ಬೆಳ್ತಂಗಡಿ : ಎತ್ತಿನಹೊಳೆ ಎಂಬ ನೇತ್ರಾವತಿ ನದಿ ತಿರುವುಯೋಜನೆಯಿಂದ ಜನಪದಕ್ಕೆ ನೀರಿಲ್ಲದಂತೆ ಮಾಡುವುದು ಒಂದೆಡೆ ನಡೆಯುತ್ತಿರುವಂತೆಯೇ ನೀರಿನ ಉತ್ತಮ ಆಶ್ರಯವಿರುವ ಕೆರೆಗಳನ್ನೆ ಆಕ್ರಮಿಸಿ ಜಲಮೂಲವನ್ನು ನಿರ್ನಾಮ ಮಾಡುವುದು ಅಲ್ಲಲ್ಲಿ ನಡೆಯುತ್ತಿದೆ.
ಕೆರೆಯನ್ನು ಗುಳುಂ ಮಾಡಿರುವ ತಾಜಾ ಉದಾಹರಣೆ ವೇಣೂರಿನ ಹೃದಯಭಾಗದಲ್ಲಿ ನಡೆದಿದೆ. ಶತಶತಮಾನಗಳಿಂದ, ಅಪೂರ್ವ ಇತಿಹಾಸವಿರುವ ಸುಮಾರು 8.5 ಎಕರೆ ವಿಸ್ತಾರವಾಗಿರುವ ಸಮೃದ್ಧ ನೀರಿರುವ ಕೆರೆಯೊಂದು ಕಳೆದ ಕೆಲ ವರ್ಷಗಳಿಂದ ಕಿರಿದಾಗುತ್ತಾ ಬಂದಿದ್ದು ಸರಿಸುಮಾರುಅದು 3.5 ಎಕರೆ ವ್ಯಾಪ್ತಿಗೆ ಸೀಮಿತವಾಗಿದೆ.ಕಾರಣವಿಷ್ಟೇ ಸ್ಥಳೀಯ ಪ್ರತಿಷ್ಠಿತ ವ್ಯಕ್ತಿಯೊಬ್ಬರು ಕರೆಯನ್ನಾಕ್ರಮಿಸಿ ತನ್ನತೋಟವನ್ನು ವಿಸ್ತಾರಮಾಡಿಕೊಂಡು ಹಾಯಾಗಿದ್ದಾರೆ. ಈ ಬಗ್ಗೆ ಕಳೆದ 15 ವರ್ಷಗಳಿಂದ ತಾ.ಪಂ., ಜಿ.ಪಂ. ಸಭೆಗಳಲ್ಲಿ ಪ್ರಸ್ತಾಪಆಗುತ್ತಿದ್ದು ಜಿಲ್ಲಾಡಳಿತವಾಗಲಿ, ತಾಲೂಕಾಡಳಿತವಾಗಲಿ ಗಮನಹರಿಸದೆ ಮುಗುಮ್ಮಾಗಿಕೂತಿದೆ. ಕೆರೆಯನ್ನು ಆಕ್ರಮಿಸಿದವರು ಸಮರ್ಥ ರಾಜಕೀಯ ಪ್ರಭಾವ ಹೊಂದಿರುವುದರಿಂದ ಅಧಿಕಾರಿಗಳು ಕೈ ಕಟ್ಟಿ ಕುಳಿತುಕೊಳ್ಳುವಂತಾಗಿರುವುದು ಸೂರ್ಯನಷ್ಟೇ ಸತ್ಯ.
