥಳೀಯರಿಗೆ ಪರಿಚಯ) ಅವರು ಕಮ್ಯುನಿಸ್ಟ್ ಕುಟುಂಬದಿಂದ ಬಂದು, ನಂತರ SFI ಯ ಒಬ್ಬ ಯುವ ನಾಯಕನಾಗಿ ನಂತರ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕನಾಗಿ ಕೊನೆಗೆ BJP ಯ ಅಭ್ಯರ್ಥಿಯಾಗುವವರೆಗಿನ ತನ್ನ ಜೀವನದ ಘಟನೆಗಳನ್ನು ನಮ್ಮೊಡನೆ ಹಂಚಿಕೊಂಡಿದ್ದಾರೆ.
ನಾನು ಬೆಳೆದದ್ದು ಕಣ್ಣೂರ್ ಜಿಲ್ಲೆಯ ಮಟ್ಟನ್ನೂರು ಎಂಬ ಗ್ರಾಮದ ರಾಜಕೀಯವಾಗಿ ಸಕ್ರಿಯವಾಗಿದ್ದ ಒಂದು ಕುಟುಂಬದಲ್ಲಿ.ನನ್ನ ತಂದೆ ಪ್ರಾಥಮಿಕ ಶಾಲಾ ಶಿಕ್ಷಕ ಹಾಗೂ ಒಬ್ಬ ಕಮ್ಯೂನಿಸ್ಟ್ ವಿಚಾರವಾದಿ. ದೊಡ್ಡ ಅಣ್ಣ ಕಮ್ಯುನಿಸ್ಟ್ ನ ವಿದ್ಯಾರ್ಥಿ ಘಟಕದ ಜಿಲ್ಲಾ ಸ್ಥರದ ಜವಾಬ್ದಾರಿ ಹೊಂದಿದ್ದ.ಮುಂದೆ ಅವನಂತೆ ನಾನೂ ಕೂಡ ಕಮ್ಯುನಿಸ್ಟ್ ನ ವಿದ್ಯಾರ್ಥಿ ಘಟಕದ ಸಕ್ರಿಯ ಕಾರ್ಯಕರ್ತನಾದೆ. ಆದರೆ ನಂತರ ನನ್ನ ಪದವಿ ಶಿಕ್ಷಣದ ಸಂದರ್ಭದಲ್ಲಿ ನಾನು SFI ಯಿಂದ ದೂರ ಬಂದೆ. ಕಾರಣ ಕಾಲೇಜಿನ ಪರಿಸರ (campus)ದಲ್ಲಿ ಪಕ್ಷ ವ್ಯವಹರಿಸುವ ರೀತಿ ನನಗೆ ಹಿಡಿಸುತ್ತಿರಲಿಲ್ಲ. ಪಕ್ಷದ ನಾಯಕರು ಕಾಲೇಜಿಗೆ ಬಂದು ಕಾಲೇಜಿನ ಚುನಾವಣೆಯಲ್ಲಿ ಹಿಂಸೆಯನ್ನು ಮಾಡುವಂತೆ ಮಾಡುತ್ತಿದ್ದರು.
