ಬೆಳ್ತಂಗಡಿ : ಜನರ ತೀವ್ರ ವಿರೋಧದ ನಡುವೆಯೇ ಮುಂಡಾಜೆ ಗ್ರಾಮಪಂಚಾಯತಿನವರು ಕೂಳೂರು ಕುರುಡ್ಯ ಪ್ರದೇಶದಲ್ಲಿ ತ್ಯಾಜ್ಯ ಘಟಕದ ನಿರ್ಮಾಣ ಕಾರ್ಯಕ್ಕೆ ಮುಂದಾಗುತ್ತಿರುವುದನ್ನು ವಿರೋಧಿಸಿ ಸ್ಥಳೀಯ ನಾಗರಿಕರು ಪ್ರತಿಬಟನೆ ನಡೆಸಲು ಮುಂದಾದ ಹಿನ್ನಲೆಯಲ್ಲಿ ಉಜಿರೆ ಜಿಪಂ ಸದಸ್ಯೆ ನಮಿತ ಅವರು ಸ್ಥಳಕ್ಕೆ ಭೇಟಿ ನೀಡಿ ಸಾರ್ವಜನಿಕರ ಸಮಸ್ಯೆಗಳನ್ನು ಪರಿಶೀಲಿಸಿದರು. ಸ್ಥಳೀಯ ನಾಗರಿಕರು ತಮ್ಮ ಸಮಸ್ಯೆಯ ಬಗ್ಗೆ ಮನವಿ ನೀಡಿದರು.
ತ್ಯಾಜ್ಯ ಘಟಕಕ್ಕೆ ಗುರುತಿಸಲಾಗಿರುವ ಕುರುಡ್ಯ ಕೂಳೂರು ಪ್ರದೇಶದಲ್ಲಿ ಸುಮಾರು 100ಕ್ಕೂ ಹೆಚ್ಚು ಮನೆಗಳಿದ್ದು ಮುಂಡಾಜೆ ಗ್ರಾಮ ಪಂಚಾಯತ್ಯವರು ವರ್ಷದಿಂದೀಚೆಗೆ ರೂ. 20 ಲಕ್ಷ ವೆಚ್ಚದಲ್ಲಿ ತ್ಯಾಜ್ಯ ಘಟಕವನ್ನು ನಿರ್ಮಿಸಲು ಪ್ರಯತ್ನಿಸುತ್ತಿದೆ. ಇಲ್ಲಿ 2 ಬಸ್ ತಂಗುದಾಣಗಳಿವೆ. ಇಲ್ಲಿ ಘಟಕ ಸ್ಥಾಪಿಸುವುದು ಸರಿಯಲ್ಲವೆಂದು ವಾರ್ಡ್ ಸಭೆಯಲ್ಲೂ, ಪಂಚಾಯತ್ ಮನವಿ ಸಲ್ಲಿಸಿದ್ದರು. ಆದರೆ ಗ್ರಾಮ ಪಂಚಾಯತ್ ಆಡಳಿತ ಇದು ಯಾವುದನ್ನೂ ಗಣನೆಗೆ ತೆಗೆದುಕೊಳ್ಳದೆ ಇಲ್ಲಿಯೇ ತ್ಯಾಜ್ಯ ಘಟಕ ನಿರ್ಮಿಸಲು ಮುಂದಾದಾಗ ಜನರು ಪ್ರತಿಭಟನೆಗೆ ಮುಂದಾಗಿದ್ದರು. ಈ ಬಗ್ಗೆ ಮುಂದಿನ ಎ. 26 ರಂದು ಕುರುಡ್ಯದಿಂದ ಕಾಲ್ನಡಿಗೆ ಜಾಥಾ ಹಾಗೂ ಗ್ರಾ. ಪಂ ಎದುರು ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿತ್ತು. ಈ ಬಗ್ಗೆ ಮನವಿ ಬಂದ ಹಿನ್ನಲೆಯಲ್ಲಿ ಜಿ.ಪಂ ಸದಸ್ಯರು ಸೋಮವಾರ ಸ್ಥಳಕ್ಕೆ ಭೇಟಿ ನೀಡಿದರು.
ಈ ಸಂದರ್ಭ ಸಾರ್ವಜನಿಕರು ಗ್ರಾಮ ಪಂಚಾಯತ್ ಆಡಳಿತದ ವಿರುದ್ದ ತೀವ್ರ ಅಸಾಮಾಧಾನ ವ್ಯಕ್ತಪಡಿಸಿದರು. ಸ್ಥಳದಲ್ಲಿ ಸೇರಿದ್ದ ಮಹಿಳೆಯರು ತಮಗೆ ನೆಮ್ಮದಿಯಿಂದ ಬದುಕಲು ಇಲ್ಲಿ ಅವಕಾಶ ನೀಡಿ. ಜನವಸತಿ ಇಲ್ಲದ ಪ್ರದೇಶದಲ್ಲಿ ಘಟಕ ನಿರ್ಮಾಣವಾಗಲಿ ಎಂದು ಒತ್ತಾಯಿಸಿದರು. ಇಲ್ಲಿ ತ್ಯಾಜ್ಯ ಘಟಕ ನಿರ್ಮಿಸಲು ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಎಂದು ಸ್ಥಳೀಯ ನಾಗರಿಕರು ಪಂಚಾಯತು ಆಡಳಿತವನ್ನು ಎಚ್ಚರಿಸಿದರು. ಜಿ. ಪಂ. ಸದಸ್ಯರು ಕುರುಡ್ಯ ಸ್ಥಳಕ್ಕೆ ಭೇಟಿ ನೀಡಿದರೂ ಗ್ರಾಪಂ ಆಡಳಿತ ಹಾಗೂ ಅಭಿವೃದ್ದಿ ಅಧಿಕಾರಿಯವರು ಇತ್ತ ಬಾರದಿರುವುದು ಜನರ ಆಕ್ರೋಶಕ್ಕೆ ಕಾರಣವಾಯಿತು.
ಈ ಬಗ್ಗೆ ಜನರ ಸಮಸ್ಯೆಗಳನ್ನು ಆಲಿಸಿದ ಜಿ.ಪಂ ಸದಸ್ಯೆ ನಮಿತ ಅವರು, ತ್ಯಾಜ್ಯ ಘಟಕದ ಬಗ್ಗೆ ಪರಿಶೀಲಿಸಿ ಈ ಬಗ್ಗೆ ಶಾಸಕರ ಗಮನಕ್ಕೆ ತರಲಾಗುವುದು ಹಾಗೂ ಅವರ ನೇತೃತ್ವದಲ್ಲಿ ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಸತ್ಯನಾರಾಯಣ ಹೊಳ್ಳ, ಸ್ಥಳೀಯ ಗ್ರಾ. ಪಂ ಸದಸ್ಯ ಅಬ್ದುಲ್ ಅಜೀಜ್, ಕೆ. ಮಹಮ್ಮದ್, ಸುಂದರ ನಾಯ್ಕ, ಹೊನ್ನಪ್ಪ ನಾಯ್ಕ, ಬಾಲಕೃಷ್ಣ ಶೆಟ್ಟಿ, ಮಾಧವ ಭಟ್ ಕೆ., ವಿಠಲ ಸುವರ್ಣ, ಬಶೀರ್ ಅಹಮ್ಮದ್, ವಿಜಯಕುಮಾರ್ ರೈ, ಸುಧಿಂದ್ರ, ಕುಸುಮಾವತಿ ಮತ್ತಿತರರು ಇದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.