ಗುರುವಾಯನಕರೆಯಿಂದ ವೇಣೂರು ಮುಖ್ಯರಸ್ತೆಯಲ್ಲಿ ಹೋಗುವಾಗ ವೇಣೂರು ಸನಿಹ ಇರುವ ಮೊದಲ ಪೆಟ್ರೋಲ್ ಪಂಪ್ನ ಮುಂದುಗಡೆ ಇರುವ ರಸ್ತೆಯೊಂದರಲಿ 100 ಮೀ ದೂರಹೋದರೆ ಸನಿಹದಲ್ಲೆ ವೇಣೂರು ಕೆರೆಕೋಡಿ ಅಥವಾ ಅಜಿಲ ಕೆರೆಯ ದರ್ಶನವಾಗುತ್ತದೆ. ಸರ್ವೆ ನಂ.33/1 ಬಿಯಲ್ಲಿ ಸುಮಾರು 8.5 ಎಕರೆ ವಿಸ್ತಾರವಾಗಿರುವ ಕೆರೆ ಸದ್ಯಕ್ಕೆ 3.5 ಎಕರೆಗೆ ಇಳಿದಿದೆ. ಇದು ನೀರಿನ ಒರತೆ ಕಡಿಮೆಯಾಗಿರುವುದರಿಂದಲ್ಲ ಬದಲಾಗಿ ಬೆಲೆಬಾಳುವ ಜಾಗದ ಆಸೆಯಿಂದಾಗಿ ಎಂಬುದು ಇಲ್ಲಿ ಬಂದು ನೋಡಿದರೆ ವೇದ್ಯವಾಗುತ್ತದೆ. ೫ ವರ್ಷದ ಹಿಂದೆ ಅಂದಿನ ಡಿಸಿಯವರು ಇದನ್ನು ಗಮನಿಸಿದ್ದರು. ಅಲ್ಲದೆ ತಾಲೂಕು ಕಂದಾಯ ಅಧಿಕಾರಿಗಳೂ ನೋಡಿ ಹೋಗಿದ್ದರು. ಹೈಕೋರ್ಟ್ನಲ್ಲಿ ಈ ಕರೆಯ ಪರವಾಗಿ ತೀರ್ಪುಕೂಡ ಬಂದಿತ್ತು. ಆದರೆ ಆಕ್ರಮಿಸಿದವರು ಜಪ್ಪಯ್ಯ ಅಂದರೂ ಬಿಟ್ಟುಕೊಟ್ಟಿಲ್ಲ. ಆದರೆ ಇದ್ದುದರಲ್ಲಿ ಅವರು ಆಕ್ರಮಿಸಿಕೊಂಡ ಜಾಗಕ್ಕೆ ದಾಖಲೆ ಆಗಿಲ್ಲದಿರುವುದು ಸಮಾಧಾನದ ಸಂಗತಿ. ಎರಡು ಸಾವಿರ ವರ್ಷಗಳ ಹಿಂದೆ ಸಾಮ್ರಾಟ್ ಅಶೋಕ ಸಾವಿರಾರು ಮರಗಳನ್ನು ನಡೆಸಿದ್ದ, ಕರೆಗಳನ್ನು ಕಟ್ಟಿಸಿದ್ದ ಎಂಬ ಇತಿಹಾಸವನ್ನು ನಾವು ಕೇಳಿದ್ದೇವೆ. ಆದರೆ ಇಂದಿನವರು ಮಾತ್ರಕೆರೆಯನ್ನೆ ನುಂಗುತ್ತಿದ್ದಾರೆ.
ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಈ ಕರೆಯ ಪುನಶ್ಚೇತನಕ್ಕೆರೂ.70 ಲಕ್ಷ ಒದಗಿಸಿದ್ದರು.ಜಿ.ಪಂ. ರೂ. 10 ಲಕ್ಷ ಒದಗಿಸಿತ್ತು.ಸಂಪೂರ್ಣಅಭಿವೃದ್ದಿ ಮಾಡಲು ಆಕ್ರಮಿಸಿದವರು ಬಿಡುತ್ತಿಲ್ಲ. ಈ ಕೆರೆಯ ಸುತ್ತ ಸುಮಾರು 15 ಕ್ಕೂ ಹೆಚ್ಚು ಮನೆಗಳಿವೆ. ಕೆರೆಯ ಒಂದು ಭಾಗ ಒತ್ತುವರಿಯಾಗಿರುವುದರಿಂದ ಆ ಮನೆಗಳಿಗೆ ರಸ್ತೆ ಇಲ್ಲದಂತಾಗಿದೆ. ಕಾಲುದಾರಿಯಲ್ಲಿಯೇ, ಸಾಮಾನು ಸರಂಜಾಮುಗಳನ್ನು ಹೊತ್ತುಕೊಂಡು ತಲೆಹೊರೆಯ ಮೂಲಕವೇ ಮನೆಗಳಿಗೆ ಹೋಗಬೇಕಾಗಿದೆ. ಆಕ್ರಮಿತ ಜಾಗ ಬಿಟ್ಟುಕೊಟ್ಟರೆ ಕರೆಯ ದಡದಲ್ಲೇ ರಸ್ತೆ ನಿರ್ಮಾಣ ಮಾಡಿ ಎಲ್ಲಾ ಮನೆಗಳಿಗೆ ಸಂಪರ್ಕ ಕಲ್ಪಿಸಬಹುದಾಗಿದೆ. ಆದಾಗ್ಯೂ ಈಗ ಮಧ್ಯದಲ್ಲೇ ಒಂದು ತಾತ್ಕಾಲಿಕ ರಸ್ತೆ ನಿರ್ಮಾಣವಾಗಿದ್ದು ಅದು ಪೆರ್ಮುಡವನ್ನು ಸಂಪರ್ಕಿಸುತ್ತದೆ. ಈ ರಸ್ತೆಯಲ್ಲಿ ದಿನಾಲೂ ನೂರೈವತ್ತಕ್ಕೂ ವಾಹನಗಳು ಓಡಾಡುತ್ತವೆ.