1984
ಇದೇ ಸಂದರ್ಭದಲ್ಲಿ ನಾನು ನನ್ನ ಕಾಲೇಜಿನ ಕೆಲವು ಸ್ನೇಹಿತರ ಸಂಪರ್ಕದಿಂದ RSS ನ ಬಗ್ಗೆ ಆಸಕ್ತನಾದೆ. ನಾನು ಎಡಪಂಥೀಯ ಚಿಂತನೆಯನ್ನು ಬಿಟ್ಟು ಬಲಪಂಥೀಯನಾದೆ. ಜೊತೆಯಲ್ಲಿ ಒಮ್ಮೆ ನಮ್ಮ ಊರಿನ ಸಾರ್ವಜನಿಕ ಗ್ರಂಥಾಲಯದಲ್ಲಿ ಮಾತೃಭೂಮಿ ವಾರಪರ್ತಿಕೆಯಲ್ಲಿ ಅಕ್ಕಿತಮ್ ಅಚ್ಚುತನ್ ನಂಬೂದಿರಿ ಅವರ “ಭಾರತೀಯ ದರ್ಶನಂ” ಎನ್ನುವ ಅಂಕಣದ ಒಂದು ಲೇಖನ ನನ್ನ ಮೇಲೆ ಗಾಢ ಪರಿಣಾಮ ಬೀರಿತು. ನನ್ನ ಗ್ರಾಮದಲ್ಲಿ ಕಮ್ಯುನಿಸ್ಟ್ ಪ್ರಭಾವ ವ್ಯಾಪಕವಾಗಿದ್ದು ಸಂಘದ ಶಾಖೆಗಳು ಇಲ್ಲಿ ಇರಲಿಲ್ಲ. ಆದರೆ ಹತ್ತಿರದ ಗ್ರಾಮಗಳಲ್ಲಿ ಸಂಘದ ಶಾಖೆ ನಡೆಯುತ್ತಿದ್ದು ಸಕ್ರಿಯವಾಗಿದ್ದ ಅನೇಕ ಯುವ ಕಾರ್ಯಕರ್ತರು ಅಲ್ಲಿದ್ದರು. ಒಂದು ಬಾರಿ ಅವರು ನಮ್ಮಲ್ಲಿಗೆ ಬಂದು ನಮ್ಮೂರಿನ 10-15 ಜನರನ್ನು ಸೇರಿಸಿ ರಕ್ಷಾಬಂಧನವನ್ನು ಆಚರಿದ್ದರು, ನಿಧಾನವಾಗಿ ಸಂಘದ ಚಿಂತಕರ ಹಲವು ಪುಸ್ತಕಗಳನ್ನು ಓದಿದಾಗ ನಾನು ಹೋಗಬೇಕಾದ ನನ್ನ ಗುರಿಯ ಸ್ಪಷ್ಟ ಚಿತ್ರಣ ದೊರೆಯಿತು. ನನ್ನ ತಂದೆ ಕಮ್ಯುನಿಸ್ಟ್ ವಿಚಾರವಾದಿಯಾಗಿದ್ದರೂ ವಿರೋಧ ಪಕ್ಷಗಳ ಜೊತೆ ನಡೆಸುವ ಕ್ರೌರ್ಯದ ವಿಚಾರದಲ್ಲಿ ಪಕ್ಷದ ನಿಲುವನ್ನು ಒಪ್ಪುತ್ತಿರಲಿಲ್ಲ. ಆದ್ದರಿಂದ ಅವರು ರಾಜಕೀಯ ವಿಚಾರದಿಂದ ಹಿಂದೆ ಸರಿದರು.
ನಾನು ಸಂಘದ ವಿಚಾರವನ್ನು ಒಪ್ಪಿ ಸಂಘದ ಚಟುವಟಿಕೆಯಲ್ಲಿ ತೊಡಗಿದ್ದನ್ನು ಕಂಡು ಆರಂಭದಲ್ಲಿ ತಂದೆ ಗಾಬರಿಯಾದರೂ ನನ್ನನ್ನು ಯಾವತ್ತೂ ಬಹಿರಂಗವಾಗಿ ವಿರೋಧಿಸಲಿಲ್ಲ, ಆದರೆ ಅಣ್ಣಂದಿರು ವಿರೋಧಿಸುತ್ತಿದರು. ಆದರೆ ನಿಧಾನವಾಗಿ ನನ್ನಲ್ಲಿ ಆದ ಬದಲಾವಣೆ ನನ್ನ ತಂದೆ, ತಾಯಿ, ಅಣ್ಣ ಹಾಗೂ 4 ಸಹೋದರಿಯರಲ್ಲಿ ಸಹಜವಾದ ಬದಲಾವಣೆಯನ್ನು ನೋಡಿದೆ. ಇದೇ ಸಂದರ್ಭದಲ್ಲಿ ಈ ಹಿಂದೆ ನನ್ನ ಕಮ್ಯುನಿಸ್ಟ್ ಪಕ್ಷದಲ್ಲಿದ್ದ ಗೆಳೆಯರು ಆರ್ ಎಸ್ ಎಸ್ ಗೆ ಹೋಗದಂತೆ ನನಗೆ ಸಲಹೆ ನೀಡಿದರು. ಹಾಗೆಯೇ ಕಮ್ಯುನಿಸ್ಟ್ ನಾಯಕರು ತಂದೆಯ ಬಳಿ ಬಂದು ಮಗನನ್ನು ಸರಿದಾರಿಗೆ ತರುವಂತೆ ಹೇಳಿದರು. ಆದರೆ ಯಾವುದಕ್ಕೂ ಬಗ್ಗುವುದಿಲ್ಲ ಎಂದು ತಿಳಿದಾಗ ಸಲಹೆಗಳು ಬೆದರಿಕೆಯಾಗಿ ಬರತೊಡಗಿದವು.ಆದರೂ ನಾನು ಅದಕ್ಕೆ ಬೆದರದೆ 1984 ರಲ್ಲಿ ನಾನು ಕೊನೆಯ ವರ್ಷದ ಪದವಿ (Degree) ವಿದ್ಯಾರ್ಥಿಯಾಗಿದ್ದಾಗ ನಮ್ಮ ಗ್ರಾಮದಲ್ಲೇ ಆರ್ ಎಸ್ ಎಸ್ (RSS) ನ ಶಾಖೆಯನ್ನು ಆರಂಭಿಸಿದೆ. ಈ ಸಂದರ್ಭದಲ್ಲಿ ನಿರಂತರ ಬೆದರಿಕೆಗಳು ಬರುತ್ತಿದ್ದರೂ ಅದಕ್ಕೆ ಗಮನ ಕೊಡದೆ ಸಂಘದ ಕೆಲಸ ಮುಂದುವರಿಸಿದೆ.
1994
ನನ್ನ ಬಿ.ಎಡ್ ( B.Ed) 1992 ರಲ್ಲಿ ಮುಗಿಸಿದ ನಂತರ 1993 ರಲ್ಲಿ ನಮ್ಮ ಊರಿನ ಪ್ರಾಥಮಿಕ ಶಾಲೆಯಲ್ಲಿ ಅಧ್ಯಾಪಕನಾದೆ. ಇದೇ ಸಂದರ್ಭದಲ್ಲಿ ಯಾವುದೋ ಬಂದ್ ನ ಸಂದರ್ಭದಲ್ಲಿ ಕಮ್ಯುನಿಸ್ಟ್ ನವರು ನಾವು ನಿರ್ಮಿಸಿದ ಬಸ್ ನಿಲ್ದಾಣ ಹಾಗೂ ಅಲ್ಲಿದ್ದ ಸಿಮೆಂಟ್ ಬೆಂಚ್ ಗಳನ್ನು ಪುಡಿಮಾಡಿದರು.ಆ ಸಂದರ್ಭದಲ್ಲಿ ಕಮ್ಯುನಿಸ್ಟ್ ಹಾಗೂ ಆರ್ ಎಸ್ ಎಸ್ ನವರಿಗೆ ಪರಸ್ಪರ ನಡುವೆ ಸಣ್ಣ ಘರ್ಷಣೆ ನಡೆಯಿತು . ವಿಷಯ ತಿಳಿದ ನಾನು ಅಲ್ಲಿಗೆ ಹೋಗಿ ಕಮ್ಯುನಿಸ್ಟ್ ನಾಯಕರಲ್ಲಿ ನೀವು ಮಾಡುತ್ತಿರುವುದು ತಪ್ಪು ಎಂದಾಗ ನನ್ನ ಹಾಗೂ ನನ್ನ ಜೊತೆಯಲ್ಲಿದ್ದವರ ಮೇಲೆ ಹಲ್ಲೆ ನಡೆಸಿದರು. ನಾವು ಕೇವಲ ಸಣ್ಣ ಪುಟ್ಟ ಗಾಯಗಳೊಂದಿಗೆ ಆಸ್ಪತ್ರೆ ಸೇರಬೇಕಾಗಿ ಬಂತು.
