ಬಂಟ್ವಾಳ : ತಾಲೂಕು ಕಚೇರಿ ಸ್ಥಳಾಂತರಗೊಳ್ಳುವ ಸಂದರ್ಭದಲ್ಲಿ ಯಾವುದೇ ಕಡತ, ದಾಖಲೆಗಳು ಕಾಣೆಯಾದರೆ ಸಿಬ್ಬಂದಿಗಳನ್ನೇ ಹೊಣೆಗಾರರನ್ನಾಗಿಸಲಾಗುವುದೆಂದು ದ.ಕ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಎಚ್ಚರಿಕೆ ನೀಡಿದ್ದಾರೆ. ಪ್ರಸ್ತುತ ತಾಲೂಕು ಕಚೇರಿ ಬಳಿ ಶೀಘ್ರದಲ್ಲಿ ಮಿನಿ ವಿಧಾನ ಸೌಧ ಕಾಮಗಾರಿ ಆರಂಭಗೊಳ್ಳುವ ಹಿನ್ನೆಲೆಯಲ್ಲಿ ತಾಲೂಕು ಕಚೇರಿಯನ್ನು ನೂತನ ತಾತ್ಕಾಲಿಕ ಕಟ್ಟಡಕ್ಕೆ ಸ್ಥಳಾಂತರಗೊಂಡ ದೆಸೆಯಲ್ಲಿ ಇಲ್ಲಿನ ಕಾರ್ಯವೈಖರಿಯನ್ನು ಶನಿವಾರ ಪರಿಶೀಲಿಸಿ ಬಳಿಕ ಮಾತನಾಡಿದ ಅವರು, ಸಾರ್ವಜನಿಕರ ಅರ್ಜಿ, ದಾಖಲೆ ಪತ್ರಗಳು ಅಮೂಲ್ಯವಾಗಿದ್ದು, ಅವುಗಳನ್ನು ಜೋಪಾನವಾಗಿ ಸಂರಕ್ಷಿಸುವಂತೆ ಸೂಚಿಸಿದರು.
ಸಾರ್ವಜನಿಕ ರಂಗಮಂದಿರದಲ್ಲಿ ಸಾರ್ವಜನಿಕ ಅರ್ಜಿ ಸ್ವೀಕಾರ ಕೇಂದ್ರ, ಆರ್ಟಿಸಿ ವಿತರಣಾ ಕೇಂದ್ರಗಳನ್ನು ತೆರೆಯಲಾಗಿದ್ದು, ಈಗಾಗಲೇ ಕಾರ್ಯ ನಿರ್ವಹಿಸುತ್ತಿದೆ. ಉಪನೋಂದಣಿ ಕಚೇರಿ ವಠಾರದಲ್ಲಿ ನಿರ್ಮಿಸಲಾದ ತಾತ್ಕಾಲಿಕ ಕಟ್ಟಡದಲ್ಲಿ ತಹಸೀಲ್ದಾರ್ ಕಚೇರಿ ಆರಂಭಿಸಲಾಗಿದೆ. ಹಳೆಯ ತಾಲೂಕು ಪಂಚಾಯಿತಿ ಕಟ್ಟಡದಲ್ಲಿ ಚುನಾವಣೆ, ಜಲನಯನ ಕಚೇರಿಯಲ್ಲಿ ಆಹಾರ ವಿಭಾಗ ಸ್ಥಳಾಂತರಿಸಲಾಗಿದೆ ಎಂದವರು ಸುದ್ದಿಗಾರರಿಗೆ ಈ ಸಂದರ್ಭದಲ್ಲಿ ತಿಳಿಸಿದರು.
ಆಡಳಿತದ ಕಾರ್ಯವೈಖರಿಯ ಬಗ್ಗೆ ತಹಸೀಲ್ದಾರ್, ಉಪತಹಸೀಲ್ದಾರ್, ಕಂದಾಯ ನಿರೀಕ್ಷಕರೊಂದಿಗೆ ಚರ್ಚಿಸಿದ ಅವರು, ಕಚೇರಿ ಸ್ಥಳಾಂತರದಿಂದ ಸಾರ್ವಜನಿಕರಿಗೆ ಯಾವುದೇ ಕೊರತೆ ಉಂಟಾಗದಂತೆ ನಿಗಾ ವಹಿಸಲು ಸೂಚಿಸಿದರು. ತಹಸೀಲ್ದಾರ್ ಪುರಂದರ ಹೆಗ್ಡೆ, ಉಪ ತಹಸೀಲ್ದಾರ್ಗಳಾದ ಭಾಸ್ಕರ್ ರಾವ್, ಜೆ.ಪಿ.ರೋಡ್ರಿಗಸ್, ಪರಮೇಶ್ವರ ಮೊಯಿಲಿ, ಪರಮೇಶ್ವರ ನಾಯಕ್, ರೆವಿನ್ಯೂ ಇನ್ಸ್ಪೆಕ್ಟರ್ ನಾರಾಯಣ ಪೂಜಾರಿ ಮತ್ತಿತರು ಈ ಸಂದರ್ಭ ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.