ಈ ಕೆರೆಯ ಒಂದು ಭಾಗದಲ್ಲಿ ಸಂಜೆ ಹೊತ್ತು ಸಾವಿರಾರು ಅಪೂರ್ವ ವಿವಿಧ ಜಾತಿಯ ಹಕ್ಕಿಗಳು ಬಂದು ಸೇರಿ ಪಕ್ಷಿಧಾಮದ ಸ್ವರೂಪವನ್ನು ತಂದುಕೊಟ್ಟಿವೆ. ಅದನ್ನು ನೋಡುವುದೇ ಒಂದು ಕಣ್ಣಿಗೆ ಹಬ್ಬ.
ತಾಲೂಕಾಡಳಿತ ಇಲ್ಲಿ ಸರಿಯಾದ ಸರ್ವೇ ಮಾಡಿ ಅತಿಕ್ರಮಣವನ್ನು ತೆರವುಗೊಳಿಸಿ, ಕೆರೆಯದಂಡೆಯಲ್ಲಿ ಸುತ್ತರಸ್ತೆ ನಿರ್ಮಿಸಿ, ಕೆರೆಯಒಂದು ಭಾಗದಲ್ಲಿ ಉದ್ಯಾನವನವನ್ನು ನಿರ್ಮಿಸಿ, ಪಕ್ಷಿಗಳಿಗೆ ಆಶ್ರಯ ಕೊಟ್ಟಲ್ಲಿ ಇದೊಂದು ಅಪೂರ್ವ ಪ್ರೇಕ್ಷಣಿಯ ಸ್ಥಳವಾಗುವುದರಲ್ಲಿ ಸಂದೇಹವಿಲ್ಲ. ಕರೆಯನ್ನು ವಿಸ್ತರಿಸಿ ನೀರಿಗೆ ಇನ್ನಷ್ಟು ಆಶ್ರಯ ಕೊಟ್ಟಲ್ಲಿ ಅಂತರ್ಜಲ ಹೆಚ್ಚುವುದರಲ್ಲಿ ಅನುಮಾನವಿಲ್ಲ. ಏನಿದ್ದರೂ ಎರಡೂವರೆ ವರ್ಷದ ಹಿಂದೆ ಸಾಧನೆಯ ಶಂಖ ಊದಿದವರು ಎಚ್ಚೆತ್ತುಕೊಂಡು ಐತಿಹಾಸಿಕ ಮಹತ್ವವುಳ್ಳ ಮದಗವನ್ನು ರಕ್ಷಿಸಿ ಮುಂದಿನ ಜನಾಂಗಕ್ಕೆ ಬಿಟ್ಟುಕೊಡುವ ಮನಸ್ಸು ಮಾಡಬೇಕಾಗಿದೆ. ಆದರೆಇದುಅವರಿಂದಾಗದುಎನ್ನುವ ಸತ್ಯಅವರಿಗೂಗೊತ್ತು ವೇಣೂರಿನ ಜನತೆಗೂ ಗೊತ್ತು.