1994 ರ ಜನವರಿಯ ವರೆಗೆ ಎಲ್ಲವೂ ಸಾಮಾನ್ಯವಾಗಿತ್ತು. ನನ್ನ ತಂಗಿಯ ಮದುವೆ ಫ಼ೆಬ್ರವರಿ 23 ಕ್ಕೆ ನಿಷ್ಚಿತವಾಗಿತ್ತು, ಆ ಬಗ್ಗೆ ನಾನು ನನ್ನ ಮಾವನನ್ನು ಕಾಣಲು ಜನವರಿ 25 ರಂದು ಹೋಗಿದ್ದೆ. ಭೇಟಿಯಾಗಿ ಬಸ್ ನಲ್ಲಿ ಹಿಂತಿರುಗಿ ಬಂದು “ಉರುವಚ್ಚಾಲ್ ರ್ “ಎನ್ನುವ ಬಸ್ ನಿಲ್ದಾಣದಲ್ಲಿ ಇಳಿದೆ. ಅಲ್ಲಿಂದ ಮನೆಗೆ ಹೋಗಲು ಸುಮಾರು ಒಂದುವರೆ ಕಿಲೋಮೀಟರ್ ದೂರವಿದೆ. ಆಗ ಸುಮಾರು ರಾತ್ರಿಯ 8.15 ರ ಸಮಯ.ಒಂದರ ಹಿಂದೆ ಇನ್ನೊಂದರಂತೆ ಎರಡು ಸ್ಫೋಟದ ಸದ್ದು ಕೇಳಿಸಿತು.ಸಣ್ಣ ಪೇಟೆಯಾಗಿದ್ದರಿಂದ ಅಲ್ಲಿದ್ದ ಜನರೆಲ್ಲ ಬೊಬ್ಬಿಡುತ್ತಾ ದಿಕ್ಕಾಪಾಲಾಗಿ ಓಡುವುದನ್ನು ನೋಡಿದೆ.ಕೆಲವೇ ಕ್ಷಣಗಳಲ್ಲಿ ಒಂದಷ್ಟು ಹಿಂದಿನಿಂದ ಕತ್ತಲಲ್ಲಿ ಬಂದು ನನ್ನನ್ನು ಎಳೆದುಕೊಂಡು ಹೋದರು. ನನ್ನನ್ನು ನೆಲಕ್ಕೆ ಒತ್ತಿ ಹಿಡಿದಿದ್ದರು. ನನಗೆ ಏನಾಗುತ್ತಿದೆ ಎಂಬುದೇ ಗೊತ್ತಾಗಲಿಲ್ಲ. ಆದರೆ ನನ್ನ ಕಾಲಿಗೆ ಏನೋ ಆದಂತೆ ಮನಸ್ಸಿಗೆ ಅನಿಸಿತು ಆದರೆ ಏನಾಯ್ತು ಎಂಬುದು ತಿಳಿಯಲಿಲ್ಲ.ಯಾವುದೇ ನೋವಿನ ಅನುಭವ ಇರಲಿಲ್ಲ. ನೆಲಕ್ಕೆ ಒತ್ತಿ ಹಿಡಿದಿದ್ದ ನನ್ನನ್ನು ಅವರು ತಮ್ಮ ಕೆಲಸ ಮುಗಿಸಿರಬೇಕು. “ “ಸಾಕು ಹೊರಡೋಣ” ಎಂದು ಹೇಳಿ ಹೊರಟು ಹೋದರು. ನಂತರ ನಾನು ನಿಧಾನವಾಗಿ ಎದ್ದಾಗಲೇ ವಿಷಯದ ಗಂಭೀರತೆ ಅರಿವಾದದ್ದು. ಅವರು ನನ್ನ ಎರಡೂ ಕಾಲನ್ನು ಮೊಣ ಕಾಲಿನ ಕೆಳಗಿನವರೆಗೆ ತುಂಡು ಮಾಡಿದ್ದರು, ಒಂದು ಕಾಲನ್ನಂತೂ ದೂರಕ್ಕೆ ಎಸೆದಿದ್ದರು.