ಬೆಳ್ತಂಗಡಿ : ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯದಲ್ಲಿ ನಡೆದ ‘ನವಮಾಧ್ಯಮ’ ಕುರಿತಾದ ಎರಡು ದಿನಗಳ ರಾಷ್ಟ್ರಮಟ್ಟದ ಸೆಮಿನಾರ್ ಹಾಗೂ ರಾಜ್ಯಮಟ್ಟದ ‘ರೈನ್ಬೋ’ ಮಾಧ್ಯಮೋತ್ಸವದಲ್ಲಿ ಉಜಿರೆ ಎಸ್.ಡಿ.ಎಂ ಕಾಲೇಜಿನ ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳು 5 ನೇ ಬಾರಿಗೆ ಸಮಗ್ರ ಪ್ರಶಸ್ತಿ ಪಡೆದು ಚಾಂಪಿಯನ್ಗಳಾಗಿ ಹೊರಹೊಮ್ಮಿದ್ದಾರೆ.
ಕರ್ನಾಟಕ ವಿಶ್ವವಿದ್ಯಾನಿಲಯದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ಹಾಗೂ ವಿದ್ಯುನ್ಮಾನ ವಿಭಾಗಗಳ ವತಿಯಿಂದ ಜರುಗಿದ ಈ ರೈನ್ಬೋ ಮಾಧ್ಯಮೋತ್ಸವದಲ್ಲಿ ರಾಜ್ಯದ ವಿವಿಧ ಭಾಗಗಳ ಒಟ್ಟು 16 ಕಾಲೇಜುಗಳು 160 ಸ್ಪರ್ಧಿಗಳು ಭಾಗವಹಿಸಿದ್ದರು. ಒಟ್ಟು 10 ಸ್ಪರ್ಧೆಗಳ 8 ವಿಭಾಗಗಳಲ್ಲಿ ಪ್ರಶಸ್ತಿ ಪಡೆದ ಉಜಿರೆ ಎಸ್.ಡಿ.ಎಂ ಕಾಲೇಜಿನ ಸ್ನಾತಕೋತ್ತರ ಪತ್ರಿಕೋದ್ಯಮ ವಿದ್ಯಾರ್ಥಿಗಳ ತಂಡ ಸಮಗ್ರ ಪ್ರಶಸ್ತಿಯೊಂದಿಗೆ ಸಂಪೂರ್ಣ ಉತ್ಸವದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಗೆ ನೀಡುವ 2 ವಿಶೇಷ ಪ್ರಶಸ್ತಿಗಳನ್ನೂ ಗೆಲ್ಲುವುದರ ಮೂಲಕ ಇತರ ತಂಡಗಳಿಂದ ಉತ್ತಮ ಗೆಲುವಿನ ಅಂತರ ಕಾಯ್ದುಕೊಂಡಿದೆ.