ತಾಲೂಕಿನಲ್ಲಿ 31 ಕರೆಗಳಿವೆ. ಹಲವೆಡೆ ಕೆರೆಗಳು ಸ್ವಲ್ಪ ಸ್ವಲ್ಪವೇ ಒತ್ತುವರಿಯಾಗಿದ್ದರೂ. ಇದ್ದ ಜಾಗದಲ್ಲಿ ನೀರು ನಿಂತು ತಮ್ಮ ಅಸ್ತಿತ್ವವನ್ನು ಕಾಪಾಡಿಕೊಂಡು ಬಂದಿವೆ. ನಾರಾವಿ ಸುತ್ತಲಿನ ನೂಜೋಡಿಕೆರೆ, ನಾನೊಟ್ಟುಕೆರೆ, ತ್ಯಾಂಪಶೆಟ್ಟಿಕೆರೆ, ಪರಿಂಜೆಕೆರೆ, ಮರೋಡಿ ಗೊಮ್ಮಟ ಬೆಟ್ಟಕೆರೆ, ಹೊಸಂಗಡಿ ವ್ಯಾಪ್ತಿಯಲ್ಲಿನ ಮಲೆಕೆದ್ದುಕೆರೆ, ಎರ್ಡಾಲುಕೆರೆ, ಅತ್ರಟ್ಟಕೆರೆ, ಕುರುಂಬಿ ಕೆರೆ, ಅಂಡಿಜೆ ಪರಿಸರದಆನೆಕೆರೆ, ದುಗ್ಗನಬೆಟ್ಟುಕೆರೆ, ಕುಂಚ ಮದಗಕೆರೆ, ಕರ್ಮೊಡ್ಡುಕೆರೆ, ಗುಂಪಡ್ಕಕೆರೆ, ಪಿಲ್ಯ ಉಲ್ಫೆಕೆರೆ, ಅಳದಂಗಡಿ ಸನಿಹದ ಬರಯಕೆರೆ, ಪಿಲ್ಯ ಗುತ್ತುಕೆರೆ, ನಿರ್ಮಲ ಬೆಟ್ಟುಕೆರೆ, ವೇಣೂರಿನಅಜಿಲ ಕೆರೆ, ಕುವೆಟ್ಟುಗ್ರಾಮದಲ್ಲಿರುವ ಸುಣ್ಣದಕೆರೆ, ಗುರುವಾಯನಕೆರೆ, ಬಾರ್ಯಚಿಂಗಾಣಿಬೆಟ್ಟುಕೆರೆ, ತಣ್ಣೀರುಪಂತ ಸರಕಟ್ಟೆ ಮದಗಕೆರೆ, ಇಳಂತಿಲ ಕಾಯರ್ಪಾಡಿಕೆರೆ, ನಡ ಸುರ್ಯಕೆರೆ, ಉಜಿರೆ ಪೆರ್ಲಕೆರೆ, ಮಡಂತ್ಯಾರು ಬಂಗಾರುಕಟ್ಟೆಕೆರೆ, ತೋಟತ್ತಾಡಿ ಪೆರ್ನಾಲ ಕೆರೆ, ನೆರಿಯ ಪೆಲತಡ್ಕ ಕೆರೆಗಳು ಒಟ್ಟು ಸುಮಾರು 300 ಎಕರೆ ವ್ಯಾಪ್ತಿಯಲ್ಲಿ ಪಸರಿಸಿವೆ. ಎಲ್ಲೆಲ್ಲಿ ಕೆರೆಗಳು ಒತ್ತುವರಿಯಾಗಿವೆಯೋಅಲ್ಲಿ ಶಕ್ತವಾಗಿ ಅದನ್ನು ಮತ್ತೆ ಕೆರೆವ್ಯಾಪ್ತಿಗೊಳಿಸುವುದಲ್ಲದೆ ಆಕ್ರಮಣವಾಗದ ಕೆರೆಗಳನ್ನು ಅಂತೆಯೇ ರಕ್ಷಿಸಿದರೆ ಜಲಮೂಲ ವೃದ್ದಿಯಾದೀತು.
– ದೀಪಕ್
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.