ಇಷ್ಟೆಲ್ಲ ಆದಾಗಲೂ ನನಗೆ ಯಾವುದೇ ನೋವಿನ ಅನುಭವ ಆಗಲಿಲ್ಲ.ಆದರೆ ಅತಿಯಾದ ರಕ್ತಸ್ರಾವ ಆಗ್ತಿತ್ತು.ನಾನು ಸಹಾಯಕ್ಕಾಗಿ ಜೋರಾಗಿ ಬೊಬ್ಬಿಟ್ಟೆ , ಆದರೆ ಸಹಾಯಕ್ಕೆ ಬರಲು ಅಲ್ಲಿ ಯಾರೂ ಇರಲಿಲ್ಲ. ಒಂದೆರಡು ವಾಹನಗಳು ಅಲ್ಲಿ ಬಂತು, ಅದರಲ್ಲೊಬ್ಬ ವಾಹನ ನಿಲ್ಲಿಸಿ ನನ್ನ ಸ್ಥಿತಿಯನ್ನು ನೋಡಿ ಬೊಬ್ಬಿಡುತ್ತಲೇ ವಾಹನವನ್ನೇರಿ ಹೋದ . ಸುಮಾರು ಹದಿನೈದು ನಿಮಿಷಗಳ ತನಕ ಅಲ್ಲೇ ಬಿದ್ದಿದ್ದೆ. ನಂತರ ಪೋಲೀಸ್ ಬಂದು ನನ್ನನ್ನು ಆಸ್ಪತ್ರೆಗೆ ಕರೆದೊಯ್ಯುವ ದಾರಿಯಲ್ಲಿ ಪ್ರಜ್ನೆ ತಪ್ಪಿತು. ನನ್ನನ್ನು ಕೋಝಿಕ್ಕೋಡಿನ ಮೆಡಿಕಲ್ ಕಾಲೇಜ್ ಗೆ ಕರೆದುಕೊಂಡು ಹೋಗಿ ಸುಮಾರು 6 ಗಂಟೆಗಳ ಶಸ್ತ್ರಕ್ರಿಯೆ ನಡೆಸಿದರು.
ಆ ಘಟನೆ ನನ್ನನ್ನು ಜರ್ಝರಿತಗೊಳಿಸಿತ್ತು, ಆದರೆ ನನಗೆ ಸಂಘದ ನನ್ನ ಸಹವರ್ತಿಗಳು ಹಾಗೂ ಸುದರ್ಶನ್ ಜೀ ಯಂತಹ ಹಿರಿಯರ ಧೈರ್ಯದ ಮಾತುಗಳು ನನ್ನಲ್ಲಿ ಬೇಗ ಚೇತರಿಕೆಯನ್ನು ನೀಡಿತು.ಆಗಿನ್ನೂ ನನ್ನ ವಯಸ್ಸು ಕೇವಲ 30 ವರ್ಷ ಆಗಿತ್ತು. ನನಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರು ನಾನು ಕೃತಕ ಕಾಲುಗಳ ಸಹಾಯದಿಂದ ಬೇಗನೇ ಓಡಾಡುವಂತೆ ಆಗಬಹುದು ಎಂದು ನನ್ನಲ್ಲಿ ಧೈರ್ಯ ತುಂಬಿದ್ದರು.ಮೊದಲ ಎರಡು ತಿಂಗಳ ಚಿಕಿತ್ಸೆ , ನಂತರದ ನಾಲ್ಕು ತಿಂಗಳು ಗಾಯ ವಾಸಿಯಾಗಲು ಹಿಡಿಯಿತು. ಆರು ತಿಂಗಳಾದ ಮೇಲೆ ಜೈಪುರದ ಕೃತಕ ಕಾಲುಗಳನ್ನು ಡಾಕ್ಟರ್ ಜೋಡಿಸಿದರು.