6 ನೇ ವರ್ಷದ ಸಂಭ್ರಮದಲ್ಲಿರುವ ರೈನ್ಬೋ ಮಾಧ್ಯಮ ಉತ್ಸವದಲ್ಲಿ ‘ರೇಡಿಯೋ ಜಾಕಿ’ ಸ್ಪರ್ಧೆಯಲ್ಲಿ ಚೇತನ್ ಸೊಲಗಿ, ಪೂಜಾ ಪಕ್ಕಳ, ವಿನಯ್ ಕಾಶಪ್ಪನವರ್ ಹಾಗೂ ಶಶಾಂಕ್ ಬಜೆ ತಂಡ ಪ್ರಥಮ, ‘ಮ್ಯಾಡ್ ಆಡ್’ ವಿಭಾಗದಲ್ಲಿ ರಾಜೇಶ್ ನಾಯ್ಕ್, ಪೂಜಾ ಪಕ್ಕಳ, ಚೇತನ್ ಸೊಲಗಿ ಮತ್ತು ವಿನಯ್ ಕಾಶಪ್ಪನವರ್ ತಂಡ ಪ್ರಥಮ, ವರದಿಗಾರಿಕೆಯಲ್ಲಿ ರಕ್ಷಿತಾ ಕರ್ಕೇರಾ ಪ್ರಥಮ, ಛಾಯಾಚಿತ್ರಗ್ರಹಣದಲ್ಲಿ ವಿಲ್ಸನ್ ದೀಪಕ್ ಪಿಂಟೋ ದ್ವಿತೀಯ, ರೇಡಿಯೋ ನ್ಯೂಸ್ ವಾಚನದಲ್ಲಿ ಪವಿತ್ರ ದ್ವಿತೀಯ, ಸೆಲೆಬ್ರಿಟಿ ಇಂಟರ್ವ್ಯೂನಲ್ಲಿ ಚೇತನ್ ಸೊಲಗಿ ಮತ್ತು ಪವಿತ್ರ ತಂಡ ದ್ವಿತೀಯ, ಪೀಸ್ ಟು ಕ್ಯಾಮೆರಾ ವಿಭಾಗದಲ್ಲಿ ಪವಿತ್ರ ದ್ವಿತೀಯ ಹಾಗೂ ನ್ಯೂಸ್ ಕಾಸ್ಟಿಂಗ್ನಲ್ಲಿ ಪವಿತ್ರ, ದೊಡ್ಡನಗೌಡ, ಪೂಜಾ ಪಕ್ಕಳ ಹಾಗೂ ಶಶಾಂಕ್ ಬಜೆ ತೃತೀಯ ಸ್ಥಾನ ಪಡೆಯುವುದರ ಜೊತೆಗೆ ಅತ್ಯುತ್ತಮ ಪ್ರದರ್ಶನ ನೀಡಿದ ವಿದ್ಯಾರ್ಥಿಗೆ ನೀಡುವ ವಿಶೇಷ ಪ್ರಶಸ್ತಿಯನ್ನು ಚೇತನ್ ಸೊಲಗಿ ಹಾಗೂ ವಿದ್ಯಾರ್ಥಿನಿಗೆ ನೀಡುವ ವಿಶೇಷ ಪ್ರಶಸ್ತಿಯನ್ನು ಪವಿತ್ರ ಪಡೆಯುವುದರ ಮೂಲಕ ಉಜಿರೆ ಎಸ್.ಡಿ.ಎಂ ಕಾಲೇಜಿನ ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗಕ್ಕೆ 5 ನೇ ಬಾರಿಗೆ ಸಮಗ್ರ ಪ್ರಶಸ್ತಿಯೊಂದಿಗೆ ಚಾಂಪಿಯನ್ ಪಟ್ಟ ತಂದುಕೊಟ್ಟಿದ್ದಾರೆ.
ಈ ವಿದ್ಯಾರ್ಥಿಗಳನ್ನು ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕರಾದ ಸುನಿಲ್ ಹೆಗ್ಡೆ, ಶುತಿ ಜೈನ್ ಮತ್ತು ಪರಶುರಾಮ ಕಾಮತ್ ತರಬೇತುಗೊಳಿಸಿದ್ದಾರೆ. ವಿಜೇತ ವಿದ್ಯಾರ್ಥಿಗಳಿಗೆ ಪತ್ರಕರ್ತ ಕೆ. ವಿ. ಎನ್. ಸ್ವಾಮಿ ಮತ್ತು ಕರ್ನಾಟಕ ವಿಶ್ವವಿದ್ಯಾನಿಲಯದ ಕುಲಸಚಿವ ಪ್ರೊ. ಎಂ. ಎನ್ ಜೋಶಿ ಪ್ರಶಸ್ತಿ ಪ್ರದಾನ ಮಾಡಿದರು. ವಿಭಾಗದ ಪ್ರಾಧ್ಯಾಪಕರಾದ ಡಾ. ಸಂಜೀವಕುಮಾರ್ ಮಾಲಗತ್ತಿ, ಡಾ.ಚಂದೂನವರ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.