ಅತಿಯಾದ ಭಾರದ ಕೃತಕ ಕಾಲನ್ನು ಜೋಡಿಸಿ ನಡೆಯಲು ಆರಂಭಿಸಿದಾಗ ಮೊದಲಿಗೆ ಸಹಿಸಲಾಧ್ಯ ನೋವಿನ ಜೊತೆಯಲ್ಲಿ ಗಾಯದಿಂದ ರಕ್ತ ಒಸರಿ ಬರುತ್ತಿತ್ತು. ನನಗಾಗುವ ನೋವುಗಳ ಬಗ್ಗೆ ನನಗೇ ಯಾವುದೇ ಚಿಂತೆ ಇರಲಿಲ್ಲ, ನಾನು ಕೇವಲ ನಡೆಯಬೇಕೆಂದಷ್ಟೆ ಯೋಚನೆ ಮಾಡಿದ್ದೆ,ಆರಂಭದಲ್ಲಿ ನನ್ನ ಈ ಸ್ಥಿತಿಗೆ ಕಾರಣರಾದವರ ಬಗ್ಗೆ ಆಕ್ರೋಶ ಇರುತ್ತಿತ್ತು. ಆದರೆ ಕ್ರಮೇಣ ಅವರ ಕೃತ್ಯಕ್ಕೆ ಅವರಿಗೆ ಆ ರೀತಿ ಮಾಡುವಂತೆ ಹೇಳಿದ ನಾಯಕರು ಕಾರಣ ಎಂಬ ಕಾರಣಕ್ಕಾಗಿ ಕ್ರಮೇಣ ಅವರ ಮೇಲೆ ಸಿಟ್ಟುಗೊಳ್ಳುವುದನ್ನು ಬಿಟ್ಟೆ. ನನ್ನ ಮೇಲೆ ಆದ ಆಕ್ರಮಣದ ಪ್ರತೀಕಾರವಾಗಿ ಸುಧೀಶ್ ಅನ್ನುವ SFI ಕಾರ್ಯಕರ್ತನ ಕೊಲೆಯಾಯಿತು. ಆದರೆ ನಾನು ಇಂತಹ ದ್ವೇಷದ ಕೊಲೆಯನ್ನು ಒಪ್ಪುವುದಿಲ್ಲ. ಆ ನಂತರ ಈ ಘಟನೆಯ ಬಗ್ಗೆ ತಿಳಿದಾಗ ಇದು ಒಂದು ದೌರ್ಭಾಗ್ಯಕರ ಘಟನೆ ಎಂಬುದಾಗಿ ನಾನು ಹೇಳಿದೆ.
1995
ಕೃತಕ ಕಾಲಿನಲ್ಲಿ ನಡೆದಾಡಲು ಆರಂಭಿಸಿದ ಮೇಲೆ ಜನ್ಮಭೂಮಿ ಪತ್ರಿಕೆಯಲ್ಲಿ ಸುಮಾರು ಎರಡೂವರೆ ವರ್ಷಗಳಷ್ಟು ಕಾಲ ಕೆಲಸ ಮಾಡಿ ನಂತರ 1999 ರಲ್ಲಿ ತ್ರಿಶ್ಶೂರಿನ ಶಾಲೆಯಲ್ಲಿ ಅಧ್ಯಾಪಕನಾಗಿ ಸೇರಿದೆ.1995 ರಲ್ಲಿ ನನ್ನ B.Ed ನಲ್ಲಿ ನನ್ನ ಜೊತೆ ಓದಿದ್ದೆ ವನಿತ ಎಂಬವಳ ಜೊತೆ ನನ್ನ ವಿವಾಹ ನಡೆಯಿತು. ನಾವಿಬ್ಬರು ವಿವಾಹವಾಗುವುದೆಂದು ನನ್ನ ಜೀವನದ ದುರ್ಘಟನೆ ನಡೆಯುವ ಮೋದಲೇ ನಿಶ್ಚಯಿಸಿದ್ದೆವು.ಅವಳಲ್ಲಿ ನಿರ್ಧಾರವನ್ನು ಬದಲಾಯಿಸಲು ಹೇಳಿದರೂ ಅವಳು ಅದಕ್ಕೆ ಒಪ್ಪಲಿಲ್ಲ. ಇಂದು ನಮ್ಮ ಮಗಳು ತ್ರಿಶ್ಶೂರಿನಲ್ಲಿ ಇಂಜಿನಿಯರಿಂಗ್ ಓದುತ್ತಿದ್ದಾಳೆ.
2016
ನಾನು ರಾಜ್ಯ ಅಧ್ಯಾಪಕ ಸಂಘದ ಉಪಾಧ್ಯಕ್ಷನಾಗಿ ಹಾಗೂ ಅಧ್ಯಾಪಕರಿಗಾಗಿ ನಡೆಸುವ ಪತ್ರಿಕೆಯ ಸಂಪಾದಕನಾಗಿ ಕಳೆದ ಎರಡು ವರ್ಷಗಳಿಂದ ಕೆಲಸ ಮಾಡುತ್ತಿರುವ ಈ ಸಂದರ್ಭದಲ್ಲಿ BJPಯು ನನ್ನಲ್ಲಿ ಚುನಾವಣೆಗೆ ಸ್ಪರ್ಧಿಸಬೇಕೆಂದು ಕೇಳಿಕೊಂಡರು.ಇದು ನನಗೆ ತುಂಬಾ ಆಶ್ಚರ್ಯ ಉಂಟು ಮಾಡಿತಾದರೂ ಕಣ್ಣೂರಿನಲ್ಲಿ ನಡೆಯುವ ರಾಜಕೀಯ ಅಸಹಿಷ್ಣುತೆಯ ಪ್ರತೀಕವಾಗಿ ನನ್ನನ್ನು ಅಭ್ಯರ್ಥಿಯಾಗಿಸಲು ಪಕ್ಷ ಈ ನಿರ್ಧಾರ ಕೈಗೊಂಡಿರಬಹುದು ಎಂದುಕೊಂಡೆ. ಆದರೂ ನನ್ನ ಶಾರೀರಿಕ ಕ್ಷಮತೆ ಇತರರಿಗೆ ಹೋಲಿಸಿದಲ್ಲಿ ಕಡಿಮೆ.ಹಾಗಾಗಿ ಯೋಚನೆ ಮಾಡಲು ಸಮಯ ಕೇಳಿದೆ.ಆದರೆ ಕಾರ್ಯಕರ್ತರ ಉತ್ಸಾಹಕ್ಕೆ ತಲೆ ಬಾಗಬೇಕಾಯಿತು.ನಾನೀಗ ಪ್ರಚಾರದಲ್ಲಿ ಓಡಾಡುತ್ತಿದ್ದೇನೆ, ಆದರೆ ಸಾಮಾನ್ಯ ವ್ಯಕ್ತಿಗಿಂತ ಹೆಚ್ಚಿನ ವಿಶ್ರಾಂತಿಯನ್ನು ನನ್ನ ದೇಹಕ್ಕೆ ನೀಡಬೇಕಾಗುತ್ತದೆ. ಪ್ರಚಾರದಲ್ಲಿ ನಾನು ಜನರಲ್ಲಿ ಅವರಗಿರುವ ವಾಕ್ ಸ್ವಾತಂತ್ರ್ಯದ ಕುರಿತು ಅರಿವು ನೀಡುವ ಕೆಲಸ ಮಾಡುತ್ತಿದ್ದೇನೆ ಜೊತೆಯಲ್ಲಿ ಕೇರಳದ ಕಮ್ಯುನಿಸ್ಟ್ ನ್ ಪ್ರದೇಶಗಳಲ್ಲಿ ವಾಕ್ ಸ್ವಾತಂತ್ರ್ಯ ಇಲ್ಲದಿರುವ ಕುರಿತು ತಿಳಿಸುತ್ತೇನೆ.ಹಾಗೂ ಅಂತಹ ಅಸಹಿಷ್ಣುತೆಯ ಒಬ್ಬ ಬಲಿಪಶು ನಾನೆಂಬುದನ್ನೂ ಅವರಿಗೆ ತಿಳಿಸುವ ಪ್ರಯತ್ನ ಮಾಡುತ್ತಿದ್ದೇನೆ.
ಸಮಸ್ಯೆಯ ಆರಂಭ ಕಮ್ಯುನಿಸ್ಟರು ಸಂಘದ ಶಾಖೆಗಳನ್ನು ತನ್ನ ಪ್ರಭಾವ ಇರುವ ಸ್ಥಳಗಳಲ್ಲಿ ಮಾಡುವುದನ್ನು ತಡೆದಾಗ ಆರಂಭವಾಗುತ್ತದೆ.ಯಾಕೆಂದರೆ ಅವರು ಆ ಪ್ರದೇಶವನ್ನು ತಮ್ಮ ಭದ್ರಕೋಟೆ ಎಂಬಂತೆ ಭಾವಿಸುತ್ತಾರೆ. ಅಲ್ಲಿ ಆರ್ ಎಸ್ ಎಸ್ ತನ್ನ ಶಾಖೆಗಳನ್ನು ಆರಂಭಿಸಿದಾಗ ಅವರು ನಮ್ಮ ಮೇಲೆ ಆಕ್ರಮಣ ಮಾಡಿತ್ತಾರೆ. ವಿರೋಧಿಗಳ ಮೇಲಿನ ಆಕ್ರಮಣ ಮಾರ್ಕ್ಸಿಟ್ ಪಾರ್ಟಿಯ ಕಾರ್ಯಶೈಲಿಯ ಭಾಗವಾಗಿದೆ. ಅವರ ವಾದ ಇಷ್ಟೇ, ಆರ್ ಎಸ್ ಎಸ್ ಇಲ್ಲದಿದ್ದರೆ ಯಾವುದೇ ಅಹಿಂಸೆ ನಡೆಯುವುದಿಲ್ಲ ಎಂಬುದಾಗಿ. ಇದು ಹೇಗೆ ತಾನೆ ಸಾಧ್ಯ ? ಕಮ್ಯುನಿಸ್ಟರು ಕೇವಲ ಆರ್ ಎಸ್ ಎಸ್ ನವರನ್ನು ಮಾತ್ರವಲ್ಲ ಯಾರೊಬ್ಬ ಪಕ್ಷವನ್ನು ಬಿಡುತ್ತಾನೋ ಅವರೆಲ್ಲರಿಗೂ ಇದೇ ಗತಿ ಕಾಣಿಸುತ್ತಾನೆ. ಯಾವುದೇ ಒಂದು ಹೊಸ ಗ್ರಾಮದಲ್ಲಿ ಶಾಖೆ ಆರಂಭವಾದ ತಕ್ಷಣ ಕಮ್ಯುನಿಸ್ಟರ ಆಕ್ರಮಣ ನಮ್ಮ ಮೇಲಾಗುತ್ತದೆ, ಅದಕ್ಕೆ ಪ್ರತಿಕ್ರಿಯೆಯೂ ನಮ್ಮ ಕಡೆಯಿಂದ ಆಗುತ್ತದೆ.. ಆದರೆ ಈ ಕೊಲೆ ರಾಜಕೀಯ ಖಂಡಿತ ಮುಂದುವರಿಯಬಾರದು. ಎಲ್ಲರೂ ಜೊತೆಯಾಗಿ ಬದುಕಬೇಕು ಹೊರತು ಒಬ್ಬರನ್ನೊಬ್ಬರು ಕೊಂದು ಬದುಕುವುದು ನಮಗೆ ಬೇಕಿಲ್ಲ.ಯಾವುದೇ ನಾಗರಿಕ ಸಮಾಜದಲ್ಲಿ ರಾಜಕೀಯ ಪ್ರೇರಿತ ಹಿಂಸೆ ಯಾವತ್ತೂ ಇರಬಾರದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.